ಬೆಳೆ

ಬೆಳೆ

Comments

ಬರಹ

ಬೆಳೆ (ಕ್ರಿಯಾಪದ) [ತಮಿಳು: ವಿಳೈ; ಮಲಯಾಳ: ವಿಳ; ತುಳು: ಬುಲೆ, ಬುಳೆ; ಕೊಡವ: ಬೊಳೆ]
೧. ಮನುಷ್ಯ ಪ್ರಾಣಿ ಪಕ್ಷಿ ಮುಂತಾದುವು ಶಾರೀರಿಕವಾಗಿ ಮಾನಸಿಕವಾಗಿ ಅಥವಾ ವಯಸ್ಸಿನಲ್ಲಿವೃದ್ಧಿಹೊಂದು.
(ಅಂದಿಳೆಯನಳೆದಾ ತ್ರಿವಿಕ್ರಮನಂದಕಿಮ್ಮಿಗಿಲೆನಲು ಬೆಳೆದನು-ತೊರವೆರಾಮಾಯಣ)
೨. ಗಿಡ ಮರಗಳು ವೃದ್ಧಿಯಾಗು; ಸಸ್ಯಗಳು ಬೆಳೆ.
(ಬೆಳೆದೊಱಗಿದ ಕೞಮೆಗಳುಂ ತಿಳಿಗೊಳದೊಳಗಲರ್ದ ಸರಸಿಜಪ್ರತತಿಗಳುಂ-ಕವಿರಾಜಮಾರ್ಗ)
೩. ಮೊಳೆ; ಮೂಡು; ಹುಟ್ಟು; ಅಂಕುರಿಸು.
(ಬೆಳೆದವೋ ಕೈಕಾಲು ನೀಲಾಚಲಕೆ ಹೇಳೆನೆ ಮುಗಿಲ ತುಡುಕುವ ತಲೆಯ ತೋಕೆಯ ತೋರಹತ್ತನ ಕಂಡು-ಕುಮಾರವ್ಯಾಸ)
೪. (ಕೂದಲು ಉಗುರು ಮುಂತಾದುವು) ನೀಳವಾಗು; ಉದ್ದವಾಗು.
೫. ಮೇಲಕ್ಕೆ ಚಾಚು; -ನೀಡು.
(ಆ ಮಹಾಗಹನಮಧ್ಯದೊಳಂಬರವರೆಗಂ ಬೆಳೆದ ಮರದುಱುಗಲ ನಡುವೆ-ಪಂಚತಂತ್ರ)
೬. ಪೈರಿನಿಂದ ತುಂಬು; ಸಸ್ಯಸಮೃದ್ಧವಾಗು.
(ಅಳುರದು ಕಿರ್ಚು ಮುಟ್ಟದು ವಿಷಾಹಿ ಮಹಾಸತಿಯಿರ್ದ ಮಂಡಲಂ ಬೆಳೆವುದು ಬೇಡಿದಂತೆ ಮಱೆಕೊಳ್ವುದು-ಅಜಿತಪುರಾಣ)
೭. ಫಸಲನ್ನು ಕೊಡು; ಫಲಬಿಡು.
೮. ಉತ್ಪತ್ತಿ ಮಾಡು; ಒದಗಿಸು.
೯. ಮರ ಗಿಡ ಮುಂತಾದುವುಗಳನ್ನು ಬೆಳೆಯುವಂತೆ ಮಾಡು; ಬಳೆಸು
(ಬೆಂದುದನು ಬಿತ್ತಿ ಬೆಳೆವಂದಿರನು ನಾ ಕಾಣೆ ಬೆಂದುದನು ಬಿತ್ತಿ ಬೆಳೆದುಂಬ ದಾಸೋಹಿ ಇಂದುಧರನಕ್ಕು ಸರ್ವಜ್ಞ)
೧೦. ಹೆಚ್ಚಾಗು; ಅಧಿಕವಾಗು.
೧೧. ಏಳಿಗೆ ಹೊಂದು ಪ್ರಗತಿಯನ್ನು ಪಡೆ.
(ಶಂತನುವಿನ ಸಂತತಿ ಬೆಳೆಯಬಲ್ಲಂಥ, ಕ್ಷತ್ರಿಯರಿಗೆ ಉಚಿತವಾದಂಥ, ಧರ್ಮವನ್ನು ನಾನು ಹೇಳುತ್ತೇನೆ-ವಚನಭಾರತ)
೧೨. ತಾರುಣ್ಯಕ್ಕೆ ಕಾಲಿಡು; ಪ್ರಾಯಕ್ಕೆ ಬರು.
೧೩. (ಪ್ರಯಾಣವು) ತೊಡಗು; ಆರಂಭವಾಗು.
೧೪. ಜರುಗು; ನೆರವೇರು
೧೫. ಬಾಗು; ಎರಗು
(ಬೆಳೆದುದೆನಲ್ಕೆಱಗಿದುದು-ರನ್ನಕಂದ)
೧೬. (ಅಲಂಕಾರವಾಗಿ) ತೀರು; ಮುಗಿ.
(ಅರಿಸಿನ ಕುಂಕುಮ ಬೆಳೆದಿದೆ, ಅಂಗಡಿಯಿಂದ ತರಿಸಬೇಕು-ರೂಢಿ)

ಬೆಳೆಬೆಳೆ, ಬೆಳೆವೆಳೆ (ದ್ವಿರುಕ್ತಿ)
(ಬೆಳೆಬೆಳೆಯುತ್ತ ಮಕ್ಕಳ ಪುಣ್ಯ-ಗಾದೆ)

ಬೆಳೆ (ನಾಮಪದ)
೧. ಬೆಳೆದುದು; ಬೆಳಸು
೨. ಬೆಳೆಯುವಿಕೆ; ಬೆಳವಣಿಗೆ; ಅಭಿವೃದ್ಧಿ
(ಇತರ ಪ್ರಯೋಗಗಳು: ಬೆಳೆಕಾಣಿಕೆ=ಬೆಳೆಯು ಕೊಯ್ಲಿಗೆ ಸಿದ್ಧವಾದಾಗ, ಕೊಯ್ಲು ಮಾಡಲು ಅನುಮತಿ ಪಡೆಯಲು ಗುತ್ತಿಗೆದಾರನು ಭೂಮಾಲಿಕನಿಗೆ ಒಪ್ಪಿಸುವ ಹಣ್ಣು ತರಕಾರಿ ಮೊದಲಾದ ಕಾಣಿಕೆ; ಬೆಳೆಗಾಡು=ಮರಗಿಡಗಳು ದಟ್ಟವಾಗಿ ಬೆಳೆದಿರುವ ಕಾಡು; ಬೆಳೆಗಾಱ=ಉಕ್ಕುವಂತೆ ಮಾಡುವವನು ವೃದ್ಧಿಗೊಳಿಸುವವನು; ಸಸ್ಯಾದಿಗಳನ್ನು ಬೆಳೆಯವವನು, ಬೇಸಾಯಗಾರ, ಕೃಷಿಕ; ಬೆಳೆಗೆಯ್=ಪೈರು ಬೆಳೆದುನಿಂತ ಹೊಲ, ಸಸ್ಯಸಮೃದ್ಧವಾದ ಭೂಮಿ; ಬೆಳೆಗೆಯ್ದೆರಿಗೆ=ಬೆಳೆಯುವ ಜಮೀನಿಗಾಗಿ ಕೊಡುವ ತೆರಿಗೆ; ಬೆಳೆಗೇಡು=ಬೆಳೆಯು ಕೆಟ್ಟುಹೋಗು; ಬೆಳೆಗೊಡು=ಫಲವನ್ನು ಕೊಡು; ಬೆಳೆತ=ಬೆಳವಣಿಗೆ; ಬೆಳೆದಾಳ್ದು=ಬೆಳೆಯನ್ನು ಹೊಂದು; ಬೆಳೆನೀರು=ಬೆಳೆಗೆ ಬೇಕಾದ ನೀರು; ಬೆಳೆನೆಲ=ಬೆಳೆಯಲು ತಕ್ಕುದಾದ ಭೂಮಿ; ಬೆಲೆಬಡ್ಡಿ=ವೃದ್ಧಿಯಾಗುವ ಬಡ್ಡಿ, ಚಕ್ರಬಡ್ಡಿ; ಬೆಳೆಯಿಡಿಸು=ಬೆಳೆ ಬರುವಂತೆ ಮಾಡು; ಬೆಳೆಯಿಸು=೧.ಸಸ್ಯಾದಿಗಳನ್ನು ಬೆಳೆಸು ೨.ಅಭಿವೃದ್ಧಿಗೊಳಿಸು ೩.ಪೋಷಿಸು ೪.ಹೆಚ್ಚಿಸು ೫.ಹುಟ್ಟಿಸು ೬.ಚಾಚು ೭.ಗುಣಿಸು; ಬೆಳೆವತ್ತರ್‍=ಬೆಳೆವ ಭೂಮಿ; ಬೆಳೆವೊಲ=ಬೆಳೆದ ಹೊಲ; ಬೆಳೆಸಾಲು=ಪೈರಿನ ಸಾಲು)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet