ಬೆಳ್ಳನೆ ಬಟ್ಟೆಗೆ ಬೆಚ್ಚನೆ ರಕ್ತ ಮೆತ್ತಿ…. - ಸಣ್ಣಕತೆ

ಬೆಳ್ಳನೆ ಬಟ್ಟೆಗೆ ಬೆಚ್ಚನೆ ರಕ್ತ ಮೆತ್ತಿ…. - ಸಣ್ಣಕತೆ

ಬರಹ

ಆತ ಕೂತಲ್ಲೇ ಕೂತಿದ್ದ. ಕದಲಲಿಲ್ಲ ಒಂದಿನಿತೂ ! ಬೆಳಗಾಗೆದ್ದಾಗ ಯಾರೋ ಹೇಳಿದರು – “ನೀನಿರುವುದು ಭಾರತದಲ್ಲಲ್ಲ, ಇದು ಪಾಕಿಸ್ತಾನ, ಹೊರಡು ಇಲ್ಲಿಂದ…” ಆ ವ್ಯಕ್ತಿ ಈ ಸಂದಿಗ್ಧತೆಯ ಉರುಳಿಗೆ ಸಿಕ್ಕಿದ್ದು, ಭಾರತ – ಪಾಕ್ ವಿಭಜನೆಗೊಂಡಾಗ. ಹೃದಯ ಡವಗುಟ್ಟತೊಡಗಿತು. ಮಂದಿ, ಸಾಮಾನು ಸರಂಜಾಮು ಹೊತ್ತು, ದೋಣಿ ಸೇರಿಕೊಳ್ಳುತ್ತಿದ್ದರು. ಎಲ್ಲರೂ ಮುಸ್ಲಿಂ ಪ್ರಜೆಗಳ ಹಾಗೆ ಬಟ್ಟೆ ಧರಿಸಿದ್ದರು. ತಾನು ಹೋದೇನು ಎಲ್ಲಿಗೆ? ಚಿಂತಿಸಿದ. ಇಲ್ಲೇ ತನ್ನ ಮನೆಯಿದೆ, ಹೆಂಡತಿ ಮಗುವಿದೆ, ಫಲವತ್ತಾದ ಭೂಮಿಯೂ ಇದೆ. ಇವೆಲ್ಲವನ್ನು ಬಿಟ್ಟು….. ? ಆದರೆ ವಿಧಿಯಿಲ್ಲ, ಹೋಗಲೇಬೇಕು. “ಹೋಗದಿದ್ದರೆ ಉಳಿಗಾಲವಿಲ್ಲ. ಉಳಿದಿರುವುದು ಶಿರಚ್ಛೇದನವಷ್ಟೆ! ಇಲ್ಲಿನವರಿಗೆ ಹಿಂದು – ಕ್ಕ್ರೈಸ್ತ ಎಂಬ ಭೇದಭಾವವಿಲ್ಲ, ಮುಸ್ಲಿಮೇತರನಾಗಿದ್ದರೆ ಸಾಕು, ಸಿಕ್ಕಲ್ಲೇ ರುಂಡ ಕತ್ತರಿಸಿ ಎಸೆಯುತ್ತಾರೆ” ಎಂದನೊಬ್ಬ. ನಿನ್ನೆಯ ಮನುಷ್ಯ ಇಂದು ನಿರ್ದಯಿ ಹೇಗಾದ ?

ಮರುದಿನ ಸಸುಕಿನಲ್ಲೇ ಹೊರಟುಬಿಡಬೇಕೆಂದು ಆತ ಸಿದ್ಧನಾಗುತ್ತಲಿದ್ದ. ಪಕ್ಕದ ಮನೆಯಲ್ಲಿ ಎಂಥದೋ ಭಯಾನಕ ಸದ್ದು… ಆಕ್ರಂದನ! ಬೆಳಕಿಂಡಿ ಬಳಸಿ ನೋಡಿದ. ಮೈ ಕೈ ನಡುಗತೊಡಗಿತು. ನಾಲ್ವರು ಮುಸುಕುಧಾರಿಗಳಿಂದ ಮನೆಯ ಅಷ್ಟೂ ಜನರ ನರಮೇಧ ನಡೆದಿತ್ತು. ಹಸುಳೆ, ಹಸಿ ಮೈ…, ಎಂಥದ್ದೂ ಆ ರಕ್ಕಸರಿಗೆ ಅಡ್ಡ ಬರಲಿಲ್ಲ. ಹರಿಯಿತು ನೆತ್ತರ ಖೋಡಿ. ಎಲ್ಲಾ ಮುಗಿದ ಮೇಲೆ ಉಳಿದಿದ್ದು, ಈಗಲೋ ಆಗಲೋ ಎನ್ನುವಂತೆ ಮೂಲೆಯೊಂದರಲ್ಲಿ ಜೀವಚ್ಛವದಂತೆ ಬಿದ್ದುಕೊಂಡ ಮುದುಕಿ. ಮುಸುಕುಧಾರಿಗಳು ಆಕೆಯನ್ನೂ ಸುಮ್ಮನೆ ಬಿಡಲಿಲ್ಲ. ಅವರ ದಾಹ ತೀರಲಿಲ್ಲವೆಂದು ತೋರುತ್ತದೆ. ಜೀವಕ್ಕಾಗಿ ಪಟಪಟಿಸಿ ನಿಶ್ಚಲವಾದ ದೇಹಗಳನೆಲ್ಲಾ ಒಂದೆಡೆ ಗುಡ್ಡೆ ಹಾಕಿದರು. ಮುದುಕಿಯನ್ನು ದರದರ ಎಳೆದು ತಂದು, ಎತ್ತಿ ಆ ಶವಗುಡ್ಡೆಯ ಮೇಲೆ ಕುಳ್ಳಿರಿಸಿ ಹೊರಟುಹೋದರು. ಮುದುಕಿ, ನೆತ್ತರ ತೇವಕ್ಕೆ ಒಂದೇ ಸಮನೆ ಅಳುತಿತ್ತು. ಮುಂಜಾವೂ ಬಂತು, ಮುಸುಕುಧಾರಿಗಳು ಪರದೆ ಸರಿಸಿ ಪಕ್ಕಕ್ಕಿಟ್ಟಂತೆ! ಆತನ ಕಣ್ಣು, ಕೊನೆಯ ಬಾರಿಗೆ ತಾಯ್ನೆಲ ನೋಡುತ್ತಾ ಮಂಜಾಯಿತು. ಕುಟುಂಬದವರೊಂದಿಗೆ, ಟ್ರಂಕು ಹೊತ್ತುಕೊಂಡು ದೋಣಿ ಏರಿದ. ದೋಣಿ ಜನರಿಂದ ತುಂಬಿತ್ತು. ಪ್ರತಿಯೊಬ್ಬರೂ ಕಪ್ಪು ಬಟ್ಟೆ ಧರಿಸಿ ಕುಳಿತಿದ್ದರು. ಆತನೂ ಮುಸುಕು ಹಾಕಿಕೊಂಡಿದ್ದ. ಇನ್ನೇನು ದೋಣಿ ಹೊರಡಬೇಕು, ಅಷ್ಟರಲ್ಲಿ ಮತ್ತೆ ಮೂವರು ಮುಸುಕುಧಾರಿಗಳು ಆಯುಧಗಳೊಂದಿಗೆ ಓಡುತ್ತಾ ಬರುತ್ತಿದ್ದರು. “ನಿಲ್ಲಿ” ಎಂದು ಕೂಗಿದರು. ತಾನು ಬೇರೆ ಧರ್ಮದವನೆಂದು ಅವರಿಗೆ ಯಾರೋ ತಿಳಿಸಿರಬೇಕು. ಕಳೆದ ಇರುಳ ಮಾರಣಹೋಮ ನೆನೆಪಾಗಿ ಬೆವರಿಳಿಯತೊಡಗಿತು. ದೋಣಿಯ ಏಣನ್ನು ಗಟ್ಟಿ ಹಿಡಿದು ಕುಳಿತ. ಮಗುವನ್ನೆತ್ತಿಕೊಂಡು ಹಣೆಗೊಂದು ಕೊನೆಯ ಮುತ್ತಿಟ್ಟು, ಮುಗಿಲು ನೋಡಿದ – ದೇವರಿರಲಿಲ್ಲ. ಮುಗಿಲ ತುಂಬೆಲ್ಲಾ ಬರಿಯ ಕಪ್ಪುಮೋಡಗಳ ರಾಶಿ. ಮುಸುಕುಧಾರಿಗಳು ದಬದಬ ದೋಣಿಯೊಳಗೆ ಕಾಲಿಟ್ಟರು. ಎರಡೇ ಎರಡು ನಿಮಿಷ! ಇಬ್ಬರ ದೇಹಗಳು ಛಿದ್ರ-ಛಿದ್ರವಾಗಿ ನೀರೊಳಗಿದ್ದವು. ಆ ಶುಭ್ರ ನೀರೂ ಕೂಡ ಅದೇಕೆ ನೆತ್ತರಿಗೆ ತಹತಹಿಸಿತೋ? ಆದರೆ ಛಿದ್ರಗೊಂಡಿದ್ದು ಆತನಲ್ಲ, ಆತನ ಪಕ್ಕವೇ ಕುಳಿತಿದ್ದ ಇಬ್ಬರು ನಾಮಧಾರಿಗಳು. ಮುಸುಕುಧಾರಿಗಳ ಸವಾರಿ ಬೇರೆ ದೋಣಿಗಳೆಡೆಗೆ ಹರಿಯಿತು. ಸ್ವಲ್ಪ ಹೊತ್ತಲ್ಲೇ, ನೀರೊಳಗಿನಿಂದ ಆತನ ಪಕ್ಕವೇ ಒಂದು ಕೈ ಮೇಲಕ್ಕೆ ಬಂದು ಕಾಪಾಡುವಂತೆ ಆರ್ದ್ರವಾಗಿ ಕೂಗಿಕೊಂಡಿತು. ಆತ ಮತ್ತೆ ದೋಣಿಯ ಏಣನ್ನು ಗಟ್ಟಿಯಾಗಿ ಹಿಡಿದು ಕುಳಿತ. ಆತನಿಗೆ ಯಾರನ್ನೂ ಕಾಪಾಡುವುದು ಬೇಕಿಲ್ಲ. ತನ್ನನ್ನು ತಾನು ಕಾಪಾಡಿಕೊಳ್ಳಬೇಕಿದೆ. ಬೇರೆಯವರದೂ ಅದೇ ಸ್ಥಿತಿ! ಇಲ್ಲಿ ಕಾಪಾಡುವ ಕೈಗಳಿಲ್ಲ. ತನ್ನೊಬ್ಬನನ್ನು ಹೊರತುಪಡಿಸಿ, ದೋಣಿಯಲ್ಲಿ ಕುಳಿತ ಎಲ್ಲರ ಕೈಯಲ್ಲೂ ಒಂದೊಂದು ಚೂಪಾದ ಖಡ್ಗವಿರುವಂತೆ ಅವನಿಗೆ ಕಾಣತೊಡಗಿತು. ತನ್ನ ಕೈಲಿದ್ದ ಮಗುವನ್ನೊಮ್ಮೆ ನೋಡಿದ. ಅಯ್ಯೋ..! ಆ ಎಳೆಮಗುವಿನ ಕೈಯಲ್ಲೂ ಖಡ್ಗವೊಂದು ಮಿರಮಿರ ಮಿಂಚುತ್ತಿದೆ. ಕಣ್ಣ ಹೊಳಪಿಗೆ ಖಡ್ಗ ಇನ್ನಷ್ಟು ಹರಿತವಾಗುತ್ತಿದೆ. ಆತ ಬೆಚ್ಚಿದ. ಹೌದು! ತನ್ನದೇ ಮಗು. ಖಡ್ಗವೆತ್ತುತ್ತಾ ಬಿರುಸಾಗಿ ಅವನ ಎದೆಗೆ ಗುರಿಯಿಡುತ್ತಿತ್ತು. ಯಜಮಾನ್ ಫ್ರಾನ್ಸಿಸ್ ಬೇಗೂರಿನಿಂದ ೦೬/೦೯/೨೦೦೭