ಬೆಳ್ಳಿ ತೆರೆಯ ಬಂಗಾರದ ಗೆರೆ

ಬೆಳ್ಳಿ ತೆರೆಯ ಬಂಗಾರದ ಗೆರೆ

ಪುಸ್ತಕದ ಲೇಖಕ/ಕವಿಯ ಹೆಸರು
ಗಣೇಶ್ ಕಾಸರಗೋಡು
ಪ್ರಕಾಶಕರು
ಕನ್ನಡ ಮಾಣಿಕ್ಯ, ಕೋರಮಂಗಲ, ಬೆಂಗಳೂರು-೫೬೦೦೩೪, ಮೊ: ೯೮೪೪೨೫೨೧೭೨
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೧

ಪತ್ರಕರ್ತ ಗಣೇಶ್ ಕಾಸರಗೋಡು ಇವರ ' ಬೆಳ್ಳಿ ತೆರೆಯ ಬಂಗಾರದ ಗೆರೆ' ಪುಸ್ತಕವು ಸಿನೆಮಾ ರಂಗದ ಅಪರೂಪದ ಕಥೆಗಳನ್ನು ನಮ್ಮ ಮುಂದೆ ಹರಡುತ್ತದೆ. ಬಹಳ ಮುದ್ದಾದ ಮುಖಪುಟದೊಂದಿಗೆ ಮೂಡಿ ಬಂದಿರುವ ಪುಸ್ತಕವು ಅತ್ಯಂತ ಸುಂದರವಾಗಿ ಕನ್ನಡ ಚಿತ್ರರಂಗದ ಅಂತರಾಳವನ್ನು ಬಿಚ್ಚಿಡುತ್ತಾಹೋಗುತ್ತದೆ. ಪತ್ರಕರ್ತರಾದ ಡಾ। ಶರಣು ಹುಲ್ಲೂರು ಇವರು ಬೆನ್ನುಡಿಯನ್ನು ಬರೆದಿದ್ದಾರೆ. ತಮ್ಮ ನುಡಿಯಲ್ಲಿ ಅವರು "ದೂರದಿಂದ ಇವರು ಸಂಜೆ ಆಕಾಶ. ಹಲವು ರೀತಿಯ ಆಕಾರ. ಆಕರ, ಚಿತ್ತಾರ. ಕೆಲವರಿಗೆ ಉರಿವ ಜಮದಗ್ನಿ. ಹಿಡಿದರೆ ಬಿಡದ ವಿಶ್ವಾಮಿತ್ರ. ಬಲ್ಲವರಿಗೆ ಹಿರಿಯಣ್ಣ ಮಾರ್ಗದರ್ಶಿ. ಉರಿವ ದೀಪದಲ್ಲಿನ ಬೆಳಗು. ಬೆಳಕು ಆಯ್ಕೆ ನಿಮ್ಮದು. 

ಸಿನೆಮಾ ಪತ್ರಕರ್ತರಿಗೆ ಗಾಸಿಪ್. ಗ್ಲಾಮರ್ ಹೊರತಾಗಿ ಬೇರೆ ಏನಾದರೂ ಬರೆಯುವ ತಾಕತ್ತು ಇದೆಯಾ ಅಂದವರಿಗೆ ಉಡಿತುಂಬ ಪುಸ್ತಕ ಕೊಟ್ಟರು. ಸ್ಟಾರ್ ಕಲಾವಿದರ ಹಿಂದೆ ಬೀಳದೆ ನೊಂದ ನಟ ನಟಿಯರ ಮನೆಬಾಗಿಲು ತಟ್ಟಿದರು. ಯಾವುದೇ ಮುಲಾಜಿಗೆ ಒಳಗಾಗದೇ ಕಂಡದ್ದನ್ನು ಕಂಡಂತೆ ಬರೆದರು. ನುಡಿದರು. ಸರಿ ಅನಿಸದಿದ್ದಾಗ ತನ್ನ ವೃತ್ತಿ ಬಾಂಧವರ ಮೇಲೆಯೇ ಸಿಟ್ಟು ಮಾಡಿಕೊಂಡರು. ನೇರ-ದಿಟ್ಟ-ನಿರಂತರತೆಯ ಕಾರಣಕ್ಕಾಗಿ ವಿವಾದ ಮೈಮೇಲೆ ಎಳೆದುಕೊಂಡರು. ಇದು ಅವರ ವ್ಯಕ್ತಿತ್ವ ಮತ್ತು ವರ್ಣರಂಜಿತ ಬದುಕು. " ಎಂದು ಕೃತಿಯ ಲೇಖಕರಾದ ಗಣೇಶ್ ಕಾಸರಗೋಡು ಇವರ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

ಗಣೇಶ್ ಕಾಸರಗೋಡು ಅವರು ತಮ್ಮ 'ನನ್ನುಡಿ'ಯಲ್ಲಿ 'ಹತಾಶೆಯ ಕತ್ತಲಲ್ಲಿ ಮಿನುಗಿತೊಂದು ಬೆಳ್ಳಿ ಬೆಳಗು' ಎಂದು ತಮಗೆ ಮರು ಜೀವ ಕೊಟ್ಟ ವಿಜಯವಾಣಿಯ ಅಂಕಣ ‘ಬೆಳ್ಳಿ ತೆರೆಯ ಬಂಗಾರದ ಗೆರೆ’ ಮತ್ತು ಅದನ್ನು ಪ್ರಾರಂಭಿಸಲು ಸ್ಪೂರ್ತಿಯಾದ ಅಂದಿನ ವಿಜಯವಾಣಿಯ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆಯವರ ಉದಾರತೆಯ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ 

"---- ಯಾರಲ್ಲಾದರೂ ನನ್ನೊಳಗಿನ ತೊಳಲಾಟವನ್ನು ಹೇಳಿಕೊಳ್ಳಬೇಕಾಗಿತ್ತು. ಒಬ್ಬರು ಸಿಕ್ಕಿದರು ಎನ್ನುವ ಖುಷಿಯಲ್ಲಿ ಮಾರನೇ ದಿನ ಪತ್ನಿ ಗಾಯತ್ರಿ ಜತೆ ಚಾಮರಾಜಪೇಟೆಯಲ್ಲಿರುವ 'ವಿಜಯವಾಣಿ' ಆಫೀಸಿಗೆ ಹೋದೆ. ಸಂಪಾದಕ ಹರಿಪ್ರಕಾಶ್ ಅವರು ಹಾರ್ದಿಕವಾಗಿಯೇ ಸ್ವಾಗತಿಸಿದರು. ಉಭಯ ಕುಶಲೋಪರಿಯ ನಂತರ ನಾನು ನನ್ನ ದುಗುಡವನ್ನು ಹೇಳಿಕೊಳ್ಳಲು ಹೊರಡುತ್ತಿದ್ದಂತೆಯೇ ಬಾಯಿ ಮುಚ್ಚಿಸಿ ಹರಿಪ್ರಕಾಶ್ ಕೋಣೆಮನೆಯವರು ಹೇಳಿದರು: 'ನಮ್ಮ ಪತ್ರಿಕೆಗಾಗಿ ನೀವು ಏನನ್ನಾದರೂ ಬರೆಯಬಲ್ಲಿರಾ?' - ನಾನು ಮೂಕ. ಅವರೇ ಮುಂದುವರೆಸಿದರು 'ಈಗಿನ ಪೀಳಿಗೆಯ ಮಂದಿಗೆ ಹಿಂದಿನ ತಲೆಮಾರುಗಳ ಸಿನೆಮಾ ಮಂದಿಯ ಸಾಹಸದ ಕಥೆ ಗೊತ್ತಿಲ್ಲ. ವಿಶೇಷವಾದ ಇಂಥಾ ಸ್ಟೋರಿಗಳನ್ನು ಬರೆದುಕೊಡಿ. ಅಂಕಣ ರೂಪದಲ್ಲಿ ಅದನ್ನು ಪ್ರಕಟಿಸೋಣ. ಏನಂತೀರಿ?'-ಎಂದು ಪ್ರಶ್ನಿಸಿ, ನನ್ನ ಉತ್ತರಕ್ಕೂ ಕಾಯದೇ 'ಮುಂದಿನ ವಾರದ ಸಿನೆಮಾ ಸಪ್ಲಿಮೆಂಟ್ ನಲ್ಲಿ ನಿಮ್ಮ ಅಂಕಣ ಪ್ರಕಟವಾಗಬೇಕು. ಇನ್ನು ಹೊರಡಿ...' ಅಂತಂದು ಬಿಟ್ಟರು. ಆಗಲೂ ನಾನು ಮೂಕ. ಪತ್ನಿಯ ಮುಖ ನೋಡಿದೆ. ಆಕೆಯೂ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿರಲಿಲ್ಲ!

ಎದ್ದು ಹೊರಟೆವು. ಕೆಲವು ಅವಕಾಶಗಳು ಹೀಗೆಯೇ ಬಂದು ಬಿಡುತ್ತವೆ ! ಬಂಗಾರದ ಅವಕಾಶಗಳು ಬರೆಯ ಬೇಕಾಗಿರುವುದು ಬೆಳ್ಳಿತೆರೆಯ ಗೆರೆಗಳ ಬಗ್ಗೆ ! ಅಂಕಣದ ಹೆಸರು ಸೆಲೆಕ್ಟ್ ಆದದ್ದು ಹೀಗೆ : 'ಬೆಳ್ಳಿ ತೆರೆಯ ಬಂಗಾರದ ಗೆರೆ '!" 

ಗಣೇಶ್ ಕಾಸರಗೋಡು ಇವರು ಪುಸ್ತಕವನ್ನು ಪ್ರಕಾಶಿಸಿದ ಕನ್ನಡ ಮಾಣಿಕ್ಯ ಪ್ರಕಾಶನ (ಈಗ ‘ವೀರಲೋಕ ಬುಕ್ಸ್') ಇದರ ಮಾಲೀಕರಾದ ವೀರಕಪುತ್ರ ಶ್ರೀನಿವಾಸ್ ಬಗ್ಗೆ ಒಂದೆರಡು ಮಾತುಗಳನ್ನಾಡಿದ್ದಾರೆ. ವೀರಕಪುತ್ರ ಶ್ರೀನಿವಾಸ್ ಅವರೂ ತಮ್ಮ ಪ್ರಕಾಶಕರ ನುಡಿಯಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಕೃತಿಗೆ ಪರಿವಿಡಿ ಇಲ್ಲದೇ ಇರುವುದರಿಂದ ಇದರಲ್ಲಿ ಅಡಕವಾಗಿರುವ ಲೇಖನಗಳ ಬಗ್ಗೆ ಒಮ್ಮೆಗೇ ಮಾಹಿತಿ ದೊರೆಯುತ್ತಿಲ್ಲ. ಆದರೆ ಪುಸ್ತಕದ ಪುಟಗಳನ್ನು ತೆರೆಯುತ್ತಾ ಚಿತ್ರರಂಗದ ಹೊಸದೊಂದು ಲೋಕದ ಅನಾವರಣವಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಗಣೇಶ್ ಕಾಸರಗೋಡು ಇವರು ಅಭಿನಂದನಾರ್ಹರು. 

ಬಹುತೇಕರಿಗೆ ತಿಳಿಯದ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರಹದ ಮೂಲಕ ನೀಡಿದ್ದಾರೆ. ೨೫ ವಾರಗಳ ಕಾಲ ಪ್ರದರ್ಶಿತವಾಗಿ ದಾಖಲೆ ನಿರ್ಮಿಸಿದ ಮಾಯಾ ಮೋಹಿನಿಯ ಕಥೆ, ವಿಷ್ಣುವರ್ಧನ್ ಅವರಿಗೆ ಮರುಜನ್ಮ ನೀಡಿದ 'ಬಂಧನ', ಎಷ್ಟು ಕಾಲ ಉರುಳಿದರೂ ಬಾಡದ 'ಬಂಗಾರದ ಹೂವು', ೬೧ ವರ್ಷಗಳ ಹಿಂದೆಯೇ ೮ ಭಾಷೆಗಳಿಗೆ ಡಬ್ ಆಗಿದ್ದ ರಾಜ್ ಸಿನೆಮಾ 'ಮಹಿಷಾಸುರ ಮರ್ಧಿನಿ', ಸತತ ೨೫ ವಾರ ಪ್ರದರ್ಶನ ಕಂಡ ಏಕೈಕ ಕಲಾತ್ಮಕ ಚಿತ್ರ 'ವಂಶವೃಕ್ಷ', 'ಮುಸ್ಲಿಂ ಬ್ರಾಹ್ಮಣ' ನ ಪುರಾಣ ಪುಣ್ಯ ಕಥೆ, ಬೆಂಕಿಯಲ್ಲಿ ಅರಳಿದ ಹೂವು 'ಮಹಾಕವಿ ಕಾಳಿದಾಸ' ಮೊದಲಾದ ಮೂವತ್ತಕ್ಕೂ ಅಧಿಕ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಪ್ರತೀ ಅಧ್ಯಾಯಕ್ಕೆ ಅಪರೂಪದ ಫೋಟೋಗಳು ಇವೆ. ೧೨೦ ಪುಟಗಳ ಈ ಪುಸ್ತಕವು ಚಿತ್ರರಂಗದ ಮತ್ತೊಂದು ಮುಖವನ್ನು ನಮ್ಮೆದುರು ತೆರೆದಿಡುವುದರಲ್ಲಿ ಸಂದೇಹವಿಲ್ಲ.