ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎಂಬ ‘ಅದ್ಭುತ ಜೋಡಿ’

ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎಂಬ ‘ಅದ್ಭುತ ಜೋಡಿ’

ಬೆಳ್ಳುಳ್ಳಿ ಎಂಬ ವಸ್ತುವನ್ನು ನಾವು ಹಲವಾರು ವರ್ಷಗಳಿಂದ ನಮ್ಮ ಆಹಾರದಲ್ಲಿ ಬಳಸುತ್ತಾ ಬಂದಿದ್ದೇವೆ. ಇದೊಂದು ಆರೋಗ್ಯಕಾರಿ ವಸ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆ ಮತ್ತೊಂದು ಪ್ರಕೃತಿಯ ವರದಾನ ಜೇನುತುಪ್ಪವನ್ನು ಸೇರಿಸಿ ತಿಂದರೆ ಹಲವಾರು ಕಾಯಿಲೆಗಳು ನಿಮ್ಮಿಂದ ದೂರ ಓಡುವುದರಲ್ಲಿ ಸಂದೇಹವೇ ಇಲ್ಲ. ಜೇನು ನೊಣಗಳು ಸಾವಿರಾರು ಕಿಲೋಮೀಟರ್ ಸುತ್ತಿ ವಿವಿಧ ಹೂವುಗಳ ಮಕರಂದವನ್ನು ಸಂಗ್ರಹಿಸಿ ಜೇನುತುಪ್ಪವಾಗಿಸುವ ಕಾರ್ಯ ಅತ್ಯಂತ ಅದ್ಭುತ. ವರ್ಷಾನುಗಟ್ಟಲೆ ಇರಿಸಿದರೂ ಹಾಳಾಗದ ಈ ಅದ್ಭುತ ವಸ್ತು ಜೇನುತುಪ್ಪವನ್ನು ನಮಗೆ ಸೃಷ್ಟಿಸಲು ಅಥವಾ ತಯಾರಿಸಲು ಸಾಧ್ಯವೇ ಇಲ್ಲ. ಅಂತಹ ಅಪರೂಪದ ವಸ್ತುವಾದ ಜೇನು ತುಪ್ಪವೂ ಅತ್ಯಂತ ಆರೋಗ್ಯದಾಯಕ.

ಬೆಳ್ಳುಳ್ಳಿಯು ಪ್ರತೀ ಮನೆಯ ಅಡುಗೆ ಮನೆಯ ಖಾಯಂ ಸದಸ್ಯ. ಇದರ ಜೊತೆ ಜೇನುತುಪ್ಪವನ್ನು ಸಂಯೋಜಿಸಿದರೆ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವು ಪರಿಹಾರವನ್ನು ನೀಡಬಲ್ಲದು. ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಏಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ  ಮತ್ತು ಜೇನುತುಪ್ಪವನ್ನು ಸೇವಿಸಿದರೆ ಏನೆಲ್ಲಾ ಪ್ರಯೋಜನವಾಗುತ್ತದೆ ಎಂಬುದನ್ನು ನೋಡೋಣ…

ರೋಗ ನಿರೋಧಕ ಶಕ್ತಿ ಹೆಚ್ಚಳ: ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎರಡನ್ನೂ ಒಟ್ಟಿಗೆ ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಏಕೆಂದರೆ ಇದು ಶಿಲೀಂದ್ರಗಳ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅದಕ್ಕಾಗಿಯೇ ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ತೂಕ ಇಳಿಸಲು: ಜೇನುತುಪ್ಪ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ತಿನ್ನುವುದು ತೂಕ ಇಳಿಸಲು ಸಹಾಯ ಮಾಡುತ್ತದೆ. ಅದರ ಬಳಕೆಯಿಂದ ಚಯಾಪಚಯವು ಹೆಚ್ಚಾಗುತ್ತದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದು ಬೊಜ್ಜನ್ನು ಕರಗಿಸುತ್ತದೆ.

ಶೀತ ಮತ್ತು ಜ್ವರ ಶಮನ : ಬೆಳ್ಳುಳ್ಳಿ ಮತ್ತು ಜೇನುತುಪ್ಪ ದೇಹಕ್ಕೆ ಉಷ್ಣ (ಶಾಖ) ವನ್ನು ಉಂಟು ಮಾಡುತ್ತದೆ. ಅದಕ್ಕಾಗಿಯೇ ಶೀತ ಮತ್ತು ಜ್ವರವಿದ್ದಾಗ ಇದನ್ನು ಪ್ರತೀ ದಿನ ಸೇವಿಸಬೇಕು. ಗಂಟಲು ನೋವು ಮತ್ತು ಸೈನಸ್ ಸಮಸ್ಯೆ ಇರುವವರು ಪ್ರತಿ ದಿನ ಇದನ್ನು ತಿಂದರೆ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ಹೃದಯದ ಆರೋಗ್ಯ: ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಸೇವನೆಯು ಹೃದಯದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇವೆರಡರಲ್ಲೂ ಇಂತಹ ಹಲವು ಅಂಶಗಳಿದ್ದು ಹೃದಯವನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ಆದ್ದರಿಂದ ಹೃದ್ರೋಗಿಗಳು ಇದನ್ನು ಬಳಸಬಹುದಾಗಿದೆ.

ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಸೇವಿಸುವ ಮೊದಲು ಆ ವಸ್ತುಗಳಿಂದ ಸೇವಿಸುವ ವ್ಯಕ್ತಿಗೆ ಅಲರ್ಜಿ ಇಲ್ಲವೆಂದು ಪರೀಕ್ಷಿಸಿಕೊಳ್ಳುವುದು ಉತ್ತಮ. ಏಕೆಂದರೆ ಕೆಲವರಿಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ವಾಕರಿಕೆ ಅಥವಾ ವಾಂತಿಯಾಗುವ ಸಾಧ್ಯತೆ ಇರುತ್ತದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ