ಬೆವರಿನಿಂದ ರೂಪುಗೊಂಡ ‘ಮಯ್ಯರ ಡ್ರೆಸ್’

4.25

ಎಂಭತ್ತರ ದಶಕ. ಯಕ್ಷಗಾನ ಪ್ರದರ್ಶನಗಳ ಸುಗ್ಗಿ. ಮೇಳಗಳಲ್ಲದೆ ಹವ್ಯಾಸಿ ಸಂಘಗಳ ಆಟಗಳೂ ಧಾರಾಳ. ಖಂಡಿಗ ವೆಂಕಟೇಶ ಮಯ್ಯರು (51) ಆಗ ವೃತ್ತಿ ಮತ್ತು ಹವ್ಯಾಸಿ ಮೇಳಗಳ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದ. ಮೂಡಬಿದಿರೆ ಮಾಧವ ಶೆಟ್ಟರ ಶಿಷ್ಯ. ಬಣ್ಣಗಾರಿಕೆ, ವೇಷಭೂಷಣಗಳ ವಿನ್ಯಾಸಗಳತ್ತ ಮಯ್ಯರಿಗೆ ಆಗಲೇ ಆಸಕ್ತಿ. ವೇಷಭೂಷಣಗಳಲ್ಲಿರುವ ಉಲ್ಲನ್, ವಸ್ತ್ರಗಳ ಬಣ್ಣಗಳಲ್ಲಿರುವ ಅಸಮತೋಲನ ಗಮನ ಸೆಳೆದಿತ್ತು.
ಇದನ್ನು ಸಮತೋಲನಗೊಳಿಸುವತ್ತ ಯೋಚನೆ. ವೇಷಧಾರಿಯಾಗಿರುತ್ತಾ ಅಧ್ಯಯನ. ವಿವಿಧ ಮೇಳಗಳಿಗೆ ಭೇಟಿ. ಡ್ರೆಸ್ಸಿನ ಯಜಮಾನರುಗಳಲ್ಲಿ ಆಪ್ತ ಸಂವಾದ. ಹಿರಿಯ ಕಲಾವಿದರೊಂದಿಗೆ ಮಾತುಕತೆ.  ಹಂತ ಹಂತವಾಗಿ ಮಾಹಿತಿಗಳ ಸಂಗ್ರಹ. ಈ ಅನುಭವದ ಹಿನ್ನೆಲೆಯಲ್ಲಿ ಸ್ವಂತಕ್ಕಾಗಿ ಕೆಲವು ಪಾತ್ರಗಳ  ವೇಷಭೂಷಣಗಳು ಸಿದ್ಧವಾದುವು. ಆಟಗಳಲ್ಲಿ ತೊಟ್ಟು ಸಂಭ್ರಮಿಸಿದರು. ಬೇರೆಡೆಯಿಂದ ವೇಷಕ್ಕೆ ಕರೆ ಬಂದಾಗ ತನ್ನದೇ ಡ್ರೆಸ್ಸನ್ನು ಒಯ್ಯುತ್ತಿದ್ದುದೂ ಇದೆ. ಬಿಡುವಿನ ಅವಧಿಯಲ್ಲಿ ವಿವಿಧ ನಮೂನೆಯ ಕಿರೀಟಗಳನ್ನು ಸಿದ್ಧಪಡಿಸಿದರು. ಹನಿಗೂಡಿ ಹಳ್ಳವಾಯಿತು. ಸುಮಾರು 1996ರ ಹೊತ್ತಿಗೆ ಒಂದು ರಾತ್ರಿ ಪ್ರದರ್ಶನಕ್ಕೆ ಬೇಕಾದ ಪೂರ್ಣಪ್ರಮಾದ ವೇಷಭೂಷಣಗಳು ತಯಾರಾದುವು. ಹವ್ಯಾಸಿ ಸಂಘಗಳ ಆಟಗಳಿಗೆ ಬೇಡಿಕೆ ಬಂತು.
ವೇಷಧಾರಿಯಾದ ಮಯ್ಯರು ಡ್ರೆಸ್ಸಿನ ಮಾಲಕರಾದರು. ‘ಡ್ರೆಸ್ಸಿನ ಮಯ್ಯ’ರು ಎಂದು ಪ್ರಸಿದ್ಧರಾದರು. ‘ಶ್ರೀ ಗುರುನರಸಿಂಹ ಯಕ್ಷಗಾನ ಕಲಾ ಮಂಡಳಿ, ಖಂಡಿಗ-ಆರ್ಯಪು’ ಸಂಸ್ಥೆಯ ಮೂಲಕ ಕರಾವಳಿಯ ಉದ್ದಗಲಕ್ಕೂ ಸಂಚರಿಸಿದರು. ಹಿರಿಯ ಕಲಾವಿದರಿಂದ ಮನ್ನಣೆ ಗಳಿಸಿಕೊಂಡರು. ರಾತ್ರಿ ಹಗಲೆನ್ನದೆ ದುಡಿದರು. ಒಂದು ರಾತ್ರಿ ಎರಡೋ ಮೂರೋ ಕಾರ್ಯಕ್ರಮಗಳನ್ನು ನಿಭಾಯಿಸುವಷ್ಟು ಗಟ್ಟಿಯಾದರು. “2004ರಿಂದ 2006ರ ತನಕ ನಮ್ಮ ಡ್ರೆಸ್ಸಿಗೆ ಸುವರ್ಣಯುಗ. ನವೆಂಬರಿನಿಂದ ಎಪ್ರಿಲ್ ತನಕ ನಿರಂತರ ಬೇಡಿಕೆ. ಆರು ತಿಂಗಳಲ್ಲಿ ಆರು ದಿವಸ ನಿದ್ದೆ ಮಾಡಿರಬಹುದಷ್ಟೇ!” ನೆನಪು ಮಾಡಿಕೊಳ್ಳುತ್ತಾರೆ ವೆಂಕಟೇಶ ಮಯ್ಯರು.
ಹಾಗೆಂತ ಮಯ್ಯರು ಡ್ರೆಸ್ಸಿನಿಂದ ಶ್ರೀಮಂತರಾಗಲಿಲ್ಲ. ಯಾಕೆಂದರೆ ಅವರಲ್ಲಿ ಹೃದಯ ಶ್ರೀಮಂತಿಕೆಯಿದೆ, ಕಷ್ಟಗಳಿಗೆ ಸ್ಪಂದಿಸುವ ಸಂವೇದನಾಶೀಲ ಮನಸ್ಸಿದೆ. ಹವ್ಯಾಸಿ ಆಟಗಳಿಗೆ ಆರ್ಥಿಕವಾಗಿ ಹೊರೆಯಾಗದಂತೆ ಜಾಗೃತೆ ವಹಿಸಿದರು.  ಎಷ್ಟೋ ಪ್ರದರ್ಶನಗಳಿಗೆ ಉಚಿತವಾಗಿ ನೀಡಿದ್ದೂ ಇದೆ. ಆಯೋಜಕರಿಗೆ ಕಿರಿಕಿರಿಯಾಗದ ನಿರ್ವಹಣೆ. ಹಾಗೆಂತ ವ್ಯವಸ್ಥೆಯಲ್ಲಿ ಲೋಪ ಕಂಡರೆ ನೇರ ಹೇಳುವಷ್ಟು ನೇರಾನೇರ. ಸಿ.ಕೆ.ನರಸಿಂಹ, ಗಣೇಶ ಭಟ್, ಆನಂದ ತಿಂಗಳಾಡಿ, ವಿನೋದ ಮತ್ತು ಸಹೋದರ ಉದಯಶಂಕರ್ - ಮಯ್ಯರಿಗೆ ಸಾಥ್ ನೀಡುವ ಒಡನಾಡಿಗಳು. ಶಾಲಾ ವಾರ್ಷಿಕೋತ್ಸವಕ್ಕೆ ಬೇಕಾಗುವಂತಹ ಪರಿಕರಗಳನ್ನು ತಯಾರಿಸಿದ್ದಾರೆ.
ವೇಷಭೂಷಣದ ನಿರ್ವಹಣೆ ಬಹು ಮುಖ್ಯ. ಕಾಲಕಾಲಕ್ಕೆ ರಿಪೇರಿ ಕೆಲಸಗಳೂ ಆಗಬೇಕು. ವಸ್ತ್ರಗಳು ಹರಿದಾಗ ಬದಲಾಯಿಸಬೇಕು. ಹೊಳಪಿನ ಬೇಗಡೆ ಬದಲಾಯಿಸುತ್ತಿರಬೇಕು. ಮಯ್ಯರು ಸ್ವತಃ ಇವೆಲ್ಲವನ್ನೂ ಮಾಡಬಲ್ಲರು. “ಗುಣಮಟ್ಟದ ಕಚ್ಛಾವಸ್ತುಗಳು ಸಿಕ್ಕರೆ ಪರಿಕರಗಳು ಬೇಗನೆ ಹಾಳಾಗುವುದಿಲ್ಲ. ಮೊದಲೆಲ್ಲಾ ಕಲಾವಿದರಲ್ಲಿ ಡ್ರೆಸ್ಸಿನ ಕುರಿತು ಗೌರವವಿತ್ತು. ತನ್ನ ವೇಷ ಆದ ಬಳಿಕ ಕಳಚಿ ಎಲ್ಲೆಂದರಲ್ಲಿ ಬಿಸಾಡುವ ಮನಃಸ್ಥಿತಿ ಇದ್ದಿರಲೇ ಇಲ್ಲ. ಆದರೆ ಈಗ ಕೆಲವರನ್ನು ನೋಡ್ತೇನೆ - ಚೌಕಿಯಲ್ಲಿ ಡ್ರೆಸ್ಸಿನ ಕುರಿತು ತೋರುವ ಅನಾದರ ಬೇಸರ ಹುಟ್ಟಿಸುತ್ತದೆ,” ಎಂದು ವಿಷಾದಿಸುತ್ತಾರೆ. ಡ್ರೆಸ್ ಮಾಡಿದ ಆರಂಭದ ವರುಷಗಳಲ್ಲಿ ಗೇಲಿ ಮಾಡಿದವರು ನಂತರದ ದಿವಸಗಳನ್ನು ಮಯ್ಯರನ್ನು ಒಪ್ಪಿದ್ದಾರೆ, ಸಮರ್ಥಿಸಿದ್ದಾರೆ.
ಮಯ್ಯರು ಸುಬ್ರಹ್ಮಣ್ಯ ಮೇಳ, ಮಹಾಲಕ್ಷ್ಮೀ ಮೇಳ, ಪುತ್ತಿಗೆ ಮೇಳಗಳಲ್ಲಿ ತಿರುಗಾಟ ಮಾಡಿದ್ದರು.  ವೀರಭದ್ರ, ರಾವಣ, ಮಹಿಷಾಸುರ, ಮುರಾಸುರ.. ಮೊದಲಾದ ಖಳ ಪಾತ್ರಗಳ ನಿರ್ವಹಣೆ ಇವರಿಗೆ ಖುಷಿ. ಬಿಸಿರಕ್ತದ ಸಮಯದ ಅವಕಾಶಗಳನ್ನು ಆಪೋಶನ ಮಾಡಿಕೊಂಡ ಸಾಧಕ. ಯಕ್ಷಗಾನದ ಹೊರತಾದ ಅವರ ಪ್ರತಿಭೆ ಅನನ್ಯ. ಸಾರಣೆ, ಮರದ ಕೆಲಸ, ಟಿವಿ ರಿಪೇರಿ, ತೋಟದ ಕೆಲಸ, ವಾಹನಗಳ ರಿಪೇರಿಗಳಲ್ಲಿ ಏಕಲವ್ಯ ಸಾಧನೆ.
 ಬೆವರಿನಿಂದ ಕಟ್ಟಿದ ಬದುಕು. ಮನೆಮಂದಿಯ ಪೂರ್ಣ ಸಹಭಾಗಿತ್ವ. ಪೈಸೆ ಪೈಸೆ ಬೆಲೆಯನ್ನರಿತ ಗೃಹಸ್ಥ. ಮಡದಿ ವಿಜಯಲಕ್ಷ್ಮೀ ಮಯ್ಯರ ಸಾಧನೆಯ ಹಿಂದಿರುವ ಶಕ್ತಿ. ಮಕ್ಕಳ ಯಕ್ಷಗಾನದ ತಂಡವನ್ನು ಕಟ್ಟಿದ್ದರು. ತನ್ನ ಪುತ್ರರಾದ ಶ್ರೀಧರ, ಸುದರ್ಶನರನ್ನು ಕಲಾವಿದರನ್ನಾಗಿ ರೂಪಿಸಿದರು ವಯೋಸಹಜವಾಗಿ ದೇಹ-ಮನಸ್ಸುಗಳು  ಮುದುಡುತ್ತಿದೆ. ಕೃಷಿಯತ್ತ ಒಲವು. ಕೃಷಿಯನ್ನು ಮನೆಯಲ್ಲಿದ್ದು ನಿರ್ವಹಣೆ ಮಾಡಬೇಕಾದುದರಿಂದ ಯಕ್ಷಗಾನ ಓಡಾಟದ ವೇಗಕ್ಕೆ ಕಡಿವಾಣ ಹಾಕಿದ್ದಾರೆ.
“ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ನೇಪಥ್ಯ ಕಲಾವಿದರಾಗಲು ಹೊಸಬರು ತಯಾರಾಗುತ್ತಿಲ್ಲ. ಯಕ್ಷಗಾನ ಕಲಾವಿದರು, ಪ್ರೇಕ್ಷಕರ ಮನಃಸ್ಥಿತಿಗಳು ಬದಲಾಗುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಗಳಿಸಲಿಲ್ಲ. ಆದರೆ ಮನಃತೃಪ್ತಿ ಇದೆ. ಎಷ್ಟೋ ಮಂದಿ ಹಿರಿಯ ಕಲಾವಿದರ ಪರಿಚಯವಾಗಿದೆ. ಸಮಾಜ ಗುರುತಿಸಿದೆ. ಹಾಗೆಂತ ಇದೇ ವೃತ್ತಿಯನ್ನು ದೀರ್ಘ ಕಾಲ ಮಾಡಲು ಸಾಧ್ಯವೇ?”, ಮಯ್ಯರು ಮಾತನಾಡುತ್ತಿದ್ದಂತೆ ಒಂದು ಕ್ಷಣ ಮೌನವಾದರು. ಆ ಮೌನದ ಹಿಂದೆ ಅದೆಷ್ಟು ಅರ್ಥಗಳು.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.