ಬೆವರ ಹನಿಯ ಜೀವ

ಬೆವರ ಹನಿಯ ಜೀವ

ಪುಸ್ತಕದ ಲೇಖಕ/ಕವಿಯ ಹೆಸರು
ಕಗ್ಗೆರೆ ಪ್ರಕಾಶ್
ಪ್ರಕಾಶಕರು
ಕಗ್ಗೆರೆ ಪ್ರಕಾಶನ, ವಿಶ್ವನೀಡಂ ಅಂಚೆ, ಬೆಂಗಳೂರು -೫೬೦೦೯೧
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ : ೨೦೨೪

ಲೇಖಕ ಕಗ್ಗೆರೆ ಪ್ರಕಾಶ್ ಅವರು ತಮ್ಮ ೨೫ನೇ ಕೃತಿ ‘ಬೆವರ ಹನಿಯ ಜೀವ' ಹೊರತಂದಿದ್ದಾರೆ. ಈ ೧೨೮ ಪುಟಗಳ ಕಿರು ಪುಸ್ತಕದಲ್ಲಿ ೫೦ ಕವಿತೆಗಳನ್ನು ಪ್ರಕಟ ಮಾಡಿದ್ದಾರೆ. ಪುಸ್ತಕದ ಲೇಖಕರ ಮಾತಿನಲ್ಲಿ ಕಗ್ಗೆರೆ ಪ್ರಕಾಶ್ ಅವರು ಬರೆದ ಮಾಹಿತಿಗಳ ಆಯ್ದ ಸಾಲುಗಳು ಇಲ್ಲಿವೆ…

“ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ, ಭೂರಮೆ ವಿಲಾಸ ಬಳಿಕ ‘ಬೆವರ ಹನಿಯ ಜೀವ’ ನನ್ನ ೫ನೇ ಕವನ ಸಂಕಲನ. ಇದು ನನ್ನ ೨೫ನೇ ಪುಸ್ತಕ ಕೂಡ. ೨೦೨೧ ರಲ್ಲಿ ‘ಭೂರಮೆ ವಿಲಾಸ’ ಪ್ರಕಟವಾದ ನಂತರದಲ್ಲಿ ಬರೆದ ಐವತ್ತು ಪದ್ಯಗಳು ಇಲ್ಲಿವೆ.

ಇಲ್ಲಿ ಕಾವ್ಯದ ವಸ್ತಗಳು ನನ್ನೊಳಗೆ ಬೇರುಬಿಟ್ಟು ಅನುಭವಕ್ಕೆ ದಕ್ಕಿ ಕಾಡುತ್ತಾ ಹೋದಂತೆ ಬರೆದು ನಾನು ಆ ಗುಂಗಿನಿಂದ ಬಿಡುಗಡೆ ಹೊಂದಿ ಹೃದಯ ಭಾರ ಇಳಿಸಿಕೊಂಡಿದ್ದೇನೆ. ಆನಂತರದಲ್ಲಿ ನನ್ನೊಳಗೆ ಇನ್ನೊಂದು ಕಾವ್ಯ ವಸ್ತು ಮೊಟ್ಟೆ ಇಡುವತನಕ ಕಾದಿದ್ದೇನೆ. ಹೀಗಾಗಿ ಈ ಎಲ್ಲ ಪದ್ಯಗಳು ಅವಸರಕ್ಕೆ ಯಾರದೋ ಒತ್ತಡಕ್ಕೆ ಬರೆದವುಗಳಲ್ಲ. ಇವು ಬದುಕಿನ ಅನುಭವಿತ ಫಲಿತಗಳು.

ಪದ್ಯ ಬರೆದ ತಕ್ಷಣ ನನ್ನ ಕುಟುಂಬದ ಸದಸ್ಯರೂ ಸೇರಿದಂತೆ ಐದಾರು ಸ್ನೇಹಿತರಿಗೆ ಕಳಿಸಿ ಅವರ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಸ್ವೀಕರಿಸಿ ಪರಿಷ್ಕರಣೆಯನ್ನೂ ಮಾಡಿದ್ದೇನೆ. ನಾನು ಬರೆದ ಕವಿತೆಗಳು ಶ್ರೇಷ್ಠ ಎಂಬ ಭ್ರಮೆ ನನಗಿಲ್ಲ. ಹಾಗೆಯೇ ಅವು ಕನಿಷ್ಠ ಎಂಬ ಕೀಳರಿಮೆಯನ್ನೂ ಇಟ್ಟುಕೊಂಡಿಲ್ಲ. ಕಾವ್ಯ ಜನಮಾನಸದಲ್ಲಿ ನಿಲ್ಲುತ್ತಾ ಹೋಗುವುದು ಅವುಗಳ ಅಂತಃಸತ್ವದಿಂದ ಮಾತ್ರ. ಹಾಗಾಗಿ ನಾನಿಲ್ಲಿ ಪ್ರಸಿದ್ಧ ಕವಿ ಮತ್ತು ವಿಮರ್ಶಕರ ಮುನ್ನುಡಿ, ಬೆನ್ನುಡಿಗಳ ಗೋಜಿಗೆ ಹೋಗಿಲ್ಲ. ನೇರವಾಗಿ ಓದುಗರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಒಂದಿಷ್ಟು ವಸ್ತುನಿಷ್ಠ ಅಭಿಪ್ರಾಯಗಳನ್ನು ಮಾತ್ರ ದಾಖಲಿಸಿರುವೆ.

ಪ್ರೌಢ ಶಾಲೆಯಲ್ಲೇ ನನ್ನ ಕಾವ್ಯ ಕೃಷಿಯು ಆರಂಭವಾಯಿತು. ಆಗಿನ ಶಾಲಾ ಶಿಕ್ಷಕರ ಉತ್ತೇಜನವೂ ಇತ್ತು. ಆದರೆ ಮೊದಲ ಬಾರಿಗೆ ಕ್ಲಾಸ್‍ಮೇಟ್ ಹುಡುಗಿ ನೋಟ್ ಬುಕ್ ಮೇಲೆ ನಾಲ್ಕು ಸಾಲು ಬರೆದು ಕೊಟ್ಟಿದ್ದು ಹೆಡ್‍ಮಾಸ್ಟರ್ ಬಳಿ ತಲುಪಿ ಗೂಸಾ ತಿಂದಿದ್ದೂ ಉಂಟು. ಆ ನಾಲ್ಕು ಸಾಲು ನನಗೆ ಇನ್ನೂ ನೆನಪಿದೆ.

ಸ್ನೇಹ ಸಂಬಂಧ ಕಣ್ಣುಗಳಿದ್ದಂತೆ
ರೆಪ್ಪೆಗಳಿಗೆ ಕಣ್ಣ ರಕ್ಷಣೆಯದೇ ಚಿಂತೆ
ಬರಿಯ ಕತ್ತಲು ಕಣ್ಣಿಲ್ಲದವನ ಬಾಳು
ಸ್ನೇಹ ಪ್ರೇಮಿಯಾಗಿರುವೆಯಾ ಹೇಳು?

ನನ್ನಲ್ಲಿ ಹೀಗೆ ಗ್ರಾಮೀಣ ಪರಿಸರದಲ್ಲಿ ಹುಟ್ಟಿಕೊಳ್ಳುತ್ತಿದ್ದ ಕವಿತೆಗಳು ಬೆಳೆದು ವಿಕಸನಗೊಂಡು ಸಾವಿರಾರು ಓದುಗರಿಗೆ ತಲುಪಿದ್ದು ಮಾತ್ರ ನಮ್ಮ ಕುಟುಂಬ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದ ಮೇಲೆ. ನನ್ನ ಕಗ್ಗೆರೆ ಊರಿನಲ್ಲಿ ಎಸ್‍ಎಸ್‍ಎಲ್‍ಸಿ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಎರಡು ವರ್ಷ ಸುಮ್ಮನೆ ಕಳೆದು ಹೋಯ್ತು. ಆಗ ಹೊಟ್ಟೆಪಾಡಿಗಾಗಿ ವಿವಿಧ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡತೊಡಗಿದೆ. ಈ ಹಂತದಲ್ಲಿ ನನ್ನೊಳಗಿದ್ದ ಶ್ರಮಿಕನ ಬೆವರ ಹನಿಯ ಜೀವ ಕಾವ್ಯ ಅರಳುತ್ತಲೇ ಇದ್ದವು. ಹಾಗಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಲೇ ಕವಿತೆ ಗೀಚುತ್ತಿದ್ದೆ.

ಹೀಗೆ ಬರೆದ ಪದ್ಯಗಳನ್ನು ಒಂದು ನೋಟ್ ಬುಕ್‍ನಲ್ಲಿ ಬರೆದು ಸಲಹೆ- ಸೂಚನೆಗೆಂದು ‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ಕಾವ್ಯ ಖ್ಯಾತಿಯ ಡಾ. ಸಿದ್ಧಯ್ಯ ಪುರಾಣಿಕ ಅವರಿಗೆ ಪೋಸ್ಟ್ ಮಾಡಿದೆ. ಮೂರು ತಿಂಗಳಾದರೂ ವಾಪಸ್ ಬರಲೇ ಇಲ್ಲ. ಬಹುಶಃ ನನ್ನ ಕವಿತೆಗಳು ಕಸದ ಬುಟ್ಟಿಗೆ ಸೇರಿರಬೇಕು ಎಂದು ಮರೆತುಬಿಟ್ಟೆ. ಆದರೆ ಆರು ತಿಂಗಳ ನಂತರ ‘ಪೋಸ್ಟ್’ ಅಂತ ಕಾರ್ಖಾನೆ ಮುಂದೆ ಬಂದಿದ್ದ ಪೋಸ್ಟ್ ಮ್ಯಾನ್ ಕಂಡು ಆಶ್ಚರ್ಯಗೊಂಡೆ. ಅದು ಡಾ. ಸಿದ್ಧಯ್ಯ ಪುರಾಣಿಕ ಅವರಿಂದಲೇ ಬಂದ ಪೋಸ್ಟ್ ಆಗಿತ್ತು. ಕವರ್ ಬಿಚ್ಚಿ ನೋಡಿದರೆ ಕನ್ನಡದ ಪ್ರಸಿದ್ಧ ಕವಿ ಡಾ. ಸಿದ್ಧಯ್ಯ ಪುರಾಣಿಕ ಅವರು ನನ್ನ ಪ್ರತಿಯೊಂದು ಪದ್ಯ ಓದಿ ತಿದ್ದಿ-ತೀಡಿ, ಸಲಹೆ-ಸೂಚನೆ ಕೊಟ್ಟಿದ್ದರು. ಅನಂತರ ಅವರನ್ನು ನಾನು ಆಲಿ ಆಸ್ಕರ್ ರಸ್ತೆಯಲ್ಲಿದ್ದ ಅವರ ಮನೆಗೆ ಖುದ್ದು ಭೇಟಿ ನೀಡಿ ನನ್ನ ಕೃತಜ್ಞತೆ ತಿಳಿಸಿದೆ. ಈ ಪ್ರಸಂಗದಿಂದ ಪುಳಕಿತಗೊಂಡ ಕ್ಷಣವನ್ನು ನಾನು ಯಾವತ್ತೂ ಮರೆಯಲಾರೆ.

ಪ್ರಸಿದ್ಧ ಕವಿ ಹಾಗೂ ಚಲನಚಿತ್ರ ಸಾಹಿತಿ ಎಂ.ಎನ್. ವ್ಯಾಸರಾವ್ ‘ನಿಮ್ಮ ಕವಿತೆಗಳಲ್ಲಿ ಲಯಗಾರಿಕೆ ಇದೆ. ಓದಲು ಸಹಜ, ಸರಳವಾಗಿದೆ. ಮನಸ್ಸಿಗೆ ಹತ್ತಿರವಾಗಿ ಆಪ್ತವಾಗುತ್ತವೆ’ ಎನ್ನುತ್ತಿದ್ದರು. ಇವರ ಸಮಗ್ರ ಕಾವ್ಯ ‘ಅಗ್ನಿಶಿಖೆ’ ಬೃಹತ್ ಕೃತಿಯನ್ನು ಮಿತ್ರ ಶ್ರೀಧರ ಬನವಾಸಿ ಜೊತೆ ಸಂಪಾದಿಸಿದ್ದು ನನ್ನ ಜೀವನದ ಮೈಲಿಗಲ್ಲು. ಇದಕ್ಕೆ ‘ಮುದ್ರಣ ಸೊಗಸು’ ಪ್ರಶಸ್ತಿಯೂ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಂತು.

ಕೆಲಸ ಮಾಡುತ್ತಲೇ ಪಿಯುಸಿ, ಡಿಗ್ರಿ, ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ತನಕ ಓದಿದೆ. ಪತ್ರಿಕೆ ಮತ್ತು ಸಾಹಿತ್ಯಿಕ ಬರವಣಿಗೆ ನನಗೆ ಜೊತೆ ಜೊತೆಗೇ ಸಾಗಿ ಬಂತು. ವೃತ್ತಿ-ಪ್ರವೃತ್ತಿಯೇ ನನಗೆ ಜೋಡಿ ಜೀವವಾಯಿತು. ಇದುವರೆಗೂ ನನ್ನ ೨೫ ಪುಸ್ತಕಗಳು ಪ್ರಕಟಗೊಂಡಿವೆ. ಅಷ್ಟಲ್ಲದೆ, ವಿಶ್ವವಾಣಿ ಪುಸ್ತಕ, ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ವೀರಲೋಕ ಬುಕ್ಸ್‍ನಲ್ಲಿ ಕೆಲಸ ಮಾಡುತ್ತಾ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು-ಹೀಗೆ ಅನೇಕ ಸಂಘ ಸಂಸ್ಥೆಗಳಿಗೆ ನೂರಾರು ಪುಸ್ತಕಗಳನ್ನು ಸಿದ್ಧಮಾಡಿ ಕೊಟ್ಟಿರುವುದು ನನಗೊಂದು ಹೆಮ್ಮೆಯ ಸಂಗತಿ.

೧೯೮೮ ರಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿಕೊಂಡು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಲೇ ಓದು ಮುಂದುವರಿಸಿದ ನಾನು, ೨೦೨೪ರ ಕಾಲಮಾನಕ್ಕೆ ಪತ್ರಿಕೋದ್ಯಮ, ಸಾಹಿತ್ಯ, ಅಕಾಡೆಮಿಕ್ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡುತ್ತಾ ಲೇಖಕ-ಪತ್ರಕರ್ತನಾಗಿದ್ದು, ಪ್ರಕಾಶಕ ಆಗಿದ್ದು ನನ್ನ ಹೆಚ್ಚುಗಾರಿಕೆಯಲ್ಲ; ಜೀವನದ ಏಳು-ಬೀಳುಗಳ ನಡುವೆ ಕುಗ್ಗದೆ ಹಿಗ್ಗದೆ ಬದುಕು ಕಟ್ಟಿಕೊಂಡಿದ್ದು ಮಾತ್ರ ಸಾಮಾನ್ಯ ಸಂಗತಿಯಂತೂ ಅಲ್ಲ. ಆ ಎಲ್ಲ ಬದುಕು-ಬವಣೆಗಳ ಪ್ರತಿಫಲವೇ ಇಲ್ಲಿನ ಕವಿತೆಗಳು. ಈ ಕವಿತೆಗಳು ನಿಮ್ಮ ಜೊತೆ ಮಾತಾಡುತ್ತವೆ. ಇವು ಬದುಕಿನ ಜೀವಂತಿಕೆಯ ಕವಿತೆಗಳು. ಈ ಕವಿತೆಗಳಲ್ಲಿ ಅಂತ್ಯ ಪ್ರಾಸ ಕೂಡ ಸರಾಗವಾಗಿ ಹರಿದು ಬಂದಿದೆ.

ಇಲ್ಲಿನ ಎಲ್ಲ ಕವಿತೆಗಳು ಸರಳವಾಗಿ ಕಂಡರೂ ಸಂಕೀರ್ಣಮಯಗೊಂಡಿವೆ. ಕಾವ್ಯದ ಆಳಕ್ಕೆ ಇಳಿಯುತ್ತಾ ಹೋದ ಹಾಗೆ ಒಂದು ಅಮೂರ್ತ ಚಿತ್ರದಂತೆ ಹೊಸಹೊಸ ಹೊಳವುಗಳನ್ನು ಬಿಚ್ಚಿಡುವ ಇಲ್ಲಿನ ಕವಿತೆಗಳು ಚಲನಶೀಲವಾಗಿವೆ. ಯಾವ ಕವಿತೆಗಳಲ್ಲೂ ಜಡತ್ವ ಕಾಡದೆ ಲವಲವಿಕೆಯಿಂದ ಓದಿಸಿಕೊಳ್ಳುತ್ತವೆ ಎಂಬುದು ನನ್ನ ಭಾವನೆ.”