ಬೆಸ್ಟ್ ಆಫ್ ನಾ ಕಸ್ತೂರಿ
ಬೆಸ್ಟ್ ಆಫ್ ನಾ ಕಸ್ತೂರಿ, ( ನಾ ಕಸ್ತೂರಿಯವರ ಆಯ್ದ ನಗೆಬರಹಗಳು )
ನಾ. ಕಸ್ತೂರಿ, ಕನ್ನಡ ದೇಶದಲ್ಲಿ ಜನಿಸದಿದ್ದರೂ, ಕನ್ನಡದ ಹಾಸ್ಯ ಸಾಹಿತ್ಯದ ಪರಂಪರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದರು ಎಂದರೆ ಸುಳ್ಳಲ್ಲ. ಕನ್ನಡದಲ್ಲಿ ಹಾಸ್ಯ ಸಾಹಿತ್ಯದ ಬೆಳವಣಿಗೆಯ ಪ್ರಥಮ ಹಂತದಲ್ಲಿ ಅವರ ಪಾಲೂ ಬಹು ಮುಖ್ಯ.
ಶ್ರೀಮತಿ ಸುನಂದಮ್ಮ, ಆರಾಸೆ, ದಾಶರಥಿ ದೀಕ್ಷಿತ್, ಜಿ. ಪಿ ರಾಜರತ್ನಂ, ಮುಂತಾದವರು ಸೇರಿ 'ಕೊರವಂಜಿ' ಎಂಬ ಪತ್ರಿಕೆಯನ್ನು ಹೊರತಂದಿದ್ದರು. ಹೆಸಾರಂತ ಡಾ. ಶಿವರಾಂ ಅವರೇ ಅದರ ಸಂಪಾದಕರು. ಆರ್. ಕೆ ಲಕ್ಷ್ಮಣ್ರವರ ವ್ಯಂಗ್ಯ ಚಿತ್ರಗಳು ಈ ಪತ್ರಿಕೆಯಿಂದಲೇ ಬೆಳಕಿಗೆ ಬಂದು ಪ್ರಖ್ಯಾತರಾದರು. ಅವರಿನ್ನೂ ಆಗ ಬೆಂಗಳೂರಿನಲ್ಲೇ ಇದ್ದರು. ಕೊರವಂಜಿಯ ಮುಖಪುಟವನ್ನು ಕಲಾತ್ಮಕವಾಗಿ ರಚಿಸಿದ್ದರು.
ನಾ ಕಸ್ತೂರಿಯವರು ಬರೆದ, ಅನರ್ಥಕೋಶ, ಗಗ್ಗಯ್ಯನಗಡಿಬಿಡಿ, ಕಾಡಾನೆ, ವರ
ಪರೀಕ್ಷೆ, ತಾಪತ್ರಯತಪ್ಪಿತು, ಬ್ಯಾಂಕಿನ ದಿವಾಳಿ, ರಾಮಕೃಷ್ಣಯ್ಯನ ದರ್ಬಾರಿನಂತಹ ನಾಟಕಗಳನ್ನು ರಚಿಸಿದರು.
ಈ ಎಲ್ಲಾ ನಗೆ ಬರಹಗಳನ್ನೂ ಒಂದೆಡೆ ಕ್ರೊಢೀಕರಿಸಿ "ಬೆಸ್ಟ್ ಆಫ್ ಕಸ್ತೂರಿ"ಎಂಬ ಶೀರ್ಶಿಕೆ ಯಲ್ಲಿ ಶ್ರಿ. ವೈ. ಎನ್. ಗುಂಡೂರಾಯರು ಸಂಪಾದಿಸಿ ಹೊರತಂದಿದ್ದಾರೆ. ಉಪಯುಕ್ತವಾದ ಚಿತ್ರಗಳನ್ನು ಬರೆದ ಹರಿಣಿಯವರು ಪುಸ್ತಕದ ಸವಿಯನ್ನು ಇಮ್ಮಡಿಯಾಗುವಂತೆ ಮಾಡಿದ್ದಾರೆ. ಹಳೆಯ ಗಾದೆಗಳು ಕಸ್ತೂರಿಯವರ ಲೇಖನಿಯಿಂದ ಬಂದಮೇಲೆ ಹೊಸ ಮೆರುಗನ್ನು ಪಡೆಯುತ್ತವೆ. ನೀವೇ ಗಮನಿಸಿ.
ಹತ್ತು ಮಕ್ಕಳ ಜನಕ ಇನ್ನೆಲ್ಲಿಯ ನರಕ ?
ಹೊಳೆ ದಾಟಿದ ಮೇಲೆ ಅಂಬಿಗ ಬಿಲ್ ಕಳಿಸಿದ.
ಸಿನಿಮಾತಾರೆಯ ಪುರಾಣ ಊರಿಗೆಲ್ಲ ಪ್ರಾಣ.
ಪಿಲ್ ನುಂಗಿ ಸಾಯದವ ಬಿಲ್ ನುಂಗಿ ಸತ್ತಾನೆ ?
ಗುರುವಿಗೆ ಬೇಕಾದ್ದು ಉರು ಮಂತ್ರ.
ಪಾಪಿ ಬಸ್ಸಿಗೆ ಹೋದರೆ ಮೊಣಕಾಲು ಮಡಿಸಲೂ ಜಾಗವಿಲ್ಲ.
ಅನರ್ಥ ಕೋಶದ ಸ್ಯಾಂಪಲ್ ಗಳು :
ಅಕ್ರೂರ : ರಿಟೈರಾದ ಉನ್ನತ ಅಧಿಕಾರಿ.
ಅಗ್ನಿಹೋತ್ರಿ : ಬಿಡುವಿಲ್ಲದೆ ಸಿಗರೇಟು ಸೇದುವವ.
ಅಮಲುದಾರ : ಅಮಲು ಹತ್ತಿದವ.
ಉತ್ತರಕ್ರಿಯೆ : ಪರೀಕ್ಷೆಗಳಲ್ಲಿ ಉತ್ತರ ಬರೆಯುವಕೆಲಸ. ಇತ್ಯಾದಿ.
ಇದಲ್ಲದೆ, ಅವರು ನಗೆಯ ಹೊನಲನ್ನು ಹರಿಸುವ ಕೃತಿಗಳನ್ನು ಕನ್ನಡ
ಜನತೆಗೆ ಕೊಟ್ಟಿದ್ದಾರೆ. 'ನಕ್ಕು ನಗಿಸುವ ನುಡಿಯೆ' ಲೇಸೆಂದು ಡೊಂಕುಬಾಲ, ಅಲ್ಲೋಲ ಕಲ್ಲೋಲ, ಉಪಾಯ ವೇದಂತ, ಗಾಳಿಗೋಪುರ, ಶಂಖವಾದ್ಯ, ಇತ್ಯಾದಿ.
ಹಿಂದಿನಂತೆ, ಅಂಕಿತ ಪ್ರಕಾಶನ ಪ್ರಸ್ತುತ ಕೃತಿಯನ್ನೂ ಹೊರತಂದಿದೆ. ಅವೆಲ್ಲಾ ಮುಖ್ಯವಾಗಿ ಹಾಸ್ಯ ಸಾಹಿತ್ಯಗಳೇ ಎಂದರೆ ಆಶ್ಚರ್ಯವಿಲ್ಲ.
ನಾ ಕಸ್ತುರಿಯವರ 'ಅನರ್ಥಕೋಶ' ಒಂದು ಅನರ್ಘ್ಯ ಕೃತಿಯೇ ಸರಿ.
ನಗೆ ಬರಹಗಳು, ಹಾಸ್ಯ ಚುಟಕಗಳು, ಗಾದೆಗಳು, ಪದ್ಯಗಳು.
ಹಾಸ್ಯ ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಪರಂಪರೆ
ಆ ಕಾಲದಲ್ಲೆ, ಕೊರವಂಜಿ ಪತ್ರಿಕೆಯ ಜೊತೆಗೆ ಶುರುವಾಯಿತೆಂದು ಹೇಳಬಹುದು. ಆಶ್ಲೀಲವಲ್ಲದ ತಿಳಿಯಾದ, ನವಿರಾದ ಹಾಸ್ಯ, ಮನಸ್ಸಿನ ದುಗುಡವನ್ನು ನೀಗುವಲ್ಲಿ ಸಹಾಯವಾಯಿತೆಂಬ ಮಾತೇ ಇದರ ಪ್ರಸಿದ್ಧಿಗೆ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ.
"ಬೆಸ್ಟ್ ಆಫ಼್ ನಾ ಕಸ್ತೂರಿ," ಪುಸ್ತಕವನ್ನು ಕೊಂಡು ನಿಮ್ಮ ಮನೆಯ ಡ್ರಾಯಿಂಗ್ ರೂಮಿನ 'ಪುಸ್ತಕ ಖಾನಿ,' ಯಲ್ಲಿ ಪ್ರದರ್ಶಿಸಲು ಮರೆಯಬೇಡಿ.
ಕೃಪೆ : ಸುಧಾ, ೧೬, ಮಾರ್ಚ್, ೨೦೦೬