ಬೇಂದ್ರೆ ಅಜ್ಜ ಇಲ್ಲದಿದ್ದರೇನಂತೆ, ಅವರಿತ್ತ ಕಲ್ಲುಸಕ್ಕರೆ ಇನ್ನೂ ಅಂಗೈಯಲ್ಲಿದೆ...

ಬೇಂದ್ರೆ ಅಜ್ಜ ಇಲ್ಲದಿದ್ದರೇನಂತೆ, ಅವರಿತ್ತ ಕಲ್ಲುಸಕ್ಕರೆ ಇನ್ನೂ ಅಂಗೈಯಲ್ಲಿದೆ...

"ನಮ್ಮ ಸಾಲಿಗೆ ಒಮ್ಮೆ ಬೇಂದ್ರೆಯವರು ಬಂದಿದ್ದರು. ಹೆಣ್ಣು ಮಕ್ಕಳ ಸಾಲೀ. ಏನು ಭಾಷಣಾ ಮಾಡಬೇಕು ಪಾಪ ಅವರೇ. ಅರಿಬಿ ಭಾಳ ದಿನಾ ಬಾಳಿಕಿ ಬರಬೇಕಂದರ 'ಐದು ಬ' ಮಾಡಬಾರದು. ಭಾಳ ಬಿಸಿನೀರಾಗ ನೆನಸಬಾರದು. ಬಡದ ಬಡದ ಒಗೀಬಾರದು. ಬಿಗಿಯಾಗಿ ಹಿಂಡಬಾರದು. ಭಾಳ ಝಾಡಿಸಬಾರದು. ಬಿರಬಿಸಲಾಗ ಒಣಗಿಸಬಾರದು.." ಅಮ್ಮ, ತಮ್ಮ ಶಾಲೆಗೆ ಬೇಂದ್ರೆ ಬಂದಾಗಿನ ಸುದ್ದಿಯನ್ನು ಒಮ್ಮೆ ಹೇಳಿದಾಗ, ಬಟ್ಟೆಯ ಬಗ್ಗೆ ಇಂಥಾ ಅಮೋಘ ತಿಳುವಳಿಕೆ ಇರುವ ಬೇಂದ್ರೆಯವರು ದೊಡ್ಡ ಅಪರೋಕ್ಷ ಜ್ಞಾನಿಗಳು ಇರಲಿಕ್ಕೇ ಬೇಕು. ಅವರನ್ನು ಭೆಟ್ಟಿ ಆಗಲೇಬೇಕು ಎಂಬ ವಿಷಯ ನಮ್ಮ ಆರುವರ್ಷದ ಮೆದುಳಿನಲ್ಲಿ ಕೂತುಬಿಟ್ಟಿತ್ತು.

ಅದೇ ವರ್ಷ ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಭೇಟಿಯಾಗಲು ಬೇಂದ್ರೆ ಅಜ್ಜ ಬರುತ್ತಾರೆಂದು ಗೊತ್ತಾಯಿತು. ಆದರೆ ಪ್ರೈಮರಿಯವರನ್ನು ಬಿಡುವುದಿಲ್ಲ ಎಂದು ಹೇಳಿದ ಹೆಡ್ಡಕ್ಕೋರ ಮೇಲೆ ಕೆಂಡಾಮಂಡಾ ಸಿಟ್ಟು ಬಂದಿತ್ತು. ಕೊನೆಗೆ ನಾವೇ ಬೇಂದ್ರೆಯವರ ಮನೆಗೆ ಹೋಗಿ ಅವರನ್ನು ಭೆಟ್ಟಿ ಆಗುವುದು ಎಂಬ ಪ್ಲಾನ್ ತಯಾರಾಯಿತು. ಕೊನೆಗೆ ಹೊರಟಿದ್ದು ನಾನು, ರಾಜಿ ಇಬ್ಬರೇ. "ಲೇ ರಾಜಿ, ಬೇಂದ್ರೆ ಅಜ್ಜ ಕಾಣವಲ್ಲರಲಲೇ. ಏ, ಅಲ್ಲೇ ಆರಾಂ ಕುರ್ಚೆದಾಗ ಕೂತು ಅಗಳಾಡಲಿಕತ್ತಾರ ನೋಡಲೇ ಅವರs ಬೇಂದ್ರೆ ಅಜ್ಜಾ.." ರಾಜಿ ಪಿಸುಗುಟ್ಟಿದಳು. ಮಂಗಳವಾರ ಅರ್ಧದಿನ ರಜೆ ಶಾಲೆಗೆ. ಶಾಲೆಯಿಂದ ಮನೆಗೆ ಹೋಗುವ ಹಾದಿಯನ್ನು ತಪ್ಪಿಸಿ ಸಾಧನಕೇರಿಗೆ ಹೋಗಿ ನಿಂತಿದ್ದೆವು. ಆಗೆಲ್ಲ ಅಲ್ಲಿ ಹೊಲಗಳು. ಗಿಡದ ಹಿಂದಿನಿಂದ ಕಾಲು ಎತ್ತರಿಸಿ ನೋಡುತ್ತಿದ್ದ ಎರಡನೇತ್ತಾ ಹುಡುಗಿಯರನ್ನು ಅಜ್ಜ ನೋಡೇ ಬಿಟ್ಟರು. "ಬರ್ರಿಲ್ಲೆ" ಎಂದು ಕೈಮಾಡಿ ಕರೆದಾಗ, ನೀ ಹೋಗು ಮುಂದ, ನೀ ಹೋಗು ಮುಂದ.. ಎನ್ನುತ್ತ ಕಳ್ಳ ಹೆಜ್ಜೆ ಇಡುತ್ತಾ ಅವರ ಮುಂದೆ ನಿಂತೆವು.

ನಮ್ಮ ಪಾಟೀಚೀಲ ನೋಡುತ್ತ, "ಮಟಮಟ ಮಧ್ಯಾಹ್ನ ಹಿಂಗ ಅಡ್ಡಾಡಬ್ಯಾಡ್ರಿ. ಮಂದೀಮಕ್ಕಳು ಇರಂಗಿಲ್ಲ ಹೊರಗ." ಎಂದು ಸಣ್ಣ ದನಿಯಲ್ಲಿ ಗದ್ದರಿಸಿದಾಗ ಇಬ್ಬರಿಗೂ ಕಣ್ಣಲ್ಲಿ ನೀರು. ಅದನ್ನು ನೋಡಿದಾಗ ಅವರಿಗೂ ಬೇಜಾರು ಆತೇನೋ. ಯಾರನ್ನೋ ಕರೆದು ಎರಡೆರಡು ಪಾರ್ಲೆ ಜಿ ಬಿಸ್ಕತ್ತು ನಮ್ಮ ಕೈಯಲ್ಲಿಟ್ಟು ಕಳಿಸಿದ್ದರು. ಮುಂದೆ ನಾನು ನಾಲ್ಕನೇತ್ತಾ ಇದ್ದಾಗ ತಾವರಗೇರಿ ದವಾಖಾನಿಯಲ್ಲಿ ಬೇಂದ್ರೆಯವರನ್ನು ಆ್ಯಡ್ಮಿಟ್ ಮಾಡಿದ್ದರು. ಆಗ ತಂಗಿ ಹುಟ್ಟಿದ್ದಳು. ಅಮ್ಮ ಅಲ್ಲಿದ್ದ ಹತ್ತು ದಿನಗಳ ಕಾಲ ನಮ್ಮ ಮನೆಯ ಹಿಂದೆಯೇ ಇದ್ದ ದವಾಖಾನಿಗೆ ದಿನಾ ಸಂಜೆ ಹೋಗುವುದು ನಮ್ಮ ದಿನಚರಿಯಾಗಿಬಿಟ್ಟಿತ್ತು. ಅಜ್ಜನನ್ನು ನೋಡಲು ಅಟ್ಟದ ಮೇಲಿನ ಅವರ ಖೋಲಿಗೆ ಹೋದಾಗ ನರ್ಸು ಬೈದು ಕಳಿಸಿಬಿಟ್ಟಿದ್ದಳು. ಮರುದಿನ ನನ್ನ ದೊಡ್ಡವ್ವ, ಆಕಾಶವಾಣಿಯ ಸಣ್ಣಕ್ಕ ಅವರ ಭೆಟ್ಟಿಗೆ ಬಂದಾಗ ನನ್ನನ್ನೂ ಜೊತೆಗೆ ಕರೆದುಕೊಂಡು ಅವರ ರೂಮಿಗೆ ಹೋದಳು. ಆ ನರ್ಸಿನ ಮುಂದೆ ಕೈಬೀಸುತ್ತಾ ಹೋಗಿ ಅವರ ಮಂಚದ ಕಂಬಿ ಹಿಡಿದುಕೊಂಡು ಜೋತಾಡಿದ್ದ ನೆನಪು ಇನ್ನೂ ಹಸಿರಾಗಿದೆ. ಹರಟೆ ಹೊಡೆದ ಅಜ್ಜ, ಕೈ ತುಂಬಾ ಕಲ್ಲು ಸಕ್ಕರೆ ಕೊಟ್ಟಿದ್ದರು. ಅವತ್ತಿನಿಂದ ದಿನಾ ಅವರ ಖೋಲಿಗೆ ಹೋಗಿ ನಿಲ್ಲುತ್ತಿದ್ದೆ. ಅವರಿಗೆ ಆರಾಂ ಇಲ್ಲ. ಬಹಳ ಕೆಮ್ಮು ಬಂದಿದೆ. ಕಾಡಬೇಡಿರಿ. ನರ್ಸ್ ಹೇಳುತ್ತಿದ್ದಳು. ಎಷ್ಟೋ ಜನ ಹಿರಿಯ ಸಾಹಿತಿಗಳು ಅವರನ್ನು ಭೇಟಿಯಾಗಲು ಬರುತ್ತಿದ್ದರು. ಅವರ ರೂಮಿಗೆ ದೊಡ್ಡ ಬಾಲ್ಕನಿ ಇತ್ತು.

ಯಾರೊಬ್ಬರ ಮಾತನ್ನು ಕೇಳಿಸಿಕೊಳ್ಳದೇ ಬೇಂದ್ರೆ ಅಜ್ಜ ಕೊಡುತ್ತಿದ್ದ ಕಲ್ಲು ಸಕ್ಕರೆ ಮೇಯುತ್ತಾ ಬಾಲ್ಕನಿಯಲ್ಲಿ ನಿಲ್ಲುತ್ತಿದ್ದುದ್ದಕ್ಕೆ ಈಗ ಪಿಚ್ಚೆನಿಸುತ್ತದೆ. ಮೊನ್ನೆ ಹಿರಿಯರಾದ ಜುಂಜರವಾಡ ಸರ್ರು ಏನೋ ಮಾತನಾಡುತ್ತಾ "ಬೇಂದ್ರೆಯವರು ನಿಮ್ಮ ಕಾದಂಬರಿ ಓದಿದ್ರ ಛಲೋ ತಯಾರು ಮಾಡತಿದ್ರು ನಿಮ್ಮನ್ನ." ಎಂದು ಪ್ರೀತಿಯಿಂದ ಹೇಳಿದಾಗ ಹಳೆಯದೆಲ್ಲವೂ ನೆನಪಾಯಿತು. ಅಜ್ಜ ಇಲ್ಲದಿದ್ದರೇನಂತೆ. ಅವರಿತ್ತ ಕಲ್ಲುಸಕ್ಕರೆಯ ಜಿಬಿಜಿಬಿ ಇನ್ನೂ ಅಂಗೈಯಲ್ಲಿದೆ.

-ದೀಪಾ ಜೋಶಿ, ಧಾರವಾಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ