ಬೇಕಾಬಿಟ್ಟಿ ದರ : ಬೇಕಿದೆ ಕಡಿವಾಣ
ಎರಡನೇ ಶನಿವಾರ ಮತ್ತು ದೀಪಾವಳಿ ಹಬ್ಬದ ಕಾರಣದಿಂದ ಸಾಲು ಸಾಲು ರಜೆಗಳಿವೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡ್ಮೂರು ಪಟ್ಟು ಹೆಚ್ಚಿಸಿದ್ದಾರೆ. ವಿಮಾನ ಟಿಕೆಟಿಗಿಂತಲೂ ಹೆಚ್ಚಿನ ಬೆಲೆ ಏರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಧಾರವಾಡ, ಗೋವಾ, ಕಾರವಾರ, ಬೆಳಗಾವಿ ಸೇರಿದಂತೆ ಹಲವು ಪ್ರಯಾಣದ ದರಗಳು ಗಗನಕ್ಕೇರಿವೆ. ಬೆಂಗಳೂರು-ಧಾರವಾಡಕ್ಕೆ ಹೋಗುವ ಬಸ್ಸುಗಳ ದರ ಸಾಮಾನ್ಯವಾಗಿ ೫೦೦ ರಿಂದ ೮೦೦ ರೂಪಾಯಿ ಇರುತ್ತದೆ. ಆದರೆ ಈಗ ೫೦೦೦ ರೂ. ವರೆಗೂ ಏರಿಸಲಾಗಿದೆ. ದಸರಾ ಹಬ್ಬದ ಸಂದರ್ಭದಲ್ಲೂ ಖಾಸಗಿ ಬಸ್ ಗಳ ವಸೂಲಿ ವ್ಯಾಪಕವಾಗಿದ್ದ ಹಿನ್ನಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಮಿತಿಮೀರಿ ಟಿಕೇಟ್ ದರವನ್ನು ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆಯು ಹಲವು ವರ್ಷಗಳಿಂದಲೂ ಸೂಚನೆ ನೀಡುತ್ತಾ ಬಂದಿದೆ. ಬೇಕಾಬಿಟ್ಟಿಯಾಗಿ ಪ್ರಯಾಣ ದರ ಏರಿಕೆ ಮಾಡುವುದರ ವಿರುದ್ಧ ಪರ್ಮಿಟ್ ರದ್ದು ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸುತ್ತಿರುತ್ತದೆ. ಇದನ್ನು ಖಾಸಗಿ ಬಸ್ ಮಾಲೀಕರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಹಬ್ಬದ ಹಿನ್ನಲೆಯಲ್ಲಿ ಬಸ್ ಗಳ ಟಿಕೇಟ್ ಬುಕ್ಕಿಂಗ್ ಪ್ರಕ್ರಿಯೆ ತಿಂಗಳು ಮುಂಚಿತವಾಗಿಯೇ ಆರಂಭವಾಗಿರುತ್ತದೆ. ಬಹುತೇಕ ಎಲ್ಲವೂ ಆನ್ ಲೈನ್ ಮೂಲಕವೇ ನಡೆಯುತ್ತದೆ. ಯಾರು ಎಷ್ಟು ವಸೂಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಹೀಗಿರುವಾಗ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ? ಬರೀ ಪರವಾನಗಿ ನಿಯಮ ಉಲ್ಲಂಘನೆಗೆ ೫ ಸಾವಿರ ದಂಡ ವಿಧಿಸಿದರೆ ಮುಗಿಯಿತೇ? ಪರವಾನಗಿ ಅಮಾನತುಕೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆಗ ಮಾತ್ರ ಪ್ರಯಾಣಿಕರನ್ನು ವಸೂಲಿ ಮಾಡುವ ದಂಧೆ ನಿಲ್ಲಬಹುದು. ಇಲ್ಲವಾದಲ್ಲಿ ಇದು ಪ್ರತಿ ಹಬ್ಬಹರಿದಿನಗಳಲ್ಲೂ ಮುಂದುವರಿಯುತ್ತಲೇ ಇರುತ್ತದೆ. ಈ ಬಾರಿ ಸಾರಿಗೆ ಇಲಾಖೆ ಯಾವ ರೀತಿ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೧-೧೧-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ