ಬೇಕಿದೆ ಕನ್ನಡ ಕಾನೂನು ನಿಘಂಟು

ಬೇಕಿದೆ ಕನ್ನಡ ಕಾನೂನು ನಿಘಂಟು

ಕಾನೂನು ಶಾಸ್ತ್ರದಲ್ಲಿ ಕನ್ನಡ ಎಂಬುದೇ ಒಂದು ಕೈಗೆಟುಕದ ದ್ರಾಕ್ಷಿ! ಓಬೀರಾಯನ ಕಾಲದ ಎಲ್ಲ ಕಾನೂನುಗಳೂ ಲಭ್ಯವಿರುವುದು ಇಂಗ್ಲಿಷ್ ನಲ್ಲಿ. ಯೂರೋಪ್ ಖಂಡದಲ್ಲಿ ಗ್ರೀಕ್ ಮತ್ತು ರೋಮ್ ಸಾಮ್ರಾಜ್ಯದಲ್ಲಿ ಜಾರಿಯಲ್ಲಿದ್ದ ಕಾನೂನುಶಾಸ್ತ್ರ ಮತ್ತು ಶಬ್ಧ ಬಂಡಾರವನ್ನೇ ಬ್ರಿಟೀಷರು ಕಾನೂನು ಶಾಸ್ತ್ರದಲ್ಲಿ ಅಳವಡಿಸಿದ್ದು.

ಪ್ರಪಂಚವನ್ನೇ ತನ್ನ ಅಧಿಪತ್ಯದಲ್ಲಿಟ್ಟುಕೊಂಡ ಬ್ರಿಟೀಷರು ರೂಪಿಸಿರುವ ಕಾನೂನು ಮತ್ತದರ ಪದಕೋಶಗಳೇ ಇಂದು ನಮ್ಮ ದೇಶದ ಎಲ್ಲ ನ್ಯಾಯಾಲಯಗಳಲ್ಲಿ ಬಳಕೆಯಲ್ಲಿರುವುದು. ಇಂದಿಗೂ ದೇಶದ ಸಂವಿಧಾನಾತ್ಮಕ ನ್ಯಾಯಾಲಯಗಳೆನಿಸಿಕೊಂಡಿರುವ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಾದ, ಪ್ರತಿವಾದ ಮತ್ತು ಆದೇಶ, ಮಧ್ಯಂತರ ಆದೇಶವಲ್ಲದೆ ಅಂತಿಮ ತೀರ್ಪುಗಳೆಲ್ಲವೂ ಹೊರಬೀಳುವುದು ಇಂಗ್ಲಿಷ್ ಭಾಷೆಯಲ್ಲಿಯೇ ! ಒಟ್ಟಿನಲ್ಲಿ ದೇಶದ ಯಾವುದೇ ಭಾಗದ ವಿದ್ಯಾರ್ಥಿ ಎಂದು ಕಾನೂನು ಶಾಸ್ತ್ರವನ್ನು ಪ್ರಬುದ್ಧವಾಗಿ ಅಧ್ಯಯನ ಮಾಡಬೇಕಾದರೆ ಅಂತಹ ಕಾನೂನು ಕಾಲೇಜಿನ ವಿದ್ಯಾರ್ಥಿ ಗತ್ಯಂತರವಿಲ್ಲದೆ ಇಂಗ್ಲಿಷ್ ಭಾಷೆಯನ್ನು ಅಧ್ಯಯನ ಮಾಡಲೇಬೇಕಿರುವುದು ಅನಿವಾರ್ಯ. ಆದರೆ ಕನ್ನಡ ಮಾಧ್ಯಮದಲ್ಲಿಂದು ಕಾನೂನು ಶಿಕ್ಷಣದಲ್ಲಿ ಪಾಂಡಿತ್ಯ ಸಂಪಾದಿಸಬೇಕಾದರೆ ಅದಕ್ಕೆ ಪೂರಕ ವಾತಾವರಣವಿಲ್ಲ. ಮಿಗಿಲಾಗಿ ಕನ್ನಡದ ಕಾನೂನು ವ್ಯಾಸಂಗದ ವಿದ್ಯಾರ್ಥಿಗಳಿಗೆ ಸಮರ್ಪಕ ಮತ್ತು ಉತ್ಕೃಷ್ಟ ಪಠ್ಯಪುಸ್ತಕಗಳೂ ಲಭ್ಯವಿಲ್ಲ. ಇದೊಂದು ದುರದೃಷ್ಟಕರ ಸಂಗತಿ ಎನ್ನದೆ ವಿಧಿಯಿಲ್ಲ. ರಾಜ್ಯದಲ್ಲಿ ಕಾನೂನು ವಿಶ್ವವಿದ್ಯಾನಿಲಯವಿರುವುದು ಸರಿಯಷ್ಟೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ (ಕೆ ಎಸ್ ಎಲ್ ಯು) ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗಳನ್ನು ಬರೆಯಲು ಅವಕಾಶವಿದ್ದರೂ ರಾಜ್ಯದಲ್ಲಿ ಕನ್ನಡದಲ್ಲಿಯೇ ಎಲ್ಲ ವರ್ಷದ ಪಠ್ಯಕ್ರಮಗಳನ್ನು ಬೋಧಿಸುವ ಸಮರ್ಪಕ ಕಲಿಕಾ ಪರಿಕರ, ಗ್ರಂಥಾಲಯ ಮತ್ತು ಬೋಧಕ ಸಿಬ್ಬಂದಿ ಇಲ್ಲ.

ಒಂದು ವೇಳೆ ರಾಜ್ಯದ ಕೆಲವೊಂದು ಕಡೆ ಇದ್ದರೂ ಸೂಚಿತ ಕೆಲ ಪಠ್ಯದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುವಷ್ಟು ವಿಷಯದ ಆಳ ಕನ್ನಡದ ಪಠ್ಯಗಳಲ್ಲಿ ಲಭ್ಯವಿಲ್ಲ. ಹೇಳಬೇಕೆಂದರೆ ಕೆಲವೊಂದು ಲ್ಯಾಟಿನ್ ಪದಗಳಿಗೆ ಕನ್ನಡದಲ್ಲಿ ಅವುಗಳಿಗೆ ಪರ್ಯಾಯ ಪದಗಳೇ ಇಲ್ಲ. ನ್ಯಾಯಶಾಸ್ತ್ರ ಎಂದರೆ ಬರೀ ಕಂಪ್ಲೇಂಟ್, ಎಫ್ ಐ ಆರ್ ಅಥವಾ ಚಾರ್ಚ್ ಶೀಟ್ ಇಷ್ಟೇ ಅಲ್ಲವಲ್ಲ? ಸಂವಿಧಾನಾತ್ಮಕ ವಿಷಯಗಳು ದೇಶದ ಉನ್ನತ ನ್ಯಾಯಪೀಠಗಳ ಮುಂದೆ ವಿಸೃತವಾಗಿ ಚರ್ಚೆಯಾಗುವ ಸಮಯದಲ್ಲಿ ನುಸುಳುವ ರೇಷಿಯೋ ಡಿಸೆಂಡೆಂಟಿ, ಒಬಿಟಾರ್ ಡಿಕ್ಟಂ ಅಲ್ಲದೆ ಮಿಸ್ಕಿಫ್ ರೂಲ್ ಮೊದಲಾದ ಲ್ಯಾಟಿನ್ ಪದಗಳಿಗೆ ಕನ್ನಡದಲ್ಲಿ ಅರ್ಥಪೂರ್ಣ ಪದಗಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಂದು ಓಂಬುಡ್ಸ್ ಮನ್ ಪದ ರಾಜ್ಯಾಡಳಿತದಲ್ಲಿ ಪದೇ ಪದೇ ಬಳಕೆಯಾಗುತ್ತಿದ್ದರೂ ಇದಕ್ಕೆ ಪರ್ಯಾಯ ಪದವೇ ಕನ್ನಡದಲ್ಲಿಲ್ಲ ! ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹಲವಾರು ಕಾನೂನು ಪದಗಳಿಗೆ ಕನ್ನಡದಲ್ಲಿ ಸೂಕ್ತ ಪದಗಳನ್ನು ಹುಡುಕುವ ಪ್ರಯತ್ನವೇ ನಡೆದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಂದು ಕಾನೂನು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷ್ಃಎಯಲ್ಲಿ ಕಾನೂನು ಬಲಗೊಳ್ಳಬೇಕಾದರೆ ಮೊದಲು ಕನ್ನಡ ಪದಗಳ ಕಾನೂನು ಶಬ್ಧಕೋಶ ಅನಿವಾರ್ಯ. ಆ ಕೆಲಸವನ್ನು ಸರ್ಕಾರ ಶೀಘ್ರಗತಿಯಲ್ಲಿ ಕೈಗೆತ್ತಿಕೊಂಡಲ್ಲಿ ಲಕ್ಷಾಂತರ ಮಂದಿ ಕನ್ನಡದ ವಿದ್ಯಾರ್ಥಿಗಳಿಗೆ ಉಪಕಾರವಾದೀತು.

ಕೃಪೆ: ಹೊಸ ದಿಗಂತ, ಸಂಫಾದಕೀಯ, ದಿ: ೨೫-೦೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ