ಬೇಟೆ ನಾಯಿಗಳು…!

ಬೇಟೆ ನಾಯಿಗಳು…!

ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆ ಕಾಡಿತು. ಬಹುತೇಕ ಮಾಂಸಹಾರಿ ಪ್ರಾಣಿ ನಾಯಿ. ರಾತ್ರಿಯೆಲ್ಲಾ ಸಂಚರಿಸುತ್ತಾ  ಯಾವುದೋ ಹಾದಿ ಹಿಡಿದು ಸಾಗುತ್ತಿರುವಾಗ ಆಕಸ್ಮಿಕವಾಗಿ ಕಾಡು ಕೊನೆಯಾಗಿ ಬೆಳಗಿನ ಹೊತ್ತಿಗೆ ತನಗರಿವಿಲ್ಲದೆ ಮತ್ತು ತಾನೆಂದೂ ನೋಡಿರದ ನಗರ ಪ್ರವೇಶಿಸಿತು.

ಕಾಡ ನಾಯಿಯಾದರೂ ಇತ್ತೀಚಿನ ವರ್ಷಗಳಲ್ಲಿ ಆಹಾರ ಸರಿಯಾಗಿ ಸಿಗದೆ ಸ್ವಲ್ಪ ಬಡಕಲು ದೇಹದ ನಾಯಿ ಆಟದ ಮೈದಾನದಲ್ಲಿ ತನ್ನದೇ ನಾಯಿ ಪಂಗಡದ ವಿವಿಧ ಆಕಾರದ ದಷ್ಟಪುಷ್ಟ ನಾಯಿಗಳು ಸಂಚರಿಸುತ್ತಿರುವುದನ್ನು ನೋಡಿ ಖುಷಿಯಾಯಿತು. ತಾನು ಸರಿಯಾದ ದಾರಿಯಲ್ಲೇ ಇದ್ದೇನೆ ಎಂದು ಭಾವಿಸಿ ಅದರ ಹತ್ತಿರ ಹೋಗುತ್ತಿದ್ದಂತೆ ಅದರ ಮಾಲೀಕರು ಕಿರುಚುತ್ತಾ ಕೈಯಲ್ಲಿದ್ದ ಕೋಲಿನಿಂದ ಕಾಡ ನಾಯಿಯನ್ನು ಹೊಡೆಯಲು ಬಂದರು. ಅದೇ ಸಮಯದಲ್ಲಿ  ಸಾಕಿದ ನಾಯಿಗೆ ಹಾಕಿದ್ದ ಕತ್ತಿನ ದಾರವನ್ನು ಹತ್ತಿರ ಎಳೆದುಕೊಂಡರು. ಗಾಬರಿಯಾದ ಕಾಡ ನಾಯಿ ತಪ್ಪಿಸಿಕೊಂಡು ದೂರ ಓಡಿತು. ಸ್ವಲ್ಪ ದೂರ ಹೋಗಿ ಮೈದಾನದ ಕೊನೆಯಲ್ಲಿ ನಿಂತು ನೋಡಿತು. ಸಾಕಿದ ನಾಯಿಗಳು ಮನುಷ್ಯನ ಬಲೆಯಲ್ಲಿ ಸಿಲುಕಿ ತನ್ನ ತನವನ್ನು ಕಳೆದುಕೊಂಡು ಅವನ ಇಚ್ಚೆಯಂತೆ ಬದುಕುತ್ತಿರುವುದು ಕಂಡು ಬೇಸರವಾಗಿ ಮುಂದೆ ಸಾಗಿತು.

ದೂರದಲ್ಲಿ ಮನೆಯ ಮುಂದೆ ಬೆಕ್ಕೊಂದು ಕಾಣಿಸಿತು. ಹಸಿವಿನಿಂದ ಬಳಲಿದ ಕಾಡ ನಾಯಿಗೆ ಆಹಾರ ಸಿಕ್ಕ ಸಂತೋಷದಲ್ಲಿ ಓಡಿ ಅದನ್ನು ಹಿಡಿಯಲು ಮುನ್ನುಗಿತ್ತು‌. ಇನ್ನೇನು ಬೆಕ್ಕನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಅದರ ಮಾಲಕಿ ಕೂಗುತ್ತಾ ಓಡಿ ಬಂದು ಬೆಕ್ಕನ್ನು ಎದೆಗವಚಿ ಸಿಕ್ಕ ಕಲ್ಲಿನಿಂದ ಈ ನಾಯಿಯನ್ನು ಹೊಡೆದಳು. ಕಾಡಿನಲ್ಲಿ ಬೆಕ್ಕು ಮೊಲಗಳನ್ನು ಯಾವುದೇ ಆತಂಕವಿಲ್ಲದೇ ಭೇಟೆಯಾಡುತ್ತಿದ್ದ ಕಾಡ ನಾಯಿಗೆ ಈ ಬೆಕ್ಕನ್ನು ಮನುಷ್ಯರೊಬ್ಬರು ರಕ್ಷಿಸುತ್ತಿರುವುದು ನೋಡಿ ಆಶ್ಚರ್ಯಾವಾಗಿ ಕಲ್ಲಿನ ಹೊಡೆತದಿಂದ ತಪ್ಪಿಕೊಂಡು ಮತ್ತೆ ಓಡಿ ಹೋಯಿತು.‌‌

ಹಾಗೇ ಅಲೆಯುತ್ತಾ ಅಲೆಯುತ್ತಾ ಮಧ್ಯಾಹ್ನದ ವೇಳೆಗೆ ದೊಡ್ಡ ಬಂಗಲೆಯ ಬಳಿ ಬಂದಿತು. ಅಲ್ಲಿ ಐದಾರು ನಾಯಿಗಳನ್ನು ಗೂಡಿನಲ್ಲಿ ಕೂಡಿ ಹಾಕಲಾಗಿತ್ತು. ಆ ನಾಯಿಗಳು ಏನನ್ನೋ ತಿನ್ನುತ್ತಿದ್ದವು. ಈ ಕಾಡ ನಾಯಿ ಕುತೂಹಲದಿಂದ ಗೇಟಿನ ಬಳಿ ನಿಂತು ನೋಡುತ್ತದೆ. ತಾನೆಂದೂ ನೋಡಿರದ ಬಿಸ್ಕತ್ತುಗಳು, ಹಾಲು, ಅನ್ನ, ದೋಸೆ ಇನ್ನೂ ಅದಕ್ಕೆ ಗೊತ್ತಾಗದ ಏನನ್ನೋ ಚಿಕ್ಕ ಬಟ್ಟಲುಗಳಲ್ಲಿ ಇಟ್ಟಿರುತ್ತಾರೆ. ಅದನ್ನೇ ಆ ನಾಯಿಗಳು ನೆಕ್ಕುತ್ತಿರುತ್ತವೆ. ಮಾಂಸವನ್ನು ಮಾತ್ರ ತಿನ್ನುತ್ತಿದ್ದ ಈ ಕಾಡ ನಾಯಿಗೆ ಇದು ಮತ್ತಷ್ಟು ಆಶ್ಚರ್ಯವನ್ನುಂಟು ಮಾಡುತ್ತದೆ. ಆದರೂ ಕೆಳಗೆ ಚೆಲ್ಲಿದ ಕೆಲವು ಅಗುಳುಗಳನ್ನು ಮೂಸು ನೋಡಲು ಗೇಟಿನ ಒಳ ಹೋಗಲು ಪ್ರಯತ್ನಿಸುತ್ತದೆ. ಆಗ ಎಲ್ಲಿಂದಲೋ ಓಡಿಬಂದ ಸೆಕ್ಯುರಿಟಿ ಒಬ್ಬ ದೊಣ್ಣೆಯಿಂದ ಬೀಸಿ ಹೊಡೆಯುತ್ತಾನೆ. ತಬ್ಬಿಬ್ಬಾದ ಕಾಡ ನಾಯಿ ಮತ್ತೆ ತಪ್ಪಿಕೊಂಡು ಓಡುತ್ತದೆ.

ದಾರಿಯಲ್ಲಿ ಕಂಡ ಕೆಲವು ಕೋಳಿಗಳನ್ನು ಹಿಡಿಯಲು ಪ್ರಯತ್ನಿಸಿ ಜನರಿಂದ ಕಲ್ಲುಗಳಲ್ಲಿ ಏಟು ತಿನ್ನುತ್ತದೆ. ಕೊನೆಗೆ… ಹಸಿವಿನಿಂದ ನರಳಿ ನರಳಿ ಹಾಗೆಯೇ ರಾತ್ರಿಯಾಗುತ್ತದೆ. ಸುತ್ತಾಡಿ ಸುತ್ತಾಡಿ ಬಳಲಿ ಬೀದಿ ಬದಿಯ ಗುಡಿಸಲುಗಳ ಸ್ಲಂ ಜಾಗದಲ್ಲಿ ಒಂದು ಮರೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುತ್ತದೆ. ಒಂದಷ್ಟು ಸಮಯದ ನಂತರ ಪುಟ್ಟ ಮಗುವೊಂದು ಅಲ್ಲಿ ಒಂಟಿಯಾಗಿ ಆಡುತ್ತಾ ಇರುವುದು ಕಾಣಿಸುತ್ತದೆ. ಹಸಿವಿನಿಂದ ಕಂಗಾಲಾಗಿದ್ದ ನಾಯಿ ಸುತ್ತಲೂ ಗಮನಿಸುತ್ತದೆ. ಯಾರೂ ಕಾಣುವುದಿಲ್ಲ. ಇದೇ ಸಮಯವೆಂದು ಛಂಗನೆ ಎಗರಿ ಮಗುವಿನ ಕತ್ತಿಗೆ ಬಾಯಿ ಹಾಕಿ ಕ್ಷಣಾರ್ಧದಲ್ಲಿ ಪಕ್ಕದಲ್ಲೇ ಇದ್ದ ಪೊದೆಗೆ ಎಳೆದೊಯ್ಯುತ್ತದೆ. ವಾಹನ ಸಂಚಾರದ ಅಬ್ಬರದಲ್ಲಿ ಮಗುವಿನ ಅಳುವ ಶಭ್ದ ಕೂಡ ಯಾರಿಗೂ ಕೇಳಿಸುವುದಿಲ್ಲ. ಕೆಲವರಿಗೆ ಕೇಳಿಸಿದರೂ ಈ ನಗರದ ಒತ್ತಡದ ಬದುಕಿನಲ್ಲಿ ಅದನ್ನು ಏನೋ ಸಹಜವೆಂಬಂತೆ ನಿರ್ಲಕ್ಷಿಸಿ ಮುಂದೆ ಸಾಗುತ್ತಾರೆ.

ಎರಡು ಮೂರು ದಿನದ ಹಸಿವನ್ನು ನೀಗಿಸಿಕೊಂಡು ಕಾಡ ನಾಯಿ ತೃಪ್ತಿಯಿಂದ ಮುಂದೆ ಸಾಗುತ್ತದೆ. ಆಗ ಅದಕ್ಕೆ ಅರಿವಾಗುತ್ತದೆ. ಕಾಡಿನ ನ್ಯಾಯವೇ ಬೇರೆ. ನಾಡಿನ ನ್ಯಾಯವೇ ಬೇರೆ. ನಗರದಲ್ಲಿ ಕುರಿ, ಕೋಳಿ, ನಾಯಿ, ಬೆಕ್ಕು, ಹಂದಿ, ಹಸುಗಳಿಗೆ ರಕ್ಷಣೆ ಇದೆ. ಆದರೆ ಬೀದಿ ಬದಿಯ ಮಕ್ಕಳಿಗೆ ಇಲ್ಲಿ ಯಾವುದೇ ಭದ್ರತೆ ಇಲ್ಲ. ಆದ್ದರಿಂದ ಇನ್ನು ಮೇಲೆ ನಾನು ಕಾಡಿಗೆ ಹಿಂತಿರುಗುವುದಿಲ್ಲ. ಇಲ್ಲಿಯೇ ರಾತ್ರಿ ಹೊತ್ತು ಬೀದಿ ಬದಿಯ ಮಕ್ಕಳೇ ನನ್ನ ಸುಲಭ ಮತ್ತು ರುಚಿಯಾದ ಆಹಾರ. ರಕ್ತದ ರುಚಿಕಂಡ ಕಾಡ ನಾಯಿಯೊಂದು ನಿಮ್ಮ ನಗರದಲ್ಲಿ ಸಂಚರಿಸುತ್ತಿದೆ ಎಚ್ಚರ. ನಿಮ್ಮ ಮಕ್ಕಳು ನಿಮ್ಮಿಂದ ಕಾಣೆಯಾಗುತ್ತಿದ್ದಾರೆ ಈಗಲಾದರೂ ಎಚ್ಚೆತ್ತುಕೊಳ್ಳಿ.

ನಾಯಿಯೂ ತಿನ್ನಬಹುದು, ದುಷ್ಟ ಮನುಷ್ಯರು ತಿನ್ನಬಹುದು, ಮಾದಕ ದ್ರವ್ಯಗಳು ತಿನ್ನಬಹುದು, ಸಿದ್ದಾಂತಗಳು ತಿನ್ನಬಹುದು, ಸಮಾಜವೇ ತಿನ್ನಬಹುದು..ತಾಯ ಎದೆ ಹಾಲೇ ವಿಷವಾದರೆ, ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ, ಬೇಟೆ ನಾಯಿಗಳು ನಮ್ಮ ಮಕ್ಕಳನ್ನು ಮುಗಿಸುವ ಮುನ್ನ ಅದನ್ನು ತಡೆಯುವ ಮನಸ್ಥಿತಿ ಬೆಳೆಸಿಕೊಳ್ಳೋಣ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ