ಬೇಡಿಕೆ
ಭಗವಂತ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಡುಗೊರೆಗಳನ್ನು ನೀಡುತ್ತಾನೆ. ಕೆಲವು ಕಣ್ಣಿಗೆ ಕಾಣುವಂತದ್ದು, ಮತ್ತೆ ಕೆಲವು ಕಣ್ಣಿಗೆ ಕಾಣದ್ದು. ಕಾಣುವ ವಸ್ತುಗಳು ತಾತ್ಕಾಲಿಕ ಹಾಗೂ ಮತ್ತೂ ಮತ್ತೂ ಬೇಕೆಂದು ಅನಿಸುವವು. ಆದರೆ, ಕಣ್ಣಿಗೆ ಕಾಣದ್ದು ಮಾತ್ರ ಶಾಶ್ವತ. ಇದನ್ನು ಅದೃಶ್ಯ ಉಡುಗೊರೆ ಎಂದು ಹೇಳುತ್ತಾರೆ.
ಲೌಕಿಕವಾಗಿ ಸಿಗುವ ಸಂಪತ್ತು, ಆಸ್ತಿ, ರೂಪ, ಇತ್ಯಾದಿಗಳು ಕಣ್ಣಿಗೆ ಕಾಣುವ ಉಡುಗೊರೆಗಳು. ಒಳ್ಳೆಯಬುದ್ಧಿ, ನಡವಳಿಕೆ, ಆರೋಗ್ಯ , ಒಳ್ಳೆಯ ತಂದೆತಾಯಿ , ಒಳ್ಳೆಯ ಮಕ್ಕಳು, ಸಮಾಜದಲ್ಲಿ ಮಾನ್ಯತೆ ಮತ್ತೂ ಭಗವಂತನಲ್ಲಿ ಅನನ್ಯ ಭಕ್ತಿ ಮತ್ತು ಶ್ರದ್ಧೆ ಇವೆಲ್ಲವೂ ಕಣ್ಣಿಗೆ ಕಾಣದ ಶಾಶ್ವತ ಉಡುಗೊರೆಗಳು.
ಭಗವಂತ ನೀಡುವಾಗಲೂ ಬಹಳ ವಿಶೇಷತೆಯಿಂದ ನೀಡುತ್ತಾನೆ. ಅವನಿಗೊಂದು ಸೂತ್ರವಿದೆ. ಯಾವಯಾವ ಉಡುಗೊರೆಗಳನ್ನು ಯಾರು ಯಾರು ಬೇಡುತ್ತಾರೋ ಅವರಿಗೆ ಆಯಾಯ ಉಡುಗೊರೆಗಳನ್ನು ಸರಿಯಾದ ಸಮಯದಲ್ಲೇ ನೀಡುತ್ತಾನೆ. ಬೇಡಿದ್ದನ್ನು ಮಾತ್ರ ನೀಡುವ ಸೂತ್ರಧಾರಿ. ಎಂದೂ ನಾವು ಬೇಡದ್ದನ್ನು ಭಗವಂತ ನೀಡುವುದಿಲ್ಲ. ಸುಪ್ತಮನಸ್ಸಿನಲ್ಲೇ ಇರಬಹುದು, ಬಹಿರಂಗದಲ್ಲೇ ಇರಬಹುದು ನಮ್ಮ ನಮ್ಮ ಬೇಡಿಕೆಗಳನ್ನು ನಮ್ಮ ಇಷ್ಟಾನುಸಾರ ಈಡೆರಿಸುತ್ತಾನೆ. ಯಾರು ಬೇಕಾದರೂ, ಯಾವಾಗ ,ಹೇಗೆ ಮತ್ತು ಏನು ಬೇಕಾದರೂ ಬೇಡಿಕೆ ಸಲ್ಲಿಸಲಿ, ಆ ಬೇಡಿಕೆಗಳನ್ನು ಭಗವಂತ ನಿರಾಕರಿಸಲಾರ. ನಮ್ಮ ನಮ್ಮ ಸರದಿ ಬಂದಾಗ, ನಮ್ಮ ನಮ್ಮ ಅರ್ಹತೆಗೆ ತಕ್ಕಂತೆ ಭಗವಂತ ನೀಡುತ್ತಾ ಹೋಗುತ್ತಾನೆ. ತಕ್ಷಣಕ್ಕೆ ಸಿಗದಿದ್ದರೂ ಅರ್ಹತೆ ಬಂದಾಗ ಖಂಡಿತಾ ಸಿಕ್ಕೇ ಸಿಗುತ್ತದೆ. ಇಲ್ಲಿ ನಿರಾಕರಣೆಯ ಪ್ರಶ್ನೆಯೇ ಇಲ್ಲ. ಆದರೆ, ಕಾರಣ ಪರಿಣಾಮಗಳ ಬಗ್ಗೆ ಭಗವಂತ ಜವಾಬ್ದಾರಿ ಹೊರುವುದಿಲ್ಲ. ಪರಿಣಾಮಗಳ ಬಗ್ಗೆ ಚಿಂತಿಸ ಬೇಕಾದ ಜವಾಬ್ದಾರಿ ಮಾತ್ರ ನಮ್ಮದೇ .
ಆದ್ದರಿಂದ, ಭಗವಂತನಲ್ಲಿ ನಾವು ಬೇಡುವಾಗ ಸರಿಯಾದುದನ್ನೇ ಚಿಂತಿಸಿ ಬೇಡಬೇಕು. ಬೇಡಿದ್ದನ್ನು ಪಡೆಯುವ ಅರ್ಹತೆಯನ್ನು ಜೊತೆಜೊತೆಯಲ್ಲೇ ಗಳಿಸಿಕೊಳ್ಳಬೇಕು.
ಎಲ್ಲಾ ಓದುಗರಿಗೆ ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
Comments
ಆತ್ಮೀಯ ಪ್ರಕಾಶ್, ಒಳ್ಳೆಯ ಬರಹ.
In reply to ಆತ್ಮೀಯ ಪ್ರಕಾಶ್, ಒಳ್ಳೆಯ ಬರಹ. by kavinagaraj
ಆತ್ಮಿಯ ನಾಗರಾಜರೆ,