ಬೇಡ ದಯವಿಟ್ಟು ಬೇಡ…!

ಬೇಡ ದಯವಿಟ್ಟು ಬೇಡ…!

ಈ ಅಭಿಯಾನ ಯಾವುದೋ ಅನಾಹುತಗಳ ಮುನ್ಸೂಚನೆ ಎಂದು ಇತಿಹಾಸದ ಅನುಭವದಿಂದ ಅನಿಸುತ್ತಿದೆ. ಹೌದು, ಇಂದಿನ ಉನ್ಮಾದದ ಸಾಕಷ್ಟು ಹೆಚ್ಚು ಜನ ಬೆಂಬಲಿಸುತ್ತಿರುವ ಸಂದರ್ಭದಲ್ಲಿ ಒಂದು ವಿಷಯದ ಬಗ್ಗೆ ಸತ್ಯವಲ್ಲದಿದ್ದರೂ ವಾಸ್ತವ ವಿಷಯದ ಬಗ್ಗೆ ನನ್ನ ಅರಿವಿನ ಮಿತಿಯಲ್ಲಿ ಒಂದು ಅಭಿಪ್ರಾಯ  ಹೇಳಬೇಕಾಗಿದೆ. ಅದರಿಂದ ‌ಒಂದಷ್ಟು ಗೆಳೆಯರಿಗೆ ಅಸಮಾಧಾನ ಆಗಬಹುದು. ಕೆಲವರ ವಿರೋಧ ವ್ಯಕ್ತವಾಗಬಹುದು. ಒಂದಷ್ಟು ಜನ ದೂರ ಸರಿಯಲೂ ಬಹುದು. ಆದರೆ ಸಮಾಜದ ಶಾಂತಿ ಸೌಹಾರ್ದ ಬಹಳ ಮುಖ್ಯ. ಎಷ್ಟೆಂದರೆ ಸರಿ ತಪ್ಪುಗಳನ್ನು ಮೀರಿ ಮೊದಲ ಆದ್ಯತೆ ಇದಕ್ಕೆ ನೀಡಬೇಕು.

ಆದ್ದರಿಂದ ಒಂದು ಸಮುದಾಯದ ವಿರುದ್ಧ ಈ ಪ್ರಮಾಣದ ಒತ್ತಡ ಏಕಾಏಕಿ ಮಾಡಬಾರದು. ಇತಿಹಾಸದಲ್ಲಿ ಎರಡೂ ರೀತಿಯ ಘಟನೆಗಳು ನಡೆದಿವೆ. ಅಲ್ಪಸಂಖ್ಯಾತರಾಗಿದ್ದ ಸಮುದಾಯಗಳು ತಮ್ಮ ಅಭದ್ರತೆಯ ಕಾರಣದಿಂದಾಗಿ ಒಗ್ಗಟ್ಟು ಪ್ರದರ್ಶಿಸಿ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಬಲಿಷ್ಠರಾಗಿ ಬೆಳೆದು ಪರೋಕ್ಷವಾಗಿ ಬಹುಸಂಖ್ಯಾತರ ಅವಕಾಶ ಕಸಿದುಕೊಂಡು ಅವರಲ್ಲಿಯೂ ಅಭದ್ರತೆಯ ಭಾವನೆ ಉಂಟು ಮಾಡಿದ್ದಾರೆ. ಹಾಗೆಯೇ ಬಹುಸಂಖ್ಯಾತರು ತಮ್ಮ ಸಂಖ್ಯಾ ಬಲದ ಕಾರಣದಿಂದಾಗಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಭಾವಿಸಿ ಅವರ ಏಳಿಗೆ ಸಹಿಸದೆ ಅವರ ವಿರುದ್ಧ ಅನೇಕ ಅಭಿಯಾನಗಳನ್ನು ಮಾಡಿದ್ದಾರೆ. ಆದರೆ ಇದರ ಫಲಿತಾಂಶ ಮಾತ್ರ ಬಹುತೇಕ ಹಿಂಸೆ ಮತ್ತು ಆಂತರಿಕ ಯುದ್ದದಿಂದಲೇ ಮುಗಿದಿದೆ.

ಅಮೆರಿಕದ ಬಿಳಿಯರು - ಕರಿಯರು, ಜರ್ಮನಿಯ ನಾಜಿಗಳು - ಯಹೂದಿಗಳು, ಕಾಶ್ಮೀರದ ಹಿಂದುಗಳು - ಮುಸಲ್ಮಾನರು, ಶ್ರೀಲಂಕಾದ ಸಿಂಹಳೀಯರು - ತಮಿಳರು, ಹೀಗೆ ಇತಿಹಾಸ ಇನ್ನೂ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇದೀಗ ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಅಸಮಾಧಾನ ಈ ನಿಟ್ಟಿನಲ್ಲಿ ಒಂದು ಪ್ರಾರಂಭ ಮಾತ್ರ. ಇನ್ನೂ ಅಷ್ಟು ಗಂಭೀರ ಹಂತ ತಲುಪಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಈ‌ ಸಂಘರ್ಷ ಒಂದು ವೈಚಾರಿಕ ನೆಲೆಯಲ್ಲಿ, ನಾಗರಿಕ ಸಮಾಜದ ಗುಣಲಕ್ಷಣಗಳ ಹಿತಾಸಕ್ತಿಯ ದೃಷ್ಟಿಯಿಂದ ನಡೆಯುತ್ತಿಲ್ಲ. ಅಭಿವೃದ್ಧಿಯ ದೃಷ್ಟಿಕೋನದಿಂದ ನಡೆಯುತ್ತಿಲ್ಲ. ಇದು ರಾಜಕೀಯ ಮತ್ತು ಧಾರ್ಮಿಕ ಕಾರಣಗಳ ಸಂಘರ್ಷ ಮತ್ತು ಇಲ್ಲಿ ಜನಸಾಮಾನ್ಯರ ಒಳಗೊಳ್ಳುವಿಕೆಗಿಂತ ಎರಡೂ ಕಡೆಯ ಕೆಲವು ಸಂಘ ಸಂಸ್ಥೆಗಳು ಉನ್ಮಾದದ ಅಲೆಯಲ್ಲಿ ಇದನ್ನು ಮುನ್ನಡೆಸುತ್ರಿದ್ದಾರೆ ಮತ್ತು ಇದಕ್ಕೆ ಕೆಲವು ಟಿವಿ ಸುದ್ದಿ ವಾಹಿನಿಗಳು ವ್ಯಾಪಕ ಪ್ರಚಾರ ಮಾಡಿ ಪರೋಕ್ಷ ಕುಮ್ಮಕ್ಕು ನೀಡುತ್ತಿವೆ. ಇದು ಅತ್ಯಂತ ಗಂಭೀರ ವಿಷಯ. ಒಂದು ವ್ಯವಸ್ಥೆಯಲ್ಲಿ ಕಾನೂನಿನ ಅಡಿಯಲ್ಲಿ ಪಕ್ಷಗಳ ನಡುವೆ ನಡೆಯುವ ಸಂಘರ್ಷವೇ ಬೇರೆ. ಈ ರೀತಿಯ ಸಂಘ ಸಂಸ್ಥೆಗಳ ಖಾಸಗಿ ಹೋರಾಟವೇ ಬೇರೆ. ಈ ಗುಂಪುಗಳಿಗೆ ಸಮಗ್ರ ಚಿಂತನೆಗಿಂತ ತತ್ ಕ್ಷಣದ ಭಾವನಾತ್ಮಕ ಅಂಶಗಳೇ ಮುಖ್ಯವಾಗುತ್ತವೆ. 

ಹೌದು ಇಲ್ಲಿ ಮುಸ್ಲಿಂ ಮತಾಂಧರ ಕೈವಾಡವೂ ಇದೆ, ಹಿಂದೂ ಮೂಲಭೂತವಾದಿಗಳ  ದುರುದ್ದೇಶವೂ ಇದೆ, ರಾಜಕಾರಣಿಗಳ ಸ್ವಾರ್ಥವೂ ಇದೆ, ಎರಡೂ ಕಡೆಯ ಧರ್ಮಾಧಿಕಾರಿಗಳ ಪ್ರಚೋದನೆಯೂ ಇದೆ. ಹಾಗೆಯೇ ‌ಸಾಮಾನ್ಯ ಜನರ ಮೌನವೂ ಇದಕ್ಕೆ ಒಂದು ಕಾರಣವಾಗಿದೆ. ಮುಸ್ಲಿಮರು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ವರ್ತಿಸಿದಾಗ ಅದನ್ನು ಪ್ರತಿಭಟಿಸದೆ ಈಗ ಹಿಂದುಗಳಿಗೆ ಶಾಂತಿಯ ಸಲಹೆ ನೀಡಲು ಯಾವ ನೈತಿಕತೆ ನಿಮಗಿದೆ ಎಂಬ ಪ್ರಶ್ನೆ ಸಹ ಉದ್ಭವಾಗುತ್ತದೆ. ಇದಕ್ಕೆ ಹೀಗೆ ಉತ್ತರಿಸಬಹುದೇ?

ಮುಸ್ಲಿಮರ ಸಂಖ್ಯೆ ಕಡಿಮೆ ಇದೆ. ಒಂದು ವೇಳೆ ಅವರು ಸಂವಿಧಾನದ ವಿರೋಧ ವ್ಯಕ್ತಪಡಿಸಿದರೆ ಅದನ್ನು ಸುಲಭವಾಗಿ ನಮ್ಮ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ ನಿಯಂತ್ರಿಸುವ ಶಕ್ತಿ ಹೊಂದಿದೆ. ಆದರೆ ಬಹುಸಂಖ್ಯಾತರು ಸಂವಿಧಾನ ವಿರೋಧಿಗಳಾದರೆ ಅದನ್ನು ನಿಯಂತ್ರಿಸುವುದು ಕಷ್ಟ ಮತ್ತು ಅರಾಜಕತೆ ಸೃಷ್ಟಿಸುತ್ತದೆ. ಜೊತೆಗೆ ಒಂದು ವೇಳೆ ಮುಸ್ಲಿಮರು  ತಪ್ಪು ಮಾಡಿದ್ದರೆ ಅದನ್ನು ಎಲ್ಲರೂ ಬಹಿರಂಗವಾಗಿ ಖಂಡಿಸಬೇಕು. ಅದು ಬಿಟ್ಟು ಹಿಂದುಗಳು ಮತ್ತೊಂದು ತಪ್ಪು ಮಾಡಬಾರದು. ತಪ್ಪಿಗೆ ತಪ್ಪು ಉತ್ತರವಲ್ಲ. ತಪ್ಪಿಗೆ ಸರಿ ಉತ್ತರವಾಗಬೇಕು. ಈಗ ನಡೆಯುತ್ತಿರುವ ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ದೇಶದ ಮತ್ತು ಜನರ ಒಟ್ಟು ಹಿತಾಸಕ್ತಿಯಿಂದ ಸರಿಯಾದ ಕ್ರಮವಲ್ಲ. ಇದರಲ್ಲಿ ತೊಂದರೆಗೆ ಒಳಗಾಗವುದು ಸಾಮಾನ್ಯ ಜನ ಮಾತ್ರ.

ದಯವಿಟ್ಟು ಜವಾಬ್ದಾರಿ ಇರುವ ಈ ರಾಜ್ಯದ ಅಭಿವೃದ್ಧಿ ಮತ್ತು ಸಾಮರಸ್ಯ ಬಯಸುವ ಮನಸ್ಸುಗಳೇ ಇಲ್ಲಿ ಒಮ್ಮೆ ನೋಡಿ. ದೇಹವನ್ನೇ ವಿಷವಾಗಿಸುವ ದ್ವೇಷ, ಮನಸ್ಸನ್ನೇ ಘಾಸಿಗೊಳಿಸುವ ಅಸೂಯೆ, ವ್ಯಕ್ತಿತ್ವವನ್ನೇ ನಾಶ ಪಡಿಸುವ ಆಕ್ರೋಶ, ಪಾಕಿಸ್ತಾನ ಹಾಳಾಗಿದ್ದು ಏಕೆ ಗೊತ್ತೆ? ಅದು ಒಂದು ಧರ್ಮದ ಆಧಾರದಲ್ಲಿ ದೇಶವನ್ನು ಸ್ಥಾಪಿಸಿಕೊಂಡಿದ್ದರಿಂದ. ಧರ್ಮ ಯಾವಾಗಲೂ ಬದಲಾವಣೆಯ ಮತ್ತು ಪ್ರಗತಿಯ ವಿರೋಧಿ. ಸ್ವತಂತ್ರ ಚಿಂತನೆಗಿಂತ ಗುಲಾಮಗಿರಿಯ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ. ಅದರ ಪರಿಣಾಮ ಧರ್ಮ ಎಂಬ ನಿಂತ ನೀರು ಕೊಳೆಯಲಾರಂಬಿಸಿದೆ.

ಎರಡನೆಯದಾಗಿ, ಹಿಂದು ಧರ್ಮವನ್ನು, ಅದರ ಜನರನ್ನು, ಅವರು ವಾಸಿಸುವ ಭಾರತವನ್ನು ಅತಿಯಾಗಿ ದ್ವೇಷಿಸಲಾರಂಭಿಸಿತು. ಅದರ ಎಲ್ಲಾ ಕಾರ್ಯಚಟುವಟಿಕೆಗಳು ಭಾರತದ ವಿರೋಧಿ ನೀತಿಯಾಗಿಯೇ ರೂಪಿಸಲ್ಪಟ್ಟಿತು. ಎಲ್ಲವೂ ನಕಾರಾತ್ಮಕ ಚಿಂತನೆ. ಪರಿಣಾಮ ಆಧೋಗತಿ.

ಮೂರನೆಯದಾಗಿ, ತನ್ನ ಭೂಪ್ರದೇಶವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಕ್ಕಿಂತ ತನ್ನದಲ್ಲದ ಆದರೆ ತನ್ನ ಧರ್ಮದವರು ಹೆಚ್ಚಾಗಿದ್ದಾರೆ ಎಂಬ ಕಾರಣದಿಂದ ಕಾಶ್ಮೀರದ ಸ್ವತಂತ್ರ ಹೋರಾಟಕ್ಕೆ ಅಸೂಯೆಯಿಂದ ಪ್ರೋತ್ಸಾಹ ನೀಡಿದ್ದು. ಅದೂ ಯುದ್ಧದ ಮುಖಾಂತರ, ಭಯೋತ್ಪಾದನೆಯ ಮುಖಾಂತರ ಮತ್ತು ಸಾಧ್ಯವಿರುವ ಎಲ್ಲಾ ದುಷ್ಟ ಮಾರ್ಗಗಳ ಮೂಲಕ ಭಾರತವನ್ನು ದುರ್ಬಲ ಗೊಳಿಸಲು ಪ್ರಯತ್ನಿಸುತ್ತಾ ಅಪಾರ ಹಣ ಮತ್ತು ಶ್ರಮವನ್ನು ಕಳೆದುಕೊಂಡಿತು. ಅತ್ಯಂತ ಅಮಾನವೀಯ ಭಯೋತ್ಪಾದನೆಯನ್ನು ಹುಟ್ಟುಹಾಕಿತು. ಅಂತರರಾಷ್ಟ್ರೀಯವಾಗಿಯೂ ಕೆಟ್ಟ ಹೆಸರು ಪಡೆಯಿತು. ಪರಿಣಾಮ ವಿನಾಶ.

ಇದು ಅದರ ವ್ಯಾಪಾರ ವ್ಯವಹಾರ ಕ್ರೀಡೆ ಸಿನಿಮಾ ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಹರಡಿ ಈಗ‌ ಕೆಲವು ಮಾಧ್ಯಮಗಳು ವರ್ಣಿಸುವಂತೆ ಭಿಕ್ಷೆ ಬೇಡುವ ಸ್ಥಿತಿ ತಲುಪಿದೆ. ಇದು ಸಹಜವೇ ಅಲ್ಲವೇ ? ನೋಡಿ, ದ್ವೇಷ ಅಸೂಯೆ ಜೊತೆಗೆ ಧರ್ಮದ ಅಮಲು ಸೇರಿದರೆ ವ್ಯಕ್ತಿ ಅಥವಾ ದೇಶ ಹೇಗೆ ಅಧಃಪತನದತ್ತ ಸಾಗುತ್ತದೆ ಎಂದು. ಹಾಂ,...... ಎಚ್ಚರ.... ಪಾಕಿಸ್ತಾನ ಮಾಡಿದ ತಪ್ಪುಗಳನ್ನೇ ಭಾರತವೂ ಇತ್ತೀಚಿನ ವರ್ಷಗಳಲ್ಲಿ ಮಾಡುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ ? ಇಲ್ಲ ಎನ್ನುವುದಾದರೆ ನೀವು ಸಹ ಅದೇ ರೀತಿ ದ್ವೇಷ ಅಸೂಯೆ ಧರ್ಮದ ಅಮಲಿನಲ್ಲಿ ಇರುವಿರಿ ಎಂದು ಭಾವಿಸಬೇಕಾಗುತ್ತದೆ.

‌ಬಹಳಷ್ಟು ಜನ ಭಾರತದ ಅಭಿವೃದ್ಧಿ ಎಂದರೆ ಪಾಕಿಸ್ತಾನ ಚೀನಾವನ್ನು ವಿರೋಧಿಸುವುದು, ಮುಸ್ಲಿಮರನ್ನು ಭಯೋತ್ಪಾದಕರು ಎಂದು ಜರಿಯುವುದು, ಸೈನ್ಯಿಕ ಶಕ್ತಿಗೆ ಅವಶ್ಯತೆಗಿಂತ ಹೆಚ್ಚು ಮಹತ್ವ ನೀಡುವುದು ಎಂಬ ಭ್ರಮೆಗೆ ಒಳಗಾಗಿದ್ದಾರೆ. ಇದು ಎಷ್ಟರಮಟ್ಟಿಗೆ ಇದೆ ಎಂದರೆ… ಹೀಗೆ ಸಾಲು ಸಾಲು ಅಭಿಪ್ರಾಯಗಳು ಎಲ್ಲಾ ವಿಷಯಗಳಲ್ಲೂ ಬರುತ್ತದೆ. ಮುಖ್ಯ ವಿಷಯ ಬಿಟ್ಟು  ನಮ್ಮ ಬಹುತೇಕ ಅನಿಸಿಕೆಗಳು ಇಸ್ಲಾಂ ಮತ್ತು ಪಾಕಿಸ್ತಾನದ ಸುತ್ತಲೇ ತಿರುಗುತ್ತಿವೆ ಎಂದಾಯಿತು. ನಮ್ಮ ಬದಲಾವಣೆ ಅಥವಾ ಆತ್ಮಾವಲೋಕನಕ್ಕಿಂತ ಪಾಕಿಸ್ತಾನದ ಮೇಲಿನ ದ್ವೇಷವೇ ಹೆಚ್ಚಾಗಿದೆ. ಅಷ್ಟೇ ಅಲ್ಲ ಆಂತರಿಕವಾಗಿಯೂ ಭಾರತದ ಒಳಗಡೆ ವಿವಿಧ ವರ್ಗ ಪಂಗಡಗಳ ನಡುವೆ ಸಾಕಷ್ಟು ದ್ವೇಷ ಅಸೂಯೆಗಳು ಹೊಗೆಯಾಡುತ್ತಿದೆ.

ವೈಚಾರಿಕ ಪ್ರಜ್ಞೆಯ ಪ್ರಗತಿಪರ ಚಿಂತನೆಯ ಶೋಷಿತ ವರ್ಗದ ಜಾಗೃತ ಮನಸ್ಥಿತಿಯ ಜನರು ಸಾರಾಸಗಟಾಗಿ ಇಡೀ ವೇದ ಉಪನಿಷತ್ತು ರಾಮಾಯಣ ಮಹಾಭಾರತ ಭಗವದ್ಗೀತೆ ಸೇರಿ ಎಲ್ಲವನ್ನೂ ತಿರಸ್ಕರಿಸುವ ಮಟ್ಟಕ್ಕೆ ದ್ವೇಷಿಸುತ್ತಾರೆ. ಕನಿಷ್ಠ ಅವುಗಳಲ್ಲಿ ಇರಬಹುದಾದ ಒಳ್ಳೆಯ ಅಂಶಗಳನ್ನು ಸಹ ಪರಿಶೀಲಿಸುವ ತಾಳ್ಮೆ ಮಾಯವಾಗಿದೆ. ತಲಾತಲಾಂತರದ ದ್ವೇಷ ಈಗ ಹೆಡೆ ಎತ್ತಿದೆ. ಇದೇ ರೀತಿ ಇನ್ನೊಂದು ವರ್ಗ ಎಲ್ಲಾ ಸಂಪ್ರದಾಯಗಳನ್ನು ಅತ್ಯಂತ ಶ್ರೇಷ್ಠ ಎಂದು ಭಾವಿಸಿ ಅದನ್ನು ವಿರೋಧಿಸುವ ಎಲ್ಲರನ್ನೂ ಧರ್ಮ ವಿರೋಧಿಗಳು ದೇಶ ವಿರೋಧಿಸಗಳು ಎಂಬಂತೆ ಕಠಿಣ ಶಬ್ದಗಳಲ್ಲಿ ನಿಂದಿಸುತ್ತಾರೆ. ನಮ್ಮದೇ ಜನಗಳು ಪಡೆಯುವ ಮೀಸಲಾತಿ ಅವಕಾಶಗಳನ್ನು ಅಸೂಯೆಯಿಂದ ವಿರೋಧಿಸುತ್ತಾರೆ. ಭಾರತದ ಪರಿಸ್ಥಿತಿ ಹಾಳಾಗಲು ಇಷ್ಟು ಸಾಕಲ್ಲವೇ?

ಆರ್ಥಿಕ ಕುಸಿತದಿಂದ ಕಂಗಾಲಾಗಿರುವ, ಜಾತಿ ವ್ಯವಸ್ಥೆಯ ಕಾರಣದಿಂದ ದೇಶಾಭಿಮಾನವೇ ಕಡಿಮೆಯಾಗಿರುವ, ಭ್ರಷ್ಟಾಚಾರದಿಂದ ಆಡಳಿತದ ಮೇಲೆ ನಂಬಿಕೆಯೇ ಇಲ್ಲದಿರುವ, ಪ್ರಕೃತಿಯ ವಿಕೋಪದ ಕಾರಣದಿಂದ ಬಹಳಷ್ಟು ಜನರು ನಿರ್ಗತಿರಾಗುತ್ತಿರುವ, ನಿರುದ್ಯೋಗಿಗಳಾಗುತ್ತಿರುವ ಭಾರತವನ್ನು ಮೇಲ್ದರ್ಜೆಗೆ ಏರಿಸುವ ವಿಷಯಗಳ ಕುರಿತು ಚಿಂತಿಸದೆ ಪಕ್ಕದ ಧರ್ಮ ದೇಶವನ್ನು ದೂಷಿಸುತ್ತಾ ಕುಳಿತರೆ ಭಾರತದ ಅಭಿವೃದ್ಧಿ ಸಾಧ್ಯವೇ ? ಜಾತಿ ವ್ಯವಸ್ಥೆ ಇರುವವರಿಗು ಸಾಮಾಜಿಕ ನ್ಯಾಯ ಸಿಗುವುದೇ ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮೀರಿ ಈ ದ್ವೇಷ ಅಸೂಯೆಗಳು ನಮ್ಮನ್ನು ಆಕ್ರಮಿಸಿದೆ.

ಹೇಗೆ ಕೆಲವು ವಿಷಯಗಳು ನಮ್ಮನ್ನು ಭಾವನಾತ್ಮಕವಾಗಿ ಜೋಡಿಸಿದೆಯೋ ಹಾಗೆಯೇ ಜಾತಿ ಭಾಷೆ ಪ್ರಾಂತ್ಯ ಸಂಪ್ರದಾಯ  ನಮ್ಮನ್ನು ಭಾವನಾತ್ಮಕವಾಗಿ ಬೇರ್ಪಡಿಸಿದೆ ಎಂಬ ಸೂಕ್ಷ್ಮ ಅಂಶಗಳನ್ನು ಸಹ ಗಮನಿಸಬೇಕಿದೆ. ನಮ್ಮ ಜನಗಳನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಿಂದ ಇರುವವರನ್ನು ಈ ಬಗ್ಗೆ ಜಾಗೃತಗೊಳಿಸಬೇಕಿದೆ. ಇಲ್ಲದಿದ್ದರೆ ಭಾರತ ವಿಶ್ವ ಗುರು ಎಂದು ಕನಸು ಕಾಣುತ್ತಿದ್ದರೆ ಮತ್ತೊಂದು ಪಾಕಿಸ್ತಾನವಾಗುವ ಅಪಾಯಕ್ಕೆ ‌ಸಿಲುಕಬಹುದು… ಭಾರತ ಪ್ರೀತಿಯ ನೆಲ. ವಿಶ್ವಾಸದ ಜನ, ಸಹಕಾರದ ಸಮಾಜ, ಆಧ್ಯಾತ್ಮದ ತವರೂರು.  ಅದೇ ನಮ್ಮ ಶಕ್ತಿ. ನೆನಪಿಡಿ....

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ