ಬೇನೆ ಕೊಡದೆ...ಮತ್ತೊಂದು ಕವನ
ಕವನ
ಮನವು ಹಾಡಿತು
ಕನಸ ಸವಿಯಲಿ
ತನುವು ಪ್ರೀತಿಯ ತೋರಲು
ನನಸ ಒಳಗಿನ
ಮನಸು ಸಿಗಲದು
ತನನ ಎನುತಲಿ ಬಾಳಲು
ಬಂತು ಹೊಸತನ
ತಂತು ಹರುಷವ
ಕುಂತು ಹಾಡುವ ಸುಖದಲಿ
ಚಿಂತೆ ಮಾಡದೆ
ಕಂತೆ ಹಣದಲಿ
ಸಂತೆ ಸೇರಿದೆ ಖುಷಿಯಲಿ
ನೀನು ಕೇಳದೆ
ನಾನು ಬಂದೆನು
ಮೇನೆ ತಂದಿಹೆ ನೋಡೆಯ
ದಾನ ಬೇಡೆನು
ದೀನ ಹೇಳದೆ
ಬೇನೆ ಕೊಡದಲೆ ಬಾರೆಯ
***
ತಾಯೆ ಭೂಮಿ ತಾಯೆ
ತಾಯೇ ನಿನ್ನಯ
ಒಡಲಿನ ಕಡೆಗಿದೊ
ನಡೆಯುತ ಬಂದೆನು ನೋಡೆಯ
ಸನಿಹಕೆ ಕರೆಯುತ
ಮಡಿಲಲಿ ಮಲಗಿಸಿ
ನೆಮ್ಮದಿ ಜೀವನ ನೀಡೆಯ
ಕನ್ನಡ ದೀಪದಿ
ಓದುತ ಬೆಳೆದಿಹೆ
ಒಲವನು ಬೆಳೆಸುತ ನಿಲ್ಲೆಯ
ನಾಡಿನ ಮಣ್ಣಲಿ
ನನಸಿನ ಚೆಲುವನು
ಹಚ್ಚುತ ಬಿಮ್ಮನೆ ಬಂದೆಯ
ಹರಕೆಯ ಹೊರುತಲಿ
ಊರಲಿ ಸುತ್ತುತ
ಧನ್ಯತೆ ಸಿಗುವುದ ಕಾಣೆಯ
ಸಮತೆಯ ಜನರಲಿ
ಒಮ್ಮತ ಸೇರಲು
ಘನತೆಯು ಬರುವುದ ಹಾಡೆಯ
ಇಳೆಯಲಿ ಹೊನ್ನಿನ
ಬೆಳೆಯದು ಅರಳಿದೆ
ಸಂತಸ ನೀನದು ಹೊಂದೆಯ
ಬಾನಿನ ಒಲುಮೆಯು
ನಮ್ಮಲಿ ಹರಡಿದೆ
ಸುಂದರ ನೆಲವಿದು ಬಲ್ಲೆಯ
ಬದುಕಿನ ನಡೆಯಲಿ
ಬಂದಿದೆ ಚೇತನ
ನನಸದು ಮಾಡುತ ಸಾಗೆಯ
ಪ್ರೀತಿಯ ಪ್ರೇಮವ
ನೆಮ್ಮದಿ ಬದುಕಿಗೆ
ನೀಡುತ ಹರಸುತ ಬಾರೆಯ
-ಹಾ ಮ ಸತೀಶ
ಚಿತ್ರ್