ಬೇಬೀ ಕಾರ್ನ್ ಬೇಸಾಯ



ಬೇಬೀ ಕಾರ್ನ್ ಅತ್ಯಧಿಕ ಪೌಷ್ಟಿಕಾಂಶಗಳನ್ನು ಒಳಗೊಂಡ ತರಕಾರಿ. ಬೇಬೀ ಕಾರ್ನ್ ಎಳೇ ಮುಸುಕಿನ ಜೋಳದ ರೀತಿಯೇ ಇರುತ್ತದೆ. ಬೇಬಿ ಕಾರ್ನ್ ತಯಾರಿಕೆಗಾಗಿಯೇ ವಿವಿಧ ಬಗೆಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಈಗ ಬೇರೆ ಬೇರೆ ಅಡುಗೆಗಳಲ್ಲಿ ಬಳಕೆ ಮಾಡುತ್ತಿದ್ದು, ವಿದೇಶಗಳಿಂದಲೂ ಇದಕ್ಕೆ ಬೇಡಿಕೆ ಇದೆ. ಬೇಬೀ ಕಾರ್ನ್ ಮಂಚೂರಿ, ಬೇಬೀ ಕಾರ್ನ್ ಸಲಾದ್, ಬೇಬೀ ಕಾರ್ನ್ ಉಪ್ಪಿನಕಾಯಿ, ಇವೆಲ್ಲಾ ನಾವು ತಿಳಿದಿರುವ ಬೇಬೀ ಕಾರ್ನ್ ನ ಅಡುಗೆಗಳು. ಇದರಿಂದ ಇನ್ನೂ ಬೇರೆ ಬೇರೆ ಅಡುಗೆಗಳನ್ನು ತಯಾರಿಸಬಹುದು. ಇದು ಸುರಕ್ಷಿತ ಹಾಗೂ ಪೌಷ್ಟಿಕವಾದ ಆಹಾರ ವಸ್ತು.
ಬೇಬೀ ಕಾರ್ನ್‌ಗೆ ಬೇಡಿಕೆ ಇರುವಷ್ಟು ಪೂರೈಕೆ ಇರುವುದಿಲ್ಲ. ಇದರ ಬೇಡಿಕೆಗೆ ಪ್ರಾದೇಶಿಕ ಇತಿಮಿತಿಗಳಿಲ್ಲ. ನಗರ, ಹಳ್ಳಿ ಎಲ್ಲಾ ಕಡೆಯಲ್ಲೂ ಬೇಡಿಕೆ ಇದೆ. ನಗರದ ಒಂದೊಂದು ಹೋಟೇಲಿಗೂ ಏನಿಲ್ಲವೆಂದರೂ ದಿನಕ್ಕೆ ೨ ಕಿಲೋ ಮಿಕ್ಕಿ ಕಾರ್ನ ಬೇಕಾಗುತ್ತದೆ. ಸಸ್ಯಾಹಾರಿ ಹೋಟೇಲ್ ಮಾತ್ರವಲ್ಲದೇ ಮಾಂಸಹಾರಿ ಹೋಟೇಲ್ ಗಳಲ್ಲೂ ಬೇಬಿ ಕಾರ್ನ್ ಪದಾರ್ಥಗಳಿಗೆ ಬೇಡಿಕೆ ಇದೆ.
ಜೋಳ ಬೆಳೆಸುವ ಎಲ್ಲಾ ಕಡೆಗಳಲ್ಲೂ ಇದನ್ನು ಬೆಳೆಸಲು ಸಾಧ್ಯ. ಮುಖ್ಯವಾಗಿ ಮಾರುಕಟ್ಟೆ ಮೂಲವನ್ನು ಗುರುತಿಸಿಕೊಳ್ಳಬೇಕು. ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ಪೂರೈಕೆ ಮಾಡುವ ಕೆಲವು ವ್ಯಾಪಾರಸ್ಥರಿರುತ್ತಾರೆ. ಅವರ ಮೂಲಕವೇ ವ್ಯವಹಾರ ನಡೆಸಿದರೆ ಯಾವಾಗಲೂ ಬೇಡಿಕೆ ಇರುತ್ತದೆ. ಹೋಟೇಲು ಇತ್ಯಾದಿಗಳಿಗೆ ನೇರ ಪೂರೈಕೆ ಮಾಡುವುದು ಕಷ್ಟ ಸಾಧ್ಯ. ಇವರು ವರ್ಷದುದ್ದಕ್ಕೂ ಪೂರೈಕೆ ಮಾಡುವವರ ಮೂಲಕವೇ ಖರೀದಿ ಮಾಡುತ್ತಾರೆ.
ಬೇಬಿ ಕಾರ್ನ್ ಎಳೆ ಮುಸುಕಿನ ಜೋಳವಾದರೂ ಇದಕ್ಕಾಗಿಯೇ ಸೂಕ್ತ ತಳಿಗಳಿವೆ. ಬೇರೆ ಬೇರೆ ಬೀಜ ಕಂಪೆನಿಗಳು ಇದಕ್ಕೆ ಹೊಂದುವ ತಳಿಗಳನ್ನು ಅಭಿವೃದ್ದಿ ಪಡಿಸಿದ್ದು ಈ ತಳಿಗಳು ಎಳಸಾಗಿ ಹೆಚ್ಚು ಸಿಹಿಯನ್ನು ಒಳಗೊಂಡಿವೆ. ಸಾಮಾನ್ಯವಾಗಿ ಸಿ ಬಿ ಪಿ -೨೧, ಗೋಲ್ಡನ್ ಬೇಬಿ, ನುನ್ ಹ್ಯಾಮ್ಸ್ ಮುಂತಾದ ತಳಿಗಳು ಬೇಬೀ ಕಾರ್ನ್ ಗೆ ಹೆಚ್ಚು ಹೊಂದಿಕೊಳ್ಳುತ್ತವೆ.
ಬೇಸಾಯ ಕ್ರಮ: ಬೇಬೀ ಕಾರ್ನ್ ಬೇಸಾಯ ಸಾಮಾನ್ಯವಾಗಿ ಮುಸುಕಿನ ಜೋಳದ ಬೇಸಾಯದಂತೆಯೇ. ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣು ಪುಡಿ ಮಾಡಿ ಬಿತ್ತನೆಯನ್ನು ಮಾಡಬೇಕು. ಬೀಜಗಳನ್ನು ಸುಮಾರು ೧ ಅಡಿ ಅಂತರದಲ್ಲಿ ಬಿತ್ತನೆ ಮಾಡಬೇಕು. ಪ್ರತೀ ಸಾಲಿನ ಅಂತರ ಕನಿಷ್ಟ ೧ ಮೀಟರ್ ಇದ್ದರೆ ಒಳ್ಳೆಯದು. ಸಸಿಗಳು ಮೊಳೆತು ಸುಮಾರು ೨ ಅಡಿ ಬೆಳೆದ ತರುವಾಯ ಬುಡವನ್ನು ಮಣ್ಣು ಏರಿಸಿದರೆ ಒಳ್ಳೆಯದು. ಹನಿ ನೀರಾವರಿಯಲ್ಲಿ ಬೇಬೀ ಕಾರ್ನ್ ಬೆಳೆಯನ್ನು ಉತ್ತಮವಾಗಿ ಬೆಳೆಸಬಹುದು. ಸುಮಾರು ೧ ಅಡಿ ಅಂತರದಲ್ಲಿ ನೀರು ಜಿನುಗುಟ್ಟುವ ಇನ್ ಲೈನ್ ಡ್ರಿಪ್ಪರನ್ನು ಹಾಕಿ ಕಡಿಮೆ ನೀರಾವರಿಯಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಬೆಳೆಸಬಹುದು.
ಬೇಬೀ ಕಾರ್ನ್‌ಗೆ ಮುಸುಕಿನಜೋಳಕ್ಕೆ ಬರುವ ಎಲ್ಲಾ ನಮೂನೆಯ ರೋಗ-ಕೀಟಗಳೂ ಬರುತ್ತವೆಯಾದರೂ ಎಳವೆಯಲ್ಲೇ ಕಟಾವು ಮಾಡುವುದರಿಂದ ಆ ಹಂತದವರೆಗೆ ಬರುವ ರೋಗ ಕೀಟಗಳ ಬಗ್ಗೆ ಗಮನ ಇಟ್ಟರಾಯಿತು. ಸಾಮಾನ್ಯವಾಗಿ ಬೇಬೀ ಕಾರ್ನ್ ಅನ್ನು ತೆನೆ ಮೂಡಿ ತೆನೆಯ ತುದಿಯಲ್ಲಿ ಕೂದಲುಗಳು ಹೊರ ಬರುವ ಸಮಯದಲ್ಲೇ ಕಾಠಾವು ಮಾಡಬೇಕು. ಅದು ಪರಾಗಸ್ಪರ್ಶವಾಗುವ ಮುನ್ನ ಕಠಾವು ಮಾಡಬೇಕು. ಬೇಬೀ ಕಾರ್ನ್ ಬೇಸಾಯದಿಂದ ಕೇವಲ ಕಾರ್ನ್ ಮಾರಾಟ ಒಂದರಿಂದಲೇ ಲಾಭವಲ್ಲ. ಇದರ ಸಸ್ಯವನ್ನು ಪಶುಗಳಿಗೆ ಆಹಾರವಾಗಿಯೂ ಬಳಕೆ ಮಾಡಬಹುದು.
ಚಿತ್ರಗಳು: ರಾಧಾಕೃಷ್ಣ ಹೊಳ್ಳ