ಬೇರು-ಚಿಗುರಿನ ಮಿಶ್ರಣ ಅಗತ್ಯ

ಬೇರು-ಚಿಗುರಿನ ಮಿಶ್ರಣ ಅಗತ್ಯ

ಕರ್ನಾಟಕದಲ್ಲಿ ೧೩೫ ಸ್ಥಾನಗಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಇದೀಗ ಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಳಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಡಿಸಿಎಂ ಸೇರಿ ಎಂಟು ಜನ ಸಂಪುಟಕ್ಕೆ ಸೇರಿದ್ದರು. ಇದೀಗ ಶನಿವಾರ ಮತ್ತೆ ೨೪ ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಚಿವ ಸಂಪುಟವನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆದರೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಕಾಯಂ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಲೆಕ್ಕಾಚಾರದಲ್ಲಿ ಪಟ್ಟಿಯನ್ನು ಹೈಕಮಾಂಡ್ ಸಿದ್ಧಪಡಿಸಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಮುಖವಾಗಿ ಆರು ಬಾರಿ ಸಚಿವರಾಗಿರುವ, ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್ ವಿ ದೇಶಪಾಂಡೆ, ನಾಲ್ಕು ಬಾರಿ ಸಚಿವರಾಗಿರುವ ಎಚ್ ಕೆ ಪಾಟೀಲ್, ಎರಡು ಬಾರಿ ಸಚಿವರಾಗಿರುವ ಟಿ ಬಿ ಜಯಚಂದ್ರ ಸೇರಿದಂತೆ ೨೦೨೮ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಮಾತನ್ನು ಹೇಳಿರುವ ಹಿರಿಯರಿಗೆ ಸಚಿವ ಸ್ಥಾನ ನೀಡದಿರಲು ತೀರ್ಮಾನಿಸಿದೆ. ಈ ರೀತಿ ಹಿರಿಯರನ್ನು ಕೈಬಿಡಲು ಪ್ರಮುಖವಾಗಿ, ಸರಕಾರದಲ್ಲಿ ಹೊಸ ಆಲೋಚನೆಗಳಿಗೆ ಅವಕಾಶ ಸಿಗಲಿ ಹಾಗೂ ಮುಂದಿನ ದಿನದಲ್ಲಿ ಪಕ್ಷದ ಸಂಘಟನೆಯಲ್ಲಿ ಹೊಸ ಉತ್ಸಾಹ ನೀಡಬೇಕು ಎನ್ನುವ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ಹಾಗೆಂದು ಹಿರಿಯವರಿಗೆ ಅವಕಾಶವೇ ಇಲ್ಲ ಎಂದಿಲ್ಲ. ಈಗಾಗಲೇ ಪ್ರಮಾಣವಚನ ಸ್ವೀಕರಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಡಾ ಜಿ ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಕೆ ಜೆ ಜಾರ್ಜ್ ಅವರಿಗೆ ವಿವಿಧ ಇಲಾಖೆಯಲ್ಲಿ ಸಚಿವರಾಗಿ ನಿರ್ವಹಿಸಿರುವ ಅನುಭವವಿದೆ. ಈ ಮೂಲಕ ಅನುಭವದೊಂದಿಗೆ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಮತೋಲಿತ ಸಂಪುಟವನ್ನು ಸಿದ್ಧಪಡಿಸಿರುವಂತಿದೆ. ಒಂದು ರೀತಿಯಲ್ಲಿ ಸರಕಾರ ಬಂದಾಗಲೆಲ್ಲ ಅವರವರೇ ಸಚಿವರಾಗಿ ಏಕತಾನತೆ ಇರುವ ಬದಲು ಹೊಸಬರಿಗೆ ಅವಕಾಶ ನೀಡುವ ಮೂಲಕ, ಬದಲಾವಣೆಗೆ ಅವಕಾಶ ನೀಡುವುದು ಸೂಕ್ತ ನಿರ್ಧಾರ. ಆದರೆ ಈ ರೀತಿ ಹಿರಿಯರನ್ನು ಕಡೆಗಣಿಸಿದಾಗ, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಅದನ್ನು ಸಿದ್ಧರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೬-೦೫-೨೦೨೩

ಚಿತ್ರ ಕೃಪೆ: ಇಂಟರ್ನೆಟ್ ತಾಣ