ಬೇರು ಹುಳಗಳೆಂಬ ಅಡಿಕೆ ಕೃಷಿಕರ ಶತ್ರು !

ಬೇರು ಹುಳಗಳೆಂಬ ಅಡಿಕೆ ಕೃಷಿಕರ ಶತ್ರು !

ಬಹಳಷ್ಟು ಅಡಿಕೆ ಬೆಳೆಗಾರರ ತೋಟಗಳಲ್ಲಿ ಮರಗಳಿಗೆ ಎಲ್ಲಾ ಕ್ರಮಬದ್ದವಾದ ಉಪಚಾರಗಳನ್ನು ಕೈಗೊಂಡರೂ ಮರಗಳು ನಿಸ್ತೇಜವಾಗಿಯೇ ಇರುತ್ತವೆ. ಇದಕ್ಕೆ ಒಂದು ಕಾರಣ ಅದರ ಆಧಾರವೇ ಆದ ಬೇರನ್ನು ತಿನ್ನುವ ಹುಳದ ಉಪಟಳ. ಅಡಿಕೆ ಸಸಿ, ಮರಗಳ ಶಿರಭಾಗ ಸಪುರವಾಗಿ, ಎಲೆಗಳ ಸಂಖ್ಯೆ ಕಡಿಮೆಯಾಗುತ್ತಾ, ಎಲೆಗಳು ಹಳದಿಯಾಗಿ ಕೊನೆಗೆ ಶಿರವೇ ಕಳಚಿ ಬೀಳುವುದು ಬೇರು ಹುಳ ಭಾಧೆಯ ಲಕ್ಷಣ. ಅಡಿಕೆ ಬೆಳೆಯಲಾಗುವ ಎಲ್ಲಾ ಪ್ರದೇಶಗಳಲ್ಲೆಲ್ಲಾ ಇದು ಕಾಣಸಿಗುತ್ತದೆ.

ಬೇರು ಹುಳವು ಕೇವಲ ಅಡಿಕೆಗೆ ಮಾತ್ರವಲ್ಲ, ತಾಳೆ ಜಾತಿಯ ಇತರ ಮರಗಳು, ಕೊಕ್ಕೋ, ಕಾಫೀ, ರಬ್ಬರ್, ಕಬ್ಬು, ಹಲಸು, ಮುಂತಾದವುಗಳಿಗೂ ಹಾನಿ ಮಾಡುತ್ತದೆ. ಮರಗಳು ಕಳೆಗುಂದಿದ್ದರೆ ಅದರ ಬುಡವನ್ನು ಸಂಜೆ ಹೊತ್ತಿನಲ್ಲಿ ಸುಮಾರು ೧/೨ ದಿಂದ ೩/೪ ಅಡಿ ತನಕ ಅಗೆದು ನೊಡಿದರೆ ಬುಡದಲ್ಲಿ ಗೊಬ್ಬರದ ಹುಳುವಿನಂತೆ ಕಾಣುವ ಹುಳುಗಳು ಕಾಣಸಿಗುತ್ತದೆ. ಸಾಮಾನ್ಯವಾಗಿ ಸಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್- ನವೆಂಬರ್ ತಿಂಗಳ ತನಕ ಬುಡವನ್ನು ಕೆರೆದಾಗ ಹುಳುಗಳು ಕಾಣಸಿಕ್ಕರೆ, ಮೇ ತಿಂಗಳಿನಿಂದ ಜೂನ್- ಜುಲಾಯಿ ತನಕ ಬುಡದಲ್ಲಿ ದುಂಬಿಗಳು ಕಾಣಸಿಗುತ್ತವೆ.

ಹುಳುಗಳು ತೋರು ಬೆರಳು ಗಾತ್ರದಲ್ಲಿದ್ದು, ಬೆಳ್ಳಗೆ, ಹರಿತವಾದ ಮೂರು ಜೊತೆ  ತಿಳಿ ಹಳದಿ ಬಣ್ಣದ ಕಾಲುಗಳನ್ನು, ಕೆಂಪು ಮೂತಿಯನ್ನೂ ಹೊಂದಿದೆ. ಚುಚ್ಚಿದಾಗ ರಕ್ತವೂ ಬರುತ್ತದೆ. ದುಂಬಿಗಳೆಂದರೆ ಕುರುವಾಯಿಯನ್ನು ಹೋಲುವ ಸ್ವಲ್ಪ ಸಣ್ಣ ಗಾತ್ರದ, ಮೂತಿಯ ಬಳಿ ಖಡ್ಗದಂತಹ ರಚನೆ ಇಲ್ಲದ್ದು. ಬೇರು ಹುಳಗಳು ನಿರಂತರವಾಗಿ ಸಸಿಯ, ಮರದ ಎಳೆ ಬೇರನ್ನು ತಿನ್ನುತ್ತಾ ಬದುಕುತ್ತದೆ. ಇದರಿಂದಾಗಿ ಮರಕ್ಕೆ ಆಹಾರ ನೀರಿನ ಸರಬರಾಜು ಕಡಿಮೆಯಾಗಿ ಮರ ಕಳೆಗುಂದಿ ಸಾಯುತ್ತದೆ. ಎಳೆಯ ಸಸಿಗಳಲ್ಲಿ ಮೂರು ವರ್ಷದ ತನಕ ಇದನ್ನು  ಹೊರನೋಟಕ್ಕೆ ಗುರುತಿಸುವುದು ಕಷ್ಟವಾಗುತ್ತದೆ. ಆರೋಗ್ಯವಂತ ಮರಗಳಾದರೆ ಅದರಲ್ಲಿ ಎಂಟರಿಂದ ಹತ್ತರ ತನಕ ಎಲೆಗಳು ಇರುತ್ತವೆ. ಎಲೆಗಳು ಕಡಿಮೆಯಾಗಿ, ಸ್ವಲ್ಪ ಮಟ್ಟಿಗೆ ಹಳದಿಯಾಗಿದ್ದರೆ, ಶಿರ ಭಾಗ ಸಣಕಲಾಗುತ್ತಾ, ಹೂಗೊಂಚಲಿನಲ್ಲಿ ಕಾಯಿಗಳು ಉದುರುತ್ತದೆಯಾದರೆ ಅಂತಹ ಮರದ ಬುಡ ಭಾಗ ಆರೋಗ್ಯವಾಗಿಲ್ಲವೆಂದು ನಿರ್ಧರಿಸಬಹುದು. ಅಲ್ಲಿ ಸಂಜೆ ಗಂಟೆ ನಾಲ್ಕರ ನಂತರ, ಬುಡ ಭಾಗವನ್ನು ಅಗೆದು ಮಣ್ಣನ್ನು ಪರೀಕ್ಷಿಸಿದರೆ ಹುಳಗಳು ಕಾಣಸಿಗುತ್ತವೆ. ನೀರು ಕೆಳಗೆ ಹೋದಂತೆ ಹುಳಗಳು ಕೋಶಾವಸ್ಥೆಗೆ ಹೋಗುವ ಕಾರಣ ನಂತರ ಕಾಣಲು ಸಿಗುವುದು ಅಪರೂಪ. ಮೇ-ಜೂನ್ ತಿಂಗಳಿಗೆ ಒಂದು ಮಳೆ ಬಿದ್ದ ತಕ್ಷಣ, ಅವು ಕೋಶಾವಸ್ಥೆ ಬಿಟ್ಟು ಪ್ರೌಢ ಕೀಟಗಳಾಗುತ್ತವೆ. ಆ ಸಮಯದಲ್ಲಿ ದುಂಬಿಯಾಗಿ ಹೊರಗೆ ಹಾರಲಾರಂಭಿಸುತ್ತವೆ. ಬೇರು ಹುಳಗಳದ್ದು ನಾಲ್ಕು ಹಂತದ ಜೀವನ ಕ್ರಮ. ಒಂದು ಮೊಟ್ಟೆ, ನಂತರ ಮರಿ(ಹುಳು) ತದನಂತರ ಕೋಶ (ಪ್ಯೂಪೆ) ಆನಂತರ ದುಂಬಿ. ದುಂಬಿಯಾಗಿ ಗಂಡು ಹೆಣ್ಣು ಕೂಡಿ ಮತ್ತೆ ಮಣ್ಣಿನಲ್ಲಿ ಮೊಟ್ಟೆ ಇಡುತ್ತದೆ. ಬೇರು ಹುಳದಲ್ಲಿ ಮೂರು ಪ್ರಭೇಧಗಳನ್ನು ಕಾಣಬಹುದು. ಲ್ಯುಕೊಪೋಲಿಸ್ ಕೊನಿಯೋಪೊರಾ (Leucopholis Coneophora), ಲ್ಯುಕೊಪೋಲಿಸ್ ಬರ್ಮಿಸ್ಟೆರಿ (Leucopholis Burmeisteri) ಮತ್ತು ಲ್ಯುಕೊಪೋಲಿಸ್ ಲೆಪಿಡೋಪೆರಾಗಳು. (Leucopholis Lepidophora). ಇದರಲ್ಲಿ ಮೊದಲನೆಯದರ ಜೀವನ ಚಕ್ರ ಒಂದು ವರ್ಷವಾದರೆ ಮತ್ತೆರಡರದ್ದು ಎರಡು ವರ್ಷ. ಮೊಟ್ಟೆ, ಮರಿ ಹಾಗೂ ಕೋಶಗಳು ಯಾವಾಗಲೂ ಮಣ್ಣಿನಲ್ಲಿ ಇರುತ್ತವೆ. ಹೆಚ್ಚಾಗಿ ಕಾಣ ಸಿಗುವುದು ಮಳೆಗಾಲ ಮುಗಿಯುವಾಗ. ನಂತರವೂ ಸಿಗುತ್ತದೆ. ಪ್ರಮಾಣ ಕಡಿಮೆ. ದುಂಬಿಗಳು ಮಾತ್ರ ವರ್ಷದ ನಿರ್ದಿಷ್ಟ ಸಮಯದಲ್ಲಿ ಮುಸ್ಸಂಜೆ ಅಥವಾ ರಾತ್ರೆ ಹೊತ್ತು ಮಣ್ಣಿನಿಂದ ಹೊರ ಹಾರಿ ಲೈಂಗಿಕ ಸಂಪರ್ಕ ಹೊಂದುತ್ತವೆ.  ಮೂರರಿಂದ ನಾಲ್ಕು ಎಲೆಗಳು ಇರುವ ಒಂದು ಅಡಿಕೆ ಮರದ ಬುಡವನ್ನು ಅಗೆದು ಪರೀಕ್ಷಿಸಿದರೆ ಸುಮಾರು ೩೦-೪೦ ರಷ್ಟು ಹುಳಗಳು ಸಿಗುತ್ತವೆ. ಹೆಚ್ಚು ಭಾಧಿತವಾದ ಅಡಿಕೆ ಮರಗಳನ್ನು ಅಲುಗಾಡಿಸಿದರೆ ಅದು ಬುಡದಿಂದ ಅಲುಗಾಡಿ ಬೀಳಬಹುದು. ಬೇರು ಮುಗಿದ ಮೇಲೆ ಹುಳಗಳು ಮರದ ಕಾಂಡದ ಬುಡ ಭಾಗಕ್ಕೆ ಹೋಗಿ ಅಲ್ಲಿಯೂ ತಿನ್ನಲು ಪ್ರಾರಂಭಿಸುತ್ತವೆ.

ಬೇರು ಹುಳಗಳ ವಾಸ: ಅಡಿಕೆ ಬೆಳೆದಿರುವ ಭೂಮಿ ಮರಳು ಮಣ್ಣಾಗಿದ್ದರೆ, ಆವೆ ಮಣ್ಣಾಗಿದ್ದರೆ, ಕರಾವಳಿಯ ನೆರೆ ನೀರು ನಿಲ್ಲುವ ಮಣ್ಣಾಗಿದ್ದರೆ, ಭೂಮಿಯಲ್ಲಿ ನೀರು ನಿಲ್ಲುತ್ತಿದ್ದರೆ, ಅಂತಹ ಮಣ್ಣಿನಲ್ಲಿ ಬೇರು ಹುಳಗಳ ಭಾಧೆ ಹೆಚ್ಚು. ನೀರಿನ ಮಟ್ಟದಿಂದ ಮೇಲ್ಭಾಗದಲ್ಲಿ ಹುಳಗಳು ಇರುತ್ತವೆ. ಮಣ್ಣು ಒಣಗಲಾರಂಭಿಸಿದಂತೆ ಅವು ಮಣ್ಣಿನಲ್ಲಿ ಕೆಳಗೆ ಹೋಗುತ್ತವೆ. ಮೊಟ್ಟೆಗಳನ್ನು ೬ ರಿಂದ ೬೦ ಇಂಚಿನ ವರೆಗೆ ಕಾಣಬಹುದು. ಹದಿನೈದು ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.

ನಿರ್ವಹಣೆ: ಅಡಿಕೆ ತೋಟವನ್ನು ಹೆಚ್ಚು ಮರಳಿರುವ, ನೀರು ನಿಲ್ಲುವ, ನೆರೆ ಬೀಳುವ ಭೂಮಿಯಲ್ಲಿ ಮಾಡದಿರುವುದೇ ಒಳ್ಳೆಯದು. ಒಂದು ವೇಳೆ ಇಂತಹ ಭೂಮಿಯಲ್ಲಿ ಅಡಿಕೆ ಕೃಷಿ ಮಾಡಿದ್ದರೆ, ಈ ಸಮಯದಲ್ಲಿ ಮಣ್ಣನ್ನು ಮಧ್ಯಾಹ್ನದ ನಂತರ ತಿರುವಿ ಹಾಕುತ್ತಾ ಬೇರು ಹುಳಗಳನ್ನು ಹಾಗೂ ಮೊಟ್ಟೆಗಳನ್ನು ಹೆಕ್ಕಿ ನಾಶಮಾಡಬೇಕು. ನಂತರ ಮಣ್ಣಿಗೆ ಒಂದು ಕಿಲೋ ಬೇವಿನ ಹಿಂಡಿ ಹಾಕಿ ಬುಡಕ್ಕೆ ಒಂದು ಲೀಟರ್ ನೀರಿಗೆ ೭ ಮಿಲಿಯಂತೆ ಕ್ಲೋರೋಫೆರಿಫೋಸ್ ಕೀಟನಾಶಕವನ್ನು ಬೆರೆಸಿ ಬುಡದ ಮಣ್ಣಿನ ಭಾಗಕ್ಕೆ ೩ ಲೀ. ನಂತೆ ಹೊಯ್ದು ಮುಚ್ಚಬೇಕು. ಲಕ್ಕಿ ಗಿಡ ಮತ್ತು ನೆಕ್ಕಿ ಗಿಡದ ಸಾರದಿಂದ ತಯಾರಿಸಿದ ಸಸ್ಯ ಔಷಧಿ, ಬೇವು ಆಧಾರಿತ ಕೀಟನಾಶಕ ೨% ದಂತೆ ಬೇರು ವಲಯಕ್ಕೆ ಜೂನ್ ತಿಂಗಳಲ್ಲಿ  ಹೊಯ್ಯುವುದರಿಂದ ಮೊಟ್ಟೆಗಳು, ಸಣ್ಣ ಮರಿಗಳು ನಾಶವಾಗುತ್ತವೆ. ಅಗತೆ ಮಾಡದ ಮಧ್ಯಂತರಕ್ಕೆ ಒಂದು ಲೀ. ನೀರಿಗೆ ೨.೫ ಮಿಲಿ. ಇಮಿಡಾಕ್ಲೋಫ್ರಿಡ್ ಕೀಟನಾಶಕ ಬೆರೆಸಿ ಸಿಂಪರಣೆ ಮಾಡಿದರೆ ಅಳಿದುಳಿದ ಹುಳುಗಳೂ ನಾಶವಾಗುತ್ತವೆ. ಅಡಿಕೆ ತೋಟಗಳಿಗೆ ಆಳ ಬಸಿಗಾಲುವೆ ಮಾಡಬೇಕು. ಸಾಧ್ಯವಾದಷ್ಟು ಕೊಳೆಯುವ ವಸ್ತುಗಳನ್ನು ಬುಡಕ್ಕೆ ಹಾಕಬೇಡಿ. ಮಣ್ಣು ಹಾಕುವಾಗ ಮರಳು ಕಡಿಮೆ ಇರುವ ಮಣ್ಣು ಹಾಕಬೇಕು.

ಇನ್ನು ಮೇ-ಜೂನ್ ತಿಂಗಳಲ್ಲಿ ಮುಸ್ಸಂಜೆ ಹೊತ್ತು ತೋಟದಲ್ಲಿ ಪೆಟ್ರೋಮ್ಯಾಕ್ಸ್ ದೀಪ ಉರಿಸಿ ಅದರ ಅಡಿಯಲ್ಲಿ ವಿಷ ಸೇರಿಸಿದ ನೀರು ಇಟ್ಟರೆ ಅದಕ್ಕೆ ದುಂಬಿಗಳು ಬಂದು ಬೀಳುತ್ತದೆ. ಮರಗೆಣಸು ಸಸಿಗಳಿದ್ದರೆ ದುಂಬಿಗಳು ಹಾರಿ ಅದರ ಕಾಂಡದಲ್ಲಿ ಕುಳಿತುಕೊಳ್ಳುತ್ತವೆ. ಅಲ್ಲಿಂದ ಆರಿಸಿ ತೆಗೆಯಬಹುದು. ಮುಂಗಾರು ಮಳೆ ಪ್ರಾರಂಭದಲ್ಲಿ ಮತ್ತು ಮಳೆಗಾಲ ಮುಗಿಯುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಣ್ಣಿಗೆ ಮೆಟರಿಜಿಯಂ ಜೈವಿಕ ಗೊಬ್ಬರ ಹಾಕಿದರೆ ಅದು ಬೇರು ಹುಳವನ್ನು ನಿಯಂತ್ರಿಸುತ್ತದೆ.

ಬೇರು ಹುಳದ ನಿಯಂತ್ರಣಕ್ಕೆ  ತೋಟದ ಮಣ್ಣನ್ನು ಈ ಸಮಯದಲ್ಲಿ ಅಗೆತ ಮಾಡಿ ಹುಳ ಆರಿಸಿ ತೆಗೆಯುವುದೇ ಉತ್ತಮ. ಮರಗಳಿಗೆ ಗೊಬ್ಬರ  ಹಾಕುವ ಸಮಯವೂ ಇದೇ ಆದ ಕಾರಣ ಒಟ್ಟೊಟ್ಟಿಗೇ ಎರಡು ಕೆಲಸ ಆಗುತ್ತದೆ. ಬುಡ ಭಾಗದ ಮರಳು ಮಣ್ಣನ್ನು ಸಂಪೂರ್ಣವಾಗಿ ತೆಗೆದು ಬೇರೆ ಗಟ್ಟಿ ಮಣ್ಣನ್ನು ಹಾಕಿ ಉಪಚಾರ ಮಾಡಿದರೆ ಬೇರು ಹುಳ ಧೀರ್ಘಾವಧಿಯ ತನಕ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಕೆಲವು ರೈತರ ಅನುಭವ.

ಚಿತ್ರ ವಿವರ : ೧. ಬೇರು ಹುಳುವಿನಿಂದ ತೊಂದರೆಗೊಳಗಾದ ಅಡಿಕೆ ತೋಟ. ೨. ಬೇರು ಹುಳುಗಳು. ೩. ಮರಳು ಮಿಶ್ರಿತ ಮಣ್ಣು

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ