ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

ಬರಹ

ಇದ್ದಕ್ಕಿದ್ದ ಹಾಗೆ ಕೊಂಡು ತರುತ್ತಿದ್ದ ಪುಸ್ತಕಗಳ ರಾಶಿ ಹೆಚ್ಚುತ್ತ ಹೋದುದು ಗಮನಕ್ಕೆ ಬಂದು ಗಾಭರಿಯಾಯಿತು. ೨೦೦೬ರಲ್ಲಿ ಒಮ್ಮೆ ಇಡೀ ವರ್ಷ ಓದಿದ ಪುಸ್ತಕಗಳ ಲೆಕ್ಕ ತೆಗೆದಿದ್ದೆ. ಸಾಧಾರಣವಾಗಿ ನನ್ನ ಡೈರಿಯಲ್ಲಿ ನಾನು ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ, ನನ್ನ ನಿರೀಕ್ಷೆಯನ್ನು ತೀರ ಸುಳ್ಳಾಗಿಸಿದ ಪುಸ್ತಕಗಳ ಬಗ್ಗೆ ನನ್ನ ಮನಸೋ ಇಚ್ಛೆ ಬರೆದಿಡುತ್ತ ಬಂದಿದ್ದೇನೆ. ಅದರ ಆಧಾರದ ಮೇಲೆ ನೋಡಿದಾಗ ಇಪ್ಪತ್ತನಾಲ್ಕಕ್ಕಿಂತ ಕಡಿಮೆ ಪುಸ್ತಕಗಳನ್ನು ಓದಿದ್ದು ಗಮನಕ್ಕೆ ಬಂದು ಇನ್ನಷ್ಟು ಗಾಭರಿಯಾಗಿತ್ತು. ೨೦೦೭ರಲ್ಲಿ ಇದನ್ನು ಶತಾಯಗತಾಯ ಮುವ್ವತ್ತಾರು, ನಲವತ್ತಕ್ಕೆ ಏರಿಸುವುದಷ್ಟೇ ಸಾಧ್ಯವಾಗಿದ್ದು ನನಗೆ. ಇದು ಇನ್ನು ಹೀಗೇ ಆದರೆ ನನ್ನ ಉಳಿದ ಆಯುಷ್ಯ ಅಂತ ಏನು ತುಂಬ ಆಶಾವಾದಿಯಾಗಿ ನಾನೂ ಬಹುಮಂದಿಯಷ್ಟು ಕಾಲ ಬದುಕೇ ಬದುಕುತ್ತೇನೆಂದುಕೊಳ್ಳುವುದಿದೆ, ಹಾಗೆ ಯೋಚಿಸಿದರೂ ಹೆಚ್ಚೇನೂ ಓದುವುದು ಸಾಧ್ಯವಾಗಲಿಕ್ಕಿಲ್ಲ ಎನಿಸಿತು. ಇಲ್ಲಿ ವಾರಕ್ಕೊಂದು ಪುಸ್ತಕದ ಬಗ್ಗೆ ಬರೆಯುವ ನಿಯಮಕ್ಕೆ ಬದ್ಧನಾಗಿ ಬರೆಯುವುದಾದರೆ ಅದರ ಆಕರ್ಷಣೆಯಿಂದಲಾದರೂ ನನ್ನ ಓದು ಸುಧಾರಿಸಬಹುದು ಎನ್ನುವ ಸ್ವಾರ್ಥದಿಂದ ಅದನ್ನು ಮಾಡಲು ಹೊರಟೆ.

ಇದು ಸ್ವಲ್ಪ ಫಲಿಸಿದಂತಿದೆ. ಹೀಗೆ ಮಾಡಿದರೆ ನೀನು ಕತೆ ಕಾದಂಬರಿ ಬರೆಯುವುದು ಯಾವಾಗ ಮಹರಾಯ, ನಿನ್ನ ಕ್ರಿಯೇಟಿವ್ ರೈಟಿಂಗ್ ಹಾಳಗುವುದಿಲ್ಲವ ಎಂದ ಸ್ನೇಹಿತರಿದ್ದಾರೆ. ನನಗೆ ಅದೆಲ್ಲ ಮುಖ್ಯವೆನಿಸಿಲ್ಲ. ಇಲ್ಲಿ ನನ್ನ ಬದುಕು ನನಗೆ ಮುಖ್ಯ, ಅದಕ್ಕೆ ನನ್ನ ಬರಹಕ್ಕಿಂತ ಓದು ಹೆಚ್ಚು ಪ್ರತಿಫಲ ನೀಡುತ್ತ ಬಂದಿರುವ ಹವ್ಯಾಸವಾಗಿ ಕಂಡಿದೆ. ಕೆಲವೊಮ್ಮೆ ವಾರಕ್ಕೆ ಮೂರು ಪುಟ್ಟ ಪುಟ್ಟ ಪುಸ್ತಕಗಳನ್ನು ಓದಿದ್ದೂ ಇದೆ. ಓದಿದ ಪುಸ್ತಕಗಳ ಬಗ್ಗೆ ಬರೆಯುತ್ತ ಕೂರುವ ವೇಳೆಯಲ್ಲೇ ಇನ್ನೊಂದು ಪುಸ್ತಕ ಸ್ವಲ್ಪ ಓದುವುದು ಒಳ್ಳೆಯದಲ್ಲವ ಅನಿಸಿದ್ದೂ ಇದೆ. ಓದಿದ ಪುಸ್ತಕದ ಬಗ್ಗೆ ಬರೆಯದಿರುವುದೇ ಒಳ್ಳೆಯದು ಅನಿಸಿದ್ದೂ ಇದೆ. ನಾನು ಓದಿದೆ ಎನ್ನುವ ಒಂದೇ ಕಾರಣಕ್ಕೆ ಅದು ಎಲ್ಲರೂ ಓದಬೇಕಾದ ಪುಸ್ತಕ ಆಗಬೇಕಿಲ್ಲವಲ್ಲ.

ಸಾಧಾರಣವಾಗಿ ನಾಲ್ಕು ಮಂದಿ ಒಳ್ಳೆಯದಿದೆ, ಓದಿದ್ರಾ, ಓದಿ ನೋಡಿ ಎಂದೆಲ್ಲ ಹೇಳಿದಂಥ, ಅಥವಾ ನಮಗೆ ಹಿಡಿಸಿದ ಲೇಖಕರು ಬರೆದ ಪುಸ್ತಕಗಳನ್ನಷ್ಟೇ ದುಡ್ಡುಕೊಟ್ಟು ಕೊಳ್ಳುವುದು ಸಾಧ್ಯ, ನನ್ನಂಥವರಿಗೆ. ಹಾಗಾಗಿ ಅವೆಲ್ಲ ಉತ್ತಮ ಪುಸ್ತಕಗಳೇ. ಆದರೂ ಓದಿ ಮುಗಿಸಿದ ಮೇಲೆ ನನಗೂ ಹಾಗನಿಸಬೇಕೆಂದಿಲ್ಲವಲ್ಲ! ಈಗಂತೂ ಅಲ್ಲಿ ಇಲ್ಲಿ ಬರೆದಿದ್ದು, ಅಚ್ಚಾದದ್ದು ಎಲ್ಲವನ್ನೂ ಪುಸ್ತಕಗೊಳಿಸಿ, ಅದ್ದೂರಿ ಬಿಡುಗಡೆ ಸಮಾರಂಭವನ್ನೂ ಹೊರಡಿಸಿ ಅದನ್ನು ದಿಗ್ವಿಜಯಕ್ಕೆ ಬಿಡುವುದು ಸಂಪ್ರದಾಯವೇ ಆಗಿಬಿಟ್ಟಿದೆ. ಓದಲೇಬೇಕಾದ, ಓದಬೇಕಾದ, ಓದಬಹುದಾದ, ಓದದಿದ್ದರೂ ನಷ್ಟವಿಲ್ಲದ, ಓದುವ ಅಗತ್ಯವೇ ಇಲ್ಲದ, ಓದಬಾರದ ಪುಸ್ತಕಗಳೆಲ್ಲಾ ಒಂದೇ ತರ ಕಾಣಿಸಿಕೊಳ್ಳುತ್ತ ಪುಸ್ತಕದ ಹುಚ್ಚು ಇರುವ ಮಂದಿ ಮತ್ತೆ ಮತ್ತೆ ಮೂರ್ಖರಾಗಲು ವಿಪುಲ ಅವಕಾಶಗಳಿರುವ ಈ ದಿನಗಳಲ್ಲಿ ಪುಸ್ತಕಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಬಲ್ಲವರ ಅಗತ್ಯ ಹೆಚ್ಚಿದೆ. ಸ್ನೇಹಿತರು, ಪರಿಚಯದವರು, ದಾಕ್ಷಿಣ್ಯಕ್ಕೋ ಇನ್ನೊಂದಕ್ಕೋ ಪುಸ್ತಕ ಕಳುಹಿಸಿದರೆ ಅವರ ಸಮಾಧಾನಕ್ಕೆ ಅಂಥ ಪುಸ್ತಕವನ್ನು ಓದಲೇ ಬೇಕಾದ ಒಂದು ಅದ್ವಿತೀಯ ಪುಸ್ತಕ ಎಂದು ಬರೆದು ಋಣಸಂದಾಯ ಮಾಡುವವರ ಬಗ್ಗೆ ಭಯ ಕೂಡ ಪಡಬೇಕಾದ ದಿನಗಳಿವು.

ನಾವೆಲ್ಲ ಯಾಕೆ ಪುಸ್ತಕಗಳನ್ನು ಓದುತ್ತೇವೆ ಮತ್ತು ಯಾಕೆ ಯಾವಾಗಲೂ ಅವರಿವರು ಒಳ್ಳೆಯದಿದೆ ಎಂದ ಪುಸ್ತಕಗಳನ್ನೇ ಓದುತ್ತೇವೆ ಎನ್ನುವ ಬಗ್ಗೆ ಯೋಚಿಸಿದೆ. ಸೀಮಿತ ಸಮಯ, ಸೀಮಿತ ಸಂಪನ್ಮೂಲ ಎರಡರ ಮಧ್ಯೆ ಸಾಧಾರಣವಾಗಿ ನಮಗೆ ಹೊಂದುವ ಅಭಿರುಚಿಯುಳ್ಳವರು ಒಳ್ಳೆಯದಿದೆ ಎಂದ ಸಿನಿಮಾ, ನಾಟಕ, ವಸ್ತು, ವಿಚಾರವನ್ನು ನಾವೂ ಪ್ರಯತ್ನಿಸಬಹುದು ಎನ್ನುವ ಧೈರ್ಯ ಬರುತ್ತದೆ. ಹಾಗೆ ನಾನು ಪುಸ್ತಕಗಳ ಬಗ್ಗೆ ಹುಡುಕುತ್ತ ಕೆಲವರ ಮಾತು ನಂಬಿ ಹೊಂಡಕ್ಕೆ ಬಿದ್ದಿದ್ದೂ ಇದೆ. ಅಂಥ ಸಂದರ್ಭದಲ್ಲಿ ಹಾಗೆ ಒಳ್ಳೆಯದಿದೆ ಎಂದ ಮನುಷ್ಯನ ಬಗ್ಗೆ ಜಾಗ್ರತೆ ವಹಿಸುವುದನ್ನು ಕಲಿತೆ!

ಆದರೂ ಪುಸ್ತಕ ಬರೆಯುವುದೇನೂ ಗುನ್ಹೆಯಲ್ಲ. ಆಫ್ಟರ್ ಆಲ್ ಒಬ್ಬ ಸಾಹಿತಿಯ ಅಪರಾಧವಾದರೂ ಏನು? ಅವನು ಬರೆದದ್ದೇ ಒಂದು ಅಪರಾಧವೆಂಬಂತೆ ಹಿಗ್ಗಾಮುಗ್ಗ ಜಾಡಿಸಿ ಇನ್ನುಮುಂದೆ ಅವನು ತಪ್ಪಿಯೂ ಸಾಹಿತ್ಯ ಸೃಜನಶೀಲತೆ ಎಂದೆಲ್ಲ ಕನಸದಂತೆ ಮಾಡಬೇಕಿಲ್ಲ, ಅಲ್ಲವೆ? ಆಹಾ ಎಂದು ಅದನ್ನು ನಾಲ್ಕು ಮಾತು ಹೆಚ್ಚೇ ಹೊಗಳಿ ಬರೆದರೆ ನಮಗಾಗುವ ನಷ್ಟವಾದರೂ ಏನಂತೆ? ಯಾಕೆ ಏನೋ ಸ್ವಲ್ಪ ಅಪಾಯದ ಸುಳಿವು ಕಂಡಂತೆ ಮುಖ ಮಾಡುತ್ತೀರಿ?

ಒಬ್ಬ ಲೇಖಕನಿಗೆ ತನ್ನ ಪುಸ್ತಕ ಚೆನ್ನಾಗಿಲ್ಲ ಎನ್ನುವ ವಿಮರ್ಶೆಯಾದರೂ ಸಿಕ್ಕಿದರೆ ಅಷ್ಟರಮಟ್ಟಿಗೆ ತಾನು ಗಮನಿಸಲ್ಪಟ್ಟಿದ್ದೇನೆ ಎನ್ನುವ ಸಮಾಧಾನ ಸಿಗುವುದಂತೆ. ಆತನ ಬೆಳವಣಿಗೆಗೂ ಅದು ಸಹಾಯಕವಾದೀತೇನೋ. ಹಾಗೆಯೇ ಒಬ್ಬ ಪುಸ್ತಕಗಳ ಬಗ್ಗೆ ಇತರರಿಗೆ ಹೇಳುವ ಮನುಷ್ಯ ಒಳ್ಳೆಯ ಪುಸ್ತಕಗಳ ಬಗ್ಗೆ ಮಾತ್ರ ಬರೆಯದೆ ಒಳ್ಳೆಯದು ಎಂದು ಬಿಂಬಿಸಲ್ಪಡುತ್ತಿರುವ, ಆದರೆ ತನಗೆ ಕೆಟ್ಟದೆನಿಸಿದ ಪುಸ್ತಕಗಳ ಬಗ್ಗೆ ಕೂಡ ಬರೆಯುವುದು ಒಂದು ರೀತಿಯಲ್ಲಿ ಅಗತ್ಯ ಕೂಡ. ಆದರೆ ಅದನ್ನು ಮಾಡುವುದು ಎಷ್ಟು ಅಪಾಯಕರ ಎನ್ನುವುದನ್ನು ಅನುಭವಿಸಿದವರು ಮುಂದೆ ಸ್ವತಃ ಬರೆಯುವ ಸಾಹಸ ಮಾಡಲಾರರು ಅನಿಸುತ್ತದೆ!

ಕೊನೆಗೂ ಒಂದು ಪುಸ್ತಕವನ್ನು ಕೊಳ್ಳುವ, ಓದುವ ನಮ್ಮ ನಿರ್ಧಾರ ರೂಪುಗೊಳ್ಳುವ ಹಲವಾರು ಅಂಶಗಳಲ್ಲಿ ಈ ರಿವ್ಯೂ, ವಿಮರ್ಶೆ, ಪುಸ್ತಕ ಪರಿಚಯವೂ ಒಂದು. ಕೆಲವೊಮ್ಮೆ ಇಂಥ ಪುಸ್ತಕ ಬಂದಿದೆ ಎನ್ನುವ ಮಾಹಿತಿ ಸಾಕಾಗುತ್ತದೆ. ಕೆಲವೊಮ್ಮೆ ಅದು ಓದಬೇಕಾದದ್ದು ಎನ್ನುವ ವಿಶ್ವಾಸ ಬರಲು ಅದರ ಬಗ್ಗೆ ಸ್ವಲ್ಪ ಹೇಳುವವರು ಬೇಕಾಗುತ್ತಾರೆ. ಇಷ್ಟರ ಮೇಲೆ ಕೊಂಡು ಓದಲು ಮುಹೂರ್ತ, ಕಾಲ ಎಲ್ಲ ಕೂಡಿಬರಬೇಕು ಎನ್ನುವುದಿದ್ದೇ ಇದೆ ಬಿಡಿ. ಆದರೆ ವಿಪರ್ಯಾಸವೆಂದರೆ ಕೆಲವೊಮ್ಮೆ ಈ ರಿವ್ಯೂ ಓದಿ, ಇಷ್ಟು ಗೊತ್ತಾಯಿತಲ್ಲ, ಸಾಕು, ಇನ್ನು ಖುದ್ದು ಪುಸ್ತಕವನ್ನೇ ಓದಿ ಏನೂ ಆಗಬೇಕಾದ್ದಿಲ್ಲ ಎನ್ನುವ ತೀರ್ಮಾನಕ್ಕೆ ಬರುವವರೂ ಇಲ್ಲವೆ? ಇದಾದರೆ ಆ ಸಾಹಿತಿಗೂ ಪ್ರಕಾಶಕನಿಗೂ ಮಾಡುವ ದ್ರೋಹವೆ ಸರಿ!

ವಾರವಾರವೂ ಒಂದು ಪುಸ್ತಕದ ಬಗ್ಗೆ ಬರೆದೇ ಬರೆಯಬೇಕು ಎನ್ನುವ ಹಠ ಒಳ್ಳೆಯದಲ್ಲ ಅಂತ ಗೊತ್ತಾಗಿದೆ. ಹಾಗೆ ಓದಿದ ನಾಲ್ಕು (ಒಳ್ಳೆಯ) ಪುಸ್ತಕಗಳ ಬಗ್ಗೆ ಬಯಸಿದರೂ ಬರೆಯುವುದಾಗಲಿಲ್ಲ. ಎರಡು ಪುಸ್ತಕಗಳ ಬಗ್ಗೆ ಬರೆದಿದ್ದು (ನಾನು ಓದಿ ಸಮಯ ಹಾಳುಮಾಡಿದ ಹಾಗೆ ನಿಮಗೂ ಆಗಬೇಕು ಅನಿಸುವುದನ್ನು ಬಿಟ್ಟರೆ!) ನೀವು ಓದಲೇ ಬೇಕಾದ ಪುಸ್ತಕ ಅಂತ ನನಗೇ ಅನಿಸಿಲ್ಲ. ಆದರೂ ಪುಸ್ತಕಗಳ ಬಗ್ಗೆ ಬರೆಯುವುದು ಅಂಥ ಕೆಟ್ಟಕೆಲಸವೇನಲ್ಲ, ಅಲ್ಲವೆ?