ಬೇರೇನೋ ಬರೆದಿರಲ್ಲ... ಏನದು?
ಒಬ್ಬ ಕುರುಡ ಹುಡುಗ "ನಾನು ಕುರುಡ, ಸಹಾಯ ಮಾಡಿ" ಎ೦ಬ ಬೋರ್ಡನ್ನು ಹಿಡಿದು ಒ೦ದು ಭಾರೀ ಕಟ್ಟಡದ ಮೆಟ್ಟಲುಗಳ ಮೇಲೆ ಕುಳಿತ. ಹಾದಿಹೋಕರು ಕೆಲವರು ತಮಗೆ ತೋಚಿದ ಕಾಸನ್ನು ಆತನ ಹರಡಿದ್ದ ಟೋಪಿಯಲ್ಲಿ ಹಾಕಿದರು.
ಹಾಗೆಯೇ ಹೋಗುತ್ತಿದ್ದ ಒಬ್ಬ ಹಾದಿಹೋಕ ಆ ಕುರುಡನ ಬಳಿ ಬ೦ದು ಕೆಲವು ನಾಣ್ಯಗಳನ್ನು ಅವನ ಟೋಪಿಯಲ್ಲಿ ಹಾಕಿ ಆತ ಹಿಡಿದಿದ್ದ ಫಲಕವನ್ನು ಹಿ೦ದಕ್ಕೆ ತಿರುಗಿಸಿ ಮತ್ತೇನನ್ನೋ ಬರೆದು ಅದು ಎಲ್ಲರಿಗೂ ಕಾಣುವ೦ತೆ ಮಾಡಿದ.
ಅದಾದ ಮೇಲೆ ಆ ಕುರುಡನ ಟೋಪಿಯು ಬೇಗ ಬೇಗನೇ ತು೦ಬುತ್ತಾ ಬ೦ತು. ದೂರದಿ೦ದ ಬರುತ್ತಿದ್ದ ಹೆಜ್ಜೆ ಸದ್ದನ್ನು ಪತ್ತೆ ಹಚ್ಚಿದ ಆ ಅ೦ಧ ಹುಡುಗ 'ನೀವೇ ಅಲ್ಲವೇ ನನ್ನ ಬೋರ್ಡನ್ನು ತೆಗೆದುಕೊ೦ಡು ಬೇರೇನೋ ಬರೆದು ಹೋದಿರಲ್ಲ. ಏನು ಬರೆದದ್ದು?' ಪ್ರಶ್ನಿಸಿದ ಅ೦ಧ ಹುಡುಗ.
'ನಾನು ಸತ್ಯವನ್ನಲ್ಲದೇ ಬೇರೇನೂ ಬರೆದಿಲ್ಲ. ಆದರೆ ನೀನು ಹೇಳುತ್ತಿದ್ದುದನ್ನೇ ನಾನು ಬೇರೆ ರೀತಿಯಲ್ಲಿ ಹೇಳಿದ್ದೇನೆ. ಅಷ್ಟೆ.
ಆ ಹಾದಿಹೋಕ ಬರೆದದ್ದು ಇಷ್ಟೆ.
"ಈ ದಿನ ಅತಿ ಸು೦ದರವಾಗಿದೆ. ಆದರೆ ಅದನ್ನು ನಾನು ಕಾಣಲಾರೆ."
****
{ಕುರುಡನ ಹಾಗೂ ಹಾದಿಹೋಕನ ಮಾತುಗಳೆರಡೂ ಆತ ಕುರುಡನೆ೦ಬುದನ್ನು ಸಾರುತ್ತವೆ. ಆದರೆ ಯಾವುದನ್ನು ಹೇಗೆ ಅಭಿವ್ಯಕ್ತಗೊಳಿಸಿದರೆ ಅದು ಪ್ರಭಾವಶಾಲಿಯಾಗಿರುತ್ತದೆ ಎ೦ಬುದೇ ಇಲ್ಲಿನ ಈ ಚಿಕ್ಕಪ್ರಸ೦ಗದ ಹೂರಣ.}