ಬೇವಿಗೆ ಕಂಟಕ – ಒಣಗುತ್ತಿರುವ ಸಂಜೀವಿನಿ

ಬೇವಿಗೆ ಕಂಟಕ – ಒಣಗುತ್ತಿರುವ ಸಂಜೀವಿನಿ

ಬೇವನ್ನು ಆರೋಗ್ಯ ಸಂಜೀವಿನಿ ಎಂದು ಹೇಳುತ್ತೇವೆ. ಪುರಾತನ ಕಾಲದಿಂದಲೂ ಬೇವು ಔಷಧೀಯ ಗುಣಗಳಿಂದ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಈ ಬೇವಿಗೆ ಇತ್ತೀಚಿನ ದಿನಗಳಲ್ಲಿ ಚಹಾ ಸೊಳ್ಳೆಯ ತಿಗಣೆಯ (Tea mosquito bug) ಬಾಧೆಯು ಸಮಸ್ಯೆಯಾಗಿದೆ. ಎಲ್ಲಾ ಪ್ರದೇಶಗಳಲ್ಲೂ ಹಸಿರಾಗಿ ಕಂಗೊಳಿಸುತ್ತಿದ್ದ ದಿವ್ಯೌಷದ ಬೇವು ನಾಶವಾಗುತ್ತಿರುವುದರಿಂದ ಇದನ್ನು ನಿರ್ಲಕ್ಷಿಸದೆ, ನಿರ್ವಹಣೆ ಮಾಡುವುದು ಅತ್ಯಗತ್ಯ. ಈ ಕೀಡೆಯ ಬಾದೆಯನ್ನು ದಕ್ಷಿಣ ಭಾಗದ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಈಗಾಗಲೇ ಗುರುತಿಸಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ೨ ವರ್ಷದಿಂದ ಇದರ ಭಾದೆಯನ್ನು ಗಮನಿಸುತ್ತದ್ದೇವೆ. ಆದರೆ, ಪ್ರಸ್ತುತ ವರ್ಷ ಈ ಕೀಟದ ಬಾಧೆಯ ತೀವ್ರತೆ ಹೆಚ್ಚಾಗಿ ಕಂಡುಬಂದಿದೆ.

ಈ ಕೀಟವು ಬಹುಭಕ್ಷಕ ಕೀಟವಾಗಿದ್ದು ಬೇವು ಅಲ್ಲದೆ ಗೋಡಂಬಿ, ಬಾರೆ, ದ್ರಾಕ್ಷಿ, ಮಾವು, ಹತ್ತಿ, ಮಹಾಗನಿ, ಕಳೆಯಂತಹ ವಿವಿಧ ಸಸ್ಯಗಳನ್ನು ಭಾದಿಸುತ್ತದೆ. ಹಾಗಾಗಿ ಈ ಕೀಟಕ್ಕೆ ಬಹುಭಕ್ಷಕ ಕೀಟವೆಂದು ಕರೆಯುತ್ತೇವೆ. ಈ ಕೀಟದಲ್ಲಿ ನಾವು ಮೂರು ಹಂತಗಳನ್ನು ಕಾಣಬಹುದು ಅವುಗಳೆಂದರೆ – ಮೊಟ್ಟೆ (Egg), ಅಪ್ಸರೆ ಕೀಟ (Nymph) ಮತ್ತು ಪ್ರೌಢಕೀಟ (Adult). ಪ್ರೌಢಕೀಟ ತೆಳುವಾಗಿದ್ದು ಸುಮಾರು ೩ ರಿಂದ ೬ ಮಿ. ಮೀ. ಉದ್ದವಿರುತ್ತದೆ. ದೇಹವು ಕೆಂಪು ಕಂದು ಮಿಶ್ರಣದಿಂದ ಕೊಡಿದ್ದು ತಲೆಯ ಭಾಗ ಕಪ್ಪಾಗಿರುತ್ತದೆ. ಎದೆಯ ಭಾಗವು ಕೆಂಪಾಗಿದ್ದು ಎದೆಯ ಮೇಲ್ಭಾಗದಲ್ಲಿ ಸೂಜಿ ಆಕಾರದ ರಚನೆಯನ್ನು ಕಾಣಬಹುದು. ಹಾಗೆ ಹೊಟ್ಟೆಯ ಕೆಳ ಭಾಗದಲ್ಲಿ ಬಿಳಿ ಪಟ್ಟೆಗಳಿರುತ್ತವೆ. ಹವಾಮಾನ ವೈಪರಿತ್ಯ ಮತ್ತು ಸೂಕ್ತ ವಾತಾವರಣದ ಕಾರಣದಿಂದ ಈ ಕೀಟದ ಸಂತತಿ ಅತ್ಯಂತ ಹೆಚ್ಚಾಗಿದೆ. ಈ ಕೀಟವು ಸಾಮಾನ್ಯವಾಗಿ ಕೋಮಲ ಚಿಗುರುಗಳ ಹೊರ ಚರ್ಮದ ಅಂಗಾಂಶಗಳಿಗೆ ಸೇರಿಸಿ ಬಿಡಿಬಿಡಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಸುಮಾರು ೫೦ ರಿಂದ ೬೦ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯು ಬಿಳಿಯಾಗಿದ್ದು ಎರಡು ತುದಿಯಲ್ಲಿ ಕೂದಲೆಳೆಯಂತಹ ಬೆಳ್ಳಿ ತಂತುಗಳನ್ನು ನಾವು ಕಾಣಬಹುದು. ಮೊಟ್ಟೆಯಿಂದ ಅಪ್ಸರೆ ಕೀಟವು ಸುಮಾರು ೯ ರಿಂದ ೧೫ ದಿನಗಳ ನಂತರ ಹೊರಬರುತ್ತದೆ. ಹೊರಬಂದಂತಹ ಅಪ್ಸರೆ ಕೀಟವು ತನ್ನ ಜೀವಿತಾವದಿಯಲ್ಲಿ ೪ ಬಾರಿ ಜ್ವರಕ್ಕೆ ಹೋಗಿ ಪ್ರೌಢ ಕೀಟವಾಗಿ ಹೊರಬರುತ್ತದೆ. ಈ ಅಪ್ಸರೆ ಕೀಟದ ಜೀವಿತಾವಧಿ ೧೫ ರಿಂದ ೧೯ ದಿನಗಳಾಗಿರುತ್ತದೆ. ಈ ಕೀಟವು ತನ್ನ ಒಂದು ಸಂತತಿಯನ್ನು ಪೂರ್ಣಗೊಳಿಸಲು ೨೪ ರಿಂದ ೩೦ ದಿನಗಳನ್ನು ತೆಗೆದುಕೊಳ್ಳುತ್ತದೆ.

ಈ ಕೀಟದ ಅಪ್ಸರೆ ಮತ್ತು ಪ್ರೌಢಕೀಟ, ಭಾದಿಸುವ ಹಂತಗಳಾಗಿದ್ದು ಸಾಮಾನ್ಯವಾಗಿ ಇವುಗಳನ್ನು ಮರದ ಎಳೆ ಚಿಗುರುಗಳಲ್ಲಿ ನಾವು ಕಾಣಬಹುದು. ಈ ಹಂತದ ಕೀಟಗಳು ಮರದ ಚಿಗುರುಗಳಿಂದ ರಸವನ್ನು ಹೀರುತ್ತದೆ. ರಸವನ್ನು ಹೀರುವಾಗ ಪಾಲಿಫೀನಾಲ್‌ ಆಕ್ಸಿಡೇಸ್‌ ಲಾಲಾರಸ ಕಿಣ್ವಗಳನ್ನು ಅಂಗಾಂಶಗಳಿಗೆ ಸೇರಿಸುತ್ತದೆ. ಇದರ ಪರಿಣಾಮವಾಗಿ ಎಳೆ ಚಿಗುರುಗಳು ಬಾಡಿ ಸತ್ತಂತಹ ಚಹ್ನೆಗಳನ್ನು ನಾವು ಕಾಣಬಹುದಾಗಿದೆ. ಹೀಗೆ ತುದಿಯಿಂದ ಕೆಳಕ್ಕೆ ಸಾಯುತ್ತಾ ಬರುವುದರಿಂದ ಡೈ ಬ್ಯಾಕ್‌ ಎಂದು ಕರೆಯಲಾಗುತ್ತದೆ. ಇದರ ಭಾದೆ ತೀವ್ರವಾದಾಗ ಮರವೇ ಸುಟ್ಟಂತೆ ಕಾಣುತ್ತದೆ. ಇದಲ್ಲದೆ, ಭಾದೆಗೊಳಗಾದ ಭಾಗದಿಂದ ಅಂಟಂಟಾದ ಪದಾರ್ಥವು ಹೊರಬರುವುದರಿಂದ ಇಲ್ಲಿ ಹಲವು ಶಿಲೀಂದ್ರಗಳು ವಾಸಿಸುತ್ತವೆ. ಈ ಕೀಟವು ಎಲ್ಲಾ ಹಂತದ ಬೇವಿನ ಮರಗಳನ್ನು ಬಾದಿಸುತ್ತದೆ.

ಬೇವಿಗೆ ಬಂದಿರುವ ಈ ಪಿಡುಗನ್ನು ಪ್ರಾಥಮಿಕ ಹಂತದಲ್ಲಿ ನಿರ್ವಹಣೆ ಮಾಡದಿದ್ದರೆ ಮುಂದೆ ಮನುಷ್ಯ ಅತ್ಯಂತ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಈ ಕೀಡೆಯ ಹತೋಟಿಗೆ ಮೊದಲು ಭಾದೆಯಿಂದ ಒಣಗಿದ ಸಣ್ಣ ಕೊಂಬೆಯನ್ನು ಕತ್ತರಿಸಿ ಸುಡುವುದು ಹಾಗೆ ಕತ್ತರಿಸಿದ ಭಾಗಕ್ಕೆ ಬೋರ್ಡಾಕ್ಸ್‌ ದ್ರಾನಣ ಲೇಪನ ಮಾಡುವುದರಿಂದ ಶಿಲೀಂದ್ರದ ಬೆಳವಣಿಗೆಯನ್ನು ತಡೆಯಬಹುದು. ಸದ್ಯ ಈ ಕೀಟಕ್ಕೆ ಯಾವುದೇ ಕೀಟನಾಶಕಗಳ ಶಿಫಾರಸ್ಸು ಮಾಡದಿರುವುದರಿಂದ, ಗೋಡಂಬಿ ಬೆಳೆಯಲ್ಲಿ ಶಿಫಾರಸ್ಸು ಮಾಡಿರುವ ಕೀಟನಾಶಕಗಳನ್ನು ಇದರಲ್ಲೂ ಸಹ ತಾತ್ಕಾಲಿಕವಾಗಿ ಬಳಸಬಹುದಾಗಿದೆ. ಆದರೆ ಬೇವಿನ ಮರಗಳ ವಿಸ್ತಾರ ವಿಶಾಲವಾಗಿರುವುದರಿಂದ ಹೇಚ್ಚಿನ ಕೀಟನಾಶಕ ಬಳಸುವ ಮುನ್ನ ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡು ಮುಂಜಾಗ್ರತ ಕ್ರಮದೊಂದಿಗೆ ಹತೋಟಿ ಕ್ರಮ ಕೈಗೊಳ್ಳಬೇಕು. 

ಮೊದಲನೆಯ ಸಿಂಪರಣೆಯಾಗಿ ಸ್ಪರ್ಶ ಕೀಟನಾಶಕವಾದ (Contact insecticide) ಲಾಮ್ಡಾಸೈಲೋಥ್ರೀನ್‌ ೦.೬ ಮಿ. ಲೀ ಅಥವಾ ಪ್ರೋಫೆನೊಪಾಸ್‌ ೧.೫ ಮಿ. ಲೀ ಮತ್ತು ಅಂತರ್ವ್ಯಾಪಿ ಕೀಟನಾಶಕವಾದ (Systemic insecticide) ಇಮಿಡಾಕ್ಲೋಪ್ರಿಡ್‌ ೦.೬ ಮಿ. ಲೀ ಅಥವಾ ಅಸಿಟಾಮಿಪ್ರಿಡ್‌ ೦.೫ ಮಿ. ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಎರಡನೇ ಸಿಂಪರಣೆಯಾಗಿ ಲಾಮ್ಡಾಸೈಲೋಥ್ರೀನ್‌ ೦.೬ ಮಿ. ಲೀ ಪ್ರತಿ ಲೀಟರ್‌ ನೀರಿಗೆ ಮತ್ತು ಮೂರನೇ ಸಿಂಪರಣೆಯಾಗಿ ಲಾಮ್ಡಾಸೈಲೋಥ್ರೀನ್‌ ೦.೬ ಮಿ. ಲೀ ಅಥವಾ ಪ್ರೋಫೆನೊಪಾಸ್‌ ೧.೫ ಮಿ. ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಮಾಹಿತಿ: ಶ್ರೀಧರ ಎಂ ಆರ್‌, ವಿಜ್ಞಾನಿಗಳು

ಚಿತ್ರ ಕೃಪೆ: ಅಂತರ್ಜಾಲ ತಾಣ