ಬೇವು ಬೆಲ್ಲವ ಮೆಲ್ಲುತ
ಯುಗದೊಂದಿಗೆ ಜಗ ಕಂಡಿತು
ಮನ ಮನವೂ ಅರಳಿತು
ವನ ಸೊಬಗೊಳು ಕೆಂಪೇರಲು
ಪಕ್ಷಿ ಸಂಕುಲ ಹಾಡಿತು
ಪ್ರತಿವರುಷವು ಬೆಳಕಾಯಿತು
ಚಾಂದ್ರಮಾನ ದಿನ ವಿಶೇಷವು
ಯುಗಾದಿಯು ಹೊಸ ಹುರುಪದು
ಜೀವ ಜಗತ್ತಲಿ ಉದಿಸಿತು
ಹೊಸಬಟ್ಟೆಯ ತೊಟ್ಟ ಜನರದು
ಹೊಸ ಪಂಚಾಂಗವನಿಟ್ಟರು
ಬೆಳೆದ ಬೆಳೆಗಳನೆಲ್ಲ ಇರಿಸುತ
ದೇವ ಪೂಜೆಯ ಮಾಡುತ
ವರುಷದಿಂದಿನ ತಪ್ಪನೆಲ್ಲವ
ಮರೆತು ಹೊಸತನ ತುಳಿಯುತ
ಗಂಧ ಚಂದನ ತಳಿರು ತೋರಣ
ಬೇವು-ಬೆಲ್ಲವ ಮೆಲ್ಲುತ
ಚಿಣ್ಣರೆಲ್ಲರು ಕುಣಿದು ಸುತ್ತಲ
ಹಿರಿಯ ಜೀವಕೆ ನಮಿಸುತ
ಜೀವ ಜೀವನ ತನುವ ಮನಸಿಗು
ಯುಗಾದಿ ಬಂದಿತು ಹರಸುತ
***
ನವ ಪರ್ವ
ನವ ಪರ್ವದ ಉದಯವಿಲ್ಲಿ
ಬೇವು ಬೆಲ್ಲವ ಮೆಲ್ಲೋಣವಿಲ್ಲಿ
ಕಷ್ಟ ಸುಖವ ಹಂಚೋಣವಿಲ್ಲಿ
ಮಾವಿನ ಎಲೆ ತೋರಣವಿಲ್ಲಿ
ವಸಂತ ಮಾಸ ಸಂಭ್ರಮವಿಲ್ಲಿ
ಯುಗದ ಆದಿ ಆರಂಭವಿಲ್ಲಿ
***
ರುಬಾಯಿಗಳು
೧--ಯುಗಾದಿ
ಹೊಸ ವರುಷ ನಮಗಾಗಿ ಬಂದಿಹುದು
ನವೀನ ಉಲ್ಲಾಸವನೆಂದು ತಂದಿಹುದು
ಆಚರಿಸೋಣ ಸಂಭ್ರಮದಲಿ ಯುಗಾದಿ
ಮನದೊಳಗೆ ಖುಷಿಯಲೆ ಚಿಮ್ಮಿಹುದು
೨. ವಸಂತ ಋತು
ವಸಂತ ಋತುವಿನ ಆಗಮನ
ಎಲ್ಲೆಲ್ಲೂ ಚಿಗುರ ಹಸಿರುವನ
ಹಬ್ಬದ ಸಡಗರ ಸಂಭ್ರಮವು
ಕೋಗಿಲೆ ಗಾಯನ ಕರ್ಣಾನಂದನ
-ರತ್ನಾ. ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
