ಬೇವು ಬೆಲ್ಲವ ಮೆಲ್ಲುತ...
ಕವನ
ಯುಗದೊಂದಿಗೆ ಜಗ ಕಂಡಿತು
ಮನ ಮನವೂ ಅರಳಿತು/
ವನ ಸೊಬಗೊಳು ಕೆಂಪೇರಲು
ಪಕ್ಷಿ ಸಂಕುಲ ಹಾಡಿತು//
ಪ್ರತಿವರುಷವು ಬೆಳಕಾಯಿತು
ಸೌರಮಾನವು ಉದಿಸಿತು/
ಯುಗಾದಿಯು ಹೊಸ ಹುರುಪಲಿ
ಜಗದ ತುಂಬಾ ನಡೆಯಿತು//
ಹೊಸಬಟ್ಟೆಯ ತೊಟ್ಟ ಜನರದು
ಹೊಸ ಪಂಚಾಂಗವನಿಟ್ಟರು/
ಬೆಳೆದ ಬೆಳೆಗಳನೆಲ್ಲ ಇರಿಸುತ
ದೇವ ಪೂಜೆಯ ಮಾಡುತ//
ವರುಷದಿಂದಿನ ತಪ್ಪನೆಲ್ಲವ
ಮರೆತು ಹೊಸತನ ತುಳಿಯುತ/
ಗಂಧ ಚಂದನ ತಳಿರು ತೋರಣ
ಬೇವು-ಬೆಲ್ಲವ ಮೆಲ್ಲುತ/
ಸಿಹಿ-ಕಹಿಯನು ಉಣ್ಣುತುಣ್ಣುತ
ಸಮಾನ ದೃಷ್ಟಿಲಿ ನೋಡುತ/
ಕಾಲಮಾನದ ಆದಿ ದಿನವಿದು
ಸೃಷ್ಟಿಯ ಆರಂಭವೆನ್ನುತ//
ಚೈತ್ರಮಾಸದ ಶುಕ್ಲಪಕ್ಷದ
ಪಾಡ್ಯ ದಿನ ವಿಶೇಷವೆನ್ನುತ/
ಹಿಂದೂ ಬಾಂಧವರ ಸಂಭ್ರಮ
ಕುಲಕೋಟಿಗೆ ಸಡಗರವೆನ್ನುತ//
ಕಹಿಬೇವಿನ ಎಲೆಯ ಸ್ನಾನದಿ
ತನುವ ಕಾಂತಿಯು ಹೊಳೆಯುತ/
ಬಡವ-ಬಲ್ಲಿದ ಭೇದವಿಲ್ಲದ
ಬುವಿಯೊಳು ಸ್ವರ್ಗವೆನ್ನುತ//
ಚಿಣ್ಣರೆಲ್ಲರು ಕುಣಿದು ಸುತ್ತಲ
ಹಿರಿಯ ಜೀವಕೆ ನಮಿಸುತ/
ಜೀವ ಜೀವನ ತನುವ ಮನಸಿಗು
ಯುಗಾದಿ ಬಂದಿತು ಹರಸುತ//
-ರತ್ನಾ ಕೆ.ಭಟ್,ತಲಂಜೇರಿ, ಪುತ್ತೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ
ಚಿತ್ರ್