ಬೇಸರವಿಲ್ಲದ ನುಡಿಗಳು

ಬೇಸರವಿಲ್ಲದ ನುಡಿಗಳು

ಕವನ

ಹಲವರ ಬರಹ ಹಲವು ರೀತಿ

ನನ್ನ ಬರಹ ನೇರ ದಿಟ್ಟ ನಿರಂತರ

ಮೃದು ಮನಸ್ಸಿನವರಿಗೆ ನೋವಾಗಲು ಬಹುದು

ಕಹಿ ಮನದವರು ದ್ವೇಷ ಮಾಡಲೂ ಬಹುದು

ಇದು ನನಗಾಗಿಯೇ ಎನ್ನುವವರು ನನ್ನ ವಿರುದ್ಧ

ಟೀಕೆ ಮಾಡಲೂ ಬಹುದು ಕಾಲ ಕೆಳಗಿನ ಮಾತ

ಹೇಳಲೂ ಬಹುದು ಪ್ರಸ್ತುತ ವಾಸ್ತವ ಎನ್ನುವವರು

ಬೆನ್ನು ತಟ್ಟಿ ಪ್ರೋತ್ಸಾಹಿಸಲೂ ಬಹುದು

ಹಾಗೆಂದು ನಾನು ನನ್ನ ಬರಹದ ದಿಕ್ಕನ್ನು ಬದಲಿಸಲಾರೆ

ಮರೆಯಲಾರೆ ನನಗಾದ ಬರಹಗಳ ಅವಮಾನಗಳ ಸರಮಾಲೆಗಳ ?

ಬರಹಗಳಲ್ಲಿ ಬದಲಾವಣೆ ಕಾಣುತ್ತಿದ್ದರೆ ಅದು ನನ್ನಿಂದಲೇ ಆಗಲಿ

ಸಾಹಿತ್ಯದ ಹೊಸ ಮನ್ವಂತರ ಹೊಂಗನುಸುಗಳ ನನಸು ! 

 

ಹಲವರು ಕೇಳಿದರು ಒಪ್ಪೇಶ್ವರಾ ಎಂದು ನಮ್ಮನ್ನೇ ಉದ್ದೇಶಿಸಿ

ಹೇಳುವ ರೀತಿಯಲ್ಲಿ ಬರೆಯುತ್ತೀರಿಯೆಂದು ? 

ಕಾರಣ ಹೇಳದೆ ಬರೆದದ್ದು  ಅದು ನನಗೇ ಹೇಳುತ್ತಿರುವುದಲ್ಲವೆಂಬುದ

ನೀವು ಅರಿಯುವಿರೆಂಬ ನಂಬಿಕೆಯಿಂದ ! 

ಛಲವಾದಿಯೆ ,ಅದು ನೀವಲ್ಲ ! ನನ್ನ ಕಾವ್ಯದ ಕೂಸು

ನಿಮ್ಮನ್ನು ಹೇಳುವಷ್ಟು ನಾ ಬುದ್ಧಿವಂತನಲ್ಲ 

ನನಗೆ ನಾನೇ ಹೇಳಿಕೊಳ್ಳುವ ಒಬ್ಬ ಬರಹದ ವ್ಯಸನಿ ನಾನು

ನಾನು ಹೆಚ್ಚು ಕಲಿತವನೂ ಅಲ್ಲ , ತಿಳಿದವನು ಮೊದಲೇ ಅಲ್ಲ 

ಏನೋ ಹೋದ ಜನುಮದ ಫಲವೋ ಅಕ್ಷರದಾತೆ

ನನ್ನ ಕೈ ಹಿಡಿದು ಬರೆಸುತಿಹಳು . ಒಂದು ಲೆಕ್ಕದಲ್ಲಿ

ಕಲಿಯುಗದ ಏಕಲವ್ಯ ನಾನು , ಕಾವ್ಯದ ಸತ್ವ ತಿಳಿಸಿದ

ಯಾರೇ ಆಗಲಿ ಅವರೆನ್ನ ಗುರುಗಳು ಅವರಿಗೆ ಪ್ರಥಮ ನಮನ 

 

ನನ್ನ ಬರಹವೇ ನನ್ನ ಬದುಕು ನಾನದನ್ನೇ ಬರೆಯುವೆ

ನನ್ನಾತ್ಮ ಆರುವ ವರೆಗೂ ನಾ ಹಾಗೇ ಬಾಳಿ ಬದುಕುವೆ

ನನ್ನ ಬರಹಗಳು ನಿಮಗೆ ಹಿಡಿಸಿಲ್ಲವೆಂದು ನನ್ನಬರಹಗಳ 

ಬದಲಾಯಿಸಲಾರೆ ಕೈ ಮುಗಿದು ಕೇಳುವೆ ! ಬರಹಗಳು

ಹಿಡಿಸಿಲ್ಲವೆಂದರೆ ನಿಮ್ಮೊಳಗಿಂದ ನನ್ನ, ನನ್ನ ಬರಹಗಳನ್ನ

ಹರಿದೊಗೆಯಿರಿ ಹೊರಹಾಕಿ , ಯಾಕೆಂದು ಕೇಳಲಾರೆ

ನನ್ನ ತತ್ವವ ಬಿಟ್ಟು ಹೊರ ಬಾರದವನು ನಾನು

ಯಾಕೆಂದರೆ ನಾನು ಮೌನಿ ! ನೇರ ದಿಟ್ಟ ನಿರಂತರ !!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್