ಬೇಸಾಯದ ಕಲೆ - ಸಮೃದ್ಧ ಕೃಷಿ ಪ್ರಯೋಗಗಳು

ಬೇಸಾಯದ ಕಲೆ - ಸಮೃದ್ಧ ಕೃಷಿ ಪ್ರಯೋಗಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸುರೇಶ ದೇಸಾಯಿ, ನಿರೂಪಣೆ: ವಿ.ಗಾಯತ್ರಿ.
ಪ್ರಕಾಶಕರು
ICŖA, No̤ ೨೨, ೫ನೇ ಕ್ರಾಸ್‌, ಮೈಖೆಲ್‌ ಪಾಳ್ಯ, ೨ನೇ ಹಂತ. ಹೊಸತಿಪ್ಪಸಂದ್ರ ಅಂಚೆ. ಬೆಂಗಳೂರು-೫೬೦೦೭೫
ಪುಸ್ತಕದ ಬೆಲೆ
ಬೆಲೆ: ೧೨೦, ಪುಟಗಳು: ೧೧೨, ಮುದ್ರಣ: ೨೦೨೨

ಸುರೇಶ ದೇಸಾಯಿ ಅವರ ʼ ಬೇಸಾಯದ ಕಲೆ- ಸಮೃದ್ಧ ಕೃಷಿ ಪ್ರಯೋಗಗಳುʼ ಸಾಧಕನೊಬ್ಬ, ಪ್ರಯೋಗ- ಅನುಭವದ ಮೂಲಕ ಕಂಡುಕೊಂಡ ಕೃಷಿ ಆವಿಷ್ಕಾರಗಳ ದಾಖಲೆ. ದಶಕಗಳ ಆಳ ಆನುಭವ ಇಲ್ಲಿ ಫಲರೂಪಿಯಾಗಿ ಅನಾವರಣಗೊಂಡಿದೆ. ಕರ್ನಾಟಕದಲ್ಲಿ ನಾರಾಯಣ ರೆಡ್ಡಿ, ಭರಮಗೌಡರಷ್ಟೇ ಧೀಮಂತ ಸ್ಥಾನ ಸುರೇಶ ದೇಸಾಯಿ (ಹಾಗೂ ಸೋಮನಾಥ ರೆಡ್ಡಿ ಪೂರ್ಮಾ) ಅವರಿಗಿದೆ. 

ಕರ್ನಾಟಕದ ಸೀಸನಲ್‌ ಬೆಳೆ ಬೆಳೆಯುವ ಪ್ರದೇಶಗಳ ಬೆಳೆಗಳಲ್ಲಿ ಸುಸ್ಥಿರ ಕೃಷಿ/ ಕೃಷಿ ಪರಿಸರ ವಿಧಾನಗಳ ಬಗ್ಗೆ  ರೈತರಿಗೆ ಒಗ್ಗುವ ರೀತಿಯಲ್ಲಿ ಹೇಳುವ ವಿವರಗಳೇ ಇಲ್ಲ. ಉದಾ: ನೀರಿನಬಳಕೆ ಬಗ್ಗೆ, ಹಸಿರುಬೆಳೆಸುವ ಬಗ್ಗೆ, ಮಲ್ಚಿಂಗ್/‌ ಮುಚ್ಚಿಗೆ ಬಗ್ಗೆ,  ಅಂತರದ ಬಗ್ಗೆ ಮಣ್ಣಿನ ಫಲವತ್ತತೆ ಹೆಚ್ಚಿಸುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ರೈತಸಮೂಹದಲ್ಲಿ ಹರಡಿಲ್ಲ. ಬಹುತೇಕ ಯಶೋಗಾಥೆಗಳು ಸಾಕಷ್ಟು ನೀರಿನ ಮೂಲವಿದ್ದು  ತೋಟಗಾರಿಕೆ/ಹಣ್ಣಿನ/ ಮರ ಕೃಷಿ ಮಾಡುವ ಉದಾಹರಣೆಗಳೇ.  ಬಂಡವಾಳವಿಲ್ಲದ ರೈತರಲ್ಲಿ ಬಾಹ್ಯ ಬಂಡವಾಳ ಹೂಡಿಕೆ ಮೂಲಕ ಬೇಲಿ ಪೊರೆವ ಬೆಳೆ ಬೆಳೆದ ಉದಾಹರಣೆಗಳು ಮೆಚ್ಚುಗೆ ತರುವಷ್ಟೇ ಅಸಹಾಯಕತೆ/ ಅನಾಥ ಪ್ರಜ್ಞೆ ಹುಟ್ಟಿಸಿ, “ಅವ್ರ ಕೈಲಿ ಆಗತ್ತೆ ಸಾರ್‌, ನಮ್‌ ಕೈಲಿ ಆಯ್ತದಾ?” ಎಂಬ ಸಿನಿಕತನದ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತದೆ.

ಕೇವಲ ಐವತ್ತು ವರ್ಷಗಳ ಚರಿತ್ರೆಯ ರಾಸಾಯನಿಕ ಕೃಷಿಯ ಮಾರ್ಗದರ್ಶೀ ಸೂತ್ರಗಳನ್ನು ರೂಢಿಗತ ವಿಧಾನದಿಂದ ಅನುಸರಿಸಿ ಮತ್ತೆ  ಮತ್ತೆ ಬೇಸಾಯ ಮಾಡುತ್ತಾ ಒದ್ದಾಡುವುದಷ್ಟೇ ನಮ್ಮ ರೈತರ ಚರಿತ್ರೆಯಾಗಿದೆ. ಯಾವ ವಿಧಾನವೂ  ತಾನು ಸರ್ವ ಸಮಸ್ಯಾ ಪರಿಹಾರ ಎಂದು ಘೋಷಿಸಿಕೊಂಡರೆ ಅದಕ್ಕೊಂದು ಮತದ ಅಂಧಾಭಿಮಾನ ಪ್ರಾಪ್ತವಾಗಿ ಅನುಯಾಯಿಗಳ ಸಂಖ್ಯೆ ಬೆಳೆಸಿ ವಿಚಿತ್ರವಾದ ಆತ್ಮರತಿ ಮತ್ತು ಅಹಂಕಾರದಲ್ಲಿ ಸೊರಗುತ್ತದೆ. ಒಂದೊಂದು ಆಚರಣೆಯೂ ನಿರ್ದಿಷ್ಟ ಮುದ್ರೆ ಹೊತ್ತು ಪಂಥೀಯರನ್ನು ಇನ್ನಷ್ಟು ಪ್ರತ್ಯೇಕಗೊಳಿಸುತ್ತದೆ.  ಕೃಷಿಯಲ್ಲಿ ಈ ರೀತಿಯ ಪಂಥೀಯ ಧೋರಣೆ ಆತ್ಮಹತ್ಯಾಕಾರಿ. ಅದಕ್ಕೇ ಕಾಲಕಾಲಕ್ಕೆ ಉದಾರವಾದಿ ನಿಲುವಿನ ಬಹುತೇಕ  ಚಿಂತಕರು ವಿವಿಧ ಮೂಲಗಳ ಉತ್ತಮ ವಿಧಾನಗಳನ್ನು ರೈತರಿಗೆ ಒಪ್ಪಿಸುವ  ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಲೇ ಎಲ್ಲವನ್ನೂ ಒಳಗೊಳ್ಳುವ  “ ಸುಸ್ಥಿರ ಕೃಷಿ, ಪರಿಸರ ಕೃಷಿ ವಿಧಾನಗಳು(Agro -ecological practices)  ಎಂಬ ಹೆಸರುಗಳು ಚಾಲ್ತಿಗೆ ಬಂದಿವೆ.

ಮೂಲತಃ ಕೃಷಿಯೆಂಬುದು ಪ್ರಕೃತಿ ಜೊತೆ ಅನುಸಂಧಾನ ಮಾತ್ರವಲ್ಲ; ಅದೊಂದು ನಿರಂತರ ಪ್ರಯೋಗದ ಪ್ರಯೋಗಶಾಲೆ. ಕೃಷಿ ಪ್ರಕೃತಿಗೆ ಸಹಜವಲ್ಲ. ಅದು ಮನುಷ್ಯನ  ಪ್ರಯೋಗ. ಈ ಪ್ರಯೋಗದಲ್ಲಿ ಪ್ರಕೃತಿಯ ಸ್ವಭಾವ ಲಕ್ಷಣಗಳನ್ನು ಅನುಸರಿಸಿ ಹೊಂದಿಕೊಳ್ಳುತ್ತಾ ತನ್ನ ಬೆಳೆ ಬೇಸಾಯಗಳನ್ನು ಮಾಡುವ ಕೌಶಲ್ಯ ರೈತನದ್ದು. ಈ ಕೌಶಲ್ಯಕ್ಕೆ ಶತಮಾನಗಳ ಇತಿಹಾಸವಿದೆ. ಚೈನಾದಲ್ಲಿ ೪ ಸಾವಿರ ವರ್ಷಗಳ ಕಾಲ ಮಣ್ಣಿನ ಫಲವತ್ತತೆ ಉಳಸಿಕೊಂಡು ಬಂದಿರುವ ಮಾಂತ್ರಿಕ ಕ್ರಮಗಳ ಬಗ್ಗೆ “೪೦ ಶತಮಾನಗಳ ರೈತರು” ಎಂಬ ಕೃತಿ ಪ್ರಕಟವಾಗಿದೆ. 

ರಾಸಾಯನಿಕ ಕೃಷಿ ಪ್ರವೇಶವಾಗುವ ಮೊದಲಿನ  ಕೃತಿ ಅದು. ನಮ್ಮಲ್ಲಿ ಇಂಥಾ ಸುಸ್ಥಿರ ಕೃಷಿಯ ಜ್ಞಾನ ಇತ್ತು ಎಂಬ ದಾಖಲೆಗಳಿವೆ. ಹಾಗೇ ವಸಾಹತುಶಾಹಿ ಪ್ರವೇಶದ ಬಳಿಕ ಅದು ನಶಿಸಿದ ದಾಖಲೆಗಳೂ ಇವೆ. ಸ್ವಾತಂತ್ರ್ಯ ಸಿಕ್ಕಾಗ ನಮ್ಮ ದೇಶದ ಆದಾಯದ ಶೇ.೭ರಷ್ಟು ಆಹಾರದ ಆಮದಿಗೆ ಸಂದಾಯವಾಗುತ್ತಿತ್ತು. ಇದರರ್ಥವೆಂದರೆ ನಮ್ಮ ಮಣ್ಣು-ಬೆಳೆಯ ಸಾಂಗತ್ಯ ನಶಿಸಿ  ಉತ್ಪಾದಕತೆ ಇಳಿದಿತ್ತು ಅಂತ ನಾಲ್ವಡಿಯವರೂ ಶತಮಾನದ ಹಿಂದೆ ಈ ದುಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹಸಿರು ಕ್ರಾಂತಿಯ ಉಬ್ಬರ-ಅಬ್ಬರಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.

ಆದರೆ ಅದು ನಶಿಸಿದ ಸ್ಥಳೀಯ  ಕೃಷಿ ಜ್ಞಾನ-ವಿಜ್ಞಾನಗಳನ್ನು ಪುನರುಜ್ಜೀವನಗೊಳಿಸುವ ಬದಲು ದೀರ್ಘಕಾಲಿಕವಾಗಿ ಇನ್ನಷ್ಟು ದುರ್ಭರಗೊಳಿಸುವ ರಾಸಾಯನಿಕ ಒಳಸುರಿ ಮತ್ತು ಅವೈಜ್ಞಾನಿಕ ಬೇಸಾಯ ಕ್ರಮಗಳಿನ್ನು ಪೋಷಿಸಿತು. ಬಾಹ್ಯ ಮೂಲದ ಬೀಜ, ಗೊಬ್ಬರ, ಆಳ ಉಳುಮೆ, ಏಕಬೆಳೆ – ಹೀಗೆ ಈ ಕೃಷಿ ಶಿಫಾರಸು ತಂದ ಅವಾಂತರಗಳಿಗೆ  ದೇಶ ತೆರುತ್ತಿರುವ ಬೆಲೆ ಬಗ್ಗೆ ಸಾಕಷ್ಟು ಪುರಾವೆಗಳು ಇವೆ.

ನಾಲ್ಕು ದಶಕಗಳ ಹಿಂದೆ  ಈ ಅವಾಂತರಕಾರಿ ಕೃಷಿ ವಿಧಾನಕ್ಕೆ ಪ್ರತಿಯಾಗಿ ಸಾವಯವ ಇತ್ಯಾದಿ ಹೆಸರಿನ ಪರ್ಯಾಯ ವಿಧಾನಗಳನ್ನು ಅನೇಕರು ಜನಪ್ರಿಯಗೊಳಿಸಿದರು.  ಮಸನೋಬು ಫುಕೋಕಾ ಆತ್ಯಂತಿಕ ನಿಲುವಿನಲ್ಲಿ ಕೃಷಿ ಮಾಡಿ ಸಾಧಿಸಿದರೆ, ಇನ್ನೂ ಹಲವು ಚಿಂತನಧಾರೆಗಳು ಪ್ರಯೋಗಶೀಲರಿಗೆ ಮಾರ್ಗದರ್ಶನ ಮಾಡಿದವು. ಪರ್ಮಾಲಕ್ಚರ್‌ ಮುಂತಾದ ವಿಧಾನಗಳು ಜಮೀನಿನ ವಿನ್ಯಾಸದ ಮೂಲಕ ವೈವಿಧ್ಯತೆ, ಸಮೃದ್ಧಿ ಮತ್ತು ಫಲವತ್ತತೆಯ ಬಗ್ಗೆ ಮಾತಾಡಿದರೆ ಧಾಬೋಲ್ಕರ್‌ ಅಂಥವರು ಬೆಳಕಿನ ಬೇಸಾಯದ ಬಗ್ಗೆ ವೈಜ್ಞಾನಿಕ ನಿಖರತೆಯಲ್ಲಿ ಕೃಷಿ ಮಾಡಿ,  ಮಾದರಿ ಮುಂದಿಟ್ಟರು.

 ಕರ್ನಾಟಕದ ಪ್ರಯೋಗ ಶೀಲ ಹಿರಿಯರು ಈ ಎಲ್ಲಾ ವಿಧಾನಗಳನ್ನೂ ಹೆಣೆಯುತ್ತಾ ತೀರಾ ಅತಿಗೆಳೆಯದ ಮಾದರಿ ಮುಂದಿಟ್ಟದ್ದು ಗಮನಾರ್ಹ. ನಾರಾಯಣ ರೆಡ್ಡಿ, ಭರಮಗೌಡ್ರ, ಪುರುಷೋತ್ತಮರಾಯರಂಥಾ ಹಿರಿಯರು ಈ ವಿವೇಚನೆ ಮತ್ತು ಉದಾರವಾದಿ ಒಳಗೊಳ್ಳುವಿಕೆಯನ್ನು ರೈತರಿಗೆ ಸೂಚಿಸಿದವರು.

ಸುರೇಶ ದೇಸಾಯಿ ಅಂಥಾ ಪಥಿಕರಲ್ಲೊಬ್ಬರು. ರಾಸಾಯನಿಕ ರಹಿತ ಕೃಷಿ  ಮಾಡಬೇಕು ಎಂಬ ನಿಲುವೇ ಒಂದು ತಾತ್ವಿಕ ನಿಲುವು. ಈ ನಿಲುವು ತಳೆದಾಗ ಬಹುತೇಕ ಫಲಿತಾಂಶಗಳು ನಿರಂತರಪ್ರಯೋಗದ ಮೂಲಕವೇ ಹುಟ್ಟಬೇಕು.  ಈ ಪ್ರಯೋಗದ ಫಲಿತಗಳು ನಿರ್ದಿಷ್ಟ  ಬೇಸಾಯ ವಿಧಾನಗಳ ಮೂಲಕವೇ ಒಂದು ತಾತ್ವಿಕತೆಯನ್ನು ಧಾರಣೆ ಮಾಡಿಕೊಳ್ಳುತ್ತವೆ. ಸೋದಾಹರಣ ಪೂರ್ವಕ ವಿಧಾನಗಳು ಪಂಥೀಯ ಸ್ವಾಮ್ಯಕ್ಕೆಡೆ ಮಾಡಿಕೊಡುವುದಿಲ್ಲ.

ಸುರೇಶ ದೇಸಾಯಿಯವರ ಅನುಭವ ಕಥನ ಇಂಥಾ ಮಾದರಿಗಳನ್ನು ರೈತ ಸ್ನೇಹಿ ಭಾಷೆಯಲ್ಲಿ ಸಾದರಪಡಿಸುತ್ತವೆ. ಅವರು ಸಾದರಪಡಿಸುವ ಮುಖ್ಯ ವಿಧಾನಗಳನ್ನು ಹೀಗೆ ಸಾರಂಶೀಕರಿಸಬಹುದು.

೧. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಲವು ಧಾನ್ಯಗಳನ್ನು ಎರಚಿ ಮಣ್ಣಿಗೆ ಸೇರಿಸುವ ವಿಧಾನ. ನವಧಾನ್ಯ, ಆರೋಗ್ರೀನ್ – ಹೀಗೆ.

೨. ಸೂರ್ಯನ ಬೆಳಕಿನ ಗರಿಷ್ಠ ಬಳಕೆ ಗೆ ಅಂತರ

೩. ಈ ಬಳಕೆಗೆ ಸಸ್ಯವನ್ನು   ಪ್ರಚೋದಿಸುವ  ತಿದ್ದುಪಡಿ

ರೈತರ ನಿತ್ಯದ ಆತಂಕದ ಸಂಗತಿಯೆಂದರೆ ಯಾವ ಪ್ರಯೋಗ ಮಾಡಹೇಳಿದರೂ ಇಳುವರಿ ಕಡಿಮೆಯಾದರೆ ಎಂಬ ಭಯ. ಈ ಪ್ರಶ್ನೆಗೆ ತಕ್ಷಣವೇ ಪರಿಹಾರ ನೀಡುವುದು ಮುಖ್ಯ. ಸಾವಯವಕ್ಕೆ ಬದಲಾಗಿ ಎಂದಾಗ ಮೂರ್ನಾಲ್ಕು ವರ್ಷ ಬದಲಾವಣೆಯ ಘಟ್ಟ ಎಂದು   ಪ್ರಚಾರವಾಗಿ ರೈತರು ಹಿಂಜರಿಕೆ ಪಡುವುದು ಎಲ್ಲೆಡೆ ನೋಡಿದ್ದೇವೆ.

ಸುರೇಶ ದೇಸಾಯಿಯವರ ಈ ಮೂರೂ ಅಂಶಗಳು ರೈತನಿಗೆ ನಿರಾಳ ತರುವಂಥಾ ಸೂತ್ರಗಳು.

ಮೊದಲನೆಯದು ಮಣ್ಣಿಗೆ ಬೇಕಾದ ಬಯೋ ಮಾಸ್‌ ನ್ನು ಪೂರೈಸಿ ಪೋಷಕಾಂಶ ಮತ್ತು ಸಾವಯವ ಇಂಗಾಲವನ್ನು ವೃದ್ಧಿಸುವುದಲ್ಲದೇ ತೇವಾಂಶವನ್ನೂ ಉಳಿಸುತ್ತದೆ.

ಎರಡನೆಯದು  ಗಿಡದಿಂದ ಗಿಡಕ್ಕೆ ಅಂತರವಿಡುವ ಮೂಲಕ ಗಾಳಿ ಸಂಚಾರಕ್ಕೂ ಬೆಳಕಿನ ಬಳಕೆಗೂ ಅನುಕೂಲವಾಗಿ ಸಸ್ಯದ ಬೆಳವಣಿಗೆ ಚುರುಕಾಗುತ್ತದೆ. ಬೀಜದ ಪ್ರಮಾಣದಲ್ಲಿ ಇಳಿಕೆ ರೈತನಿಗೆ ಅಯಾಚಿತ ಉಳಿಕೆ.

ಮೂರನೆಯದು ಪ್ರೂನಿಂಗ್.‌ ಸಸ್ಯದ ಮೊದಲ ಹಂತದ ಪ್ರವೃತ್ತಿಯೆಂದರೆ ಕಾಂಡ ಬೆಳೆದು ಗರಿಷ್ಠ ಎತ್ತರಕ್ಕೆ ಬೆಳೆಯುವ ಹವಣಿಕೆ. ನಿರ್ಧರಿತ ಎತ್ತರ ತಲುಪಿದ ಮೇಲೆ ( ಇದು  ಪೋಷಕಾಂಶಗಳ ಲಭ್ಯತೆಯ ಪ್ರಚೋದನೆಯ ಮೇಲೆ ನಿಂತಿದೆ) ಅದು ಟೊಂಗೆಗಳನ್ನು ಅಡ್ಡಡ್ಡ  ಮೂಡಿಸುತ್ತದೆ.  ಈ ಎತ್ತರಕ್ಕೆ ಹೋಗುವ ಚಿಗುರು ಚಿವುಟಿದರೆ, ಅಷ್ಟೂ ಪೋಷಕಾಂಶ ಅಕ್ಕ ಪಕ್ಕ ಟೊಂಗೆ ಚಿಗುರಿಸಲು ರವಾನೆಯಾಗುತ್ತದೆ. ಕಾಫಿ, ಕೋಕೋಗಳ ಕೃಷಿಯಲ್ಲಿ ಇದು ಮೂಲಭೂತ ಕೆಲಸ. ಬೆಳಕು ಪಡೆಯಲು ಪ್ರೂನಿಂಗ್‌ ಕೂಡಾ ಕಡ್ಡಾಯ. ಬಯಲು ಸೀಮೆಯ ಧಾನ್ಯಗಳಲ್ಲಿ ಇದನ್ನು ಖಚಿತವಾಗಿ ಮಾಡಿ ರೈತರಿಗೆ ತೋರಿಸಿಕೊಟ್ಟಿರುವುದು ಸುರೇಶ ದೇಸಾಯಿಯವರ ಸಾಧನೆ.

ಇಲ್ಲೂ ದೇಸಾಯಿಯವರು  ಇನ್ನೊಂದು ಸರಳ ತಾಂತ್ರಿಕ ಆವಿಷ್ಕಾರ ಮಾಡಿ ತೋರಿಸಿದ್ದಾರೆ. ಬೀಜ ಬಿತ್ತುವ ಬದಲು ಸಸಿ ಮಡಿ ಮಾಡಿ  ಆಮೆಲೆ ನಾಟಿ ಮಾಡುವುದು. ಈಗ ತರಕಾರಿ ಬೆಳೆಗಳಲ್ಲಿ ಟ್ರೇಯಲ್ಲಿ ತಂದು ನೆಡುವ ರೈತರು ಅದೇ ಧಾನ್ಯಗಳ ವಿಚಾರದಲ್ಲಿ ಮಾತ್ರಾ ಬೀಜ ಬಿತ್ತನೆ ಮಾಡುತ್ತಾ ಕೂತಿದ್ದಾರೆ. ಈ ಮಡಿಯಲ್ಲಿ ಬೆಳೆದ  ಎಳೆ ಗಿಡಗಳನ್ನು ನಾಟಿ ಮಾಡುವಾಗ ಆರೋಗ್ಯವಂತ ಸಸ್ಯಗಳನ್ನಷ್ಟೇ ಆಯ್ಕೆ ಮಾಡಬಹುದಷ್ಟೇ. ಒಂದು ತಿಂಗಳು ಈ ಸಸಿ ಮಡಿಯಲ್ಲಿ ಗಿಡವಿದ್ದಾಗ ಹೊಲದಲ್ಲಿ ಗೊಬ್ಬರಕ್ಕೆಂದು ಚೆಲ್ಲಿದ ಸಸ್ಯಗಳನ್ನು ಮಣ್ಣಿಗೆ ಸೇರಿಸಿ ಅವು ಗೊಬ್ಬರವಾಗುವ ಪ್ರಕ್ರಿಯೆಯಲ್ಲಿರುತ್ತವೆ.

ಇದು  ಮಣ್ಣನ್ನು ನಿರ್ವಹಿಸುವ ಅಪೂರ್ವ ಜಾಣತನ. ಆಹಾರ ಧಾನ್ಯ ( ಏಕದಳ) ಗಳಲ್ಲೂ ಇದೇ ರೀತಿ ಮಡಿ ಸಸಿ ತಯಾರು ಮಾಡುವುದಷ್ಟೇ ಅಲ್ಲ ಅದರ ಸುಳಿತೆಗೆದು ಹೆಚ್ಚಿನ ತೆಂಡೆ ಒಡೆಯುವಂತೆ ಪ್ರಚೋದಿಸುವ ತಂತ್ರ  ಸುದೀರ್ಘ ಪ್ರಯೋಗ, observation ಮೂಲಕವಷ್ಟೇ ಬರಲು ಸಾದ್ಯ.

ಈ ಮೂರು ಮುಖ್ಯ ತಂತ್ರಗಳ ಮೂಲಕ  ಪೋಷಕಾಂಶ ಬಳಕೆ, ಸೂರ್ಯನ ಬೆಳಕಿನ ಬಳಕೆ, ಮಣ್ಣಿನ ಆರೋಗ್ಯ, ವೆಚ್ಚದ ಉಳಿತಾಯ- ಹೀಗೆ  ಬೇಸಾಯದ ಎಲ್ಲಾ ಅಂಶಗಳ ಬಗ್ಗೆ  ತಾತ್ವಿಕವಾಗಿಯೂ ಪ್ರಾಕ್ಟಿಕಲ್‌ ಆಗಿಯೂ ಹೇಳಬಹುದು. ಅನುಭವ ಮುಖೇನ ಕಾಣುವ ಪ್ರಯೋಗ ಹೆಚ್ಚು ಅಂತರ್ಗತವಾಗುತ್ತದೆ. ವಿಪಶ್ಶನದಂಥಾ ಬೌದ್ಧಿಯ ಧ್ಯಾನವೂ ಅನುಭವದ ಮೂಲಕ ಅರಿಯುವ ಬಗ್ಗೆ ಒತ್ತು ನೀಡುತ್ತದೆ.

ಸುದೀರ್ಘ ಸ್ಥಿರತೆಗೆ ಸದ್ಯದ ಅನುಕೂಲ ಬಿಟ್ಟು ಕೊಡುವುದಕ್ಕೆ ರೈತ ತಯಾರಿರುವುದಿಲ್ಲ. ಯಾಕೆಂದರೆ ಅಷ್ಟು ತಾಳಿಕೊಳ್ಳುವಷ್ಟು ಬಂಡವಾಳದ  ಇಂಬು ಅವನಿಗಿರುವುದಿಲ್ಲ. ಆದ್ದರಿಂದಲೇ  ಸುರೇಶ ದೇಸಾಯಿ ಅವರ ಈ ವಿಧಾನಗಳು ಏಕಕಾಲಕ್ಕೆ  ವರ್ತಮಾನದ ಬಗ್ಗೆ ಭರವಸೆ ನೀಡುತ್ತಾ ದೂರಗಾಮಿ ಸ್ಥಿರತೆಯನ್ನು  ಕಾಪಾಡುವುದನ್ನು ರೈತರಿಗೆ ಹೇಳಿಕೊಡುತ್ತದೆ. ಈ ಕೃತಿಯಲ್ಲಿ ಸುರೇಶ ದೇಸಾಯಿ ಅವರ ಪ್ರಯೋಗ ಸಿದ್ಧ ವಿಧಾನಗಳನ್ನು ಅಳವಡಿಸಿ ಯಶಸ್ಸು ಕಂಡ ರೈತರ ಅನುಭವಗಳ ದಾಖಲೆಯೂ ಇದೆ.  ಈ ಅನುಭವ ಕಥನವನ್ನು ವಿ.ಗಾಯತ್ರಿ ಅವರು ನಿರೂಪಿಸಿದ್ದಾರೆ.

-ಕೆ. ಪಿ. ಸುರೇಶ