ಬೇಸಿಗೆಯಲ್ಲಿ ಕಬ್ಬಿನ ಹಾಲು ಹಿತಕರ

ಬೇಸಿಗೆಯಲ್ಲಿ ಕಬ್ಬಿನ ಹಾಲು ಹಿತಕರ

ಹಿಂದಿನ ವರ್ಷಗಳಲ್ಲಿ ಕಾಣದ ಬಿಸಿಲಿನ ಬೇಗೆ ಈ ವರ್ಷ ಕಾಡುತ್ತಿದೆ. ಇದಕ್ಕೆ ಕಾರಣ ಬಹುಪಾಲು ನಾವೇ. ನಗರೀಕರಣ ಎನ್ನುವ ಸುಂದರ ಹೆಸರು ನೀಡಿ ನಾವು ಅರಣ್ಯವನ್ನು ನಾಶ ಮಾಡುತ್ತಾ ಬಂದಿದ್ದೇವೆ. ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವ ನೆಪದಲ್ಲಿ ಈಗ ಒಂದೂ ಮರ ಕಾಣಿಸದಂತೆ ಮಾಡಿಹಾಕಿದ್ದೇವೆ. ಜೋರು ಬಿಸಿಲು ಎಂದು ಮರದ ನೆರಳಲ್ಲಿ ನಿಲ್ಲುವ ಎಂದು ಯೋಚನೆ ಮಾಡಲಿಕ್ಕೂ ಆಗದ ರೀತಿಯಲ್ಲಿ ಮರಗಳ ನಾಶ ಮಾಡಿದ್ದೇವೆ. ಕಾಂಕ್ರೀಟ್ ಕಾಡುಗಳ ಸಾಮ್ರಾಜ್ಯದಲ್ಲಿ ಮಳೆಯೂ ಇಲ್ಲ ಜಲವೂ ಇಲ್ಲ. ಕುಡಿಯುವ ನೀರಿನ ಕೊರತೆ ಅಲ್ಲಲ್ಲಿ ಕಾಣಿಸತೊಡಗಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ಬಹಳ ತೀವ್ರವಾಗಿ ಮಹಾನಗರಗಳಲ್ಲಿ ಕಾಣಿಸಲಿದೆ.

ಬಿಸಿಲಿನ ಬೇಗೆಯನ್ನು ನಿವಾರಿಸಿಕೊಳ್ಳಲು ನಾವು ಹಣ್ಣಿನ ಪಾನೀಯ, ಕಬ್ಬಿನ ಹಾಲು, ಎಳನೀರು ಮೊದಲಾದುವುಗಳ ಮೊರೆಹೋಗುತ್ತೇವೆ. ಬಿಸಿಲಿನ ತಾಪದಿಂದ ನಮ್ಮ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ಇದನ್ನು ನಿವಾರಿಸಲು ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರವನ್ನು ಸೇವಿಸಬೇಕು. ನೀರನ್ನು ಯಥೇಚ್ಛವಾಗಿ ಕುಡಿಯಬೇಕು. ಅದರಲ್ಲೂ ಕಾದಾರಿದ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಎಳನೀರು ಸೇವನೆ ಬಹಳ ಉತ್ತಮವಾದರೂ, ಬೇಸಿಗೆ ಕಾಲದಲ್ಲಿ ಉತ್ತಮವಾದ ಎಳನೀರು ಸಿಗುವುದೇ ಕಷ್ಟ. ದರವೂ ವಿಪರೀತ. ಕಾರ್ಬೋನೇಟೆಡ್ ತಂಪು ಪಾನೀಯಗಳು ದೇಹಕ್ಕೆ ಒಳ್ಳೆಯದಲ್ಲ. ಈ ಸಮಯದಲ್ಲಿ ನಾವು ಕಬ್ಬಿನ ಹಾಲನ್ನು ಅಥವಾ ರಸವನ್ನು ಸೇವಿಸುವುದು ಉತ್ತಮ. ಕಬ್ಬಿನ ಹಾಲನ್ನು ತೆಗೆದ ಬಳಿಕ ತಕ್ಷಣವೇ ಕುಡಿಯಬೇಕು. ಆಹಾರ ದರ್ಜೆಯ (ಫುಡ್ ಗ್ರೇಡ್) ಮಂಜುಗಡ್ಡೆಯನ್ನು ಮಾತ್ರ ಬಳಸಬೇಕು. ಮಂಜುಗಡ್ಡೆ ಇಲ್ಲದೇ ಕುಡಿದರೆ ಬಹಳ ಉತ್ತಮ. ಕಬ್ಬಿನ ರಸಕ್ಕೆ ಲಿಂಬೆ, ಶುಂಠಿ ಮತ್ತು ಪುದೀನಾ ಹಾಕಿದರೆ ಆರೋಗ್ಯಕ್ಕೂ ಹಿತಕರ.

ಕಬ್ಬಿನ ರಸದ ಸೇವನೆಯು ಒತ್ತಡವನ್ನು ನಿವಾರಣೆ ಮಾಡುತ್ತದೆ. ನಮ್ಮ ರಕ್ತದಲ್ಲಿನ ಕೆಂಪು ರಕ್ತಗಣಗಳ ಪ್ರಮಾಣವನ್ನು ವೃದ್ಧಿಸುತ್ತದೆ. ಮೂತ್ರನಾಳದಲ್ಲಾಗುವ ಸೋಂಕುಗಳನ್ನು ತಡೆಗಟ್ಟುತ್ತದೆ. ಬಾಯಾರಿಕೆಯನ್ನು ತಡೆಯುವಲ್ಲಿ ಬಹಳಷ್ಟು ಸಹಕಾರಿ, ಮಧುಮೇಹ ಇರುವವರೂ ಸ್ವಲ್ಪ ಪ್ರಮಾಣದಲ್ಲಿ ಕಬ್ಬಿನ ಹಾಲನ್ನು ಕುಡಿಯಬಹುದಾಗಿದೆ. ಹಲ್ಲಿನ ಸಮಸ್ಯೆ ಮತ್ತು ಕಾಮಾಲೆ ರೋಗವನ್ನು ಇದು ನಿವಾರಿಸುತ್ತದೆ. ನಮ್ಮ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ನಮ್ಮ ದೇಹದಲ್ಲಿರುವ ಮೂಳೆಗಳನ್ನು ಬಲಪಡಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಹಿಳೆಯರಲ್ಲಿ ಕಂಡು ಬರುವ ಗರ್ಭಧಾರಣೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ಕಬ್ಬಿನ ಹಾಲಿನ ಸೇವನೆಯನ್ನು ನಿಯಮಿತವಾಗಿ ಮಾಡಿಕೊಂಡು ಬಂದಲ್ಲಿ ನಿಮ್ಮ ದೇಹವು ಲವಲವಿಕೆಯಿಂದಿರುತ್ತದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ