ಬೇಸಿಗೆಯ ಆಭಿಮನ್ಯು
ಕವನ
ಬೇಸಿಗೆಯ ಆಭಿಮನ್ಯು
------------------
ಸುಡು ಬೇಗೆಯಿಂದ ಸಕಲವನ್ನೂ ಬೇಯಿಸಿ ಕಾಡುತ್ತಿರುವ
ಬೇಸಿಗೆಯ ಬಿಸುಪಿನ ಚಕ್ರವ್ಯೂಹವನ್ನು, ಅನಪೇಕ್ಷಿತ
ಅಭಿಮನ್ಯುವಿನಂತೆ ಮಳೆಯೊಂದು ಆಕ್ರಮಣಿಸಿದೆ.
ಸುಡುಬಿಸಿಲಿನ ಕ್ರೂರ ತಾಪ ವ್ಯೂಹ ಈ ಅನಿರೀಕ್ಷಿತ
ದಾಳಿಗೆ ಬೇಧ್ಯವಾಗಿ, ಕ್ಷಣಕಾಲ ನಲುಗಿ ತತ್ತರಿಸಿದೆ.
ಅಪೇಕ್ಷಿತ ತಂಗಾಳಿಯ ತಂಪು ಸುಖದ ಅಲೆ, ಅನಿರ್ಈಕ್ಷಿತ
ವರ್ಷಧಾರೆಯ ಸುಸಂಯೋಗದಿಂದ ಸಕಲ ಜೀವಿತ
ವರ್ಗ ತೀರವನ್ನು ತಟ್ಟಿದೆ. ತಂಬೆಲರಿನ ಜೋಕಾಲಿಯಲಿ
ಜೀವ ಭಾವಗಳು ತೇಲಿ ತೇಲಿ ನಲಿಯುತಿದೆ. ವಿಹಗ
ಕಲರವ ಎಂದಿಗಿಂತಲೂ ಇಂದು ಸಂಮೋಹಿತ ಸುಶ್ರಾವ್ಯದ
ಮೆರುಗು ಪಡೆದು, ಶೃತಸಮೂಹವನ್ನು ಗಾನ ನಂದನಕೆ
ಕರೆದೊಯ್ದಿದೆ.
ಗಗನ ಶುಭ್ರನೀಲಿ ಕರಗಿ ಜಲಧರಪಂಕ್ತಿ
ಸುವಿಸ್ತಾರವಾಗಿ ಪಸರಿಸಿ, ಗುಡುಗು ಕೋಲ್ಮಿಂಚುಗಳು ರುದ್ರ
ನರ್ತನದಿಂದ ಘರ್ಜಿಸಲು, ಯಾಂತ್ರಿಕ ಜೀವನ ಪರಿವೇಷ್ಟಿತ
ಜಡ ಹೃದಯ ಮುಖಗಳಿಗೆ, ನೀರ್ಪನಿಗಳ ಸಿಂಚನಗೈದು
ಎಚ್ಚರಿಸುತ್ತಿವೆ. ಗುರುತ್ವದೆಡೆ ಬೀಳುತ್ತಿರುವ ಜಲ
ಬಿಂದುಗಳು, ಹೃದಯ ಕೊಳದಲಿ ಅಮೂರ್ತ ಸಲ್ಲಲಿತ
ಭಾವವೀಚಿಗಳನೆಬ್ಬಿಸಿವೆ. ಅದುವರೆಗೂ ನಿರ್ಭಾವುಕತೆಯ
ಪರದೆಯೊಳಗಿದ್ದ ಜೀವಿಗಳು, ಹೊಸಮಳೆಯ ಚಿಟಪಟಗಳಿಂಪನು
ಕೇಳಿ, ತಂಗಾಳಿಯ ಸುಕೋಮಲ ಬಾಹುಗಳೆಡೆಯಲಿ ಬಿದ್ದು,
ತೊಯ್ದ ಮಣ್ಣಿನ ಸವಿಗಂಪಿನ ಸೌಗಂಧವನು ಹೀರಿ,
ನವ ಮನೋಲ್ಲಾಸಭರಿತ ನವಭಾವೋನ್ಮತ್ತರಾಗಿದ್ದಾರೆ.
ಹಳೆಯ ನೆನಪಿನ ಸೂರ್ಯೋದಯ ಕಾಂತಿ, ವಾಸ್ತವತೆಯ
ಧರಣಿಯ ದಿಗಂತದಲ್ಲಿ, ಮನೋನಭದ ತುಂಬೆಲ್ಲಾ, ಸಂತಸದ
ಓಕುಳಿಯನು ಚೆಲ್ಲಿದೆ. ಬಣ್ಣಗಳ ಬಲೆಯಲ್ಲಿ ಬಾಲ್ಯ, ಹರೆಯ,
ಸುಖ ಸಂದರ್ಭಗಳ, ಶಾಲೆ, ಕಾಲೇಜು, ಆಟ, ಮೋಜು,
ಪಯಣಗಳ ಮೀನುಗಳು ಸಿಕ್ಕೆವೆ. ಒಮೊಮ್ಮೆ ಗೂಡಿನಿಂದ
ಹಕ್ಕಿ ಮರಿಗಳು ಬೆದರಿ ಇಣುಕಿ ನೋಡುವ ಹಾಗೆ, ನೋವು,
ದುಖಃಗಳು ಕಂಡು ಕಾಣದ ಹಾಗೆ ಹೊರಬರಲೆತ್ನಿಸುತ್ತಿವೆ.
ನವ ಅಭಿಸಾರ, ಅಭಿಸಾರಿಕೆಯರನ್ನು ಶೃಂಗಾರಮಯ
ಸಮ್ಮಿಲನ್ನಕ್ಕೆ ಹಾತೊರೆಯುವಂತೆ ಪ್ರಚೋತಿಸುತ್ತಿದೆ. ಮುಪ್ಪಿನ
ವಿಸ್ಮೃತಿಯ ನಾಟಕ ರಂಗದಲ್ಲಿ ಹಳೆಯ ನೆನಪಿನ ಹೊಸ
ವೇಷಧಾರಿಯ ಆಗಮನವಾಗಿದೆ.
ಇತ್ತ ಭಾವಬಿಂದುಗಳ ತುಹಿನ, ಎದೆಯ ಕಾರಂಜಿಯಲಿ
ಪುಟಿದೇಳುತಿರಲು, ವಾಯುಮಂಡಲದಲಿ ಕೌರವ ಪಡೆಯಿಂದ
ಸುಡು ಬಿಸಿಲು, ಮಳೆಯೆಂಬ ಅಭಿಮನ್ಯುವಿನ ಹತ್ಯೆಗೈದಿರಲು,
ಬರಿದಾಗಿದೆ ಜೀಮೂತಗಳೊಡಲು. ತಂಪು ಮಾಯವಾಗಿ ಬೇಗೆ
ಆವರಿಸಿದೆ ಇಲ್ಲಿ, ನಡೆಸಿ ಮೃದುಭಾವಗಳ ಹರಣ. ಮತ್ತೆ
ಅದೇ ದಗೆ, ಅದೇ ಬೇಸರ ಅದೇ ದಣಿವು, ಅದೇ ಯಾಂತ್ರಿಕ
ಜೀವನ. ಪ್ರಕೃತಿ ಪರಿಭವದಿ ಸೊರಗಿದೆ ಸರ್ವ ಜೀವ ಮನ.
- ಚಂದ್ರಹಾಸ ( ೭ - ಮೇ- ೨೦೧೨)