ಬೇಸಿಗೆ ಕಾಲದಲ್ಲಿ ಕಣ್ಣುಗಳ ರಕ್ಷಣೆ ಹೇಗೆ?

ಬಿರು ಬೇಸಿಗೆ ಕರ್ನಾಟಕವನ್ನು ಕಾಡುತ್ತಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮಳೆ ಬಿಟ್ಟ ಮರು ದಿನ ಮತ್ತೆ ಸೆಖೆ ಕಾವೇರುತ್ತಿದೆ. ಬೇಸಿಗೆಯ ಕಾರಣದಿಂದ ಬಹಳಷ್ಟು ಮಂದಿಗೆ ಅನಾರೋಗ್ಯದ ಸಮಸ್ಯೆ ಕಾಡಲು ಪ್ರಾರಂಭವಾಗಿದೆ. ಇದರಲ್ಲಿ ಬಹುಮುಖ್ಯವಾದದ್ದು ನಿರ್ಜಲೀಕರಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಬಳಲಿಕೆಯಾಗುತ್ತದೆ. ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ. ಇದರ ಜೊತೆಗೆ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
ಬೇಸಿಗೆ ಕಾಲ ಬಂತೆಂದರೆ ಸಾಕು ಹಲವು ರೋಗಗಳು ಬೆಂಬಿಡದೆ ಕಾಡುತ್ತವೆ. ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ನಾವು ಕಣ್ಣಿನ ಆರೈಕೆಯನ್ನೇ ಮರೆತುಬಿಡುತ್ತೇವೆ. ಬೇಸಿಗೆಯ ಬಿಸಿಲ ಗಾಳಿಯು ಕಣ್ಣಿಗೆ ಹಲವು ರೀತಿಯ ಸಮಸ್ಯೆಗಳು ತಂದೊಡ್ಡುತ್ತವೆ. ಸುಡು ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಮದ್ರಾಸ್ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು, ಕಣ್ಣಿನಲ್ಲಿರುವ ದ್ರವ ಆರುವುದು ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಕಣ್ಣಿನ ಆರೈಕೆ ಮಾಡುವುದು ಅತ್ಯವಶ್ಯಕ.
ಸನ್‌ಗ್ಲಾಸ್ ಬಳಕೆ ಮಾಡಿ: ಸುಡು ಬಿಸಿಲಿನಲ್ಲಿ ಮನೆಯಿಂದ ಹೊರಗೆ ಬರುವ ಅಗತ್ಯ ಬಂದಾಗಲೆಲ್ಲಾ ಸನ್‌ಗ್ಲಾಸ್ (ತಂಪು ಕನ್ನಡಕ) ಬಳಕೆ ಮಾಡಿ. ಬೈಕ್, ಕಾರು ಅಥವಾ ಇನ್ಯಾವುದೇ ವಾಹನಗಳನ್ನು ಚಾಲನೆ ಮಾಡುವ ವೇಳೆಯೂ ಸನ್ ಗ್ಲಾಸ್ ಬಳಕೆ ಮಾಡುವುದರಿಂದ ಧೂಳಿನ ಕಣಗಳು ಅಥವಾ ಬಿಸಿಗಾಳಿ ಕಣ್ಣುಗಳನ್ನು ಸೇರದಂತೆ ತಡೆಯುತ್ತದೆ. ಬೈಕ್ ಸವಾರರು ಆದಷ್ಟು ಮುಚ್ಚಿರುವ ಹೆಲೈಟ್‌ಗಳನ್ನು ಬಳಸುವುದು ಉತ್ತಮ.
ಶೇಕಡಾ ೧೦೦ರಷ್ಟು UV ರಕ್ಷಣೆಯನ್ನು ಒದಗಿಸುವ ಉತ್ತಮ ಗುಣಮಟ್ಟದ ಸನ್ ಗ್ಲಾಸ್ ಅನ್ನು ಖರೀದಿ ಮಾಡಿ. ಯುವಿ ಕಿರಣಗಳು ನಿಮ್ಮ ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡ ಬಹುದು. ಇದು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ UVA ಮತ್ತು UVB ಕಿರಣಗಳನ್ನು ನಿರ್ಬಂಧಿಸುವಂತೆ ಸನ್ ಗ್ಲಾಸ್ ಗಳನ್ನು ಖರೀದಿಸಿ.
ಅತಿಯಾದ ಸನ್ ಗ್ಲಾಸ್ ಬಳಕೆ ಕೂಡ ಬೇಡ: ಸನ್ ಗ್ಲಾಸ್ ಅತ್ಯಗತ್ಯವಾಗಿದ್ದರೂ ಇತರ ಸೂರ್ಯನ ರಕ್ಷಣೆ ಕ್ರಮಗಳನ್ನು ಕಡೆಗಣಿಸದಿರಿ. ಸೂರ್ಯನ ಕಿರಣಗಳು ಪ್ರಬಲವಾಗಿರುವಾಗ (ಬೆಳಿಗ್ಗೆ ೧೦ ರಿಂದ ಸಂಜೆ ೪ ರ ನಡುವೆ) ನೇರ ಸೂರ್ಯನ ಬೆಳಕಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಅಗಲವಾದ ಅಂಚುಳ್ಳ ಟೋಪಿಗಳು ಅಥವಾ ಮಾಸ್ಕ್ ಗಳನ್ನು ಧರಿಸಿ.
ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ: ಸ್ವಿಮ್ಮಿಂಗ್, ಕ್ರೀಡೆ ಅಥವಾ ಹೊರಾಂಗಣದ ಕೆಲಸ ಮಾಡುವಾಗ ಪ್ರೊಟೆಕ್ಟಿವ ಸನ್ ಗ್ಲಾಸ್‌ಗಳನ್ನು ಬಳಕೆ ಮಾಡಿ. ಈ ಕನ್ನಡಕಗಳು ನಿಮ್ಮ ಕಣ್ಣುಗಳಿಗೆ ಧೂಳು, ರಾಸಾಯನಿಕ ಮತ್ತು ಇತರೆ ಹಾನಿಕಾರಕ ವಸ್ತುಗಳಿಂದ ರಕ್ಷಣೆ ಮಾಡುತ್ತವೆ.
ಕಣ್ಣಿನ ಅಲರ್ಜಿಗಳ ಬಗ್ಗೆ ಜಾಗರೂಕರಾಗಿರಿ: ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಬಗ್ಗೆ ಕಾಳಜಿ ಇರಲಿ, ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಕೆಂಪಾಗುವುದು, ತುರಿಕೆ ಲಕ್ಷಣಗಳು ಕಂಡು ಬರುತ್ತವೆ. ಈ ಲಕ್ಷಣಗಳು ಕಂಡು ಬಂದರೆ ತೀವ್ರವಾದ ಉಜ್ಜುವಿಕೆಯನ್ನು ತಪ್ಪಿಸಿ, ಶೀಘ್ರಗತಿಯಲ್ಲಿ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.
ಮೊಬೈಲ್ ಬಳಕೆ ತಗ್ಗಿಸಿ: ಮೊಬೈಲ್, ಕಂಪ್ಯೂಟರ್ ಅಥವಾ ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸುದೀರ್ಘ ಕಾಲ ನೋಡದೆ ವಿರಾಮ ತೆಗೆದುಕೊಳ್ಳಿ. ಈ ಗ್ಯಾಜೆಟ್ ಗಳು ಕಣ್ಣುಗಳಿಗೆ ಆಯಾಸವನ್ನು ನೀಡುವುದಲ್ಲದೆ ದೃಷ್ಟಿ ಸಮಸ್ಯೆಗಳನ್ನು ಹೆಚ್ಚಾಗುವಂತೆ ಮಾಡುತ್ತವೆ. ಈ ಗ್ಯಾಜೆಟ್‌ಗಳ ಬಳಕೆ ವೇಳೆ ೨೦-೨೦ ನಿಯಮಗಳನ್ನು ಅನುಸರಿಸಿ. ಆದರೆ ಪ್ರತಿ ೨೦ ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ. ೨೦ ನಿಮಿಷಗಳ ಕಾಲ ದೂರದ ವಸ್ತುವನ್ನು ನೋಡಿ ಜೋರಾಗಿ ಅಲ್ಲದೆ ನಿಧಾನಗತಿಯಲ್ಲಿ ಆಗಾಗ್ಗೆ ಕಣ್ಣುಗಳನ್ನು ಮಿಟುಕಿಸುತ್ತಿರಿಸಿ,
ನಿಯಮಿತ ಕಣ್ಣಿನ ಪರೀಕ್ಷೆ ಅಗತ್ಯ: ಯಾವುದೇ ದೃಷ್ಟಿ ಸಮಸ್ಯೆಗಳು ಕಂಡು ಬರದಿದ್ದರೂ ಸಹ ವರ್ಷಕ್ಕೊಮ್ಮೆಯಾದರೂ ನಿಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಿ. ಕಣ್ಣಿನ ಪರೀಕ್ಷೆಗಳಿಂದ ಗ್ಲುಕೋಮಾ, ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ, ಇದು ಸಕಾಲಿಕ ಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ.
ಕಣ್ಣಿನ ಶುಚಿತ್ವ ಮುಖ್ಯ: ತೊಳೆಯದ ಕೈಗಳಿಂದ ನಿಮ್ಮ ಕಣ್ಣುಗಳನ್ನು ಉಜ್ಜುವುದರಿಂದ ದೂರವಿರಿ, ಏಕೆಂದರೆ ಇದರಿಂದ ಬ್ಯಾಕ್ಟಿರಿಯಾಗಳು ಕಣ್ಣುಗಳಿಗೆ ಹೋಗುವ ಸಾಧ್ಯತೆಗಳಿರುತ್ತವೆ. ಇದರಿಂದ ಸೋಂಕುಗಳೂ ಎದುರಾಗಬಹುದು ಅಥವಾ ಅಲರ್ಜಿಗಳು ಅಥವಾ ಡ್ರೈ ಐ ಸಿಂಡೋಮ್ ನಂತಹ ಸಮಸ್ಯೆಗಳು ಎದುರಾಗಬಹುದು.
ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಈಜುವುದನ್ನು ನಿಯಂತ್ರಿಸಿ: ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸುತ್ತಿದ್ದರೆ, ನೀರಿನಿಂದ ಹರಡುವ ಬ್ಯಾಕ್ಟೀರಿಯಾಗಳು ನಿಮ್ಮ ಕಣ್ಣುಗಳಿಗೆ ಪ್ರವೇಶಿಸುವುದನ್ನು ತಡೆಯಲು ಮತ್ತು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುವುದನ್ನು ತಡೆಯಲು ಈಜುವುದನ್ನು ಅಥವಾ ಸ್ನಾನ ಮಾಡುವುದನ್ನು ತಪ್ಪಿಸಿ, ಕಾಂಟ್ಯಾಕ್ಟ್ ಲೆನ್ಸ್ ಬದಲಿಗೆ ಪ್ರಿಸ್ಕ್ರಿಪ್ಪನ್ ಈಜು ಕನ್ನಡಕಗಳನ್ನು ಬಳಸಿ ಅಥವಾ ಉಪಯೋಗಿಸಿ ಬಿಸಾಡಬಹುದಾದ ಲೆನ್ಸ್ ಗಳನ್ನು ಬಳಸಿ.
ರೋಗಲಕ್ಷಣಗಳ ನಿರ್ಲಕ್ಷ್ಯ ಬೇಡ: ನಿಮ್ಮ ದೃಷ್ಟಿ ಅಥವಾ ಕಣ್ಣಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದರೂ ಜಾಗರೂಕರಾಗಿರಿ, ಕಣ್ಣಿನ ಅಸ್ವಸ್ಥತೆ, ಕೆಂಪಗಾಗುವುದು. ತುರಿಕೆ ಅಥವಾ ಹಠಾತ್ ದೃಷ್ಟಿ ಪಲ್ಲಟಗಳಂತಹ ನಿರಂತರ ರೋಗಲಕ್ಷಣಗಳು ಕಂಡು ಬಂದರೆ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ನಿಮ್ಮ ಕಣ್ಣುಗಳ ಸಮಸ್ಯೆ ಉಲ್ಬಣವಾಗಬಹುದು ಅಥವಾ ಶಾಶ್ವತ ಹಾನಿ ಉಂಟಾಗಬಹುದು.
ಸಾಕಷ್ಟು ನಿದ್ದೆ ಮಾಡಿ: ಕಣ್ಣಿನ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ನಿದ್ದೆ ಬಹುಮುಖ್ಯವಾಗಿದೆ. ನಿದ್ರೆಯ ಕೊರತೆಯು ಕಣ್ಣಿನ ಆಯಾಸ, ಶುಷ್ಕತೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಕಣ್ಣುಗಳು ದಿನವಿಡೀ ಒತ್ತಡಕ್ಕೊಳಗಾಗಿರುತ್ತದೆ. ಹೀಗಾಗಿ ಅದಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ಏಳು ಗಂಟೆಗಳ ಗುಣಮಟ್ಟದ ನಿದ್ದೆ ಅಗತ್ಯವಿರುತ್ತದೆ. ಮದ್ಯಾಹ್ನದ ಸಮಯದಲ್ಲಿ ಹೊರಗಡೆ ಹೋಗುವ ಚಟುವಟಿಕೆಗಳನ್ನು ನಿಯಂತ್ರಿಸಿ. ಕಣ್ಣಿನ ಆರೋಗ್ಯವನ್ನು ಕಾಪಾಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ