ಬೇಸೂರ್

ಬೇಸೂರ್

ಪುಸ್ತಕದ ಲೇಖಕ/ಕವಿಯ ಹೆಸರು
ವಿದ್ಯಾ ಭರತನಹಳ್ಳಿ
ಪ್ರಕಾಶಕರು
ವೀರಲೋಕ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೨೪

ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ…

“ನಾನು ನನ್ನೊಳಗೇ ಕಥೆ ಬರೆದುಕೊಳ್ಳುತ್ತಿದ್ದೆ. ಮನೆಯ ಬಾಗಿಲಲ್ಲಿ ಗೇಟಿಗೆ ತಲೆಯಾನಿಸಿ ಮಗಳು ಬರುವುದನ್ನು ಕಾಯುತ್ತ ಇರುವಾಗ, ಗಂಡನೊಂದಿಗೆ ವಾಕಿಂಗ್ ಮಾಡುವಾಗ, ಅರಳಿದ ಹೂವಿನೊಳಗೆ ಕಣ್ಣಿಗೆ ಕಾಣಿಸದ ಹುಳ ಹೊಕ್ಕಿದ್ದನ್ನು ತೆಗೆಯುವಾಗ, ಫಕ್ಕನೆ ಯಾವುದೋ ನೆನಪಾಗಿ ಕಣ್ಣು ತುಂಬಿ ತುಳುಕುವಾಗ. ಸುತ್ತೆಲ್ಲ ಹರವಿಕೊಂಡ ಇತಿಹಾಸ, ವರ್ತಮಾನ, ಭವಿಷ್ಯ ಮೌನ ಮಾತಿಗೂ, ಮಾತು ಅಕ್ಷರಕ್ಕೂ ಕಾಯುತ್ತಿತ್ತು. ಅವಮಾನ, ಯಾರದೋ ಸಂಕಟ, ಕೋಪ, ಪ್ರೀತಿ, ನೀತಿ, ಒಂದು ಸುಂದರ ಗೀತೆ, ಕಥೆ ಎಲ್ಲವೂ ಕಥೆಗಳಾಗಿ ಹೊರಹೊಮ್ಮುವ ಕಾಲ ಕೂಡಿ ಬಂತು.

2021. ಕ್ಲಬ್ ಹೌಸ್ ಹೆಚ್ಚು ಪ್ರಚಾರದಲ್ಲಿದ್ದ ಕಾಲ. ಕಥೆಗಳ ಬಗ್ಗೆ ಜೋಗಿಯವರು, ಗೋಪಾಲಕೃಷ್ಣ ಕುಂಟಿನಿಯವರು ಸತತವಾಗಿ ಮಾತಾಡುತ್ತಿದ್ದರು. ಅದನ್ನು ಕೇಳುತ್ತ ಕೇಳುತ್ತ ನಾನ್ಯಾಕೆ ಕಥೆ ಬರೆಯಬಾರದು? ಅನಿಸಿತು. ಬರೆದೆ. ಕಥೆಕೂಟ ಸೇರಬಹುದೇ ಕೇಳಿದೆ. ಕವಯಿತ್ರಿಯಾಗಿ ಪರಿಚಿತಳಾಗಿದ್ದ ವಿದ್ಯಾಳಿಗೆ ಕಥೆಕೂಟಕ್ಕೆ ಪ್ರವೇಶ ಸಿಕ್ಕಿತು. ನನಗೆ ಬರೆಯಲು ಬರುತ್ತದೆ ಎನ್ನುವ ಧೈರ್ಯದಿಂದ ಒಂದು ಕಥೆಯನ್ನಿಟ್ಟುಕೊಂಡು ಕಥೆಕೂಟ ಪ್ರವೇಶಿಸಿದೆ.

ಕಥೆಕೂಟ ಸೇರದಿದ್ದರೆ ನಾನು ಖಂಡಿತ ಕಥೆಗಳ ಬರೆಯುತ್ತಿರಲಿಲ್ಲ. ಕವಿತೆಗಳನ್ನಷ್ಟೇ ಬರೆದುಕೊಂಡಿರುತ್ತಿದ್ದೆ. ಹಾಗಾಗಿ ನನ್ನ ಮೊದಲ ಕೃತಜ್ಞತೆಯನ್ನು ಗೋಪಾಲಕೃಷ್ಣ ಕುಂಟಿನಿಯವರಿಗೂ, ಜೋಗಿಯವರಿಗೂ ಸಲ್ಲಿಸುತ್ತೇನೆ.

ಕಥೆಕೂಟದ ಹೆಬ್ಬಾಗಿಲು ತೆಗೆದಾಗ ನನಗೆ ಅಲ್ಲಿ ಕಂಡವರು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರು, ಜಗದೀಶ ಶರ್ಮ ಸಂಪ, ಮೋಹನ ಹೆಗಡೆ, ಶ್ರೀನಿವಾಸ ದೇಶಪಾಂಡೆ ಮುಂತಾದವರು. ಇವರೆಲ್ಲರು ಕೊಟ್ಟ ಪ್ರೋತ್ಸಾಹ ಮತ್ತು ಮಾರ್ಗದರ್ಶನಕ್ಕೆ ಋಣಿಯಾಗಿದ್ದೇನೆ ಮತ್ತು ಕಥೆ ಕೂಟದ ಎಲ್ಲ ಸಹ ಕಥೆಗಾರರು, ಕಥೆಗಾರ್ತಿಯರನ್ನೂ ಪ್ರೀತಿಯಿಂದ ನೆನೆಯುತ್ತೇನೆ.

ಸಣ್ಣ ಮುನ್ನುಡಿ ಬರೆದುಕೊಡಲು ಸಾಧ್ಯವೇ ಅಂತ ಅಳುಕುತ್ತಲೇ ಪ್ರಸಿದ್ಧ ಬರೆಹಗಾರ ಎನ್.ಎಸ್ ಶ್ರೀಧರಮೂರ್ತಿಯವರನ್ನು ಕೇಳಿದಾಗ ತಕ್ಷಣ ಒಪ್ಪಿದರಲ್ಲದೇ,ನನ್ನ ಕಥೆಗಳ ಸೂಕ್ಷ್ಮಗಳನ್ನು ಹಿಡಿದು ಎರಡೇ ದಿನದಲ್ಲಿ ಬರೆದುಕೊಟ್ಟರು. ಅವರಿಗೆ ಹೃತೂರ್ವಕ ಧನ್ಯವಾದಗಳು

ನನ್ನ ಕಥೆಗಳ ಮೊದಲ ಓದುಗ, ವಿಮರ್ಶಕ, ಪತಿ ಉಮೇಶ್ ಹೆಗಡೆಯವರು. ಅವರಿಗೆ ಮೆಚ್ಚುಗೆಯಾದರೆ ಅದು ದೊಡ್ಡ ಸರ್ಟಿಫಿಕೇಟ್ ನನಗೆ. ಅವರು ಮತ್ತೊಮ್ಮೆ ಎಲ್ಲ ಓದಿ ಮೌಲಿಕ ಬೆನ್ನುಡಿ ಬರೆದಿದ್ದಾರೆ. ಅವರಿಗೂ ಕೃತಜ್ಞಳಾಗಿದ್ದೇನೆ.

ನನ್ನನ್ನು ಒಡಹುಟ್ಟಿದ ಸೋದರಿಯಂತೆ ಕಾಣುವ, ಪ್ರೀತಿಸುವ ಲಲಿತಕ್ಕ (ಲಲಿತಾ ಬೆಳಗೆರೆ) ಹಾರೈಸಿದ್ದಾರೆ. ಅವರಿಗೆ ಪ್ರೀತಿಯ ಧನ್ಯವಾದಗಳು. ನನ್ನ ಕಥಾ ಸಂಕಲನವನ್ನು ಪ್ರಕಟಿಸಲು ಆಯ್ಕೆ ಮಾಡಿದ ವೀರಲೋಕ ಪ್ರಕಾಶನದ ನನ್ನ ಪ್ರೀತಿಯ ವೀರಕಪುತ್ರ ಶ್ರೀನಿವಾಸ ಅವರಿಗೂ, ಆಯ್ಕೆ ಸಮಿತಿಗೂ ಧನ್ಯವಾದಗಳು.

'ಕಾವ್ಯಕೇಳಿ'ಯ ದೊಡ್ಡ ಸ್ನೇಹ ಬಳಗವನ್ನ ನೆನೆಯುತ್ತೇನೆ. ನನ್ನ ಭಾವಪ್ರಪಂಚವನ್ನು ಚೈತನ್ಯದಾಯಕವಾಗಿಡುವ ನನ್ನ ಆತ್ಮೀಯ ಗೆಳತಿಯರಾದ ಲತಾ, ಭ್ರಮರಾ, ಲೀನಾ, ವನಿತಾ, ತನುಜಾ ಅವರನ್ನು ನೆನೆಯುತ್ತೇನೆ. ಭೌತಿಕವಾಗಿ ನನ್ನೊಂದಿಗಿಲ್ಲದ ಆದರೆ ಸದಾ ನನ್ನೊಂದಿಗೇ ಇರುವ ಅಪ್ಪ, ಮಾವ, ಅಜ್ಜಿ, ಅಣ್ಣ ಮತ್ತು ರವಿ ಬೆಳಗೆರೆ ಹಾಗೂ ಕೃಷ್ಣಶಾಸ್ತ್ರಿ ಬೆಳಗೆರೆ(ತಾತ) ಯವರನ್ನು ಸ್ಮರಿಸುತ್ತೇನೆ. ಅಕ್ಕಂದಿರು, ಬಾವಂದಿರು, ಅತ್ತಿಗೆಯರು, ಅಣ್ಣಂದಿರು ಹಾಗೂ ಬಂಧು ಬಳಗವನ್ನೆಲ್ಲ ನೆನೆಯುತ್ತೇನೆ. ಹೆಸರಿಸಲು ಸಾಧ್ಯವಿಲ್ಲದಷ್ಟು ದೊಡ್ಡ ಬಳಗವಾದ ನನ್ನ ಸ್ನೇಹಿತರು, ಸ್ನೇಹಿತೆಯರನ್ನು ನೆನೆಯುತ್ತೇನೆ. ನನ್ನ ಪ್ರಥಮ ಕಥಾ ಸಂಕಲನ 'ಬೇಸೂರ್'ನ್ನು ನಿಮ್ಮೆದುರಿಗಿಡುತ್ತಿದ್ದೇನೆ. ಓದುವ ನಿಮಗೂ ಧನ್ಯವಾದಗಳು”