*ಬೈತಲೆ ಚೆಲುವೆ*

*ಬೈತಲೆ ಚೆಲುವೆ*

ಕವನ

ಬೈತಲೆ ತೆಗೆಯುತ ಚೆಲುವಿನ ವನಿತೆಯು

ಮಾತಲಿ ನನ್ನನು ಗೆಲ್ಲುತ ನಿಲ್ಲಲು

ಸೋತೆನು ಕಮನದ ಕದಪನು ನೋಡುತ

ನಯನದ ಪೇಶಲಕೆ

ಚೂತದ ವನದಲಿ ನಲಿಯುವ ಕೋಗಿಲೆ

ಗಾಥೆಯ ಹೇಳಲು ಮೌನದಿ ನಲ್ಲೆಯ

ಚೇತನಗೊಳಿಸುವ ನೂತನ ಭಾವ

ಸ್ಪರ್ಶದ ಪರಿಮಳಕೆ

 

ಒಲವಿನ ಮುಕುರದಿ ತಿದ್ದುತ ಬೈತಲೆ

ಚೆಲುವಿನ ಸಿರಿಯಲಿ ಕುಂಕುಮ ಧರಿಸುತ

ಬಲೆಯನು ಬೀಸುತ ರಮಣನ ಹೃದಯಕೆ

ಮೋಹದ ನೋಟದಲಿ

ಸಲುಗೆಯ ತೋರುತ ಮನವದು ಬಯಸಿದೆ

ಚಿಲುಮೆಯ ಚಿತ್ರದ ಮಾನಿನಿ ಚಂದ್ರಿಕೆ

ಮಲಯದ ಗಂಧದ ತರುವಿನ ಪರಿಮಳ

ಬೀರುತ ಸೆಳೆಯುತಲಿ

 

ಜಡೆಯದು ಜಾರುತ ಕಟಿಯನು ಮುಟ್ಟಲು

ಕಡೆಯಲಿ ತಬ್ಬಿದೆ ಢಾಳದ ಕಾಂತಿಯ

ತುಡಿಯುವ ಭಾವದ ಮೋನದ ಸಮಯದಿ

ನಿನ್ನನು ಮೌನದಲಿ

ತಡವನು ಮಾಡದೆ ನಲ್ಲನ ತೋಳಲಿ

ಮಡುವಿನ ಕಪ್ಪೆಯ ತೆರದಲಿ ಹೊಂದುತ

ಮಿಡಿಯುವ ಹೃದಯದ ಭಾವವ ತಿಳಿಯುತ

ಸೇರಲು ಪ್ರೇಮದಲಿ

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್