ಬೈದು ಹೇಳೋರು, ಬದುಕೋಕೆ ಹೇಳಿದ್ದು…

ಇನ್ನೊಬ್ಬರಿಂದ ಬೈಸಿಕೊಳ್ಳದೆ ಇರುವವರು ಜಗತ್ತಿನಲ್ಲಿ ಯಾರೂ ಇಲ್ಲವೆಂದೆ ಹೇಳಬಹುದು. ಯಾರ ನಿಂದನೆಗೂ ಒಳಪಡದಂತೆ ಬದುಕಲು ಸಾಧ್ಯವೇ? ಅರಿಸ್ಟಾಟಲ್ ಅವರು ಹೇಳುವಂತೆ ಯಾರೊಬ್ಬರ ನಿಂದನೆಗೂ ಒಳಪಡದಂತೆ ಜೀವಿಸಲು Say nothing, Do nothing and be nothing! ಅಂದರೆ ಯಾರ ಟೀಕೆಗೂ ಒಳಪಡದೆ ಇರಲು ಇರುವ ಉಪಾಯವೆಂದರೆ ಏನನ್ನೂ ಹೇಳಬೇಡಿ, ಏನನ್ನೂ ಮಾಡಬೇಡಿ ಮತ್ತು ಏನೂ ಆಗಬೇಡಿ!
ಟೀಕೆ ಟಿಪ್ಪಣಿಗಳಿಗೆ ದೇವ, ದೇವತೆಗಳೂ ಹೊರತಲ್ಲ, ಶ್ರೀ ಕೃಷ್ಣ ಪರಮಾತ್ಮನನ್ನು ಶಿಶುಪಾಲ ನೂರಕ್ಕೂ ಮಿಕ್ಕಿ ಪದಗಳಿಂದ ಅವಹೇಳನ ಮಾಡಿದನಲ್ಲವೇ? ದಕ್ಷನು ಯಜ್ಞ ಮಾಡುವಾಗ ತನ್ನ ಪುತ್ರಿ ದಾಕ್ಷಾಯಣಿ ಶಿವನ ಪತ್ನಿ ಹಾಗೂ ಅಲ್ಲಿ ನೆರೆದ ಎಲ್ಲರ ಮುಂದೆ ಶಿವನನ್ನು ವಿಧ ವಿಧವಾಗಿ ಹಂಗಿಸಿ ಹೀಯಾಳಿಸುತ್ತಾನೆ. ಆರೋಪಗಳಿಗೆ ಬೈಗುಳಕ್ಕೆ ಹರಿ ಹರರೂ ಹೊರತಲ್ಲ, ಇನ್ನು ನಮ್ಮ ಪಾಡೇನು?
ಟೀಕೆ ಟಿಪ್ಪಣಿಗಳು ಅನಿವಾರ್ಯ ಎಂದಾದರೆ ಅವುಗಳನ್ನು ಹೇಗೆ ಎದುರಿಸುವುದು ಹೇಗೆ ಸಹಿಸಿಕೊಳ್ಳುವುದು? ಗುರು ಹಿರಿಯರು, ತಂದೆ ತಾಯಿಯರು ಬೈದು ನಮ್ಮನ್ನು ತಿದ್ದುವರು. ಅವರ ನುಡಿಯಲ್ಲಿ ತೀಕ್ಷಣತೆ ಇದ್ದರೂ ಅವರ ಉದ್ದೇಶ ನಮ್ಮನ್ನು ತಿದ್ದಿ ಸರಿ ದಾರಿ ತೋರುವುದೇ ಆಗಿರುತ್ತದೆ. ನಮಗೆ ಗೋಚರವಾಗದ ನ್ಯೂನತೆಗಳು ಇತರರಿಗೆ ಕಾಣಿಸಬಹುದು. ಮೇಲು ನೋಟಕ್ಕೆ ಬೈಗುಳು ಅಸಹನೀಯ ಎಂದು ಅನಿಸಿದರೂ ನಮ್ಮ ಹಿತೈಷಿಗಳು ಆಡುವ ಭಾಷೆ ಕಟು, ಕಹಿ ಆದರೂ ಅದರ ಅಂತಾರಾಳದಲ್ಲಿನ ಉದ್ದೇಶ ನಮ್ಮ ಒಳಿತಿಗೇ ಎಂದು ವಿಧಿತವಾಗುತ್ತದೆ. ಒಂದು ಎಳನೀರಿನ ಸ್ವಾದವನ್ನು ಪಡೆಯಲು ಮೊದಲು ಅದರ ಗಟ್ಟಿ ಪದರವನ್ನು ಕೆತ್ತಿ ತೆಗೆದು ಎಳನೀರನ್ನು ಸೇವಿಸುವ ರೀತಿಯಲ್ಲಿ ಕಟು ಭಾಷೆಯ ಒಳಗಿನ ಸದುದ್ದೇಶವನ್ನು ಸ್ವೀಕರಿಸುವ ಸಕರಾತ್ಮಕ ಸ್ಪಂದನೆ ನಮಗೇ ಒಳಿತು.
ಯಾರಾದರೂ ಟೀಕಿಸಿದಾಗ ವಿಚಲಿತರಾಗದೆ ಒಂದು ಕ್ಷಣ ಆಲೋಚಿಸಿ ಆ ಮಾತುಗಳಲ್ಲಿ ಸತ್ಯವಿದೆಯೇ ಎಂದು ವಿಶ್ಲೇಸಿಸಿ ನೋಡುವುದು, ಅದು ನಿಜವೇ ಆಗಿದ್ದರೆ ನಮ್ಮನ್ನು ನಾವೇ ತಿದ್ದಿಕೊಳ್ಳಲು ಒಂದು ಸದವಕಾಶ ಅಲ್ಲವೇ? ಟೀಕಿಸಿದವರಿಗೆ ಧನ್ಯವಾದ ತಿಳಿಸಬೇಕಲ್ಲವೇ? (ಬಹಿರಂಗದಲ್ಲಿ ಅಲ್ಲದಿದ್ದರೆ ಅಂತರಂಗದಲ್ಲಿಯಾದರೂ) ಉದಾಹರಣೆಗೋಸ್ಕರ ನಿಮ್ಮನ್ನು 'ಕಳ್ಳ' ಎಂದು ಯಾರಾದರೂ ಆರೋಪಿಸಿದರು ಎಂದಿಟ್ಟುಕೊಳ್ಳಿ. ಅದು ನಿಜವೇ ಇದ್ದು ನೀವು ಕಳ್ಳತನ ಮಾಡಿದ್ದೆ ಆದರೆ, ನಿಮ್ಮನ್ನು ನೀವು ತಿದ್ದಿಕೊಳ್ಳಲು ಹೇಳಿದ ಬುದ್ದಿವಾದ ಅದು. ಎಷ್ಟೇ ಕಟು ಎನಿಸಿದರೂ. ಟೀಕಿಸಿದವರು ಸ್ತುತ್ಯಾರ್ಹರು ಅಲ್ಲವೇ? ಇನ್ನು ನೀವು ಕಳ್ಳತನ ಮಾಡಿಯೇ ಇಲ್ಲ ಆದರೂ ಮಿಥ್ಯ ಆರೋಪ ಮಾಡಿದರೆ ಅದು ಬಹುಷಃ ಅವರಲ್ಲಿ ನಿಮ್ಮ ಬಗೆಗೆ ಇರುವ ಅಸೂಯೆ, ದ್ವೇಷ ಭಾವನೆ ಅಥವಾ ಅವರು ಕೀಳರಿಮೆಯ ಮನೋರೋಗದಿಂದ ಬಳಲುತ್ತ ಇರಬಹುದು. ಅಂತಹವರ ಬಗ್ಗೆ 'ಅಯ್ಯೋ ಪಾಪ' ಎಂದುಕೊಳ್ಳಿ. ಸದ್ಯ ನನ್ನಲ್ಲಿ ಆ ದುರ್ಗುಣ ಇಲ್ಲವೆಂದು ಸಮಾಧಾನ ಪಟ್ಟುಕೊಳ್ಳಿ. ಸಕಾರಾತ್ಮಕ ಟೀಕೆ ನಮ್ಮ ಪ್ರಗತಿಗೆ ಅತ್ಯಂತ ಅವಶ್ಯಕ. ವಿನಾಕಾರಣ ದೂಶಿಸುವವರಿಗೆ ಮನಸ್ಸಿನಲ್ಲಿಯೇ ದಾಸರ ಪದ ಆಚಾರವಿಲ್ಲದ ನಾಲಿಗೆ ಜ್ಞಾಪಿಸಿಕೊಳ್ಳಿ.
ಚಿಕ್ಕಂದಿನಲ್ಲಿ ನಮ್ಮ ಅಜ್ಜಿ ನಮ್ಮ ತುಂಟಾಟ ಮಿತಿ ಮೀರಿದಾಗ ಒಂದೆರಡು ಬೈಗುಳನ್ನು ಬೈದು, ಕೊನೆಗೆ 'ಬೈದು ಹೇಳುವವರು ಬದುಕೋಕೆ ಹೇಳುವರು ಕಣೋ' ಎಂದು ತಿಳಿಸಿ ಹೇಳುತ್ತಿದ್ದರು. ಇದೇ ಅಭಿಪ್ರಾಯವನ್ನು ನಾರ್ಮನ್ ವಿನ್ಸನ್ ಪೀಲೆ ಅವರು The trouble with most of us is that we would rather be ruined by praise than saved by criticism ಎಂದಿದ್ದಾರೆ. ಅಂದರೆ ನಮ್ಮಲ್ಲಿ ಅನೇಕರು ಟೀಕೆಗಳಿಂದ ಎಚ್ಚೆತ್ತುಕೊಂಡು ಅಭಿವೃದ್ಧಿ ಹೊಂದುವ ಬದಲು ಪ್ರಶಂಸೆಯಿಂದ ಅಧೋಗತಿ ಹೊಂದುತ್ತಾರೆ. ಬನ್ನಿ ಬೈಗುಳನ್ನು ಸ್ವಾಗತಿಸೋಣ, ಬದುಕಲು ಕಲಿಯೋಣ.
-ಲಕ್ಷ್ಮಣ್ ಗೊರ್ಲಕಟ್ಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ