ಬೊಂಬಾಟ್ ಈ ರೋಬೋಟ್ ! (ಭಾಗ ೧)
ರೋಬೋಟ್ (Robot) ಈಗಿನ ಜನಾಂಗಕ್ಕೆ ಅತ್ಯಂತ ಚಿರಪರಿಚಿತ ಹೆಸರೇ ಬಿಡಿ. ಇತ್ತೀಚಿನ ಸಿನೆಮಾಗಳಲ್ಲಿ ಇವುಗಳ ಹಾವಳಿ ಹೆಚ್ಚಾಗಿ ಹೋಗಿದೆ. ಇಂದು ಪ್ರಪಂಚದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿದೆ. ನೀವು ನಂಬಲೇ ಬೇಕು. ನಮ್ಮ ಪ್ರಪಂಚದಲ್ಲಿ ೧೦ ಲಕ್ಷಕ್ಕೂ ಹೆಚ್ಚು ರೋಬೋಟ್ ಗಳು ಮನೆಕೆಲಸ ಮಾಡುತ್ತಿವೆ. ೧೧ ಲಕ್ಷ ಕ್ಕೂ ಹೆಚ್ಚು ರೋಬೋಟ್ ಗಳು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿವೆ.
ಏನಿದು ರೋಬೋಟ್? : ಝೆಕ್ ಭಾಷೆಯಲ್ಲಿ ‘ರೋಬೋಟಾ’ ಎಂದರೆ ಕಷ್ಟವಾದ ಕೆಲಸವನ್ನು ಮಾಡುವ ಮತ್ತು ಹೇಳಿದಂತೆ ಕೇಳುವ ಒಂದು ಯಂತ್ರ. ಇದನ್ನು ಅತ್ಯಂತ ಬುದ್ದಿವಂತ ಯಂತ್ರ ಎನ್ನಬಹುದು. ಇದು ಮನುಷ್ಯನ ಅತ್ಯಂತ ಪ್ರಾಮಾಣಿಕ ಸೇವಕ. ಸಾಮಾನ್ಯವಾಗಿ ಹೇಳುವುದಾದರೆ ರೋಬೋಟ್ ಒಂದು ಸ್ವಯಂ ಚಾಲಿತ ಸಾಧನ. ಇದು ಮನುಷ್ಯ ಹೇಳಿದಂತೆ ಯಾಂತ್ರಿಕ ಕೆಲಸಗಳನ್ನು ನಿರ್ವಹಿಸುತ್ತದೆ ಅಥವಾ ಮೊದಲೇ ಕೊಟ್ಟ ಸೂಚನೆಗಳಂತೆ ಈ ರೋಬೋಟ್ ಗಳು ಅತ್ಯಂತ ಶ್ರಮದ, ಸೂಕ್ಸ್ಮತೆಯ ಮತ್ತು ಪುನರಾವರ್ತಿತ ಕೆಲಸಗಳನ್ನು ಸಮರ್ಥವಾಗಿ ಮಾಡಬಲ್ಲವು. ಅತ್ಯಂತ ಅಪಾಯಕಾರಿ ಮತ್ತು ಕ್ಲಿಷ್ಟಕರ ಕೆಲಸಗಳನ್ನು ದಕ್ಷತೆಯಿಂದ ಮಾಡುವ ಶಕ್ತಿ ಇವಕ್ಕಿದೆ.
ರೋಬೋಟ್ ನ ಬಳಕೆ ಎಲ್ಲೆಲ್ಲಿ? : ರೋಬೋಟ್ ಗಳು ಇವತ್ತು ಎಲ್ಲೆಲ್ಲೂ ಕಂಡು ಬರುತ್ತವೆ. ಮನೆಗೆಲಸಗಳ ನಿರ್ವಹಣೆಯಿಂದ ಹಿಡಿದು ಕಾರ್ಖಾನೆಗಳವರೆಗೆ ನಾನಾ ಕೆಲಸಗಳನ್ನು ಅವು ಮಾಡುತ್ತಿವೆ. ಆದರೆ ಇವನ್ನು ವಿಶೇಷ ಕೆಲಸಗಳಿಗೆ ಬಳಸಿದರೆ ಚೆನ್ನ. ಉದಾಹರಣೆಗೆ, ನೀರಿನಲ್ಲಿ ಮುಳುಗಿದ ಹಡಗಿನ ಅವಶೇಷಗಳನ್ನು ತೆಗೆಯಲು, ದೊಡ್ದ ದೊಡ್ದ ದುರಂತಗಳು ಸಂಭವಿಸಿದಾಗ ಮನುಷ್ಯನ ಕೈಯಲ್ಲಿ ಮಾಡಲಾಗದ ಕೆಲಸಗಳನ್ನು ಮಾದಲು ಇವುಗಳ ಉಪಯೋಗ ಅಸಾಮಾನ್ಯ ! ಅನ್ಯಗ್ರಹಗಳ ಸಂಶೋಧನೆಗಳಲ್ಲಿ ಇವುಗಳ ಕೆಲಸ ಅಭೂತಪೂರ್ವ ! ಅತ್ಯಂತ ಅಪಾಯಕಾರಿಯಾದ ‘ಬಾಂಬ್' ನಿಷ್ಕ್ರಿಯಗೊಳಿಸುವ ಕೆಲಸ ಮತ್ತು ಗಣಿ ನಿರ್ವಹಣೆ ಕೆಲಸಗಳಲ್ಲಿ ಇವು ನಿರ್ವಹಿಸುವ ಕೆಲಸವನ್ನು ಮೆಚ್ಚಲೇ ಬೇಕು. ಈಗಾಗಲೇ ನಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ರೋಬೋಟ್ ನ ಪ್ರವೇಶ ಆಗಿದೆ. ಮುಂದೆ ರೋಬೋಟ್ ಗಳು ಸಾಗಣೆ, ವೈದ್ಯಕೀಯ ಮತ್ತು ಜೀವ ವಿಜ್ಞಾನದಲ್ಲಿ ಮನುಷ್ಯನ ಪ್ರಾಮಾಣಿಕ ಜತೆಗಾರನಾಗಿ, ‘ಮನೋರಂಜಕನಾಗಿ' ರಕ್ಷಣೆಯ ಕಾವಲುಗಾರನಾಗಿ, ಟ್ರಾಫಿಕ್ ಪೋಲೀಸ್ ಆಗಿ ಕೆಲಸ ಮಾಡುವ ದಿನಗಳು ದೂರವಿಲ್ಲ.
ಮನೆಗೆಲಸ ಮಾಡುವ ರೋಬೋಟ್: ಇವತ್ತು ಪ್ರಪಂಚದಲ್ಲಿ ಮನೆಗೆಲಸಗಳನ್ನು ನಿರ್ವಹಿಸುವ ರೋಬೋಟ್ ಗಳು ಎರಡನೆಯ ಸ್ಥಾನದಲ್ಲಿದೆ. ಸುಮಾರು ೧೫೨ ಕಂಪೆನಿಗಳು ಇಂದು ಮನೆಗೆಲಸ ಮಾಡುವ ರೋಬೋಟ್ ಗಳನ್ನು ತಯಾರಿಸುತ್ತಿವೆ. ಇವು ದೊಡ್ಡ ಕಸದ ಬುಟ್ಟಿಯಷ್ಟಿರುತ್ತವೆ. ಇವು ನಿರ್ವಹಿಸುವ ಕೆಲಸ ಒಂದೆರಡಲ್ಲ. ಬೇರೆ ಕೋಣೆಗಳಿಂದ ವಸ್ತುಗಳನ್ನು ತರುವುದು, ಮನೆಗೆಲಸವನ್ನು ನಿರ್ವಹಿಸುವುದು, ಕೇವಲ ಧ್ವನಿಯಿಂದಲೇ ಮನೆಯ ಯಜಮಾನನನ್ನು ಗುರುತಿಸುವುದು, ಧೂಳನ್ನು ತೆಗೆಯುವುದು, ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು- ಹೀಗೆ ಸಾಮಾನ್ಯ ಕೆಲಸಗಳನ್ನು ಅಸಾಮಾನ್ಯವಾಗಿ ನಿರ್ವಹಿಸಿಬಿಡುತ್ತವೆ. ಮನೆಯ ಮುಂದಿನ ಲಾನ್ ನ ನಿರ್ವಹಣೆ, ಮಕ್ಕಳ ಲಾಲನೆ ಪಾಲನೆಯಲ್ಲದೆ ನಿಮಗೆ ಬರುವ ಫೋನ್ ಕಾಲ್ ಗೆ ಕೂಡ ಅವು ಉತ್ತರಿಸಬಲ್ಲವು. ಮನೆ ಯಜಮಾನನಿಗೇನಾದರೂ ಬೇಸರವಾಗಿದ್ದರೆ ಸಿನೆಮಾಗಳನ್ನು ಪರದೆಯ ಮೇಲೆ ಮೂಡಿಸಿ, ಅದಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿ, ಖುಷಿ ಕೊಡಬಲ್ಲವು. ಇತ್ತೀಚಿನ ಹೊಸ ರೋಬೋಟ್ ಗಳು ಒಮ್ಮೆ ಸ್ನೇಹಿತನಂತೆ, ಇನ್ನೊಮ್ಮೆ ಸೇವಕನಂತೆ, ಮತ್ತೊಮ್ಮೆ ಸಂಗಾತಿಯಾಗಿ ರೂಪಾಂತರಗೊಳ್ಳಬಲ್ಲವು. ಅಷ್ಟೇ ಏಕೆ ನಾಯಿಯಾಗಿ, ಬೆಕ್ಕಾಗಿ, ಹಾವಾಗಿ, ಕೀಟಗಳಾಗಿ ನಿಮ್ಮನ್ನು ರಂಜಿಸಬಲ್ಲವು.
ರೋಬೋಟ್ ನ ವಿಶೇಷ ಕಾರ್ಯಗಳು: ಕೆಲವು ರೋಬೋಟ್ ಗಳು ಎರಡು ಕಾಲುಗಳಿಂದ ನಡೆಯಬಲ್ಲವು. ಕಾಲಿಲ್ಲದೆಯೇ ತೆವಳಬಲ್ಲವು. ಗಾಲಿಗಳೊಂದಿಗೆ ಉರುಳಬಲ್ಲವು. ಬೆಟ್ಟಗಳನ್ನು ಹತ್ತಬಲ್ಲವು. ಜಿಗಿದು ಹಾರಬಲ್ಲವು. ಅಷ್ಟೇಕೆ ನಮ್ಮಂತೆಯೇ ಜೋರಾಗಿ ಓಡಬಲ್ಲವು, ಈಜ ಬಲ್ಲವು ಕೂಡ. ಕೆಲವು ರೋಬೋಟ್ ಗಳು ಸ್ವತಂತ್ರ ವಾಹನದಂತೆ ಚಲಿಸಬಲ್ಲವು. ಕೆಲವಂತೂ ಮರುಳುಗಾಡಿನ ಮೇಲೆ ವೇಗವಾಗಿ ಚಲಿಸಬಲ್ಲವು.
ಕೆಲವು ರೋಬೋಟ್ ಗಳು ಸಬ್ ಮೆರೀನ್ ನಂತೆ ನೀರಿನಲ್ಲಿ ಮಾತ್ರ ಕೆಲಸ ಮಾಡುತ್ತವೆ. ಇವು ಸಾಗರದ ಆಳಗಳಲ್ಲಿ, ಸ್ರೀತದ ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಅಲ್ಲದೆ, ಜ್ವಾಲಾಮುಖಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳನ್ನು ನಿರ್ವಹಿಸಬಲ್ಲವು. ಈಜಿಪ್ಟ್ ನಲ್ಲಿ ಪಿರಮಿಡ್ ಗಳ ನಿರ್ವಹಣೆಗಾಗಿ ರೋಬೋಟ್ ಗಳನ್ನು ಬಳಸಲಾಗುತ್ತದೆ. ಕೀಟಗಳನ್ನು ತಿನ್ನುವ ರೋಬೋಟ್ ಗಳೂ ಬಂದಿವೆ ಎಂದರೆ ನಂಬುತ್ತೀರಾ?
(ಇನ್ನೂ ಇದೆ)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ