ಬೊಂಬಾಟ್ ಈ ರೋಬೋಟ್ ! (ಭಾಗ ೨)
ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟ್: ಮನುಷ್ಯನ ದೇಹದ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದದ್ದು. ಇಂದು ಅನೇಕ ರೋಬೋಟ್ ಗಳು ಶಸ್ತ್ರಕ್ರಿಯೆಗಳನ್ನು ಕರಾರುವಕ್ಕಾಗಿ ನಿರ್ವಹಿಸಬಲ್ಲವು. ಹೃದಯ, ಮೂತ್ರಪಿಂಡ, ಮಿದುಳು, ಪಿತ್ತಜನಕಾಂಗ ಮುಂತಾದ ಸೂಕ್ಷ್ಮ ಅಂಗಗಳ ಶಸ್ತ್ರ ಚಿಕಿತ್ಸೆಯಲ್ಲಿ ಇವುಗಳ ಪಾತ್ರ ಅತ್ಯಮೂಲ್ಯ. ಸೂಕ್ಷ್ಮ ಕ್ಯಾಪ್ಸೂಲ್ (Capsule) ರೋಬೋಟ್ ಗಳು ಅನ್ನನಾಳ, ಕರುಳುಗಳ ಮೂಲಕ ಚಲಿಸಿ ಒಳಗಿನ ಸ್ಪಷ್ಟ ಮಾಹಿತಿಯನ್ನು ವೈದ್ಯರಿಗೆ ನೀಡಬಲ್ಲವು. ಅಂಗಾಂಶಗಳನ್ನು ಕತ್ತರಿಸಿ (biopsy) ಹೊರತರಬಲ್ಲವು. ಕ್ಯಾನ್ಸರ್ ಮತ್ತು ಹಲ್ಲಿನ ಚಿಕಿತ್ಸೆಯಲ್ಲಿ ಇವುಗಳ ಪಾತ್ರ ಮಹತ್ತರ. ಹಲ್ಲುಗಳಲ್ಲಿ ತೂತು ಮಾಡಲು, ದಂತಪಂಕ್ತಿಗಳನ್ನು ಜೋಡಿಸಲು ಇವುಗಳ ಬಳಕೆಯಾಗುತ್ತಿದೆ.
ಇತರೆ ಕ್ಷೇತ್ರಗಳಲ್ಲಿ ರೋಬೋಟ್ ನ ಬಳಕೆ: ಮಾನವರಹಿತ ಯುದ್ಧ ವಿಮಾನಗಳಲ್ಲಿ, ರಿಮೋಟ್ ನಿಯಂತ್ರಿತ ಗೂಢಚಾರ ವಿಮಾನಗಳಲ್ಲಿ ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಕಾಡಿನಲ್ಲಿ ಹಬ್ಬಿದ ಬೆಂಕಿಯ ಕಿಚ್ಚನ್ನು ನಂದಿಸಲು ರೋಬೋಟ್ ಗಳನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಹಡಗುಗಳು ಹಾಗೂ ಸಬ್ ಮೆರೀನ್ ಗಳಲ್ಲಿ ರೋಬೋಟ್ ಗಳು ಚಾಲಕನಂತೆ ಕೆಲಸ ಮಾಡಬಲ್ಲವು. ಅಮೇರಿಕದ ನಾಸಾ (NASA) ಬಾಹ್ಯಾಂತರಿಕ್ಷ ಸಂಸ್ಥೆ ಈಗಾಗಲೇ ಮಂಗಳ ಗ್ರಹಕ್ಕೆ ‘ರೋವರ್' ರೋಬೋಟ್ ನ್ನು ಯಶಸ್ವಿಯಾಗಿ ಕಳುಹಿಸಿ ಮಾಹಿತಿಯನ್ನು ಸಂಗ್ರಹಿಸಿದೆ. ಅನ್ಯಗ್ರಹಗಳ ಸಂಶೋಧನೆಯಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸಬಲ್ಲವು. ಕ್ಷುದ್ರ ಗ್ರಹಗಳ (Asteroids) ಪತ್ತೆಗೆ ಮತ್ತು ಅವುಗಳ ನಿರ್ವಹಣೆಗೆ ಅನೇಕ ರೋಬೋಟ್ ಗಳನ್ನು ಬಳಸಲಾಗುತ್ತದೆ. ರೋಬೋಟ್ ಬಾಹ್ಯಾಂತರಿಕ್ಷದಲ್ಲಿ ಅನುಭವಿ ಗಗನಯಾತ್ರಿಯಂತೆ ಕೆಲಸ ಮಾಡಬಲ್ಲದು.
ಟಾಪ್ ಟೆನ್ ರೋಬೋಟ್ ಗಳು
೧. ಕ್ರ್ಯುಯೋ (Qrio) : ೫೮ ಇಂಚಿನ ಎತ್ತರದ ಈ ರೋಬೋಟನ್ನು ಸೋನಿ ಕಂಪೆನಿ ತಯಾರಿಸಿದೆ. ಇದು ಮನರಂಜನೆಗಾಗಿಯೇ ತಯಾರಾಗಿದ್ದು ಸಂಗೀತ, ಹಾಡುಗಳೊಂದಿಗೆ ಕುಣಿದು ಕುಪ್ಪಳಿಸುವ ಶಕ್ತಿ ಇದೆ.
೨. ರೊಂಬೊ-ಕೋಂಬೊ: ಇವು ಮನೆಗೆಲಸದ ನಿರ್ವಹಣೆಗಾಗಿಯೇ ವಿಶೇಷವಾಗಿ ತಯಾರಾದ ರೋಬೋಟುಗಳು. ಇತ್ತೀಚಿನ ವರ್ಷಗಳಲ್ಲಿ ಇವುಗಳ ಉತ್ಪಾದನೆ ಮೂರು ಪಟ್ಟು ಹೆಚ್ಚಿದೆ.
೩. ಸ್ವಂತ ಪ್ರತಿರೂಪ ತಯಾರಿಸುವ ರೋಬೋಟ್: ೨೦೦೫ರಲ್ಲಿ ನ್ಯೂಯಾರ್ಕ್ ನ ಕಾರ್ನೆಲ್ ವಿಶ್ವವಿದ್ಯಾನಿಲಯ ಈ ರೋಬೋಟನ್ನು ತಯಾರಿಸಿತು. ಇವು ತಮ್ಮದೇ ಮಾದರಿಯನ್ನು ಪುನರ್ ನಿರ್ಮಾಣ ಮಾಡಬಲ್ಲವು.
೪. ಸುತ್ತುವ ಸೆಕ್ಯುರಿಟಿ ಗಾರ್ಡ್ ರೋಬೋಟ್: ಸ್ವೀಡನ್ ನ ವಿಜ್ಞಾನಿಗಳು ಈ ರೋಬೋಟನ್ನು ತಯಾರಿಸಿದ್ದಾರೆ. ಮೊದಲು ಈ ರೋಬೋಟ್ ಗಳನ್ನು ಅಂತರ್ ಗ್ರಹಗಳ ಸರ್ವೇಕ್ಷಣೆಗೆ ಬಳಸಲಾಗುತ್ತಿತ್ತು. ಈಗ ಇವುಗಳನ್ನು ಸ್ಕೆಕ್ಯೂರಿಟಿ ಗಾರ್ಡ್ ಗಳಾಗಿ ಉಪಯೋಗಿಸಲಾಗುತ್ತಿದೆ.
೫. ಐಬೋ (IBIO): ಈ ರೋಬೋಟುಗಳು ಪ್ರಾಣಿಗಳಂತೆ ವರ್ತಿಸಬಲ್ಲವು. ಸಾಕುಪ್ರಾಣಿಗಳಾದ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಂತೆ ವರ್ತಿಸಿ ಮನಸಿಗೆ ಮುದ ನೀಡಬಲ್ಲವು. ಇವು ಬಿಡುಗಡೆಯಾದ ೨೦ ನಿಮಿಷದಲ್ಲಿ ಒಂದು ಲಕ್ಷ ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿವೆ.
೬. ಸ್ಟಾನ್ಲೆ (Stanley) ಕಾರ್: ಇದೊಂದು ರೋಬೋಟ್ ‘ರೇಸ್ ಕಾರ್'. ಎಂಥ ಕಠಿಣ ಪರಿಸ್ಥಿತಿಯಲ್ಲೂ ಮರಳುಗಾಡಿನಂತಹ ಪ್ರದೇಶಗಳಲ್ಲೂ ಸರಾಗವಾಗಿ ಚಲಿಸಬಲ್ಲವು. ಇದರಲ್ಲಿ ಕ್ಯಾಮೆರಾ, ರೇಡಾರ್ ಮುಂತಾದ ಸೂಕ್ಷ್ಮಗ್ರಾಹಿ ಯಂತ್ರಗಳನ್ನು ಅಳವಡಿಸಲಾಗಿರುತ್ತದೆ.
೭. ಅಸಿಮೋ (Asimo) : ಇದು ೧೩೦ ಸೆಂ ಮೀ ಎತ್ತರ, ೫೪ ಕೆ ಜಿ ತೂಕವಿರುವ ಪ್ರಪಂಚದ ಮೊಟ್ಟಮೊದಲ ನಡೆದಾಡುವ ರೋಬೋಟ್. ಅಂಕುಡೊಂಕಾಗಿಯೂ ಚಲಿಸಬಲ್ಲದು. ಇದು ೧೦ ಕಿ.ಗ್ರಾಂ. ಭಾರವನ್ನೂ ಹೊರಬಲ್ಲದು. ಅತಿಥಿಗಳಿಗೆ ತಳ್ಳುಗಾಡಿಯ ಮೂಲಕ ಕಾಫಿ-ತಿಂಡಿಯನ್ನೂ ಕೂಡಾ ಸರಬರಾಜು ಮಾಡಬಲ್ಲದು.
೮. ನಾಸಾ ದ ರೋವರ್: ಇದು ಮಂಗಳ ಗ್ರಹಕ್ಕೆ ಕಳುಹಿಸಿದ ರೋಬೋಟ್. ಇದು ನಾಲ್ಕು ಗಾಲಿಗಳನ್ನು ಹೊಂದಿದ್ದು ಒಂದು ಬೈಕಿನ ಗಾತ್ರದಲ್ಲಿದೆ. ಇದು ಮಂಗಳ ಗ್ರಹಗಳ ಮೇಲೆ ೯೦ ದಿನಗಳಿದ್ದು, ೧೨ ಕಿ.ಮೀ.ಸುತ್ತಳತೆಯಲ್ಲಿ ಚಲಿಸಿ ಭೂಮಿಗೆ ಅನೇಕ ಚಿತ್ರಗಳನ್ನು ಹಾಗೂ ಮಾಹಿತಿಗಳನ್ನೂ ರವಾನಿಸಿದೆ.
೯. ಕಣ ರೋಬೋಟ್: ೨೦೦೫ರಲ್ಲಿ ಕ್ಯಾಲಿಫೋರ್ನಿಯಾ ವಿವಿ ನಿರ್ಮಿಸಿದ ಈ ರೋಬೋಟ್ ಕೂದಲಿಗಿಂತಲೂ ತೆಳ್ಳಗಿದೆ. ಇದು ರಿಮೋಟ್ ಕಂಟ್ರೋಲ್ಡ್ ಕಾರಿನಂತೆ ಯಾವ ದಿಕ್ಕಿಗಾದರೂ ಚಲಿಸಬಲ್ಲದು. ಇವು ಧೂಳಿನ ಕಣಗಳನ್ನು ಹಾಗೂ ಸತ್ತ ಜೀವಕೋಶಗಳನ್ನು ಹೊರಸಾಗಿಸುವ ವ್ಯವಸ್ಥೆ ಹೊಂದಿದೆ.
೧೦. ಕೀಟಗಳನ್ನು ತಿನ್ನುವ ರೋಬೋಟ್: ಇದು ಇಂಗ್ಲೆಂಡಿನ ಬ್ರಿಸ್ಟಲ್ ವಿ ವಿ ಅಭಿವೃದ್ದಿ ಪಡಿಸಿದ ರೋಬೋಟ್. ಈ ರೋಬೋಟ್ ಗಳು ನೊಣ, ಸೊಳ್ಳೆ ಮುಂತಾದ ಕ್ರಿಮಿಕೀಟಗಳನ್ನು ತಿಂದು ವಾತಾವರಣವನ್ನು ಶುಚಿಯಾಗಿಡುತ್ತದೆ.
(ಮುಗಿಯಿತು)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ