ಬೊಗಸೆ ತುಂಬಾ ನಕ್ಷತ್ರಗಳು

ಬೊಗಸೆ ತುಂಬಾ ನಕ್ಷತ್ರಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಸುಮತಿ ಉಡುಪ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ಬೆಲೆ: ರೂ.೧೫೦.೦೦, ಮುದ್ರಣ: ೨೦೨೧

ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ. ಮಹಿಳಾ ಓದುಗರಿಗಂತೂ ವಸುಮತಿಯವರ ಕತೆಗಳೆಂದರೆ ಪಂಚಪ್ರಾಣ.

ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ‘ಬಂದನಾ ಹುಲಿರಾಯ', ‘ಅಗ್ನಿ ದಿವ್ಯ’, ‘ಮೃಗತೃಷ್ಣಾ’, ‘ಪಾತಾಳ ಗರಡಿ', ‘ನಮ್ಮ ನಡುವಿನ ಕಾಂತಾಮಣಿಯರು', ‘ಸಂಕ್ರಮಣ', ‘ಮಾಯೆಯ ಮಾಟ', ‘ಅಂತರಂಗದ ಪಿಸುನುಡಿ', ‘ತಲ್ಲಣಕೆ ಬಾಯಿಲ್ಲವಯ್ಯ' ಇವರ ಪ್ರಮುಖ ಕಥಾ ಸಂಕಲನಗಳು. ಕಥೆಗಳಂತೆಯೇ ‘ಪರಿವರ್ತನೆ', ‘ಸಂಬಂಧಗಳು', ಮನ್ವಂತರ', ‘ಸಂಧಿಕಾಲ', ವಿಳಾಸ ಬದಲಾಗುತ್ತಿದೆ' ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.

ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡಹಾಗೆ ಚಿತ್ರಿಸುತ್ತಾರೆ. ‘ಬೊಗಸೆ ತುಂಬಾ ನಕ್ಷತ್ರಗಳು' ಅಂಕಿತ ಪುಸ್ತಕದಿಂದ ಪ್ರಕಟವಾಗುತ್ತಿರುವ ವಸುಮತಿ ಉಡುಪ ಅವರ ಇತ್ತೀಚಿನ ಕಥಾ ಸಂಕಲನ.