ಬೊಗಸೆ ತುಂಬಾ ಹನಿಗಳು!
ಜೀವ ಸೆಲೆ
ಓ ನಯನಗಳೇ ನಿಮ್ಮಿಂದ
ಜಗದ ಸೌಂದರ್ಯ ಸವಿದೆ;
ಕಿವಿಗಳೇ ನಿಮ್ಮಿಂದ
ಮಧುರ ಗಾನವ ಕೇಳ್ದೆ;
ನಾಸಿಕವೇ ನಿನ್ನಿಂದ
ಸುವಾಸನೆಯ ಸವಿ ಕುಡಿದೆ;
ಜಿಹ್ವೆಯೇ ನಿನ್ನಿಂದ
ಸವಿರುಚಿಯ ಚಪ್ಪರಿಸಿದೆ;
ಚರ್ಮವೇ ನಿನ್ನಿಂದ
ಸ್ಪರ್ಶ ಸುಖವ ಪಡೆದೆ-
ಓ ಮಸ್ತಕವೇ ನೀನೆಲ್ಲರನು
ಹದವರಿತು ಮೇಳೈಸಿದೆ-
ಇದೆಲ್ಲಾ ಆ ಜೀವಸೆಲೆಯ
ಮಹತ್ವದ ಕೊಡುಗೆಯಲ್ತೇ;
ಎನ್ನ ಜೀವಿಯೆಂದೆನಿಸಿದುದಕೆ
ಶರಣು ಶರಣು ಜೀವನೆಲೆಯೇ!
***
ಮೌಲ್ಯ
ಮತ ಹಾಕಲು
ಹೋಗುವಾಗ
ನಾನು-
ಇರುವೆ ಮುತ್ತಿದ
ಬೆಲ್ಲ;
ಲಕ-ಲಕ ಹೊಳೆವ
ಚಲಾವಣೆಯ
ನಾಣ್ಯ....
ಓಟನು ಒತ್ತಿ
ವಾಪಾಸ್
ಬರುವಾಗ-
ಜೇನು ತೊರೆದ
ಗೂಡು;
ಮೌಲ್ಯ
ಕಳೆದುಕೊಂಡು
ನಗಣ್ಯ!
***
ಧನ್ಯವಾದಗಳು...
ಓ ಮತದಾನವೆಂಬ
ಪರಮ ಶ್ರೇಷ್ಠನೇ
ನಿನಗಿದೋ
ವಿನಮ್ರ ಗೌರವದ
ನಮಸ್ಕಾರ-
ನಮ್ಮನಾಳುವ
ಮಂತ್ರಿಗಳು
ಸರಳವಾಗಿ;
ಹೊಗಳು ಭಟ್ಟರ
ಪಟಾಲಂ ಇಲ್ಲದೆ;
ಬಾಜಾ ಭಜಂತ್ರಿಗಳ
ನರ್ತನವಿಲ್ಲದೆ;
ವಿನೀತರಾಗಿ
ಸರತಿ ಸಾಲಿನಲ್ಲಿ ನಿಂತು;
ಸರಳ ನಗುಮೊಗದ
ಸಾತ್ವಿಕನಂತೆ
ಪೋಸ್ ಕೊಟ್ಟು;
ತನಗೆ ತಾನೇ
ಮತದಾನ
ಮಾಡಿಕೊಳ್ಳುವಂತೆ
ಮಾಡಿದ್ದಕ್ಕೆ....
ಧನ್ಯವಾದಗಳು ನಿನಗೆ
ಓ ಪ್ರಜಾ ಪ್ರಭುತ್ವದ
ಪರಮ ಶ್ರೇಷ್ಠನೇ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ