ಬೋಗಿ ಸಂಖ್ಯೆ ಸಾ.೪

ಬೋಗಿ ಸಂಖ್ಯೆ ಸಾ.೪

ಬರಹ

(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ)
ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ್‍ಗಾಗಿ ಕೈ ತೂರಿಸಿ, ಪಡೆದುಕೊಂಡು ಹಿಂತಿರುಗಿದ ಸ್ವರಳಿಗೆ ಆತ ಮತ್ತೊಮ್ಮೆ ಕಾಣಿಸಿದ!
ಅವಳ ಹಿಂದೆಯೆ ನಿಂತು ಆತ ಟಿಕೇಟು ಖರೀದಿಸಿದ್ದ! ಬಸ್ಸು ಇಳಿದು ರೈಲು ನಿಲ್ದಾಣದವರೆಗೆ ನಡೆದು ಬರುತ್ತಿರುವಾಗಲೂ ಆತ ಹಿಂಬಾಲಿಸಿಕೊಂಡೇ ಬಂದಿದ್ದ!
ಅಪರಿಚಿತ ಅವಳನ್ನು ಕಂಡು ಮುಗಳ್ನಕ್ಕ. ಸ್ವರ ಹೆದರಿ ಮೆಲ್ಲಗೆ ಮೈ ಅದುರಿಸಿದಳು. ರೈಲು ಬರಲು ಇನ್ನೂ ಅರ್ಧ ಗಂಟೆಯಿತ್ತು. ಅವನಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯ. ವೇಗದ ನಡುಗೆಯಲ್ಲಿ ಪ್ಲಾಟ್‍ಫಾರಂನಲ್ಲಿ ಹೆಜ್ಜೆ ಸರಿಸುತ್ತಾ ಪುಸ್ತಕದ ಅಂಗಡಿಯ ಮುಂದೆ ನಿಂತು ಹಿಂತಿರುಗಿದಳು. ಅಪರಿಚಿತ ಕಾಣಿಸದಾದಾಗ ನಿಟ್ಟುಸಿರಿಟ್ಟು ಪುಸ್ತಕಗಳ ಕಡೆಗೆ ಗಮನ ಹರಿಸಿದಳು. ಒಂದೆರಡು ವಾರಪತ್ರಿಕೆಗಳನ್ನು ತೆಗೆದುಕೊಂಡು ಸಿಮೆಂಟ್ ಬೆಂಚಿನ ಕಡೆಗೆ ನಡೆಯುವಾಗ ಆತ ಅವಳ ಹಿಂದೆ ಮುಗುಳ್ನಗುತ್ತಾ ನಿಂತಿದ್ದ!
ಒಂದು ಕ್ಷಣ ಬೆದರಿದ ಹುಡುಗಿ ಸರಸರನೆ ನಡೆದು ಬಾಗಿಲ ಕಡೆಗಿದ್ದ ರೈಲ್ವೆ ಠಾಣೆಯ ಮುಂದಿನ ಬೆಂಚಿನ ಮೇಲೆ ಕುಳಿತು ನೋಡಿದಳು. ಆತ ಕಾಣಿಸಲಿಲ್ಲ. ನೋಡೋದಿಕ್ಕೆ ಸ್ಫುರದ್ರೂಪಿ ಯುವಕ. ದುಂಡು ಮುಖದ ದಪ್ಪ ಮೀಸೆಯ ಬಿಳಿ ಚಹರೆಯ ಯುವಕ ಆಕರ್ಷಕವಾಗಿದ್ದ. ಅಂತಹ ಸುಂದರ ಯುವಕ ತನ್ನ ಹಿಂದೆ ಬಿದ್ದಿದ್ದೇಕೆ? ಸ್ವರಳಿಗೆ ತಿಳಿಯಲಿಲ್ಲ.
ಆತ ಮಲೆಯಾಳಂ ಪತ್ರಿಕೆಯೊಂದನ್ನು ಹಿಡಿದುಕೊಂಡು ಘಳಿಗೆಗೊಮ್ಮೆ ಸ್ವರಳನ್ನು ಗಮನಿಸುತ್ತಿದ್ದ.
ಅಲ್ಲಲ್ಲಿ ನೇತು ಹಾಕಿದ್ದ ಟಿ.ವಿ. ಯಲ್ಲಿ ಯಾವುದೋ ಕನ್ನಡದ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ರೈಲ್ವೆ ನಿಲ್ದಾಣದಲ್ಲಿ ಅಷ್ಟೊಂದು ಜನರಿರಲಿಲ್ಲ. ಇನ್ನರ್ಧ ಗಂಟೆಯಲ್ಲಿ ಶೋರ್‍‍ನೂರ್‍‍ಗೆ ಹೊರಡುವ ರೈಲು ಫ್ಲಾಟ್‍ಫಾರಂ ಅನ್ನು ತಲುಪಲಿದೆ ಎಂದು ಉದ್ಗೋಷಕಿ ಹೇಳಿದ್ದರಿಂದ ಸ್ವರ ಅಲ್ಲಿಯೇ ಕುಳಿತಿದ್ದಳು.
ಇದ್ದಕ್ಕಿದ್ದಂತೆ ಟಕ್ ಟಕ್ ಸದ್ದಿನೊಂದಿಗೆ ಧ್ವನಿ ವರ್ಧಕದಲ್ಲಿ ಮಾತುಗಳು ಆರಂಭವಾದವು.

"ಪ್ರಯಾಣಿಕರ ಗಮನಕ್ಕೆ. ಮಂಗಳೂರು ಶೋರ್‍‍ನೂರ್‍ ಪ್ಯಾಸೆಂಜರ್ ಗಾಡಿ ಸಂಖ್ಯೆ ೯೮೫೬೭ ಫ್ಲಾಟ್‍ಫಾರಂ ನಂಬರ್ ಒಂದರ ಬದಲಾಗಿ ಫ್ಲಾಟ್‍ಫಾರಂ ನಂಬರ್ ನಾಲ್ಕನ್ನು ಸೇರಲಿದೆ......." ಧ್ವನಿವರ್ಧಕದಲ್ಲಿಯ ಮಾತುಗಳು ಮುಂದುವರಿಯುತ್ತಿದ್ದಂತೆ ಸ್ವರ ತಟ್ಟನೆ ಎದ್ದು, ಆತುರಾತುರವಾಗಿ ಹೆಜ್ಜೆಗಳನ್ನು ಸರಿಸಿ ಓವರ್ ಬ್ರಿಡ್ಜ್‍ನ ಕಡೆಗೆ ನಡೆದಳು. ಕೆಲವರಂತೂ ರೈಲು ಹಳಿಯನ್ನು ದಾಟುತ್ತಲೇ, ಫ್ಲಾಟ್‍ಫಾರಂ ನಾಲ್ಕನ್ನು ತಲುಪಿದ್ದರು. ಅಪರಿಚಿತ ಯುವಕ, ಸ್ವರ ವೇಗವಾಗಿ ಹೋಗುತ್ತಿದ್ದುದನ್ನು ಗಮನಿಸಿ, ತನ್ನ ಕೈಯಲ್ಲಿದ್ದ ಪತ್ರಿಕೆಯನ್ನು ಅವಸರವಸವರವಾಗಿ ಮುಚ್ಚಿದ. ಅದಾಗಲೇ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿಯೂ ಉದ್ಗೋಷಕಿ ಹೇಳಿದ್ದರಿಂದ ಆತ ಕೂಡ ಫ್ಲಾಟ್ ಫಾರ್‍ಂ ನಾಲ್ಕರ ಕಡೆಗೆ ನಡೆದ.
ಸ್ವರ ಗಡಿಯಾರದತ್ತ ದೃಷ್ಟಿ ಹೊರಳಿಸಿದಳು. ರೈಲು ಹೊರಡಲು ಇನ್ನು ಕೇವಲ ಐದು ನಿಮಿಷಗಳು ಉಳಿದಿತ್ತು. ಅವಳು ಓವರ್ ಬ್ರಿಡ್ಜ್‍ನ ಮೇಲೆ ಬಂದಾಗ, ಒಮ್ಮಿದೊಮ್ಮೆಗೆ ನೂಕು ನುಗ್ಗಲಾಗುವಷ್ಟು ಜನ ತುಂಬಿ ಹೋದರು. ಹೆಗಲಿಗೇರಿಸಿ ಕಪ್ಪು ಚರ್ಮದ ಚೀಲವನ್ನು ಇನ್ನೊಂದು ಹೆಗಲಿಗೆ ಬದಲಿಸಿ, ಸೂಟ್‍ಕೇಸ್‍ನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ನಡೆಯುವಾಗ ಮುಗ್ಗರಿಸಿದಂತಾಯಿತು.
"ಎಕ್ಸ್ ಕ್ಯೂಸ್ ಮಿ" ಹಿಂದಿನಿಂದ ಯುವಕನ ಧ್ವನಿ ಬರುತ್ತಲೇ ಸರಿದು ನಿಂತಳು.
"ನಾನು ನಿಮಗೆ ಸಹಾಯ ಮಾಡಲೇ?" ಮಲೆಯಾಳಂ ಮಿಶ್ರಿತ ಕನ್ನಡದಲ್ಲಿ ಕೇಳಿದ ಯುವಕನತ್ತ ನೋಡಿದಳು ಸ್ವರ.
ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಯುವಕ!
ಸ್ವರಳ ಮುಖಕ್ಕೆ ರಕ್ತ ನುಗ್ಗಿದಂತಾಗಿ ಮೆಲ್ಲನೆ ಬೆವತು ಹೋದಳು. ಆತನತ್ತ ನೋಡದೆ ಸರಸರನೆ ಹೆಜ್ಜೆ ಹಾಕಿ ಮೆಟ್ಟಲುಗಳನ್ನು ಇಳಿದು ಫ್ಲಾಟ್‍ಫಾರಂ ನಂ.೪ನ್ನು ತಲುಪಿದಾಗ, ರೈಲುಗಾಡಿ ಶಿಳ್ಳೆ ಹೊಡೆಯುತ್ತಾ ಬಂದು ನಿಂತಿತು. ಅವಳು ಒಂದು ಕ್ಷಣ ನಿಟ್ಟುಸಿರಿಟ್ಟಳು. ಕಪ್ಪು ಚರ್ಮದ ಚೀಲಕ್ಕೆ ಕೈ ಹಾಕಿ ಟಿಕೇಟ್‍ನ್ನು ಗಮನಿಸಿದಳು.
ಬೋಗಿ ಸಂಖ್ಯೆ ಸಾಮಾನ್ಯ ೪!
ಅದನ್ನು ಗಮನಿಸುವ ಮೊದಲು ಹಿಂತಿರುಗಿ ನೋಡಿದಳು. ತನ್ನನ್ನು ಮಾತನಾಡಿಸಿದ್ದ ಸುಂದರ ಯುವಕ ಕಾಣಿಸಲಿಲ್ಲ. ಅವಳು ವೇಗದ ನಡುಗೆಯಲ್ಲಿ ನಡೆದು ತನ್ನ ಬೋಗಿಯ ಬಳಿ ಬಂದಳು.
ರೈಲು ಹೊರಡುವ ಸೂಚನೆಯನ್ನು ನೀಡುವಂತೆ ಶಿಳ್ಳೆ ಹೊಡೆಯಿತು.
ಸೂಟ್‍ಕೇಸ್‍ನ್ನು ರೈಲಿನ ಒಳಗಿಟ್ಟು, ಹತ್ತಿದವಳು ತನ್ನ ಸೀಟಿನಲ್ಲಿ ಕುಳಿತು ದೀರ್ಘ ಉಸಿರು ತೆಗೆದಳು.
ಅಪರಿಚಿತ ಬಸ್ಸು ಇಳಿದು ಬಂದಾಗಿನಿಂದ ಅವಳನ್ನು ಅನುಸರಿಸಿ ಬಂದಿದ್ದು ಅವಳಿಗೆ ಭೀತಿ ತರಿಸಿತ್ತು. ಆತ ಯಾರೆಂದು ತಿಳಿಯದೆ ಕಂಗಾಲಾಗಿದ್ದಳು. ಆತ ತನ್ನನ್ನು ಹಿಂಬಾಲಿಸಿ ಬರುತ್ತಿರುವುದಾದರೂ ಏಕೆ? ಪಕ್ಕನೆ ಕುತ್ತಿಗೆಯ ಬಳಿ ತನ್ನ ಕೈ ಸರಿಸಿ ಮುಟ್ಟಿಕೊಂಡಳು. ಚಿನ್ನದ ಸರ ಹಾಗೇ ಇದೆ. ರೈಲು ಪ್ರಯಾಣದಲ್ಲಿ ಕಳ್ಳತನ ಸಾಮಾನ್ಯ. ಆದರೆ ತನ್ನ ಕತ್ತಿನಲ್ಲಿರುವುದು ಒಂದೆಳೆಯ ಚಿನ್ನದ ಸರ. ಅದಕ್ಕಾಗಿ ಆತ ತನ್ನನ್ನು ಹಿಂಬಾಲಿಸಿರಲಾರ. ನೋಡೋದಿಕ್ಕೂ ಸ್ಫುರದ್ರೂಪಿ. ಯಾವ ಹುಡುಗಿಯಾದರೂ ಸುಲಭವಾಗಿ ಅವನ ಬಲೆಗೆ ಬೀಳಬಹುದು. ತನ್ನನ್ನು ಆತನ ಬಲೆಗೆ ಬೀಳಿಸಲು ಅನುಸರಿಸಿ ಬಂದಿರಬಹುದೆ? ಸ್ವರ ಒಮ್ಮೆ ಸುತ್ತಲೂ ದೃಷ್ಟಿ ಹೊರಳಿಸಿದಳು. ಆ ಬೋಗಿಯಲ್ಲಿ ಅಷ್ಟೊಂದು ಜನರಿರಲಿಲ್ಲ. ರೈಲು ಹೊರಡುವವರೆಗೆ ಅವಳಿಗೆ ಆತಂಕವೇ ಇತ್ತು.
ರೈಲು ಮತ್ತೊಮ್ಮೆ ಶಿಳ್ಳೆ ಹೊಡೆದು ನಿಧಾನಕ್ಕೆ ಚಲಿಸಲಾರಂಭಿಸಿತು. ಸ್ವರ ಸಮಾಧಾನದ ಉಸಿರು ದಬ್ಬಿದಳು. ಚೀಲದಲ್ಲಿದ್ದ ವಾರಪತ್ರಿಕೆಯೊಂದನ್ನು ತೆಗೆದು ತಿರುವಿ ಹಾಕಲಾರಂಭಿಸಿದಳು.
ರೈಲು ಮೆಲ್ಲಗೆ ಕುಲುಕುತ್ತಾ ವೇಗವನ್ನು ಪಡೆಯಲಾರಂಭಿಸಿತು. ತಟ್ಟನೆ ಆತ ಅವಳ ದೃಷ್ಟಿಗೆ ಗೋಚರಿಸಿದ! ಒಂದೊಂದೇ ಬೋಗಿಯ ಕಡೆಗೆ ಕತ್ತು ಉದ್ದ ಮಾಡಿ ನೋಡುತ್ತಿದ್ದ!
ಸ್ವರ ಪಕ್ಕನೆ ಮುಖಕ್ಕೆ ಪುಸ್ತಕವನ್ನು ಅಡ್ಡ ಹಿಡಿದಳು. ಅವಳಿಗರಿವಿಲ್ಲದಂತೆ ಅವಳೆದೆ ಢವ ಢವ ಬಡಿಯಲಾರಂಭಿಸಿತು. ರೈಲು ವೇಗ ಪಡೆದುಕೊಂಡಾಗಲೊಮ್ಮೆ ನೆಮ್ಮದಿಯೆನಿಸಿತು. ಮತ್ತೆ ಪುಸ್ತಕ ತೆರೆದು ಅದರಲ್ಲಿಯ ಧಾರಾವಾಹಿಯೊಂದನ್ನು ಓದಲಾರಂಭಿಸಿದಳು.
ಪುಸ್ತಕ ಓದುವುದರಲ್ಲಿ ಮುಳುಗಿದ್ದವಳಿಗೆ ಹತ್ತಿರ ಬಂದು ಕುಳಿತವರನ್ನು ಕೂಡ ಗಮನಿಸಿರಲಿಲ್ಲ.
"ಎಕ್ಸ್ ಕ್ಯೂಸ್ ಮಿ, ಪುಸ್ತಕ ಚೆನ್ನಾಗಿದೆಯಾ?" ಅದೇ ಮಲೆಯಾಳಂ ಮಿಶ್ರಿತ ಕನ್ನಡದಲ್ಲಿ ಕೇಳಿದ ಯುವಕನತ್ತ ಮುಖ ಹೊರಳಿಸಿದಳು.
ಹಿಂಬಾಲಿಸಿ ಬಂದಿದ್ದ ಅಪರಿಚಿತ ಚೆಲುವ!
ಕಣ್ಣುಗಳನ್ನು ಅಗಲಕ್ಕೆ ತೆರೆದು ಬಾಯಿಗೆ ಕೈ ಅಡ್ಡ ಹಿಡಿದಳು.
"ಶ್! ಕಿರುಚಿಕೊಳ್ಬೇಡಿ........ ನಾನೇನು ನಿಮ್ಮನ್ನು ಮಾಡೋದಿಲ್ಲ" ತಗ್ಗಿದ ದನಿಯಲ್ಲಿ ಹೇಳಿದ.
ಅವಳು ಅತ್ತಿತ್ತ ಕತ್ತು ಹೊರಳಿಸಿ ಹೆದರುತ್ತಲೇ ಕಿಟಕಿಯ ಬದಿಗೆ ಸರಿದಳು.
"...... ನಿಮ್ಮಿಂದ ನನಗೊಂದು ಉಪಕಾರವಾಗ್ಬೇಕು"
ಹೆದರಿದ ಹುಡುಗಿ ಆಶ್ಚರ್ಯದ ನೋಟ ಬೀರಿದಳು.
"ನಿಮ್ಮನ್ನೆ ಕೇಳ್ತಾ ಇರೋದು, ನೀವು ಶೋರ್‍‍ನೂರ್‍‍ಗೆ ಟಿಕೇಟ್ ತೆಗೆದಿದ್ದೀರಿಂತ ಗೊತ್ತು" ಮಾತು ನಿಲ್ಲಿಸಿ ಹಿಂದೆ ತಿರುಗಿ ನೋಡಿದ.
ತನ್ನ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದ್ದಾನೆ ಅಪರಿಚಿತ! ಅವನ್ಯಾಕೆ ತನ್ನನ್ನು ಹಿಂಬಾಲಿಸುತ್ತಿದ್ದಾನೆ? ಅರ್ಥವಾಗದ ಪ್ರಶ್ನೆ ತಲೆ ಕೊರೆಯುತ್ತಿತ್ತು.
ಆತ ತಟ್ಟನೆ ಎದ್ದು ನಿಂತ. ಅವನ ಕಣ್ಣುಗಳಲ್ಲಿ ಅದೇನೋ ಭೀತಿ ತುಂಬಿದಂತಿತ್ತು.
"ಅವರು ಬರ್‍ತಿದ್ದಾರೆ..... ಮತ್ತೆ ಭೇಟಿಯಾಗ್ತೀನಿ" ತಗ್ಗಿದ ದನಿಯಲ್ಲಿ ಹೇಳಿ ಸರಸರನೆ ಮುಂದಿನ ಬೋಗಿಗೆ ನಡೆದ.
ಸ್ವರ ಅವನು ಹೋದ ನಂತರ ಹಿಂದೆ ತಿರುಗಿ ನೋಡಿದಳು. ಟಿ.ಸಿ. ಟಿಕೇಟುಗಳನ್ನು ಪರಿಶೀಲಿಸುತ್ತಿದ್ದ.
ಅಂದರೆ, ಅಪರಿಚಿತ ಟಿಕೇಟ್ ಇಲ್ಲದೆ ಪ್ರಯಾಣಿಸುತ್ತಿದ್ದಾನೆ? ಹಾಗಾದರೆ ಟಿಕೇಟ್ ಖರೀದಿಸುವಾಗ ತನ್ನ ಹಿಂದೆ ನಿಂತಿದ್ದೇಕೆ? ಮನಸ್ಸಿನಲ್ಲಿ ಮೂಡಿದ್ದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಅಪರಿಚಿತ ಬಾರಿ ಖದೀಮನೆ ಇರಬೇಕು! ಇದು ತನಗೊಳ್ಳೆ ಗ್ರಹಚಾರ!
ಸಣ್ಣ ಸ್ಟೇಷನ್ ಬರುತ್ತಲೇ ರೈಲು ನಿಂತಿತು. ಚಹಾ, ತಿಂಡಿ ಮಾರುವವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅತ್ತಿತ್ತ ಕೂಗು ಹಾಕಿಕೊಂಡು ಹೋಗುತ್ತಿದ್ದರು.
ರೈಲು ಹೊರಡುವ ಸೂಚನೆ ನೀಡಿತು. ದಪ್ಪ ತುಟಿಯ ದಾಂಡಿಗನೊಬ್ಬ ಸ್ವರಳ ಎದುರಿಗಿನ ಸೀಟಿನಲ್ಲಿ ಕುಳಿತ. ಅವನ ನೋಟ ವಿಚಿತ್ರವಾಗಿತ್ತು! ಸ್ವರ ಅವನ ನೋಟ ಎದುರಿಸಲಾರದೆ ಪುಸ್ತಕದ ಕಡೆಗೆ ಗಮನ ಹರಿಸಿದಳು. ಪುಸ್ತಕದ ಎಡೆಯಿಂದ ಮೆಲ್ಲನೆ ದಪ್ಪ ತುಟಿಯ ವ್ಯಕ್ತಿಯತ್ತ ನೋಟ ಬೀರಿದಳು. ಆತನ ದೃಷ್ಟಿ ಸೂಟ್‍ಕೇಸ್‍ನ ಕಡೆಗಿತ್ತು. ಪುಸ್ತಕವನ್ನು ಮುಖದಿಂದ ಹೊರಳಿಸಿ ಆತನೆಡೆಗೆ ನೋಡಿದಳು.
ಆತ ತೋರು ಬೆರಳು ಮುಂದೆ ತಂದು ಸೂಟ್‍ಕೇಸಿನತ್ತ ತೋರಿಸಿದ. ಅರ್ಥವಾಗದೆ ಕಾಲಿನ ಬಳಿಯಿದ್ದ ಸೂಟ್‍ಕೇಸ್‍ನ್ನು ಬಗ್ಗಿ ನೋಡಿದಳು.
"ಏಯ್ ಹುಡುಗಿ, ಅದು ಯಾರ್‍ದು?" ಗೊಗ್ಗರು ದನಿ ಹೊರ ಬಂತು.
"ನನ್ನ ..... ನನ್ನದೆ....." ದನಿಯಲ್ಲಿ ಕಂಪನವಿತ್ತು. ಸೂಟ್‍ಕೇಸ್‍ನ್ನು ಸರಿಸಿ ಕಾಲಿನ ಬಳಿ ಇರಿಸಿಕೊಂಡಳು.
ಏಕಾಏಕಿ ಅವನ ದೃಷ್ಟಿ ಅವಳ ಬಳಿಯಿದ್ದ ಕಪ್ಪಗಿನ ಚರ್ಮದ ಚೀಲದ ಕಡೆಗೆ ಹೊರಳಿತು. ಆತನನ್ನು ಗಮನಿಸಿದವಳು, ಆತ ಕೇಳುವ ಮೊದಲೇ, "ಇದೂ ನನ್ನದೇ........" ಎಂದು ಅದರ ಕೈಯನ್ನು ಹೆಗಲಿಗೇರಿಸಿದಳು.
ಮತ್ತೊಬ್ಬ ಎತ್ತರ ನಿಲುವಿನ ವ್ಯಕ್ತಿ ದಪ್ಪ ತುಟಿಯ ವ್ಯಕ್ತಿಯ ಬಳಿ ಕುಳಿತು ಸ್ವರಳತ್ತ ನೋಡಿದ. ಸ್ವರಳಿಗೆ ಮೂರನೆಯ ವ್ಯಕ್ತಿ ಅಲ್ಲಿರುವುದರಿಂದ ತುಸು ಧೈರ್ಯ ಬಂತು.
"ಏನಂತೆ ಗುರು? ಹಕ್ಕಿಗೇನು ಗೊತ್ತಿಲ್ವಂತೆಯಾ?"
ಎತ್ತರ ನಿಲುವಿನ ವ್ಯಕ್ತಿ ದಾಂಡಿಗ ಗೆಳೆಯ!
ತಳೆದುಕೊಂಡ ಧೈರ್ಯವೆಲ್ಲಾ ಗಾಳಿಗೆ ತೂರಿ ಹೋಯಿತು. ಇಬ್ಬರೂ ತನ್ನ ಮೇಲೆ ಆಕ್ರಮಣ ಮಾಡಲಿದ್ದಾರೆ! ಅವಳ ದೃಷ್ಟಿ ಸರಪಳಿಯ ಕಡೆಗೆ ಹರಿಯಿತು. ತನ್ನ ಮೇಲೆ ಆಕ್ರಮಣ ಮಾಡುತ್ತಲೇ ಎಷ್ಟು ವೇಗವಾಗಿ ಅದನ್ನು ಎಳೆಯಬೇಕೆಂದು ಅವಳ ಮನಸ್ಸು ಲೆಕ್ಕ ಹಾಕಿತು. ಆದರೆ......... ಅದನ್ನು ಎಳೆಯುವ ಧೈರ್ಯ ತನಗಿದೆಯ? ಸರಪಳಿ ಎಳೆದ ಕೂಡಲೇ ರೈಲು ನಿಲ್ಲುತ್ತೆ.... ಕಳ್ಳರು ಹಾರಿ ಹೋಗುತ್ತಾರೆ. ಉಳಿದವರೆಲ್ಲಾ ತನ್ನನ್ನೇ ಬೆಟ್ಟು ಮಾಡಿ ತೋರಿಸುತ್ತಾರೆ...... ಅನಗತ್ಯವಾಗಿ ತಾನು ಸರಪಳಿ ಎಳೆದೆನೆಂದು ಪೊಲೀಸರ ಆತಿಥ್ಯ ಪಡೆಯಬೇಕಾಗುತ್ತದೆ....
"ಪೈರಾ, ನಾನಿನ್ನು ಕೇಳ್ಲಿಲ್ಲಾ"
"ಇನ್ನು ತಡ ಮಾಡೋದು ಬೇಡ. ಮುಂದಿನ ಸ್ಟೇಷನ್ ಬರುತ್ತಲೇ ಎಲ್ಲಾ ಮುಗಿಬೇಕು" ಎತ್ತರದ ವ್ಯಕ್ತಿ ಆತುರ ತೋರಿಸಿದ.
"ಏಯ್ ಹುಡುಗಿ, ನಿಜ ಹೇಳ್ಬಿಡು..... ಆ ಚಂದದ ಹುಡುಗ ಇಲ್ಲಿಗೆ ಬಂದಿದ್ನಾ?"
ಸ್ವರಳಿಗೆ ಆಶ್ಚರ್ಯವಾಯಿತು. ಈ ಇಬ್ಬರೂ, ಅಪರಿಚಿತ ಚೆಲುವನ ಬೆನ್ನಟ್ಟಿ ಬಂದವರು? ಚೆಲುವ ತನ್ನ ಹಿಂದೆ ಬಿದ್ದಿದ್ದನ್ನು ಅವರು ಗಮನಿಸಿರಬೇಕು. ಅದಕ್ಕಾಗಿ ತನ್ನನ್ನೇ ಪ್ರಶ್ನಿಸುತ್ತಿದ್ದಾರೆ.
"ಗೊತ್ತಿಲ್ಲ.... ಯಾರು? ...... ನಾನು ಯಾರನ್ನು ನೋಡಿಲ್ಲ" ತಟ್ಟನೆ ನಾಲಿಗೆ ಹೊರಳಿಸಿ ಅಮಾಯಕಳಂತೆ ನುಡಿದಳು.
"ಏಯ್, ನಮ್ಮತ್ರ ಎಲ್ಲಾ ನಾಟ್ಕ ಮಾಡ್ಬೇಡ. ಆ ಮುದ್ದು ಕೃಷ್ಣ ಇಲ್ಲಿಗೆ ಬಂದ್ರೆ .... ನಾವ್ ಬಂದಿದ್ದು ತಿಳಿಸ್ಬೇಡ"
ಇಬ್ಬರೂ ಎದ್ದು ಹೋದುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದಳು ಸ್ವರ. ತಾನೇಕೆ ಇಕ್ಕಟ್ಟಿನಲ್ಲಿ ಸಿಲುಕಿಕೊಂಡೆ? ಎದ್ದು ಬೇರೆ ಕಡೆಗೆ ಹೋಗೋಣವೆಂದರೆ ಎಲ್ಲಾ ಸೀಟಿನಲ್ಲಿಯೂ ಗಂಡಸರೇ! ಏನೋ ಒಣ ಧೈರ್ಯದಿಂದ ಅಲ್ಲೇ ಕುಳಿತುಕೊಳ್ಳುವ ನಿರ್ಧಾರ ತಳೆದಳು. ಇನ್ನು ಅವರ್‍ಯಾರು ಬರಲಾರರು. ತಲೆ ಚಿಟ್ಟು ಹಿಡಿದಂತಾಯಿತು. ಪುಸ್ತಕ ಸೀಟಿಗೆ ಎಸೆದು ತಲೆಗೆ ಕೈ ಹಚ್ಚಿಕೊಂಡಳು.
"ಗರಂ ಗರಂ ... ಚಾಯ್ .... ಯಾರಿಗೆ ಬೇಕು ಚಾಯ್..." ಚಹಾದ ಹುಡುಗನ ಕೂಗು ಕೇಳುತ್ತಲೇ ಪರ್ಸ್‍ನಿಂದ ಹಣ ತೆಗೆದು ತಿರುಗಿದಳು.
ಬಿಳಿಯ ಪ್ಲಾಸ್ಟಿಕ್ ಕಪ್‍ನಲ್ಲಿ ಚಹಾ ಹಿಡಿದು ನಿಂತಿದ್ದ ಮುದ್ದು ಕೃಷ್ಣ!
"ನೀವು ತುಂಬಾ ಚಿಂತಿತರಂತೆ ಕಾಣ್ತಾ ಇದ್ದೀರಿ. ಅದನ್ನು ಗಮನಿಸಿಯೇ ನಾನು ಚಹಾ ತಂದಿದ್ದು" ಮುಗುಳ್ನಗುತ್ತಾ ಚಹಾದ ಲೋಟ ಮುಂದೆ ಹಿಡಿದ.
ಚಹಾದ ಹುಡುಗ ಬಂದನೆಂದರೆ ಚೆಲುವ!
"ಬೇಡ" ನಿರಾಕರಿಸಿದವಳಿಗೆ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಚೆಲುವನ ಮೇಲೆ ಸಿಟ್ಟಿತ್ತು.
"ನಿರಾಕರಿಸ್ಬೇಡಿ..... ನಿಮ್ಮ ತಲೆ ಸಿಡಿತ ದೂರವಾಗಿ ನೆಮ್ಮದಿ ಅನಿಸ್ಬೋದು"
"ನೀವು ನನ್ನ ನೆಮ್ಮದಿಯನ್ನು ಹಾಳು ಮಾಡಿ ಬಿಟ್ರಿ" ಸಿಟ್ಟಿನಲ್ಲಿ ಬಂದ ಮಾತುಗಳಿಗೆ ಮುಗುಳ್ನಕ್ಕ.
"ಮೊದ್ಲು ಇದನ್ನು ಕುಡಿದು ಬಿಡಿ... ಆರಿ ಹೋಗುತ್ತೆ. ನನ್ನ ಮೇಲಿನ ಸಿಟ್ಟನ್ನು ಚಹಾದ ಮೇಲೆ ತೋರಿಸ್ಕೊಳ್ಬೇಡಿ"
ಆತ ಒತ್ತಾಯಿಸುವಂತೆ ಲೋಟ ಮುಂದೆ ಹಿಡಿದಾಗ ಕೈ ಮುಂದೆ ಚಾಚಿ ನಿಧಾನಕ್ಕೆ ಚಹಾ ಹೀರಿದಳು........ ನೆಮ್ಮದಿಯೆನಿಸಿತು.
"ನೀವು ಶೋರ್‍‍ನೂರಿಗೆ ಹೋಗ್ತಾ ಇದ್ದೀರಿ?" ಆತನ ಪ್ರಶ್ನೆಗೆ ತಟ್ಟನೆ ಮುಖವೆತ್ತಿದಳು.
"ಗೊತ್ತಿದ್ದು ಪದೇ ಪದೇ ನೀವು ಅದನ್ನೇ ಕೇಳ್ತಾ ಇದ್ದೀರಿ" ಸಿಡುಕಿನಿಂದ ಬಂದ ಉತ್ತರಕ್ಕೆ ಚೆಲುವ ಉಗುಳು ನುಂಗಿಕೊಂಡ.
"ಗೊತ್ತಿದೆ ...... ಅದನ್ನು ದೃಢಪಡಿಸಿಕೊಳ್ಳೋದಿಕ್ಕೆ ಕೇಳಿದೆ" ತಡವರಿಸುತ್ತಾ ನಗುವಿನಿಂದಲೇ ಹೇಳಿದ.

"ನೀವ್ಯಾಕೆ ನನ್ನ ಹಿಂದೆ ಬಿದಿದ್ದೀರಾ?" ಅವಳ ಪ್ರಶ್ನೆಯಲ್ಲಿ ನೋವಿನ ಛಾಯೆಯಿತ್ತು.
"ನಾನೆಲ್ಲಿ ನಿಮ್ಮ ಹಿಂದೆ ಬಿದಿದ್ದೇನೆ? ನಿಮ್ಮ ಎದುರಿಗೆ ಕುಳಿತಿದ್ದೀನಿ ಅಷ್ಟೆ"
ಪರಿಸ್ಥಿತಿಯನ್ನು ತಿಳಿಗೊಳಿಸಲು ತೂಗಿ ಪದಗಳನ್ನು ಬಳಸಿದ. ಅವಳಿಂದ ನಿಟ್ಟುಸಿರೊಂದು ಹೊರಟಿತು.
"ನೀವ್ಯಾರು? ನನ್ನಿಂದ ನಿಮಗೇನಾಗ್ಬೇಕು? ಆ ದಾಂಡಿಗರು ಬೇರೆ ನನ್ನ ಹಿಂದೆ ಬಿದ್ದಿದಾರೆ... ನಿಮ್ಮ ಬಗ್ಗೆ ಕೇಳಿದ್ರು"
ಆತನ ಮುಖ ಪೇಲವವಾಯಿತು.
"ಅವರು ಇಲ್ಲಿಗೆ ಬಂದಿದ್ರಾ? ನಿಮ್ಮನ್ನು ವಿಚಾರಿಸಿದ್ರಾ?"
"ಹೌದು, ಮುದ್ದು ಕೃಷ್ಣ ಇಲ್ಲಿಗೆ ಬಂದ್ರೆ ನಾವು ಬಂದಿದ್ದು ತಿಳಿಸ್ಬೇಡ ಅಂದ್ರು" ಮಾತುಗಳನ್ನು ಹೇಳಿ ತುಟಿ ಕಚ್ಚಿಕೊಂಡಳು.
"ಹಾಗಂದ್ರಾ?" ಆತನ ಮುಖದಲ್ಲಿ ಭೀತಿಯ ನೆರಳು ಹಾಗೇ ಇತ್ತು.
"ಮುದ್ದು ಕೃಷ್ಣ, ನಾನು ನಿಮನ್ನು ಗಮನಿಸ್ತಾ ಇದ್ದೀನಿ...... ನೀವ್ಯಾಕೆ ನನ್ನ ಹಿಂದೆ ಬಿದ್ದಿದ್ರಾ?"
ತಟ್ಟನೆ ಅವನ ಮುಖದಲ್ಲಿದ್ದ ಭೀತಿಯ ನಡುವೆಯೂ ನಗು ಸುಳಿಯಿತು.
"ನನ್ನ ಹೆಸರು ಮುದ್ದು ಕೃಷ್ಣ ಅಲ್ಲ. ಉನ್ನಿಕೃಷ್ಣನ್ ...... ನಿಮ್ಮಿಂದ ನನಗೊಂದು ದೊಡ್ಡ ಉಪಕಾರವಾಗ್ಬೇಕು?" ಮಾತಿನ ಕೊನೆಯಲ್ಲಿ ಯಾಚನೆಯ ದನಿಯಿತ್ತು.
"ಆಗೊಮ್ಮೆ ಇದೆ ಮಾತನ್ನು ಹೇಳಿದ್ರಿ. ಗಿಡುಗನ ತರಹ ಹಾರಿ ಹೋದ್ರಿ. ನನ್ನಿಂದ ಏನು ಉಪಕಾರವಾಗ್ಬೇಕು?"
ಆಲೋಚನೆಯ ಆಳಕ್ಕಿಳಿದಂತಿತ್ತು ಮುಖ. ಅವಳ ಕತ್ತಿನ ಬಳಿಗೆ ದೃಷ್ಟಿ ಹೊರಳಿತು. ಕಣ್ಣು ಪಕ್ಕನೆ ಅವಳ ಕಾಲಿನ ಗೆಜ್ಜೆಯ ಬಳಿ ಹರಿಯಿತು. ಸ್ವರ ಅವನನ್ನೇ ಗಮನಿಸುತ್ತಿದ್ದಳು.
"ಚೆನ್ನಾಗಿದೆ" ಆಲೋಚನೆಯಿಂದ ಹೊರಗೆ ಬಂದವನು ಮೆಚ್ಚುಗೆಯ ಮಾತು ಹೊರಳಿಸಿದ.
"ಏನು ಚೆನ್ನಾಗಿದೆ? ನಿಮ್ಮ ತಲೆ..." ಅವಳು ಪಾದ ಮುಚ್ಚುವಂತೆ ಸೀರೆಯನ್ನು ಎಳೆದುಕೊಂಡು ಕುಳಿತು, "ನನ್ನಿಂದ ಉಪಕಾರವಾಗ್ಬೇಕೂಂತ ಕೇಳಿದ್ರಿ, ಏನದು?" ಕುತೂಹಲದಿಂದ ಮುಂದುವರಿಸಿದಳು.
"ಚೆನ್ನಾಗಿರೋದು ನಿಮ್ಮ ಮಾತು. ಗಿಡುಗ ಅಂದ್ರಿ.... ಪಾರಿವಾಳವನ್ನು ಹೇಗೆ ಹಾರಿಸ್ಕೊಂಡು ಹೋಗೋದೂಂತ ಕಾಯ್ತಾ ಇದ್ದೀನಿ"
ಅವನ ಮಾತಿಗೆ ತಟ್ಟನೆ ತುಟಿ ಕಚ್ಚಿಕೊಂಡಳು. ಯುವಕ ತನ್ನ ಹಿಂದೆ ಬಿದ್ದಿದ್ದು ಅವನ ಬಲೆಯೊಳಗೆ ಬೀಳಿಸಲು!
"ನೀವು ಏನೇನೋ ಮಾತಾಡಿದ್ರೆ ಕಿರುಚಿಕೊಳ್ತೀನಿ" ಎಚ್ಚರಿಕೆ ಮಾತುಗಳನ್ನು ಹೇಳಿ ಅವನನ್ನು ಇರಿಯುವಂತೆ ನೋಡಿದಳು.
"ಕ್ಷಮಿಸಿ ಬಿಡಿ" ಕೈಗಳೆರಡನ್ನು ಜೋಡಿಸಿದ.
"ದಯವಿಟ್ಟು ಶೋರ್‍‍ನೂರ್ ವರೆಗೆ ಆಸರೆ ನೀಡಿ"
"ಆಸರೇನಾ...? ನಾನಾ...? ಏನಿದು ಒಳ್ಳೆ ತಮಾಷೆಯಾಗಿದೆ?"
"ಹೌದು, ಆಸರೆ ನೀಡೀಂದೆ .... ನನಗಲ್ಲ......"
ಅವನ ಮಾತಿನಲ್ಲಿ ತುಂಟತನವಿರಲಿಲ್ಲ. ಗಂಭೀರವಾಗಿಯೇ ಇದ್ದ.
"ಅಂದ್ರೆ?"
"ಅಂದ್ರೆ ಶೋರ್‍‍ನೂರ್ ಇಳಿದ ಕೂಡಲೇ ಹೇಳ್ತೀನಿ. ಅಲ್ಲಿಯವರೆಗೆ ನಾನು ನಿಮ್ಮ ಎದುರಿಗೆ ಕುಳಿತಿರ್‍ತೀನಿ"
"ನೀವು ಟಿಕೇಟ್ ಇಲ್ಲದೆ ಪ್ರಯಾಣಿಸ್ತಿದ್ದೀರಿ?" ಹುಬ್ಬುಗಳನ್ನು ಹತ್ತಿರ ತಂದು ಪ್ರಶ್ನಿಸಿದಳು.
"ಇಲ್ಲ" ಪರ್ಸಿನಿಂದ ಟಿಕೇಟ್ ತೆಗೆದು ತೋರಿಸಿದ. ಅವಳ ದೃಷ್ಟಿ ಟಿಕೇಟ್‍ನ ಮೇಲಿತ್ತು. ಬೋಗಿ ಸಂಖ್ಯೆ ಸಾಮಾನ್ಯ ನಾಲ್ಕು! ಅಂದರೆ ತನ್ನದೇ ಬೋಗಿಯಲ್ಲಿ ಟಿಕೇಟು ಖರೀದಿಸಿದ್ದಾನೆ!
"ಮತ್ಯಾಕೆ ಟಿ.ಸಿ. ಬರುವಾಗ ಹಾರಿ ಹೋದ್ರಿ?"
"ಹಾರಿ ಹೋದ್ನಾ? ಇಲ್ಲಾ... ಇಲ್ಲೇ ಬಾಗಿಲ ಬಳಿ ನಿಂತಿದ್ದೆ" ಮುಖದಲ್ಲಿ ನಗು ತಂದುಕೊಂಡು ಹೇಳಿದ.
"ಉನ್ನಿಕೃಷ್ಣನ್, ಆ ದಾಂಡಿಗರೇಕೆ ನಿಮ್ಮನ್ನು ಹಿಂಬಾಲಿಸ್ಕೊಂಡು ಬಂದಿದ್ರು?"
"ದಾಂಡಿಗರು ನನ್ನ ಹಿಂಬಾಲಿಸಿ ಬಂದಿದ್ರಾ? ನಾನಾಗಿದ್ರೆ ನಿಮ್ಮನ್ನು ಹಿಂಬಾಲಿಸಿ ಕೊಂಡು ಬಂದಿದ್ದು ಹೌದು"
"ಯಾಕೆ?" ತಟ್ಟನೆ ಅವನ ಮಾತಿಗೆ ಪ್ರತಿಕ್ರಿಯಿಸಿದಳು.
"ಶೋರ್‍‍ನೂರ್‍‍ನಲ್ಲಿ ನನ್ನ ತಾತನಿಗೆ ಆಸ್ತಿಯಿದೆ"
"ಉನ್ನಿ ಕೃಷ್ಣನ್, ನೀವು ಮಾತು ಬೇರೆ ಕಡೆಗೆ ತಿರುಗಿಸ್ತೀದ್ದೀರಿ"
"ಇಲ್ಲ"
"ನೀವ್ಯಾಕೆ ನನ್ನ ಹಿಂದೆ ಬಿದ್ದೀದೀರಿ?"
"ಅದನ್ನೇ ಹೇಳ್ತಾ ಇದ್ದೆ. ನೀವು ತುಂಬಾ ಚೆಲುವೆ .... ನಿಮ್ಮ ಗುಂಗುರು ಕೂದಲು ನೋಡಿಯೇ ನೀವು ಮಲ್ಲು ಅಂದ್ಕೊಂಡೆ"
ಅವನ ಮಾತು ಹಾದಿ ತಪ್ಪುತಿದೆಯೆನಿಸಿತು. ಮೂಗಿನ ಹೊಳ್ಳೆಗಳನ್ನು ಅರಳಿಸಿದಳು. ಆತ ನಾಲಗೆ ಕಚ್ಚಿಕೊಂಡ.
"ಕ್ಷಮಿಸಿ, ನೀವು ಮಲ್ಲು ತಾನೆ? ಅದಕ್ಕೆ ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದೀನಿ"
"ಏನೋ ವಿಚಿತ್ರವಾಗಿ ಮಾತನಾಡ್ತಾ ಇದ್ದೀರಿ. ನೇರವಾಗಿ ವಿಷಯ ಹೇಳ್ಬಿಡಿ"
"ನಿಮ್ಮ ಹೆಸ್ರು ಕೇಳಿಲ್ಲಾ?"
"ಸ್ವರ"
"ಬ್ಯೂಟಿಪುಲ್"
ರೈಲು ಏಕಾಏಕಿ ನಿಂತಿತು.

"ಒಂದ್ನಿಮಿಷ ಇರಿ, ಬಂದೆ" ಎದ್ದು ಬಾಗಿಲ ಕಡೆಗೆ ಬಂದು ಇಣುಕಿದ.
ಮತ್ತೊಮ್ಮೆ ಅತ್ತಿತ್ತ ದೃಷ್ಟಿ ಹೊರಳಿಸಿ ಅವಳ ಎದುರಿಗೆ ಬಂದು ಕುಳಿತ.
"ಸಿಗ್ನಲ್ ಸಿಕ್ಕಿಲ್ಲ. ಅದಕ್ಕೆ ನಿಂತು ಬಿಡ್ತು"
"ಮುಂದೆ ಇರೋದು ಯಾವ ಸ್ಟೇಷನ್?"
"ಓಹೋ.... ನಿಮಗೆ ಗೊತ್ತಾಗ್ಲಿಲ್ಲಾನ್ನಿ. ಅಂದ್ರೆ ನೀವು ಇಲ್ಲಿಗೆ ಬರೋದು ಅಪರೂಪಾನ್ನಿ"
"ಹೌದು, ವರ್ಷಕ್ಕೊಮ್ಮೆ ಬರೋದು" ಹೇಳಿ ತುಟಿ ಕಚ್ಚಿಕೊಂಡಳು. ಅವನ ಹತ್ತಿರ ಏನು ಖಾಸಗಿ ಮಾತು?
"ಇನ್ನು ಬರೋದು ಶೋರ್‍‍ನೂರ್"
"ಶೋರ್‍‍ನೂರ್!" ಉದ್ಗರಿಸಿ ಪುಸ್ತಕವನ್ನು ಬ್ಯಾಗ್‍ಗೆ ಸೇರಿಸಿದಳು. ಸೂಟ್‍ಕೇಸ್‍ನ್ನು ಮುಂದಕ್ಕೆಳೆದು ಇಳಿಯಲು ತಯಾರಾದಳು.
ಸಿಗ್ನಲ್ ಸಿಕ್ಕಿದಂತೆ ರೈಲು ಮೆಲ್ಲಗೆ ಚಲಿಸಲಾರಂಭಿಸಿತು.
ಸ್ವರ ಬಾಗಿಲ ಬಳಿ ಬರುವಾಗ ಉನ್ನಿ ಕೃಷ್ಣನ್ ಇಳಿದು ಹೋಗಿದ್ದ!
ನೆಮ್ಮದಿಯ ನಿಟ್ಟುಸಿರು ಬಿಟ್ಟವಳು, ರೈಲು ನಿಲ್ಲುತ್ತಲೇ ರೈಲ್ವೆ ಸ್ಟೇಷನ್‍ನಿಂದ ಹೊರಗೆ ಬಂದು ನಿಂತಳು.
ಯಾವುದೋ ಅಟೋಗಳು ಖಾಲಿಯಾಗಿರಲಿಲ್ಲ. ಸ್ವಲ್ಪ ಮುಂದೆ ನಡೆದರೆ ಅಟೋ ಸ್ಟ್ಯಾಂಡ್ ಸಿಗಬಹುದೆಂದು ಹೆಜ್ಜೆ ಹಾಕಿದಳು.
ಕಪ್ಪಗಿನ ಟಾರು ರಸ್ತೆ ಉದ್ದಕ್ಕೂ ಹರಡಿಕೊಂಡಿತ್ತು. ರೈಲ್ವೆ ಸ್ಟೇಷನ್‍ನಿಂದ ಒಂದೊಂದೆ ವಾಹನಗಳು ಹೊರಟು ಹೋಗುತ್ತಿದ್ದವು. ಸೂಟ್‍ಕೇಸು ಹಿಡಿದುಕೊಂಡು ನಡೆಯುವುದು ಪ್ರಯಾಸವೆನಿಸಿತು. ಒಂದು ಕ್ಷಣ ಸೂಟ್‍ಕೇಸ್‍ನ್ನು ಕೆಳಗಿಟ್ಟು ನಿಂತಳು.
"ಸ್ವರ...... ಸ್ವರ.... ಒಂದ್ನಿಮಿಷ ಇರಿ" ಉನ್ನಿಕೃಷ್ಣನ್ ಓಡಿ ಬರುತ್ತಿದ್ದ. ಏದುಸಿರು ಬಿಡುತ್ತಾ ನಿಂತ.
"ಏನು ಹುಡುಗೀರಿ ನೀವು. ಪಾರಿವಾಳದ ಹಾಗೇ ಹಾರಿ ಹೋಗ್ತಾ ಇದ್ದೀರಿ"
"ಮತ್ತಿನ್ನೇನು ಮಾಡ್ಬೇಕ್ಕಿತ್ತು?"
"ನಂಜೊತೆಗೆ ಬನ್ನಿ" ಅವನ ಮಾತು ಮುಗಿಯುವ ಮೊದಲೇ ಸಿಟ್ಟಿನ ನೋಟ ಬೀರಿದಳು. ಆತನ ಮುಖದಲ್ಲಿ ತುಂಟ ನಗುವಿತ್ತು. ಅವಳು ಸುತ್ತಲೂ ನೋಡಿದಳು.
"ನೀವೇನು ಹೆದರ್ಬೇಡಿ. ಇಲ್ಲಿಗ್ಯಾರು ಬರೋದಿಲ್ಲ. ಕಾಂಡೋಮ್ ಪ್ಯಾಕೇಟ್ ಇದೆ....." ಅವನ ಮಾತು ಮುಗಿಯುವ ಮೊದಲೇ ಭಯ ಸಿಟ್ಟಿನಿಂದ ಕಂಪಿಸುತ್ತಿದ್ದವಳ ಕೈ ಅವನ ಮುಖಕ್ಕೆ ತಟ್ಟಲಿದ್ದಾಗ ಅಟೋ ಬಂದು ನಿಂತಿತು.
ಉನ್ನಿ ಕೃಷ್ಣನ್ ಹಿಂದು ಮುಂದು ನೋಡದೆ ಓಡಲಾರಂಭಿಸಿದ.
ಸ್ವರ ಚೀಲಕ್ಕೆ ಕೈ ಹಾಕಿದಾಗ ಪ್ಯಾಕೇಟ್ ಸಿಕ್ಕಿತು. ಹೊರ ತೆಗೆದು ನೋಡಿದವಳಿಗೆ ಅಸಹ್ಯವೆನಿಸಿತು.
ಕಾಂಡೋಮ್ ಪ್ಯಾಕೇಟ್!
ಅಟೋದಿಂದ ಇಳಿದ ವ್ಯಕ್ತಿಗಳಿಬ್ಬರನ್ನೂ ಗುರುತಿಸಿದಳು. ರೈಲಿನಲ್ಲಿ ಕಂಡ ದಾಂಡಿಗರು!
ಒಬ್ಬ ಕುಳ್ಳನೆಯ ದಪ್ಪ ತುಟಿಯ ಧಡಿಯಾ! ಇನ್ನೊಬ್ಬ ಎತ್ತರ ನಿಲುವಿನ ವ್ಯಕ್ತಿ!
"ಹಕ್ಕಿ ನಿನ್ನ ರೇಟೆಷ್ಟು?" ಎತ್ತರ ನಿಲುವಿನ ವ್ಯಕ್ತಿ ಅವಳ ಕೈಯಲ್ಲಿದ್ದ ಪ್ಯಾಕೇಟ್‍ನ್ನು ಗಮನಿಸಿ ಕೇಳಿದ.
ಸ್ವರ ಅದನ್ನು ಬೀಸಿ ಒಗೆದಳು.
"ಏ! ಅದೆಲ್ಲಾ ನಮಗೆ ಬೇಡ ಪೈರಾ. ಆ ಹುಡುಗ ಇವಳಿಗೆ ಏನಾದ್ರೂ ಕೊಟ್ನಾ ಕೇಳು"
"ಏಯ್ ಹುಡುಗಿ, ಆತ ಅಡ್ಡಾದಿಡ್ಡಿ ಓಡಿ ಹೋದ್ನಲ್ಲಾ, ನಿನಗೇನಾದ್ರೂ ಕೊಟ್ನಾ?"
ಮೊದಲೇ ಬೆದರಿದವಳು ಇಲ್ಲವೆನ್ನುವಂತೆ ಗೋಣು ಆಡಿಸಿದಳು.
"ಆತ ಬಾರಿ ಚಾಲಾಕಿ ಹುಡುಗ. ಅವನೆಷ್ಟು ಚೆಲುವನೋ ಅಷ್ಟೇ ಬುದ್ಧಿಯೂ ಇದೆ. ಬಾ ಅವನನ್ನು ಹುಡುಕೋಣ"
ಅವರಿಬ್ಬರೂ ಹೋದತ್ತಲೇ ನೋಡುತ್ತಾ ನಿಂತಳು.
ಇಲ್ಲಿ ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ಎರಡು ಹೆಜ್ಜೆ ನಡೆದಿದ್ದಳಷ್ಟೆ. ಎದುರಿಗೆ ಉನ್ನಿಕೃಷ್ಣನ್ ನಿಂತಿದ್ದ!
"ಅದನ್ನ ಎಲ್ಲಿ ಹಾಕಿದ್ರಿ?" ಆತನ ಮುಖದಲ್ಲಿ ಗಾಬರಿಯಿತ್ತು.
ಅವಳು ಪ್ಯಾಕೇಟ್ ಬಿದ್ದ ಕಡೆಗೊಮ್ಮೆ ನೋಡಿದಳು. ಆತ ತಟ್ಟನೆ ಹಾರಿ ಅದನ್ನು ಕೈಯಲ್ಲಿ ತೆಗೆದುಕೊಂಡ.

"ಕ್ಷಮಿಸಿ, ನೀವು ತಪ್ಪು ತಿಳ್ಕೊಂಡಿದ್ದೀರಿ. ಇದರಲ್ಲಿರೋದು ವಜ್ರದ ಬೆಂಡೋಲೆಗಳು. ಅದಕ್ಕಾಗಿಯೇ ಅವರಿಬ್ಬರೂ ನನ್ನನ್ನು ಮಂಗಳೂರಿನಿಂದ ಹಿಂಬಾಲಿಸಿಕೊಂಡು ಬಂದಿರೋದು. ಅವರಿಬ್ಬರೂ ದಾಯಾದಿಗಳು. ಅವರಿಗೆ ಈ ವಜ್ರದ ಓಲೆಗಳು ನನ್ನ ಬಳಿಯಿದೆಯೆಂದು ಗುಮಾನಿಯಿತ್ತು. ಈ ಬೆಂಡೋಲೆಗಳು ನನ್ನ ಅಜ್ಜಿಯ ಕಿವಿಯಲ್ಲಿದ್ದವುಗಳು. ತಾತನ ಆಸ್ತಿ. ಇದನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ರು. ಈ ವಿಷಯ ಗೊತ್ತಾಗಿ ಅದನ್ನು ಮಾರೋ ಪ್ರಯತ್ನ ಮಾಡಿದ್ರು. ತಾತ ಅದನ್ನು ಕೊಡ್ಲಿಲ್ಲ. ತಾತ ಅದರ ಜವಾಬ್ದಾರಿನ ನನಗೆ ವಹಿಸಿದ್ರು. ನಾನು ಅದನ್ನು ಬ್ಯಾಂಕ್ ಲಾಕರ್‍‍ನಲ್ಲಿಡೋದಿಕ್ಕೆ ತೆಗೆದಿದ್ದೆ. ಶೋರ್‍‍ನೂರ್ ನನ್ನ ತಾತನ ಮನೆ. ಅಲ್ಲಿಗೆ ಹೊರಟಿರೋ ನನ್ನ ಅವರಿಬ್ರೂ ಹಿಂಬಾಲಿಸಿದ್ರು. ಇನ್ನು ಬ್ಯಾಂಕ್‍ಗೆ ಹೋದ್ರೆ ಅವರುಗಳಿಗೆ ಸಂಶಯ ಬರುತ್ತೇಂತ ನಾನು ಮೆಡಿಕಲ್‍ನಿಂದ ಕಾಂಡೋಮ್ ತೆಗೆದುಕೊಂಡು ಆ ಪ್ಯಾಕೇಟ್‍ಲ್ಲಿ ಇದನ್ನು ಸೇರಿಸ್ದೆ. ಅವರಿಗೆ ನನ್ನ ಮೇಲೆ ಬಲವಾದ ಸಂಶಯ ಬಂದು ನನ್ನ ಹಿಂಬಾಲಿಸಿದ್ರು. ನಾನು ಓಡಿಕೊಂಡು ಬಂದು ಬಸ್ಸು ಹತ್ತಿದೆ. ನೀವು ಸಿಕ್ಕಿದ್ರಿ. ನಿಮ್ಮ ಹಿಂದೇನೆ ರೈಲ್ವೆ ಸ್ಟೇಷನ್‍ಗೆ ಬಂದು ಟಿಕೇಟ್‍ಗಾಗಿ ಸರದಿಯಲ್ಲಿ ನಿಂತಿದ್ದಾಗ ತಟ್ಟನೆ ನನಗೆ ಉಪಾಯ ಹೊಳೆಯಿತು. ಕಾಂಡೋಮ್‍ನ ಪ್ಯಾಕೇಟ್‍ನ್ನು ಮೆಲ್ಲನೆ ನಿಮ್ಮ ಕಪ್ಪು ಚರ್ಮದ ಚೀಲಕ್ಕೆ ಸೇರಿಸ್ದೆ. ಅದರಿಂದ ಅದು ಜೋಪಾನವಾಗಿ ಇಲ್ಲಿವರೆಗೂ ಬಂತು. ನಿಮಗೆ ಧ್ಯನವಾದಗಳು"
ಅವಳು ಬಿಟ್ಟ ಕಣ್ಣು ಬಿಟ್ಟಂತೆ ನಿಂತಿದ್ದಳು. ವಜ್ರದ ಬೆಂಡೋಲೆಯ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ಅವಳ ಮುಖದ ಮೇಲೆ ಬಿದ್ದಾಗ ಎಚ್ಚೆತ್ತುಕೊಂಡಳು.
"ಸ್ವರ, ನಾನು ನಿಮಗೆ ಟ್ರೀಟ್ ಕೊಡ್ಬೇಕು ಬನ್ನಿ ನಂಜೊತೆ"
ಅವನ ಮಾತಿಗೆ ಸ್ವರಳಿಗೆ ನಗು ಬಂತು. ಅವನನ್ನು ಅಪಾರ್ಥ ಮಾಡಿಕೊಂಡಿದ್ದಕ್ಕಾಗಿ ನೊಂದು ಕೊಂಡಳು.
"ಉನ್ನಿ ಕೃಷ್ಣನ್, ನನ್ನ ಕ್ಷಮಿಸಿ ಬಿಡಿ. ಇನ್ನೂ ನಿಮಗೆ ಅಪಾಯ ತಪ್ಪಿದ್ದಲ್ಲ"
"ಅದನ್ನು ನಾನು ನಿಭಾಯಿಸ್ತೀನಿ. ಪೊಲೀಸ್ ಠಾಣೆಯವರೆಗೂ ಸುದ್ದಿ ತಲುಪಿಸಿದ್ದೀನಿ"
ವಜ್ರಗಳಿದ್ದ ಪ್ಯಾಕೆಟನ್ನು ಕಿಸೆಗೆ ತೂರಿಸಿಕೊಂಡ.
ಪಕ್ಕದಲ್ಲಿದ್ದ ತಂಪು ಪಾನೀಯದ ಅಂಗಡಿಯ ಕಡೆಗೆ ಅವಳ ಜೊತೆಗೆ ಹೆಜ್ಜೆ ಹಾಕಿದ.