ಬೋರಣ್ಣನ ಬೆಂಗ್ಳೂರು ಯಾತ್ರೆ

ಬೋರಣ್ಣನ ಬೆಂಗ್ಳೂರು ಯಾತ್ರೆ

ಬರಹ

ಬೀರ: ಓ, ಏನ್ ಬೋರಣ್ಣಾ, ಇಂಗೆ ತಲೆ ಮ್ಯಾಗೆ ಕೈಹೊತ್ಕಂಡು ಕುಂತ್ಕಡಿದ್ದೀಯಾ? ಏನ್ಸಮಾಚಾರ? ಮೈಯಾಗ ಉಸಾರಿಲ್ಲೇನು?
ಬೋರ: ಥತ್, ಸುಮ್ಕಿರಲೇ, ತಲೆ ತಿನ್‌ಬ್ಯಾಡ. ನಂದೇ ನಂಗಾಗೈತೆ; ತಲೆ ಕೆಟ್ಟು, ಎಕ್ಕುಟ್ಟ್ ಹೋಗದೆ.
ಬೀರ: ಅದೇನಣ್ಣಾ ಅಂಥಾ ಬೇಜಾರು? ಅದ್ಸರೀ,ಏನಣ್ಣಾ, ಬೆಂಗ್ಳೂರಿಗೆ ಓಗಿದ್ಯಂತೆ ಮೊನ್ನೆ? ಒಂದ್ ಕಿತ ನಂಗೂ ಏಳಾದಲ್ವಾ? ನಾನೂ ಬರ್ತಿದ್ದೆ. ನೀನು ಬಿಡಪ್ಪ ಬೋ ಜಾಣ. ಒಬ್ನೆ ಸಿಟೀಗ್ ಓಗಿ ಮಜಾ ಮಾಡ್ಕಂಡ್ ಬಂದ್ಬುಟ್ಟು, ಈಗಿಲ್ಲಿ ತಲೆ ಮ್ಯಾಕೆ ಕೈಹೊತ್ತು ಪೋಸು ಕೊಡ್ತಿದ್ದೀಯಾ.
ಬೋರ: ಲೇ ಬೀರಾ, ನಾನ್ ಬೆಂಗ್ಳೂರಿಗೆ ಹೋಗಿದ್ದು ಮಜಾ ಮಾಡಾಕಲ್ಲ ಕಣ್ಲೇ. ನಮ್ಮೂರ್ನಾಗೆ ಬೀದಿ ದೀಪ ಇಲ್ಲದೇ ಒಂದೂವರೆ ವರ್ಷ ಆಯ್ತು ನೋಡು, ಅದ್ಕೆ ಮಂತ್ರಿಗಳ ತಾವಾನೇ ಹೋಗಿ ಒಂದು ಅರ್ಜಿ ಹಾಕ್ ಬರಾಣ ಅಂತ ಹೋಗಿದ್ದೆ. ಈ ಉರಿ ಬಿಸ್ಲಲ್ಲಿ ಎರಡು ದಿನದಿಂದ ಓಡಾಡೀ ಓಡಾಡೀ, ತಲೆ ಕೆಟ್ಟೋಗದೆ.

ಬೀರ: ಅಬ್ಬಾ, ಅಬ್ಬಾ, ಅಬ್ಬಾ...ಇದೇನಣ್ಣಾ ಇದು?! ನಮ್ಮೂರಿಗೆ ಬೀದಿ ದೀಪ ಹಾಕ್ಸಕ್ಕೂ ಬೆಂಗ್ಳೂರಾಗಿರೋ ಮಂತ್ರಿಗಳ ತಾವ ಓಗ್ಬೇಕಾ? ಅಂತಾ ಕಾಲ ಬಂದ್ಬುಟ್ಟದಾ?
ಬೋರ: ಉಂ ಮತ್ತೆ. ಒಂದೂವರೆ ವರ್ಷದಿಂದ ಈ ಡಿ.ಸಿ. ಆಫೀಸು, ಎಂ.ಎಲ್.ಎ. ಮನೆ, ಜಿಲ್ಲಾ ಪಂಚಾಯತ್ತು ಅಂತ ನಾಯಿ ಅಲ್ದಂಗೆ ಅಲದ್ರೂ ಏನೂ ಆಗ್ಲಿಲ್ಲ. ಮೊನ್ನೆ ಪೇಪರ್ ಓದ್ತಾ ಇರೋವಾಗ ಒಂದು ಐಡಿಯಾ ಬಂತು ನೋಡು. ನಮ್ಮ ಹೊಸಾ ಮಂತ್ರಿಗಳು ಅವಾಗವಾಗ ಅದೇನೋ "ನೇರ ದರ್ಶನ" ಅಂತ ಮಾಡಿ, ಸ್ಟ್ರೇಟಾಗಿ ಜನ್ರು ಕೈಯಿಂದ್ಲೇಯ ಅರ್ಜಿ-ಪರ್ಜಿ ಎಲ್ಲಾ ತಗಾತಾರಂತೆ. ಅದ್ಕೇ ಈ ನನ್ ಮಕ್ಳಿಗೆ ಬುದ್ಧಿ ಕಲ್ಸಿದ ಹಾಗೆ ಆಗುತ್ತೆ, ನೇರ ಮಂತ್ರಿಗಳ ಅಫೀಸಿಗೇ ಹೋಗಾಣಾಂತ ಸಿಟೀಗೆ ಹೋದೆ.
ಬೀರ: ಬಲೇ ತ್ರಿಲ್ಲಿಂಗಾಗೈತಿ ಕಣಣ್ಣಾ, ಮುಂದಕ್ಕೇನಾತು...

ಬೋರ: ಇಲ್ಲಿಂದ ಸಿದ್ಧರಾಮೇಶ್ವರ ಹತ್ಕಂಡು ಸಿಟೀಗೆ ಹೋದ್ನಾ; ಸಿಟೀಲಿ ಬಸ್‌ಸ್ಟಾಂಡ್ ತಲುಪಿ, ಅಲ್ಲಿಂದ ಮಂತ್ರಿಗಳ ಆಫೀಸು ತಲ್ಪೋ ಹೊತ್ತಿಗೆ ನೆತ್ತಿ ಮ್ಯಾಲೆ ಬಿಸ್ಲು ಹೊಡೀತಿತ್ತು. ಹೊರಗಡೆ ಗೇಟ್ನಾಗೇ ಒಬ್ಬ ಭಾರೀ ಆಸಾಮಿ ನಿಂತಿದ್ದ. ಸರ್ಯಾಗಿ ಮಾತೇ ಆಡ್ಸಾಕಿಲ್ಲ ಆಸಾಮಿ. ನಾ ಬಿಟ್ಟೇನಾ, ಅವ್ನಿಗೆ ವಸಿ ಕೈ ಬಿಸಿ ಮಾಡ್ದೆ ನೋಡು, ಒಳ್ಳೆ ನೆಂಟನ ತರ ಮಾತಾಡಿಸ್ದ. ಈ ಲಂಚದ ಪವರ್ರೇ ಹಂಗೆ. "ಅಣ್ಣಾ, ನಮ್ಮ ಸಮಸ್ಯೆ ಹಿಂಗದೆ. ಅದ್ಕೆ ಮಂತ್ರಿಗಳ್ನ ಮೀಟ್ ಮಾಡ್ಬೇಕು. ಯಾವಾಗ ನೋಡ್‌ಭೌದು?" ಅಂತ ಕೇಳ್ದೆ. ಆಗವ್ನು "ಮಂತ್ರಿಗಳು ಇನ್ನೂ ನಾಕು ದಿನ ಸಿಗಾಕಿಲ್ಲ" ಅನ್ನೋದಾ? ನಂಗೆ ಸಿಕ್ಕಾಪಟ್ಟೆ ಬ್ಯಾಸ್ರ ಆಯ್ತು. "ಯಾಕಣ್ಣಾ, ಎಲ್ಲಿಗಾದ್ರೂ ಹೋಗವ್ರಾ?" ಅಂತ ಕೇಳ್ದೆ. ಅದಕ್ಕವ್ನು "ಊಂ, ಅವ್ರು ಅದ್ಯಾವ್ದೋ ದೇವಸ್ಥಾನಕ್ಕೆ ಹೋಗವ್ರೆ" ಅಂದ. ಮತ್ತೆ ಸ್ವಲ್ಪ ಪೂಸಿ ಹೊಡ್ದು ಕೇಳ್ದೆ: "ಯಾವ ದೇವಸ್ಥಾನ, ಯಾವೂರು, ಯಾಕೆ, ಏನು ಕತೆ" ಅಂತ. ಆಗವ್ನು "ಅವ್ರಿಗೆ ಅದ್ಯಾರೋ ಜೋಯಿಸ್ರು ನಿಮ್ಮ ಸೀಟು ಭದ್ರ ಇಲ್ಲ; ನೀವಿನ್ನು ಒಂದು ತಿಂಗ್ಳಲ್ಲಿ ಕುರ್ಚಿ ಕಳ್‌ಕಳ್ತೀರಾ ಅಂತ ಹೇಳಿದ್ದಾರಂತೆ. ಅವ್ರ ಮಾತು ಅಂದ್ರೆ ಮಂತ್ರಿಗುಳ ಮನೆಯವ್ರಿಗೆಲ್ಲ ಬಲೇ ವಿಶ್ವಾಸ ಅಂತೆ. ಅದ್ಕೇ ಪಾಪ ಹೆದ್ರ್‌ಕಂಡು, ಅದೇನೋ ಶಾಂತಿ ಮಾಡ್ಸಾಕೆ ಅಂತ ಎಲ್ಲೋ ಪಕ್ಕದೂರಿನ ಫೇಮಸ್ ದೇವಸ್ಥಾನಕ್ಕೆ ಹೋಗವ್ರಂತೆ. ಅವರ ಮನೆಯವ್ರೂ, ಎಲ್ರೂ ಹೋಗವ್ರೆ" ಅಂತ ಹೇಳ್ದ. ನಂಗೆ ಮೈ ಪರಚ್ಕೊಳ್ಳೋ ತರಾ ಆಯ್ತು. ಏನ್ ಮಾಡ್ಲಿ ನೀನೇ ಹೇಳ್ಲಾ ಬೀರ...

ಬೀರ: ಬೋರಣ್ಣಾ, ಇನ್ನೂ ಒಂದ್ ತಿಂಗ್ಳು ಹಿಂದೆ ಅದ್ಯಾವ್ದೋ ಪೂಜೆ ಮಾಡ್ಸಿದ್ರು ಅಂತ ನೀನೇ ಏಳ್ದಂಗೆ ನಂಗೆ ಜಪ್ತೀಲಿದೆ. ಆಗ್ಲೇ ಇನ್ನೊಂದು ಪೂಜೇನಾ? ಅದೇಟು ಪೂಜೆ ಮಾಡುಸ್ತಾರಣ್ಣ?
ಬೋರ: ಊ ಕಣ್ಲಾ ಬೀರಾ. ಅವ್ರಿಗೆ ಅವ್ರ ಕುರ್ಚೀದೇ ಚಿಂತೆ. ಎಲ್ಲಿ ಕುರ್ಚಿ ಬಿದ್ ಹೋಯ್ತದೋ ಅಂತ ಬೋ ಪರದಾಡ್ತವ್ರೆ. ಅಲ್ಲ ಕಣಲೇ ಬೀರ, ಏನು ಮಂತ್ರಿ ಕುರ್ಚಿ ಅಂದ್ರೆ ಬಿಟ್ಟಿ ಬರ್ತದೇನ್ಲಾ? ಹ್ವಾದ ತಿಂಗ್ಳು ನೀನು ನಿನ್ನ ಹಸೀಗೆ ಹುಶಾರಿಲ್ಲ ಅಂದಾಗ, ಅದೆಲ್ಲಿ ಸತ್ತೋಯ್ತದೋ ಅಂತ ಎರಡು ಕಿತ ಪೂಜೆ ಮಾಡ್ಸಿರಲಿಲ್ವೇನ್ಲಾ? ನಿಜಾ ಹೇಳು; ಮಾಡ್ಸಿದ್ಯೋ ಇಲ್ವೋ? ಅಲ್ಲಾ ನಿನ್ ಪುಟಗೋಸಿ ಹಸ ಸತ್ತೋಯ್ತದೆ ಅಂತ ನೀನು ಎರಡು ಕಿತ ಪೂಜೆ ಮಾಡಿಸಬೌದು, ಪಾಪ ನಮ್ ಮಂತ್ರಿಗಳು ಅವರ ಕುರ್ಚಿ ಬಿದ್ದೋಯ್ತದೆ ಅಂತ ನೂರು ಪೂಜೆನಾರ ಮಾಡಿಸ್‌ಬ್ಯಾಡ್ವೇ? ಅದೂ ಅಲ್ದೇ ಕುರ್ಚಿ ಇದ್ರೆ ತಾನೇ ಅವ್ರು ನಮ್ಮಗೋಳ ಸೇವೆ ಮಾಡಾಕ್ಕಾಗದು? ಅದ್ಕೇ ಫಸ್ಟು ಕುರ್ಚಿ ಮುಖ್ಯ ಕಣ್ಲಾ. ಅದನ್ನ ಭದ್ರ ಮಾಡಿ ಮಡೀಕಂಡ್ರೆ ಸಾಕು. ಏನು ನಾನು, ನೀನು, ಈ ಬಡಪಾಯಿ ಜನಗುಳು ಕಷ್ಟ ಅಂತ ಊರು ಬಿಟ್ಟು ಎಲ್ಲಿಗಾದ್ರೂ ಓಡಿ ಹೋಗ್ತೀವಾ? ಹಂಗೆ ಓಡಿ ಹೋಗಾಕೆ ಅಯ್ತದಾ? ಅದ್ಕೇ ಪಾಪ, ಏನೋ ಜನರ ಸೇವೆ ಮಾಡೋ ಅವಕಾಶ ಇನ್ನೂ ತುಂಬಾ ದಿನ ಸಿಗ್ಲಿ ಅಂತ, ಪೂಜೆ, ಹೋಮ ಎಲ್ಲ ಮಾಡುಸ್ತಾರಪ್ಪ...

ಬೀರ: ಓಗ್ಲಿ ಬುಡಣ್ಣ. ಆದ್ರೆ ಆ ಮಂತ್ರಿ ಇಲ್ಲ ಅಂದ್ ಕುಟ, ಅಷ್ಟು ದೂರ ಓದ ನೀನು ಅಂಗೇ ವಾಪಸ್ ಬಂದೇಬುಟ್ಯಾ?
ಬೋರ: ಬೀರ, ನಾನು ಹಂಗೆ ಮಾಡ್ತೀನೇನ್ಲಾ? ನಾನೂ ವಸಿ ಹಟಮಾರೀನೇ ಅನ್ನು; ನಿಂಗೂ ಗೊತ್ತದಲ್ಲ. ಆ ಮಂತ್ರಿ ಮನೆಯಿಂದ ಇನ್ನೊಬ್ಬರ ಆಫೀಸಿಗೆ ಹೋದೆ. ಸಿಟೀಲಿ ಇನ್ನೊಂದು ವಾರದಾಗೆ, ಅದೇನೋ ಭಾರೀ ದೊಡ್ಡ ಉತ್ಸವ ಇದ್ಯಂತೆ; ಸುಮಾರು ಎರಡು ಲಕ್ಷ ಜನ ಸೇರ್‍ತಾರಂತೆ. ಆ ಮಂತ್ರಿಗಳು ಅದರ ಪ್ರಿಪ್ರೇಶನ್ನಿನಾಗೆ ಇನ್ನೊಂದು ವಾರ ಪೂರ್ತಿ ಮುಳುಗವ್ರಂತೆ. ಹಂಗಾಗಿ ಅವ್ರೂ ಸಿಗಾಕಿಲ್ಲ ಅಂತ ಗೊತ್ತಾತು. ಅಲ್ಲಿಂದ "ನೋಡೇ ಬಿಡಾವ" ಅಂತ ಇನ್ನೊಬ್ಬರ ಆಫೀಸಿಗೂ ನಡ್ದೇ ಬಿಟ್ಟೆ ನೋಡು.
ಬೀರ: ಆ ಮೂರ್‍ನೇ ಮಂತ್ರೀನಾರ ಸಿಕ್ರೇನಣ್ಣಾ?
ಬೋರ: ಸ್ವಲ್ಪ ತಡ್ಕಳಲೇ, ಒಳ್ಳೆ ಆರು ತಿಂಗ್ಳಿಗೆ ಹುಟ್ಟಿದವನಂಗೆ ಆಡ್ತೀಯಲ್ಲ...ಆ ಮೂರನೇ ಮಂತ್ರಿಗಳು ಅದ್ಯಾವುದೋ ನಾಕು ಹೋಟಲ್ ಇನ್ಯಾಗುರೇಶನ್ನು, ಮೂರು ಸಿನೆಮಾ ಥೇಟರ್ ಓಪನಿಂಗು, ಆರು ದೊಡ್ಡ ದೊಡ್ಡ ಬಿಲ್ಡಿಂಗುಗಳ ಶಂಕುಸ್ಥಾಪನೆ ಅಂತ, ಒಟ್ಟು ಒಂದು ವಾರದಿಂದ ಹತ್ತು ಜಿಲ್ಲೆ ಅಲೀತಿದ್ದಾರಂತೆ. ಅಲ್ಲಿಗೆ ಅವ್ರು ಇನ್ನೂ ಒಂದು ವಾರ ಬರಾಕಿಲ್ಲ ಅನ್ನೋದು ಗ್ಯಾರಂಟಿಯಾತು ನೋಡು. ಇಷ್ಟಾಗೋ ಹೊತ್ತಿಗೆ ಒಟ್ಟು ರಾತ್ರಿ ಒಂಭತ್ತು ಘಂಟೆಯಾಗಿತ್ತು ನೋಡು. ರಾತ್ರಿ ಕೊನೇ ಟ್ರಿಪ್ಪು ಸಿದ್ಧರಾಮೇಶ್ವರ ನಂಗೋಸ್ಕರ ಅನ್ನೋ ಹಾಗೆ ಕಾಯ್ತಾ ನಿಂತಿತ್ತು. ನಂಗೂ ಸಿಕ್ಕಾಪಟ್ಟೆ ತಲೆ ಕೆಟ್ಟಿತ್ತು, ಸುತ್ತೀ ಸುತ್ತೀ ಸುಸ್ತೂ ಆಗಿತ್ತು. ರಾತ್ರಿ ಹೋಟೆಲ್ಲು ಅಂತ ಮತ್ತ್ಯಾಕೆ ದುಡ್ಡು ಸುರಿಯಾಣ; ದುಡ್ಡು ಸುರ್‍ದೆ ಅಂತಿಟ್ಕ, ಈ ಮಂತ್ರಿಗಳೇನು ನಾಳೇನಾರ ಸಿಗ್ತಾರ? ದೇವರಾಣೆಗೂ ಇಲ್ಲ. ಮತ್ಯಾಕೆ ನನ್ನ ದುಡ್ಡು ದಂಡ ಮಾಡೋದು ಅಂತ ಯೋಚ್ಸಿ, ನೇರ ಆ ಬಸ್ ಹತ್ಕಂಡು ವಾಪಸ್ ಬಂದೆ ನೋಡು. ಹಿಂಗಾಯ್ತು ನನ್ ಬೆಂಗ್ಳೂರು ಕತೆ. ಇದ್ರಾಗೇನು ಮಜಾ ಇದೆ ನೀನೇ ಹೇಳ್ಲಾ?

ಬೀರ: ಓ, ಸರಿ ಬಿಡು ಬೋರಣ್ಣ, ಅದ್ಕೇ ನೀನು ಅಂಗೆ ತಲೆ ಮ್ಯಾಕ್ ಕೈ ಮಡೀಕಂಡು ಕುಂತಿದ್ದು. ಅಲ್ಲಾ ಕಣಣ್ಣಾ, ನೀನೇನೋ ವಸಿ ಓದಿದ್ದೀಯಾ. ಪೇಪರ್ರು, ಅದೂ-ಇದೂ ಅಂತ ಓದ್ಕಂಡಿ ಇಂಗೆಲ್ಲ ಏಳ್ತೀಯಾ ನೋಡಣ್ಣ. ಅದ್ರೆ ನಾನಂತೂ ಎಬ್ಬೆಟ್ಟು. ಆದ್ರೂ ನಂಗೆ ಅನ್ನುಸ್ತದೆ, ಇವ್ರೆಲ್ಲ ಬರೀ ಪೂಜೆ, ಓಮ, ಸಾಂತಿ, ಉಸ್ತವ, ಪಂಕ್ಸನ್ನು, ಓಟಲ್ಲು, ಉದ್ಗಾಟನೆ ಅಂತ್ಲೆ ಕಾಲ ಕಳದ್‌ಬುಟ್ರೆ, ನಮ್ಮುನ್ನ ಯಾರು ಕಣಾ ಕೇಳವ್ರು? ಏನೋ, ನಂಗಂತೂ ಈ ದೊಡ್ ಮನುಸ್ಯರ ಮನ್ಸು, ಅವರ ಇಚಾರ-ಪಚಾರ ಒಂದೂ ಅರ್ತ ಆಗಲ್ಲ ನೋಡಣ್ಣ. ದೊಡ್ ಮನ್ಸರ ಸಾವಾಸ ನಮಿಗ್ಯಾಕೆ ಬುಡಣ್ಣಾ...