ಬೋರಿಮ್ ನ ಸೇತುವೆ
ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್.
ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ ಶಾಲೆಯ ಶುಲ್ಕ ಪಾವತಿಸಲು ಅವರಿಗೆ ಸಾಧ್ಯವಿರಲಿಲ್ಲ.
ಒಮ್ಮೆ ವಯಸ್ಕರೊಬ್ಬರು ಸಮುದ್ರತೀರಕ್ಕೆ ಬರುತ್ತಾರೆ. ಅಲ್ಲಿ ಅಡ್ಡಾಡುತ್ತಿದ್ದ ಜುಜೆಗೆ ವಿವಿಧ ಸಮುದ್ರ ಚಿಪ್ಪುಗಳ ಬಗ್ಗೆ ತಿಳಿಸಿ, ಅವನ್ನು ಸಂಗ್ರಹಿಸಬೇಕೆಂದೂ ಅವನ್ನೆಲ್ಲ ಪಡೆಯಲು ತಾನು ಬರುತ್ತೇನೆಂದೂ ಆಶ್ವಾಸನೆ ನೀಡುತ್ತಾರೆ ಎಂದು ಕತೆ ಶುರು. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದು ಜುಜೆಗೆ ಕೊನೆಗೆ ಗೊತ್ತಾಗುತ್ತದೆ.
ಅದೊಂದು ಭಾನುವಾರ ಸಮುದ್ರತೀರದಲ್ಲಿ ನಡೆದ ಘಟನೆ ಜುಜೆಯ ಬದುಕನ್ನೇ ಬದಲಾಯಿಸುತ್ತದೆ. ಸಮುದ್ರತೀರದಲ್ಲಿ ಜುಜೆ ತಿರುಗಾಡುತ್ತಿದ್ದಾಗ ಅಲ್ಲಿಗೆ ಹತ್ತಿರದ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಮೆಚ್ಚಿನ ಟೀಚರ್ ಶ್ಯಾಮಕ್ಕ ಬಂದರು. ಕೇವಲ ಲಂಗೋಟಿಯಲ್ಲಿದ್ದ ಜುಜೆಯನ್ನು ಕಂಡು ಅವರೆಲ್ಲ ಅವನಿಗೆ ಗೇಲಿ ಮಾಡಿದರು. ನಂತರ ಮಕ್ಕಳು ಚೆಂಡಿನಲ್ಲಿ ಆಟ ಆಡತೊಡಗಿದರು. ಅಕಸ್ಮಾತ್ ಚೆಂಡು ಸಮುದ್ರದ ನೀರಿಗೆ ಬಿತ್ತು. ಗೋಪು ನೀರಿಗಿಳಿದು, ಚೆಂಡು ಹಿಡಿಯಲು ಕೈಕಾಚಿದ. ಆಗ ದೊಡ್ಡ ಅಲೆಯ ಹೊಡೆತಕ್ಕೆ ನೀರಿನಲ್ಲಿ ಬಿದ್ದ. ಮಕ್ಕಳೆಲ್ಲ ಬೊಬ್ಬೆ ಹೊಡೆದರು. ತಕ್ಷಣವೇ ಜುಜೆ ನೀರಿಗೆ ಧುಮುಕಿದ. ಈಜುತ್ತಾ ಹೋಗಿ, ಗೋಪುವನ್ನು ಹಿಡಿದು, ಅಬ್ಬರದ ಅಲೆಗಳಲ್ಲಿ ಸಾಹಸದಿಂದ ಅವನನ್ನು ತೀರಕ್ಕೆ ಎಳೆದು ತಂದ. ಇನ್ನೊಬ್ಬ ಗೋಪುವಿನ ಎದೆ ಒತ್ತಿಯೊತ್ತಿ ಅವನು ಕುಡಿದಿದ್ದ ನೀರನ್ನೆಲ್ಲ ಕಕ್ಕಿಸಿದ. ಜುಜೆಯಿಂದಾಗಿ ಗೋಪು ಅವತ್ತು ಬದುಕಿದ.
ಟೀಚರ್ ಶ್ಯಾಮಕ್ಕ ಜುಜೆಯನ್ನು ಮಾತನಾಡಿಸುತ್ತಾರೆ. ಅವನು ಶಾಲೆಗೆ ಹೋಗುತ್ತಿಲ್ಲ ಎಂದು ತಿಳಿದಾಗ ನಮ್ಮ ಶಾಲೆಗೆ ಸೇರಿಕೋ ಎಂದು ಒತ್ತಾಯಿಸುತ್ತಾರೆ. “ಈ ಮಕ್ಕಳ ಶಾಲೆಗೆ ಬರೋದಿಲ್ಲ. ಯಾಕೆಂದರೆ ಇವರು ನನಗೆ ಗೇಲಿ ಮಾಡಿದ್ದರು” ಎನ್ನುತ್ತಾನೆ ಜುಜೆ. ಆಗ ಶ್ಯಾಮಕ್ಕ ಮಕ್ಕಳಿಂದ ಕ್ಷಮೆ ಕೇಳಿಸುತ್ತಾರೆ. ಜುಜೆ ತನ್ನ ಹೆತ್ತವರಿಂದ ಶಾಲೆಯ ಶುಲ್ಕ ಕಟ್ಟಲಾಗದು ಎಂದಾಗ, ಶ್ಯಾಮಕ್ಕ ಮಕ್ಕಳೊಂದಿಗೆ ಜುಜೆಯ ಮನೆಗೆ ಬಂದು, ಅವನ ಅಪ್ಪ-ಅಮ್ಮನನ್ನು ಒಪ್ಪಿಸುತ್ತಾರೆ.
ಹೀಗೆ ಮರುದಿನದಿಂದ ಶಾಲೆ ಸೇರಿದ ಜುಜೆ. ಅವನ ಆಸೆ ಈಡೇರಿತ್ತು. ಓದಿನಲ್ಲಿ ಚುರುಕಾಗಿದ್ದ ಜುಜೆ ಮೊದಲ ವರುಷ ಒಂದು ಮತ್ತು ಎರಡನೇ ತರಗತಿ ಪಾಸು ಮಾಡಿದ. ಎರಡನೇ ವರುಷದಲ್ಲಿ ಮೂರು ಮತ್ತು ನಾಲ್ಕನೇ ತರಗತಿ ಪಾಸಾಗಿ, ಮುಂದಿನ ವರುಷ ಐದನೇ ತರಗತಿ ಸೇರಿಕೊಂಡ. ನಾಲ್ಕನೇ ತರಗತಿಯ ಪಾಠಗಳನ್ನು ಎರಡು ತಿಂಗಳ ಬೇಸಗೆ ರಜೆಯಲ್ಲಿ ಓದಿಕೊಂಡು ಪರೀಕ್ಷೆ ಬರೆದಿದ್ದ. ತನ್ನ ಪ್ರಾಯದ ವಿದ್ಯಾರ್ಥಿಗಳಿದ್ದ ಐದನೆಯ ತರಗತಿ ಸೇರಿದ್ದರಿಂದ ಜುಜೆಗೆ ಬಹಳ ಸಮಾಧಾನವಾಗಿತ್ತು.
ಐದನೆಯ ತರಗತಿಯ ಪರೀಕ್ಷೆಯಲ್ಲಿ ಜುಜೆ ತರಗತಿಗೆ ಮೊದಲಿಗನಾಗಿ ಪಾಸಾದ. ಈ ಅವಧಿಯಲ್ಲಿ ಜುಜೆ ಹಲವಾರು ಪುಸ್ತಕಗಳನ್ನು ಓದಿಕೊಂಡಿದ್ದ. ಚರಿತ್ರೆ ಅವನ ಅಚ್ಚುಮೆಚ್ಚಿನ ವಿಷಯ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬಹಳಷ್ಟು ಪುಸ್ತಕಗಳನ್ನು ಓದಿದ್ದ ಜುಜೆಯ ಮನಸ್ಸಿನಲ್ಲಿ ಇನ್ನೊಂದು ಕನಸು ರೂಪುಗೊಂಡಿತು: ಗೋವಾದ ಸ್ವಾತಂತ್ರ್ಯ ಹೋರಾಟದಲ್ಲಿ ತಾನೂ ಭಾಗವಹಿಸಬೇಕೆಂಬ ಕನಸು.
ಅದು 1961ರ ಸಮಯ. ಗೋವಾ ಸ್ವಾತಂತ್ರ್ಯ ಹೋರಾಟ ಅಂತಿಮ ಘಟ್ಟಕ್ಕೆ ಬಂದಿತ್ತು. ಅದೊಂದು ದಿನ ಸಮುದ್ರದಲ್ಲಿ ಕೆಲವು ಅಪರಿಚಿತರನ್ನು ಜುಜೆ ನೋಡಿದ. ಅವರ ಮಾತುಗಳನ್ನು ಕದ್ದಾಲಿಸಿದ. ಅವರು ಪೋರ್ಚುಗೀಸ್ ಪೊಲೀಸರು. ಭಾರತದ ಸೈನ್ಯ ಗೋವಾ ವಶ ಪಡಿಸಿಕೊಳ್ಳುವುದನ್ನು ತಡೆಯಲಿಕ್ಕಾಗಿ ಅವರು ಒಳಸಂಚು ರೂಪಿಸಿದ್ದರು - ಡೈನಾಮೈಟಿನಿಂದ ಬೋರಿಮ್ ಸೇತುವೆ ಧ್ವಂಸ ಮಾಡುವ ಸಂಚು. ಬೆಳಗಾವಿಯಿಂದ ನುಗ್ಗಿ, ಬೋರಿಮ್ ಸೇತುವೆ ದಾಟಿ ಮಡಗಾಂವಿಗೆ ಭಾರತದ ಸೈನ್ಯ ಹೋಗೋದನ್ನು ತಡೆಯೋದೇ ಅವರ ದುರುದ್ದೇಶ.
ತಕ್ಷಣವೇ ಜುಜೆ ಧಾವಿಸಿ ಹೋಗಿ ಶ್ಯಾಮಕ್ಕನಿಗೆ ಈ ಒಳಸಂಚಿನ ಬಗ್ಗೆ ತಿಳಿಸಿದ. ಹೇಗಾದರೂ ಮಾಡಿ ಭಾರತದ ಸೈನ್ಯದ ಅಧಿಕಾರಿಗಳಿಗೆ ಒಳಸಂಚಿನ ಸಂಗತಿ ತಿಳಿಸಬೇಕೆಂದು ಶ್ಯಾಮಕ್ಕ ನಿರ್ಧರಿಸಿದರು. (ಅದು ಫೋನ್/ ಮೊಬೈಲ್ ಫೋನ್ ಇಲ್ಲದಿದ್ದ ಕಾಲ) ಮರುದಿನ ಮುಂಜಾನೆ ಶ್ಯಾಮಕ್ಕ ಮತ್ತು ಜುಜೆ ಬಸ್ಸಿನಲ್ಲಿ ಭಾರತದ ಸೈನ್ಯ ಬೀಡು ಬಿಟ್ಟ ಸ್ಥಳಕ್ಕೆ ಹೊರಟರು. ಅವರ ಬಸ್ಸಿನಲ್ಲಿಯೇ ಸಮುದ್ರತೀರದಲ್ಲಿ ಒಳಸಂಚಿನ ಬಗ್ಗೆ ಮಾತಾಡಿದ್ದ ದುರುಳರೂ (ಮೀನುಗಾರರ ಮಾರುವೇಷದಲ್ಲಿ) ಪ್ರಯಾಣಿಸಿದರು. ಆ ಪೋರ್ಚುಗೀಸ್ ಪೊಲೀಸರು ಬೋರಿಮ್ ಸೇತುವೆ ಹತ್ತಿರ ಬಸ್ಸಿನಿಂದ ಇಳಿದರು.
ಅಲ್ಲಿನ ಬಸ್ ನಿಲ್ದಾಣದಲ್ಲಿ ಇಳಿದ ಶ್ಯಾಮಕ್ಕ ಮತ್ತು ಜುಜೆ ಬೋರಿಮ್ ಸೇತುವೆಯ ಕಂಬಗಳ ತಳಕ್ಕೆ ಹೋಗಿ, ದುರುಳರು ಡೈನಾಮೈಟ್ ಇಡಬಹುದಾದ ಜಾಗಗಳನ್ನು ಗುಟ್ಟಾಗಿ ನೋಡಿದರು. ನದಿಯ ಆ ಬದಿಯಲ್ಲಿ ಭಾರತದ ಸೈನ್ಯ ಬೀಡು ಬಿಟ್ಟಿತ್ತು. ಕತ್ತಲಾಗುತ್ತಿದ್ದಂತೆ ಜುಜೆ ನದಿಗಿಳಿದ. ಒಳ್ಳೆಯ ಈಜುಗಾರನಾದ ಅವನು ಸದ್ದಿಲ್ಲದೆ ಈಜ ತೊಡಗಿದ. ಶ್ಯಾಮಕ್ಕ ಉಸಿರು ಬಿಗಿ ಹಿಡಿದು ಅವನ ಸಾಹಸಕ್ಕೆ ಸಾಕ್ಷಿಯಾದರು. ಕೊನೆಗೂ ಜುಜೆ 546 ಮೀಟರ್ ಅಗಲದ ನದಿ ಈಜಿ ದಾಟಿದ. ಸೈನಿಕರಿಗೆ ಮತ್ತು ಆ ತುಕಡಿಯ ಮುಖ್ಯಸ್ಥರಿಗೆ ಒಳಸಂಚಿನ ವಿಷಯ ತಿಳಿಸಿದ. ತನ್ನ ಜೀವ ಪಣಕ್ಕೊಡ್ಡಿ ಅವನು ಹೋರಾಟದಲ್ಲಿ ಭಾಗಿಯಾಗಿದ್ದ.
ಭಾರತದ ಸೈನ್ಯದ ಸೈನಿಕರನ್ನು ಪುನಃ ಬೋರಿಮ್ ಸೇತುವೆ ಬಳಿಗೆ ಕಳಿಸಲಾಯಿತು. ಇವರು ಬರೋದನ್ನು ನೋಡಿದ ಒಳಸಂಚುಕೋರರು ಡೈನಾಮೈಟ್ ಸ್ಫೋಟಿಸಿದರು. ಸೇತುವೆ ಮುರಿದು ಬಿತ್ತು. ಈ ಒಳಸಂಚು ತಿಳಿಯದೆ, ಭಾರತದ ಸೈನಿಕರು ಸೇತುವೆ ದಾಟಲು ಹೋಗಿದ್ದರೆ ಹಲವರು ಜೀವ ಕಳೆದುಕೊಳ್ಳಬೇಕಾಗುತ್ತಿತ್ತು. ಅನಂತರ, ಭಾರತದ ಸೈನಿಕರು ದೋಣಿಗಳಲ್ಲಿ ನದಿ ದಾಟಿ ಹೋಗಿ, ಮಡಗಾಂವ್ ವಶಪಡಿಸಿಕೊಂಡರು. ಭಾರತದ ಸೈನ್ಯದ ಇನ್ನೊಂದು ತಂಡ ಉತ್ತರದಿಂದ ಬಂದು, ಪಣಜಿಯನ್ನು ವಶಪಡಿಸಿಕೊಂಡಿತು. ಅಡಗಿ ಕುಳಿತಿದ್ದ ಪೋರ್ಚುಗೀಸ್ ಗವರ್ನರನ್ನು ಎಳೆದು ತರಲಾಯಿತು. ಆತ ಶರಣಾಗತಿ ಪತ್ರಕ್ಕೆ ಸಹಿ ಹಾಕಿದ.
ಸಾವಿರಾರು ಜನರು ಜಮಾಯಿಸಿ, ಪೋರ್ಚುಗೀಸರಿಂದ ಗೋವಾದ ಬಿಡುಗಡೆಯ ಸಂಭ್ರಮ ಆಚರಿಸುತ್ತಿದ್ದಂತೆ, ಶ್ಯಾಮಕ್ಕ ಜುಜೆಯನ್ನು ಅಪ್ಪಿಕೊಂಡು ಅಭಿನಂದಿಸಿದರು. ಹಲವು ಸೈನಿಕರ ಜೀವ ಉಳಿಸಿದ ಜುಜೆಯನ್ನು ಸೈನ್ಯದ ಮುಂದಾಳು ಎತ್ತಿಕೊಂಡು, ನೆರೆದಿದ್ದ ಜನರೊಂದಿಗೆ ಜೈಕಾರ ಹಾಕಿದರು. ಜೈಹಿಂದ್ ಘೋಷಣೆ ಮುಗಿಲು ಮುಟ್ಟಿತು. ಹೀಗೆ ಭಾರತ ದೇಶದ ಸ್ವಾತಂತ್ರ್ಯ ಹೋರಾಟ 19 ಡಿಸೆಂಬರ್ 1961ರಂದು ಸಂಪೂರ್ಣವಾಯಿತು.
ಈ ಪುಟ್ಟ ಪುಸ್ತಕ ಭಾರತದ ಸ್ವಾತಂತ್ರ್ಯ ಹೋರಾಟದ ಮರೆತು ಹೋದ ಅಧ್ಯಾಯವೊಂದನ್ನು ಸಶಕ್ತವಾಗಿ ನೆನಪು ಮಾಡಿ ಕೊಡುತ್ತದೆ. ಇಂದಿನ ಯುವಜನತೆಯ ಮನದಲ್ಲಿ ಹೋರಾಟದ ಕಿಡಿ ಬೆಳಗಲು ಇಂತಹ ಪುಸ್ತಕಗಳ ಓದು ಅತ್ಯಗತ್ಯ.