ಬೋರ್ಡ್ ಪರೀಕ್ಷೆ : ಮಕ್ಕಳ ಜೊತೆ ವ್ಯವಸ್ಥೆಯ ಚೆಲ್ಲಾಟ

ರಾಜ್ಯ ಪಠ್ಯಕ್ರಮದ ೫,೮,೯ ಮತ್ತು ೧೧ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ವಿಷಯದಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ. ಈ ತರಗತಿಗಳಿಗೆ ಹಿಂದೆಲ್ಲ ಶಾಲೆಯಿಂದಲೇ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಮಂಡಳಿಯಿಂದ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಪಬ್ಲಿಕ್ ಪರೀಕ್ಷೆಯಿದ್ದಂತೆ. ಮುಂಚೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಗೆ ಮಾತ್ರ ಇದ್ದ ಪಬ್ಲಿಕ್ ಪರೀಕ್ಷೆಯನ್ನು ಈಗ ೫,೮,೯ ಮತ್ತು ೧೧ನೇ ತರಗತಿಗೂ ತರಲಾಗುತ್ತಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಮತ್ತು ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ದಕ್ಷತೆಯಿಂದ ನಡೆಸುವ ಉದ್ದೇಶದಿಂದ ಈ ಬದಲಾವಣೆ ತಂದಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಸರ್ಕಾರದ ನಿರ್ಧಾರ ಪ್ರಶ್ನಿಸಿ ಖಾಸಗಿ ಶಾಲಾ ಸಂಘಟನೆಗಳು ಕೋರ್ಟ್ ಗೆ ಹೋಗಿರುವುದು ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ೧೧ನೇ ತರಗತಿಗೆ ಈಗಾಗಲೇ ಬೋರ್ಡ್ ಪರೀಕ್ಷೆ ಮುಗಿದಿದೆ. ೫,೮ ಮತ್ತು ೯ನೇ ತರಗತಿಗೆ ಪರೀಕ್ಷೆಗಳು ನಡೆಯುತ್ತಿವೆ. ಈ ತರಗತಿಗಳಿಗೆ ಎರಡು ಪರೀಕ್ಷೆ ಮುಗಿದಿರುವಾಗ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ತೀರ್ಪು ನೀಡುವವರೆಗೂ ಬೋರ್ಡ್ ಪರೀಕ್ಷೆ ನಡೆಸುವಂತಿಲ್ಲ ಎಂದು ಹೇಳಿದೆ. ಅಲ್ಲಿಯವರೆಗೆ ಸಾವಿರಾರು ಮಕ್ಕಳು ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ.
ಕಳೆದ ವರ್ಷವೂ ಹೆಚ್ಚು ಕಮ್ಮಿ ಹೀಗೆಯೇ ಆಗಿತ್ತು. ಬೋರ್ಡ್ ಪರೀಕ್ಷೆ ಆರಂಭವಾಗುವವರೆಗೂ ಕಾನೂನು ಹೋರಾಟ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹೈಕೋರ್ಟ್ ಮಕ್ಕಳ ಹಿತದೃಷ್ಟಿಯಿಂದ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿತ್ತು. ಆನಂತರ ಸುಮ್ಮನಿದ್ದ ಖಾಸಗಿ ಶಾಲಾ ಸಂಘಟನೆಗಳು ಹಾಗೂ ಸರ್ಕಾರ ಈ ವರ್ಷ ಮತ್ತೆ ಪರೀಕ್ಷೆ ಆರಂಭವಾಗುವ ಸಮಯದಲ್ಲಿ ಕಾನೂನು ಹೋರಾಟ ಆರಂಭಿಸಿವೆ. ಏಕೆ ಇವರು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ? ಮೊದಲೇ ಪರೀಕ್ಷೆಯೆಂದರೆ ಆತಂಕಪಡುವ ಮಕ್ಕಳನ್ನು ಪರೀಕ್ಷೆಯ ಸಮಯದಲ್ಲೇ ಹೀಗೆ ಗೊಂದಲಕ್ಕೆ ತಳ್ಳುವುದೇಕೆ? ಕಾನೂನು ಹೋರಾಟಗಳನ್ನು ಪರೀಕ್ಷೆಗೂ ಮೊದಲೇ ಮುಗಿಸಿಕೊಳ್ಳಲು ಏನು ಸಮಸ್ಯೆ? ಕೋರ್ಟ್ ಗಳಾದರೂ ಇಂತಹ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕಲ್ಲವೇ? ತೀರ್ಪು ಬರುವವರೆಗೆ ಬೋರ್ಡ್ ಪರೀಕ್ಷೆ ಇಲ್ಲ ಅಂತಾದರೆ ಅಲ್ಲಿಯವರೆಗೆ ಮಕ್ಕಳು ಮತ್ತು ಶಿಕ್ಷಕರು ಏನು ಮಾಡಬೇಕು? ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ತೀರ್ಪು ಬಂದರೆ ಈಗಾಗಲೇ ಪರೀಕ್ಷೆ ಮುಗಿದಿರುವ ೧೧ನೇ ತರಗತಿಗೆ ಏನು ಮಾಡಬೇಕು? ಮತ್ತೆ ಪರೀಕ್ಷೆ ನಡೆಸುತ್ತೀರಾ? ನಿಜಕ್ಕೂ ನಮ್ಮ ವ್ಯವಸ್ಥೆಯು ಮಕ್ಕಳ ಜೊತೆ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಇದು ಖಂಡಿತ ಸಲ್ಲದು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೪-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ