ಬೌದ್ಧ ಭಿಕ್ಷುಗಳ ನಿರ್ಲಿಪ್ತತೆ

ಬೌದ್ಧ ಭಿಕ್ಷುಗಳ ನಿರ್ಲಿಪ್ತತೆ

ಭಗವಾನ್ ಬುದ್ಧನಿಂದ ಸ್ಥಾಪಿತವಾದ ಬೌದ್ಧ ಧರ್ಮವು ಪ್ರಪಂಚದ ಎಲ್ಲೆಡೆ ಹಬ್ಬಿದೆ. ಬೌದ್ಧ ಭಿಕ್ಷುಗಳ ಬಗ್ಗೆ ಹಲವಾರು ಕಥೆಗಳಿವೆ. ಅವರ ಅಖಂಡ ನಿರ್ಲಿಪ್ತತೆಯು ಸಾಮಾನ್ಯ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಭಗವಾನ್ ಬುದ್ಧನು ‘ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಅದರಂತೆ ಬೌದ್ಧ ಭಿಕ್ಷುಗಳು ತಮ್ಮ ಜೀವನ ಪರ್ಯಂತ ಅತ್ಯಂತ ನಿರ್ಮೋಹಿಗಳಾಗಿ ಬದುಕುತ್ತಿದ್ದಾರೆ. ಈ ಹಂತ ತಲುಪಲು ಅವರು ಅನೇಕ ಸಾಧನೆಗಳನ್ನು ಮಾಡಬೇಕಾಗುತ್ತದೆ. ಸುಖಾಸುಮ್ಮನೇ ಯಾರಿಗೂ ಪ್ರಾಪಂಚಿಕ ಜೀವನದ ಮೋಹದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಹಲವಾರು ಮಹನೀಯರು ಈ ಧರ್ಮದ ಗುಣಗಳಿಂದ ಪ್ರೇರಿತರಾಗಿ ಬೌದ್ಧ ಧರ್ಮದ ಕಡೆಗೆ ವಾಲಿದ್ದೂ ಇದೆ. ಉದಾಹರಣೆಗೆ ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದಲ್ಲಿ ಆದ ಸಾವು ನೋವಿನಿಂದ ಬೇಸತ್ತು ಮನಃಶಾಂತಿಗಾಗಿ ಬೌದ್ಧ ಧರ್ಮವನ್ನು ಅಪ್ಪಿಕೊಂಡರು. ರಾಜ ಸಿಂಹಾಸನವನ್ನು ತ್ಯಜಿಸಿ, ಎಲ್ಲಾ ಪ್ರಾಪಂಚಿಕ ಮೋಹದಿಂದ ಮುಕ್ತರಾಗಿ ಮನಃಶಾಂತಿಯನ್ನು ಪಡೆದರು ಎಂದು ಇತಿಹಾಸ ಹೇಳುತ್ತದೆ.

ಇದೇ ಅಶೋಕ ಚಕ್ರವರ್ತಿ ಹಾಗೂ ಮಹಾರಾಣಿ ದೇವಿಯರ ಮಕ್ಕಳಾದ ಮಹೀಂದ್ರ ಹಾಗೂ ಸಂಘಮಿತ್ರೆಯರೂ ತಮ್ಮ ತಂದೆಯ ಹಾದಿಯಲ್ಲಿ ಸಾಗುತ್ತಾ, ಬೌದ್ಧ ಧರ್ಮ ಪ್ರಚಾರಕರಾಗಿದ್ದರು. ರಾಜರ ಮಕ್ಕಳಾಗಿದ್ದರೂ ಸಾಮಾನ್ಯ ಬೌದ್ಧ ಭಿಕ್ಷುವಿನಂತೆ ತಮ್ಮ ಜೀವನನವನ್ನು ಸಾಗಿಸಿ ಪುನೀತರಾದರು. ಅವರು ಸಿಂಹಳ ದೇಶದಲ್ಲಿ ಬೌದ್ಧ ಧರ್ಮವನ್ನು ಪ್ರಚಾರ ಪಡಿಸಿ, ಅಲ್ಲಿ ಬೌದ್ಧ ಧರ್ಮ ಬೇರೂರುವಂತೆ ಮಾಡಿದರು. ಅಲ್ಲಿನ ರಾಜನೂ ಈ ಧರ್ಮದ ಉದಾತ್ತ ಗುಣಗಳಿಗೆ ಮಾರುಹೋಗಿ ಬೌದ್ಧ ಧರ್ಮ ಬೆಳೆಯಲು ಸಹಕಾರ ನೀಡಿದನು. ಅಲ್ಲಿನ ಜನರೂ ಬೌದ್ಧ ಧರ್ಮಕ್ಕೆ ಬಂದರು. ತಾನು, ತನ್ನದು ಎಂಬ ವ್ಯಾಮೋಹಗಳ ಹಂಗಿಲ್ಲದೇ ದಿನಂಪ್ರತಿ ಭಿಕ್ಷೆ ಬೇಡಿ, ಬುದ್ಧ ವಚನವನ್ನು ಮನನ ಮಾಡಿ, ಜನರಿಗೆ ಉಪದೇಶ ನೀಡುತ್ತಾ ಬಾಳಿ ಬದುಕಿದರು. ಈಗಲೂ ಸಿಂಹಳ ದೇಶ ಅಂದರೆ ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಅತ್ಯಂತ ಉನ್ನತ ಮಟ್ಟದಲ್ಲಿದೆ. ಹಲವಾರು ಮಂದಿ ಬೌದ್ಧ ಭಿಕ್ಷುಗಳಾಗಿ ಬಾಳಿ ಬದುಕಿದವರು. ಇವರ ನಿರ್ಲಿಪ್ತತೆಯ ಬಗ್ಗೆ ಹಲವಾರು ಕಥೆಗಳಿವೆ. ನಾನು ಇಲ್ಲಿ ಒಂದನ್ನು ನಿಮಗಾಗಿ ಸಂಗ್ರಹಿಸಿ ಓದಲು ನೀಡುತ್ತಿರುವೆ.

ಸಿಂಹಳ ಅಥವಾ ಶೀಲಂಕಾ ದ್ವೀಪದ ಅನುರಾಧ ಪುರದ ಒಂದು ವಿಹಾರದಲ್ಲಿ ಓರ್ವ ಬೌದ್ಧ ಭಿಕ್ಷುವು ವಾಸವಾಗಿದ್ದನು. ಅವನ ಜೊತೆ ಹಲವಾರು ಮಂದಿ ಸಹ ಭಿಕ್ಷುಗಳೂ ಇದ್ದರು. ಒಮ್ಮೆ ಪಕ್ಕದ ಊರಾದ ಖಂಡರಾಜಿಯಿಂದ ಓರ್ವ ಬೌದ್ಧ ಭಿಕ್ಷುವು ಈ ಭಿಕ್ಷುವನ್ನು ನೋಡಲು ಬಂದಿದ್ದನು. ಅವನು ಸ್ವಲ್ಪ ಸಮಯ ಅನುರಾಧಾಪುರದ ವಿಹಾರದಲ್ಲಿ ತಂಗಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ದಿನಗಳ ಬಳಿಕ ಖಂಡರಾಚಿಯ ಭಿಕ್ಷು ತನ್ನ ಊರಿಗೆ ಹೊರಟು ನಿಂತು ‘ ಗೆಳೆಯಾ ನಿನ್ನ ಊರಿನ ಆದರಾತಿಥ್ಯಗಳಿಗೆ ನಾನು ಋಣಿಯಾಗಿದ್ದೇನೆ. ನೀನೂ ಒಮ್ಮೆ ನಮ್ಮ ಊರಿಗೆ ಬರಬೇಕು. ಗಿಡ ಮರಗಳಿಂದ ಕೂಡಿದ ಸೊಗಸಾದ ಪರಿಸರವನ್ನು ಹೊಂದಿದ ಊರು ನನ್ನದು. ಅಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಆರಾಮವಾಗಿರಬಹುದು. ಅಲ್ಲಿ ಯಾವ ವಸ್ತುಗಳಿಗೂ ಕೊರತೆ ಎಂಬುವುದಿಲ್ಲ. ಆರಾಮದಿಂದ ಇರಬಹುದು. ಬಾ ನನ್ನ ಜೊತೆ' ಎಂದ. ಈ ಆಹ್ವಾನದಿಂದ ಮೊದಲ ಭಿಕ್ಷು ಸಂತೋಷಗೊಂಡು ‘ ಸ್ವಲ್ಪ ಸಮಯದವರೆಗೆ ನಾನು ನಿನ್ನ ಜೊತೆ ಖಂಡರಾಚಿಯಲ್ಲಿ ವಾಸಿಸುವೆ’ ಎಂದು ಕೂಡಲೇ ಹೊರಟು ನಿಂತಾಗ ಖಂಡರಾಚಿಯ ಭಿಕ್ಷು ಕೇಳಿದ ‘ಇದೇನಿದು ಗೆಳೆಯಾ? ಇಷ್ಟು ವರ್ಷ ನಿನ್ನ ಸಹಪಾಠಿಗಳಾಗಿರುವ ಭಿಕ್ಷುಗಳಿಗೆ ನೀನು ಹೋಗುವ ವಿಚಾರ ತಿಳಿಸುವುದಿಲ್ಲವಾ? ನಿನ್ನದಾದ ಒಂದೂ ವಸ್ತುವನ್ನೂ ನೀನು ತೆಗೆದುಕೊಂಡಿಲ್ಲ. ಬರಿಗೈಯಲ್ಲೇ ಹೊರಟಿಯಲ್ಲಾ’ ಎಂದ. ಅದಕ್ಕೆ ಅನುರಾಧಪುರದ ಭಿಕ್ಷು ಹೇಳಿದ ‘ಗೆಳೆಯಾ, ಇಲ್ಲಿ ನನ್ನವರೆನ್ನುವವರು ಯಾರೂ ಇಲ್ಲ. ನನ್ನದೆಂಬ ಯಾವ ವಸ್ತುವೂ ಇಲ್ಲ. ವಿಹಾರಕ್ಕೆ ಸೇರಿದ ಮಂಚ ಮತ್ತು ಕಾಲು ಮಣೆಯನ್ನು ಅವುಗಳ ಜಾಗದಲ್ಲಿ ಭದ್ರವಾಗಿರಿಸಿದ್ದೇನೆ. ನಡೆ, ಹೊರಡೋಣ' ಎಂದನು. ಯಾವುದಕ್ಕೂ ಆಶೆ ಪಡದ, ಅಂಟಿಕೊಳ್ಳದ, ನಿರ್ಮೋಹಿಯಾದ, ಸಕಲ ಉಪಾದಿಗಳಿಂದ ದೂರನಾದ ಆ ಭಿಕ್ಷುವು ಏರಿದ ಎತ್ತರವನ್ನು ಕಂಡು ಖಂಡರಾಚಿಯ ಭಿಕ್ಷು ನಾಚಿ ತಲೆ ಬಾಗಿದನು.

ಇಂತಹ ಹಲವಾರು ಪ್ರಸಂಗಗಳು ‘ಬೋಧಿಯ ನೆರಳಿನಲ್ಲಿ' ಎಂಬ ಕೃತಿಯಲ್ಲಿ ಇವೆ. ನಿರ್ಲಿಪ್ತತೆಯ ಅರಿವು ನಮ್ಮಲ್ಲಿ ಮೂಡಲು ಈ ಪುಸ್ತಕ ಓದಬಹುದು.

ಚಿತ್ರ ಕೃಪೆ: ಅಂತರ್ಜಾಲ ತಾಣ