ಬ್ಯಾಂಕಾಕಿನ ’ಮಾರಿಯಮ್ಮ’ ದೇವಸ್ಥಾನ...!
ಭಾರತದಲ್ಲಿ ಎಲ್ಲಿಯೋ ಅಲ್ಲ...ಭಾರತದಿಂದ ೨,೫೦೦ ಕಿ.ಮೀ ದೂರದ ಥಾಯ್ಲ್ಯಾಂಡಿನ ರಾಜಧಾನಿ ಬ್ಯಾಂಕಾಕಿನಲ್ಲಿ ನಮ್ಮ
ಮನೆಯಿಂದ ೫ ಕಿ.ಮೀ.ನಷ್ಟು ದೂರದಲ್ಲಿ ’ವಾಟ್ ಕ್ಯಾಕ್’ ಅಂದರೆ ’ಭಾರತೀಯ ದೇಗುಲ’ವಿದೆ. ಇಲ್ಲಿ ಗಣಪತಿ, ದೇವಿ, ಬ್ರಹ್ಮ, ನವಗ್ರಹಗಳು ಇತ್ಯಾದಿ ಎಲ್ಲ ದೇವರ ಗುಡಿಗಳೂ ಇವೆ ! ವಿಶೇಷವೆಂದರೆ ಭಾರತೀಯರಿಗಿಂತ ಹೆಚ್ಚಾಗಿ ಥಾಯ್ ಭಕ್ತರೇ ಹೆಚ್ಚಾಗಿ ಕಂಡುಬರುತ್ತಾರೆ ಮತ್ತು ನಮಗಿಂತ ಹೆಚ್ಚಾಗಿ ಶ್ರದ್ಧೆ-ಭಕ್ತಿಗಳನ್ನು ತೋರುತ್ತಾರೆ !
ಇಲ್ಲಿ ನಮ್ಮೆಲ್ಲಾ ಹಬ್ಬಗಳನ್ನೂ ಬಹಳ ಅದ್ಧೂರಿಯಿಂದ ಮಾಡುತ್ತಾರೆ. ಹೋಮ ಹವನಗಳೂ ನಡೆಯುತ್ತವೆ. ಅಲ್ಲಿನ ಪೂಜಾರಿಗಳು ಎಲ್ಲರಿಗೂ ತೀರ್ಥ-ಪ್ರಸಾದಗಳನ್ನು ಕೊಡುವುದರೊಂದಿಗೆ ಹಣೆಗೆ ತಿಲಕವನ್ನೂ ಇಡುತ್ತಾರೆ (ನಾಮ?). ಯಾಕೋ ಗೊತ್ತಿಲ್ಲ, ನಮ್ಮ ಶೃಂಗೇರಿಯ ದೇವಸ್ಥಾನವನ್ನೂ, ಅಲ್ಲಿ ದೊರಕುವ ಶಾಂತಿಯನ್ನೂ ಬಹಳ ಇಷ್ಟಪಡುವ ನನಗೆ ಇಲ್ಲಿನ ದೇವಸ್ಥಾನದಲ್ಲಿ ಭಕ್ತಿಯೇ ಹುಟ್ಟಲಿಲ್ಲ. ಒಂದು ಬಗೆಯ ವ್ಯಾಪಾರದ ಸ್ಥಳದಂತೆಯೇ ಅನಿಸುತ್ತಿತ್ತು. ಬಹಳಷ್ಟು ಅಬ್ಬರ, ಗದ್ದಲ, ಅದ್ಧೂರಿಯಿದೆ ಆದರೆ ಶಾಂತತೆ ದುರ್ಲಭ. ಇರಲಿ, ಇದು ನನ್ನ ಅನುಭವ ಮತ್ತು ಭಾವನೆಯಷ್ಟೆ.
ಆದರೆ ಇದರಿಂದ ಬಹಳಷ್ಟು ಸ್ಥಳೀಯರಿಗೂ, ತಮಿಳುನಾಡಿನ ಅರ್ಚಕ-ಸಹಾಯಕರಿಗೂ ಜೀವನ ಚೆನ್ನಾಗಿ ನಡೆಯುತ್ತಿದೆ ಎಂಬುದು ಸತ್ಯ. ಅಲ್ಲದೆ, ಥಾಯ್ ಪ್ರಜೆಗಳಿಗೆ ಒಂದು ಭಕ್ತಿ ಸ್ಥಾನವೂ, ನಮ್ಮ ಸಂಸ್ಕೃತಿಯ ಪ್ರಚಾರಕವೂ ಆಗಿ ನಿಂತಿರುವುದು ಸುಳ್ಳಲ್ಲ.
ಈ ದೇವಸ್ಥಾನದ ಬಳಿಯಲ್ಲೇ ’ಚೆನ್ನೈ ಕಿಚನ್’ ಎಂಬ ತಮಿಳು ದಂಪತಿಗಳು ನಡೆಸುವ ಒಂದು ಪುಟ್ಟ ಹೋಟೆಲ್ ಇದೆ. ಇಲ್ಲಿಯ ಇಡ್ಲಿ-ದೋಸೆಗಳು ನನ್ನ ಮೆಚ್ಚಿನವು. ಶುಚಿಯಾದ ವಾತಾವರಣದಲ್ಲಿ ಮನೆಯಡುಗೆಯಂತಹ ಖಾದ್ಯಗಳು ಇಲ್ಲಿ ಲಭ್ಯ. ಬಹಳಷ್ಟು ವಿದೇಶಿಗರು ಇಲ್ಲಿ ’ಕೈ’ಯಿಂದ ತಿಂದು ಆನಂದಿಸುತ್ತಾರೆ. ಇದರ ಮಾಲೀಕರು ಒಂದು ಅಂತರ್ರಾಷ್ಟ್ರೀಯ ಶಾಲೆಯ ಮುಖ್ಯಸ್ಥರು. ಬಿಡುವಿನಲ್ಲಿ ಪತ್ನಿಗೆ ಸಹಾಯ ಮಾಡುತ್ತಾರೆ. ನಿಯಮಗಳಲ್ಲಿ ಕಟ್ಟುನಿಟ್ಟು, ವ್ಯಾಪಾರಕ್ಕಾಗಿ ರಾಜಿ, ಓಲೈಸುವಿಕೆಯಿಲ್ಲ. ಒಂದು ರೀತಿಯಲ್ಲಿ ಮನೆಯಲ್ಲಿ ಗದರಿಸಿದಂತೆ ಗದರಿಸುವುದೂ ಉಂಟು ! ( ಯಾಕೆ ಊಟ ಬಿಟ್ಟೆ? ಇತ್ಯಾದಿ ! ) ಆದರೂ, ನನಗೂ, ನನ್ನ ಮನದನ್ನೆಗೂ ಅಲ್ಲಿಯ ಊಟ-ತಿಂಡಿ ಅಚ್ಚುಮೆಚ್ಚು.
ಸರಿ, ಯಾಕೋ ಇಡ್ಲಿಯ ನೆನಪಾಗಿ ಹೊಟ್ಟೆ ಕರೆಯುತ್ತಿದೆ...ಮತ್ತೆ ಸಿಗೋಣ...ನಮಸ್ಕಾರ !
ಚಿತ್ರಗಳು http://sampada.net/image/22665; http://sampada.net/image/22667;
http://sampada.net/image/22669; http://sampada.net/image/22668