ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳ ಮುಂದಾಳು: ಡಿ. ಎನ್. ಪ್ರಕಾಶ್ ಇನ್ನಿಲ್ಲ

ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳ ಮುಂದಾಳು: ಡಿ. ಎನ್. ಪ್ರಕಾಶ್ ಇನ್ನಿಲ್ಲ

ಜೂನ್ 9, 2023ರಂದು ರಾತ್ರಿ 11 ಗಂಟೆಯ ಹೊತ್ತಿಗೆ ಡಿ.ಎನ್. ಪ್ರಕಾಶ್ ನಿಧನರಾದರೆಂಬ ಸುದ್ದಿ ಬಂದೆರಗಿದ್ದು ಮರುದಿನ ಮುಂಜಾನೆ. ಈಗಲೂ ಅದನ್ನು ನಂಬಲಾಗುತ್ತಿಲ್ಲ. ಯಾಕೆಂದರೆ, ಕೆಲವೇ ದಿನಗಳ ಮುಂಚೆ ನನಗೆ ಅವರು ಮೆಸೇಜ್ ಮಾಡಿದ್ದರು.

ಡಿ.ಎನ್. ಪ್ರಕಾಶ್ ಎಂದಾಗ ನಮಗೆ ನೆನಪಾಗುವುದು ಸರಳ ಉಡುಪಿನ, ಎತ್ತರದ ನಿಲುವಿನ, ಗೌರವ ವರ್ಣದ, ಸದಾ ನಗುಮುಖದ, ಮೆಲು ಮಾತಿನ ವ್ಯಕ್ತಿ. ತನ್ನ ಕೆಲಸದಿಂದಲೇ ಎಲ್ಲರಿಗೂ ಉತ್ಸಾಹ ತುಂಬುವ, ಹಿಡಿದ ಕೆಲಸ ಮುಗಿಯುವ ವರೆಗೆ ಬೆನ್ನು ಬಿಡದೆ ಸಾಧಿಸುವ ಅಸಾಮಾನ್ಯ ಮನುಷ್ಯ.  

ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳನ್ನು ಬಲಪಡಿಸಿ, ಮುನ್ನಡೆಸಲಿಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿದ ಡಿ. ಎನ್. ಪ್ರಕಾಶ್ ಆ ಸಂಘಟನೆಗಳ ಉನ್ನತ ಪದಾಧಿಕಾರಿಯ ಸ್ಥಾನಕ್ಕೆ ತನ್ನ ಅರ್ಹತೆ ಹಾಗೂ ಸಮರ್ಪಣೆಗಳ ಬಲದಿಂದಲೇ ಏರಿದ್ದು ಅಸಾಧಾರಣ ಸಾಧನೆ. ಬ್ಯಾಂಕಿನ ಅಧಿಕಾರಿಯ ಶ್ರೇಣಿಯಲ್ಲಿಯೂ ಉನ್ನತ ಹುದ್ದೆಗೇರುವ ಎಲ್ಲ ಅರ್ಹತೆಗಳೂ ಅವರಿಗಿದ್ದವು. ಆದರೆ ಅವರು ಅವನ್ನೆಲ್ಲ ನಿರಾಕರಿಸಿ, ಎಲ್ಲ ಅಧಿಕಾರಿಗಳ ಶ್ರೇಯಸ್ಸಿಗಾಗಿ ಸಂಘಟನೆಯ ಹಾದಿಯಲ್ಲಿ ಸಾಗಿದರು.

ಅವರು ಅಂದಿನ ಕಾರ್ಪೊರೇಷನ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಸಿ.ಬಿ.ಓ.ಓ.)ಯಲ್ಲಿ ಹಂತಹಂತವಾಗಿ ಮೇಲಕ್ಕೇರಿ, ಪ್ರಧಾನ ಕಾರ್ಯದರ್ಶಿಯಾಗಿ, ನಂತರ ಅಧ್ಯಕ್ಷರಾಗಿ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಿದ್ದರು. (ಕಾರ್ಪೊರೇಷನ್ ಬ್ಯಾಂಕ್ 01-4-2020ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಯಿತು.)

ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ - ಐಬೊಕ್ (ಎ.ಐ.ಬಿ.ಓ.ಸಿ.)ನಲ್ಲಿಯೂ ಜಾಯಿಂಟ್ ಜನರಲ್ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿ ತನ್ನ ಛಾಪು ಮೂಡಿಸಿದ್ದರು. ತಾನು ಅಧಿಕಾರಿಯಾಗಿದ್ದ ಕಾರ್ಪೊರೇಷನ ಬ್ಯಾಂಕಿನ ನಿರ್ದೇಶಕರ ಮಂಡಲಿಯಲ್ಲಿ ಒಂದು ಅವಧಿಗೆ ನಿರ್ದೇಶಕರಾಗಿ ನೇಮಕವಾದಾಗಲೂ ಬ್ಯಾಂಕ್ ಅಧಿಕಾರಿಗಳ ಹಿತರಕ್ಷಣೆ ಅವರ ಬದ್ಧತೆಯಾಗಿತ್ತು.

ತನ್ನ ನಿವೃತ್ತಿಯ (2015ರಲ್ಲಿ) ನಂತರ, ಕಾರ್ಪೊರೇಷನ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಎಸೋಸಿಯೇಷನ್ (ಸಿಬಿಆರ್ಓಎ)ನಲ್ಲಿ ಸಕ್ರಿಯರಾದರು. 2018-2022ರ ಅವಧಿಯಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಾಷ್ಟ್ರ ಮಟ್ಟದ ನಿವೃತ್ತ ಬ್ಯಾಂಕ್ ಅಧಿಕಾರಿಗಳ ಸಂಘಟನೆಯಾದ ಎಐಬಿಪಿಎಆರ್-ಸಿ  ಅದರ ಉಪಾಧ್ಯಕ್ಷರಾಗಿ ಮತ್ತು ಅದೇ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚೇರ್-ಮನ್ ಆಗಿ ನಿವೃತ್ತ ಬ್ಯಾಂಕ್ ಅಧಿಕಾರಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿದರು.

ಸಿಬಿಆರ್-ಓಎ ಇದರ ವಾಟ್ಸಾಪ್ ಗ್ರೂಪಿನಲ್ಲಿ ಡಿ.ಎನ್. ಪ್ರಕಾಶರ ನಿಧನದ ನಂತರ ಸಂತಾಪ ಸಂದೇಶಗಳ ಸುರಿಮಳೆ. "ಅವರು ನಮ್ಮ ಗೆಳೆಯ, ತತ್ವಜ್ನಾನಿ ಮತ್ತು ಮಾರ್ಗದರ್ಶಕ” (ಫ್ರೆಂಡ್, ಫಿಲಾಸಫರ್ ಆಂಡ್ ಗೈಡ್) ಆಗಿದ್ದರೆಂದು ಹಲವರು ತಮ್ಮ ಸಂದೇಶಗಳಲ್ಲಿ ದಾಖಲಿಸಿದ್ದಾರೆ.

ಕಾರ್ಪೊರೇಷನ್ ಬ್ಯಾಂಕಿನ ಚೀಫ್ ವಿಜಿಲೆನ್ಸ್ ಆಫೀಸರ್ ಮತ್ತು ಜನರಲ್ ಮೆನೇಜರ್ ಆಗಿದ್ದ ಸಜೀವ ಕೃಷ್ಣನ್ “ಡಿ.ಎನ್. ಪ್ರಕಾಶರ ಸಹಕಾರ ಇಲ್ಲದಿದ್ದರೆ, ಬ್ಯಾಂಕಿನಲ್ಲಿ ತಮಗೆ ವಿಜಿಲೆನ್ಸ್  ನಿರ್ವಹಣೆ ಕಷ್ಟವಾಗುತ್ತಿತ್ತು" ಎಂದು ವಾಟ್ಸಪ್ ಗ್ರೂಪಿನಲ್ಲಿ ಬರೆದುಕೊಂಡಿರುವುದು, ಪ್ರಕಾಶರ ಧೀಮಂತಿಕೆಯ ಪುರಾವೆ. ಇನ್ನೊಬ್ಬ ನಿವೃತ್ತ ಜನರಲ್ ಮೆನೇಜರ್ ಪಿ.ಆರ್. ಕಾರಂತ್, ಪ್ರಕಾಶರ ನಿಧನದ ಸುದ್ದಿ ತಿಳಿದಾಗ ಹೇಳಿದ ಮಾತು: “ಡಿ.ಎನ್. ಪ್ರಕಾಶ್ ಎತ್ತರದ ವ್ಯಕ್ತಿ, ಅವರ ವ್ಯಕ್ತಿತ್ವವೂ ಎತ್ತರದ್ದೇ."

ಅದೇ ಗ್ರೂಪಿನಲ್ಲಿ ಬಿ. ದಿನೇಶ್ ಎಂಬವರು ತನಗೆ ಅವರು ಮಾಡಿದ್ದ ಸಹಾಯವನ್ನು ಹಂಚಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಸಂಕಷ್ಟ ಕೆಂದ್ರ (ಹಾರ್ಡ್-ಷಿಪ್ ಸೆಂಟರ್)ಕ್ಕೆ ಇವರನ್ನು ವರ್ಗಾಯಿಸಿದಾಗ ಇವರ ಕ್ವಾರ್ಟರ್ಸಿನ ಬಾಡಿಗೆ ಪಾವತಿಸಲು ಪ್ರಾದೇಶಿಕ ಕಚೇರಿ ನಿರಾಕರಿಸಿತ್ತು. ಆಗ, ಡಿ. ಎನ್. ಪ್ರಕಾಶರ ಮಧ್ಯಪ್ರವೇಶದಿಂದಾಗಿಯೇ ತನಗೆ ಆ ಬಾಡಿಗೆ ಪಾವತಿಸಲಾಯಿತು ಎಂದು ದಿನೇಶರು ಬರೆದುಕೊಂಡಿದ್ದಾರೆ.

ಈ ರೀತಿಯಲ್ಲಿ ಅನೇಕ ಬ್ಯಾಂಕ್ ಅಧಿಕಾರಿಗಳ ವೈಯುಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಡಿ.ಎನ್. ಪ್ರಕಾಶ್ ಸಹಕರಿಸಿದ್ದರು. ಹಲವಾರು ನಿವೃತ್ತ ಅಧಿಕಾರಿಗಳ ಪಿಂಚಣಿಯನ್ನು ಬ್ಯಾಂಕ್ ಕಡಿಮೆ ನಿಗದಿಗೊಳಿಸಿತ್ತು. ಈ ತಪ್ಪನ್ನು ಸರಿಪಡಿಸಲಿಕ್ಕಾಗಿ ಪ್ರಕಾಶರು ಮಾರ್ಗದರ್ಶನ್ ನೀಡುತ್ತಿದ್ದರಲ್ಲದೆ, ಅದಕ್ಕಾಗಿ ಪತ್ರವನ್ನೂ ಟೈಪ್ ಮಾಡಿ ಅಧಿಕಾರಿಗಳಿಗೆ ಕಳಿಸಿ ಕೊಡುತ್ತಿದ್ದರು.

ಹಲವು ಸಂಘಟನೆಗಳ ಪದಾಧಿಕಾರಿಗಳ ವರ್ತನೆಯನ್ನು ಹತ್ತಿರದಿಂದ ಗಮನಿಸಿದಾಗ ಅವರು ಹೇಳುವುದಕ್ಕೂ ಮಾಡುವುದಕ್ಕೂ ಇರುವ ಅಂತರ ನಮ್ಮ ಅರಿವಿಗೆ ಬರುತ್ತದೆ. ಆದರೆ ಡಿ.ಎನ್. ಪ್ರಕಾಶ್ ಅದಕ್ಕೊಂದು ಅಪವಾದ. ಅವರು ನುಡಿದಂತೆ ನಡೆದವರು. ತಾನು ಪದಾಧಿಕಾರಿಯಾಗಿದ್ದ ಎಲ್ಲ ಸಂಘಟನೆಗಳಲ್ಲಿಯೂ ತನ್ನ ಸಜ್ಜನಿಕೆ ಹಾಗೂ ಪ್ರಾಮಾಣಿಕ ನಡವಳಿಕೆಯಿಂದ ಸದಸ್ಯರೆಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಪ್ರತಿಯೊಬ್ಬರನ್ನು ಗೌರವಿಸುವ ಅವರ ಗುಣ ದೊಡ್ಡದು.

ಮಂಗಳೂರು ಅವರ ಕರ್ಮಭೂಮಿಯಾಗಿತ್ತು. ಇಲ್ಲಿನ ಕೋಟೆಕಣಿಯಲ್ಲಿ ಕಳೆದ ಹಲವು ದಶಕಗಳಿಂದ ವಾಸವಿದ್ದ ಡಿ.ಎನ್. ಪ್ರಕಾಶ್ ಇತ್ತೀಚೆಗೆ (ಫೆಬ್ರವರಿ 2023ರಲ್ಲಿ) ಕೇರಳದ ಎರ್ನಾಕುಲಂ ಹತ್ತಿರದ ಸ್ವಂತ ಊರಾದ ಚೇರೈ ಎಂಬಲ್ಲಿಗೆ ತೆರಳಿ, ಅಲ್ಲಿನ ಸ್ವಗೃಹದಲ್ಲಿ ನೆಲೆಸಿದ್ದರು. ಪತ್ನಿ ಜ್ಯೋತಿ, ಪುತ್ರ ವೈಶಾಕ್ ಮತ್ತು ಪುತ್ರಿ ವರ್ಷಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ಡಿ.ಎನ್. ಪ್ರಕಾಶ್ ಇಂದು ನಮ್ಮೊಂದಿಗಿಲ್ಲ. ಆದರೆ, ನಮ್ಮ ನೆನಪಿನಲ್ಲಿ ಅವರು ಯಾವತ್ತೂ ಇರುತ್ತಾರೆ. ಅವರು ಮುನ್ನಡೆಸಿದ್ದ ಸಂಘಟನೆಗಳನ್ನು ಅವರಂತೆಯೇ ಸಮರ್ಥವಾಗಿ ಮುನ್ನಡೆಸುವುದು ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿ.