ಬ್ಯಾಂಕ್ ಹಣ ಲೂಟಿ : ಭದ್ರತಾ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಶಾಖೆಯಿಂದ ಹಣ ಒಯ್ದು ವಾಹನಕ್ಕೆ ತುಂಬುತ್ತಿದ್ದಾಗ ಗುಂಡಿನ ದಾಳಿ ನಡೆಸಿ, ಒಬ್ಬನನ್ನು ಹತ್ಯೆಗೈದು ಲಕ್ಷಾಂತರ ರೂ. ಹಣದ ಸಮೇತ ಇಬ್ಬರು ಪರಾರಿಯಾಗಿರುವ ಘಟನೆ ಬೀದರ್ ಮಾತ್ರವೇ ಅಲ್ಲ, ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲು ಪೋಲೀಸರು ಜಾಲಾಡುತ್ತಿರುವಾಗಲೇ, ದಕ್ಷಿಣ ಕನ್ನಡದಲ್ಲಿ ಸಹಕಾರಿ ಬ್ಯಾಂಕ್ ವೊಂದಕ್ಕೆ ನುಗ್ಗಿರುವ ಮುಸುಕುಧಾರಿಗಳು ಕೋಟ್ಯಾಂತರ ರೂ. ಹಣದ ಸಮೇತ ಪರಾರಿಯಾಗಿದ್ದಾರೆ. ಮತ್ತೊಂದೆಡೆ, ವಿಜಯಪುರದಲ್ಲಿ ಮಧ್ಯಪ್ರದೇಶ ಮೂಲದ ದರೋಡೆಕೋರರ ಮೇಲೆ ಶೂಟೌಟ್ ಆಗಿ, ಒಬ್ಬನನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಕೆಲವು ತಿಂಗಳ ಹಿಂದೆ ಆಭರಣ ಅಂಗಡಿಯೊಂದರಲ್ಲಿ ಗುಂಡಿನ ದಾಳಿ ನಡೆಸಿ ಕೇಜಿಗಟ್ಟಲೆ ಬಂಗಾರ ಒಯ್ದವರು ಇನ್ನೂ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಬಲಿಷ್ಟ ಪೋಲೀಸ್ ವ್ಯವಸ್ಥೆ ಇದೆ, ದರೋಡೆ ಮಾಡುವ ಧಾವಂತದಲ್ಲಿ ಸಿಕ್ಕಿಬಿದ್ದರೆ ಪ್ರಾಣಕ್ಕೆ ಕುತ್ತು ಎದುರಾಗಬಹುದು, ಪೋಲೀಸರು ಬಂಧಿಸಿದರೆ ವರ್ಷಾನುಗಟ್ಟಲೆ ಜೈಲಿನಲ್ಲಿ ಕಳೆಯಬೇಕಾಗಿ ಬರಬಹುದು ಎಂಬುದನ್ನೆಲ್ಲಾ ಮರೆತು, ಏಕಾಏಕಿ ಹಣ ಗಳಿಸಿ ಜೀವನದಲ್ಲಿ ನೆಲೆಯೂರಬಹುದು ಎಂಬ ಹುಂಬತನ ತುಂಬಿದ ಕ್ರಿಮಿನಲ್ ಮನಸ್ಥಿತಿಗಳಿಂದಲೇ ಇಂತಹ ಕೃತ್ಯ ನಡೆಯುತ್ತಿರುವುದು ನಿರ್ವಿವಾದ.
ಆದರೆ ಅಂತಹ ಭಯಮುಕ್ತ ವಾತಾವರಣ ಯಾವುದೇ ರಾಜ್ಯಕ್ಕೂ ಒಳ್ಳೆಯದಲ್ಲ. ಬೀದರ್, ದಕ್ಷಿಣ ಕನ್ನಡದಲ್ಲಿ ಲೂಟಿ ಮಾಡಿರುವುದು ಹಣಕಾಸು ಸಂಸ್ಥೆಗಳಿಂದ. ಇಲ್ಲಿ ದರೋಡೆಕೋರರ ಚಾಕಚಕ್ಯತೆ ಜತೆಗೆ ಹಣಕಾಸು ಸಂಸ್ಥೆಗಳ ಭದ್ರತಾ ವೈಫಲ್ಯವೂ ಎದ್ದು ಕಾಣುತ್ತಿದೆ. ಸಿಸಿಟೀವಿ ಸರಿಯಾಗಿ ಕೆಲಸ ಮಾಡಿಲ್ಲದಿರುವುದು, ಸೂಕ್ತ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳದಿರುವುದನ್ನು ಸೂಕ್ಷ್ಮವಾಗಿ ಗಮನಿಸಿಯೇ ಹಣ ಲೂಟಿ ಹೊಡೆದಂತೆ ಕಾಣುತ್ತಿದೆ. ಕಳ್ಳರು ಸಿಗಬಹುದು, ಹಣ ವಶಪಡಿಸಿಕೊಳ್ಳಬಹುದು, ಅವರಿಗೆ ಶಿಕ್ಷೆಯೂ ಆಗಬಹುದು. ಆದರೆ ಇಂತಹ ವೈಫಲ್ಯ ತೋರಿದವರಿಗೇನು ಶಿಕ್ಷೆ? ತಂತ್ರಜ್ಞಾನ ಮುಂದುವರಿದಂತೆಲ್ಲಾ ಕಳ್ಳಲು ಅಪ್ ಡೇಟ್ ಆಗುತ್ತಿದ್ದಾರೆ. ಅದರ ವೇಗಕ್ಕೆ ತಕ್ಕಂತೆ ವ್ಯವಸ್ಥೆಯೂ ಮೇಲ್ದರ್ಜೆಗೇರಬೇಕು. ಇಲ್ಲದಿದ್ದರೆ ಇಂತಹ ಪ್ರಕರಣಗಳು ಹೆಚ್ಚಾಗಬಹುದು. ರಾಜ್ಯದಲ್ಲಿ ನಡೆದ ಈ ಸಾಲು ಸಾಲು ದರೋಡೆ ಪ್ರಕರಣಗಳು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯುವುದಕ್ಕೆ ಎಚ್ಚರಿಕೆಯ ಗಂಟೆ, ಬೀದರ್ ನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯದ ಸಮೀಪವೇ ದರೋಡೆ ನಡೆಯುತ್ತಿದೆ ಎಂದರೆ, ದೂರದ ಪ್ರದೇಶಗಳ ಕತೆ ಏನು? ಪೋಲೀಸರು ದರೋಡೆಕೋರರನ್ನು ಶೀಘ್ರ ಪತ್ತೆ ಹಚ್ಚಿ, ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು. ಅವರನ್ನು ಬೇಗ ಬಂಧಿಸಿದಷ್ಟೂ ಒಳ್ಳೆಯ ಸಂದೇಶ ಹೋಗುತ್ತದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೮-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ