ಬ್ಯಾನರ್ ಕಲೆಯಿಂದ ಚಿತ್ರಕಲೆಯತ್ತ....
ಬ್ಯಾನರ ಬದುಕು ದುಸ್ಥರ. ಪೋಸ್ಟರ್ ನಂಬಿ ಅದೆಷ್ಟೋ ಜನರ ಹೊಟ್ಟೆ ಖಾಲಿ..ಖಾಲಿ. ತಿಂಗಳು ಗಟ್ಟಲೇ ಕಟೌಟ್ ಬರೆದು ಕಾಸು ಕಾಣದ ಇನ್ನದೇಷ್ಟೋ "ಕಲಾವಿದರು" . ಇದು ಬಣ್ಣ ನಂಬಿ ಕುಂಚದ ಮೋಹಕ್ಕೆ ಬಿದ್ದವರ ಸತ್ಯ ಕಥೆ. ಆಧುನಿಕತೆಯ ಅಬ್ಬರಕ್ಕೆ ವಿನೈಲ್ ಸೃಷ್ಟಿಯೇನೋ ಆದವು. ಮಳೆಯ ಹೊಡತೆಕ್ಕೆ ಗಾಳಿಯ ತಿವಿತಕ್ಕೆ ಜಗ್ಗದೇ ನಿಂತು ಬಿಟ್ಟವು. ಆದ್ರೆ, ಬಣ್ಣವನ್ನೇ ನಂಬಿದ ಬ್ಯಾನರ್ ಕಲಾವಿದರು ಕೆಲಸವಿಲ್ಲದೇ ಅತಂತ್ರವಾಗಿದ್ದಾರೆ.
ಬ್ಯಾನರ್ ಕಲಾವಿದ ಕೆ. ಚಿನ್ನಪ್ಪ ಕೂಡ ಇದನ್ನ ಎದುರಿಸಿದವರು. ಆದ್ರೆ, ಚಿನ್ನಪ್ಪ ಸ್ವಲ್ಪ ಮಗ್ಗಲು ಬದಲಿಸಿದರು. ಹೊಟ್ಟೆಗೆ ಹಿಟ್ಟುಕೊಟ್ಟ ಬ್ಯಾನರ್ ಕಲೆ ಜೊತೆಗೆ ಚಿತ್ರಕಲೆಯಲ್ಲೂ ಆಸಕ್ತಿ ಬೆಳಸಿಕೊಂಡರು. ನಮ್ಮಲ್ಲಿಯ ಪ್ರೇಕ್ಷಣಿಯ ಸ್ಥಳಗಳಿಗೆ ಬೇಟಿಕೊಟ್ಟರು. ಅಲ್ಲಿಯ ಶಿಲ್ಪ ಕಲೆಯನ್ನ ತಮ್ಮ ಕುಂಚದಿ ಕ್ಯಾನ್ ವಾಸ್ ಗೆ ತರಲು ಆರಂಭಿಸಿದರು. ಇದರ ಫಲ ೨೦೦೫ ರಲ್ಲಿ ಶುರುವಾದ ಇವರ ಕುಂಚದ ಪಯಣ ಇಲ್ಲಿವರೆಗೂ ಸಾಥ್ ನೀಡಿದೆ.
ಇವುಗಳ ನಡುವೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ದೇಶ-ವಿದೇಶದಲ್ಲೂ ಚಿನ್ನಪ್ಪನವರ ಕಲೆಯ ಆರಾಧಕರಿದ್ದಾರೆ. ತೈಲವರ್ಣದ ಚಿತ್ರಗಳನ್ನ ಖರೀದಿಸಿಕೊಂಡು ತಮ್ಮ ಮನೆಯ ಗೋಡೆಗಳನ್ನ ಅಲಂಕರಿಸಿದ್ದಾರೆ. ಅಲ್ಲಂಕರಿಸುತ್ತಲೇ ಇದ್ದಾರೆ...
ಚಿನ್ನಪ್ಪನವರ ಬಣ್ಣದ ಬದುಕು ಇದೇ ರೀತಿ ಶ್ರೀಮಂತವಾಗಿಯೇ ಸಾಗಿದೆ. ಕಳೆದ ವರ್ಷ ೧೮ ಚಿತ್ರಗಳನ್ನ ಬಿಡಿಸಿದ್ದರು. ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲೂ ತಮ್ಮ ಕಲಾಪ್ರತಿಭೆಯನ್ನ ಪ್ರದರ್ಶಿದರು. ಇದಾದ ನಂತರ ಚಿನ್ನಪ್ಪನವರ ಕಲಾಪ್ರೀತಿ ಮತ್ತೆ ಮೈಗೊಡವಿ ನಿಂತಿದೆ. ಅಜಂತಾ,ಹಂಪಿ, ಒಂಟಿ ಸಲಗ, ಸಿಂಹದ ಕುಟುಂಬ, ಚಿಗುರೆಯ ಕಾದಾಟ, ಹೀಗೆ ೨೭ ಚಿತ್ರಗಳನ್ನ ಬಿಡಿಸಿದ್ದಾರೆ. ಇವುಗಳನ್ನ ಸಹ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆ. ೨೩ ರಿಂದ ಆ.೩೦ ರವೆರಗೂ ಪ್ರದರ್ಶಿಸಲಿದ್ದಾರೆ..
ಇದೇನೋ ಚಿತ್ರ ಕಲೆಯ ಕಥೆ. ಆದ್ರೆ, ಬ್ಯಾನರ್ ಮೋಹ ಚಿನ್ನಪ್ಪನವರನ್ನ ಬಿಟ್ಟು ಹೋಗಿಲ್ಲ. ಇನ್ನುಯಿದೆ. ಸರಿ ಸುಮಾರು ೬೨ ವರ್ಷಗಳೇ ಸಿನೆಮಾ ಬ್ಯಾನರ್ ಬರೆಯುವಲ್ಲಿ ಕಳೆದು ಹೋಗಿವೆ. ಬೇಡರಕಣ್ಣಪ್ಪ ಚಿತ್ರದಿಂದ ಆರಂಭವಾಗಿ ಕನ್ನಡದ ಎಲ್ಲ ನಾಯಕರ ಚಿತ್ರದ ಪೋಸ್ಟರ್ ಗಳು, ಬ್ಯಾನರ್ ಗಳು, ಕಟೌಟ್ ಗಳನ್ನ ರೂಪಿಸಿಕೊಟ್ಟಿದ್ದಾರೆ. ಇನ್ನೇನು ತೆರೆಗೆ ಬರಲಿರುವ ದರ್ಶನ್ ಅಭಿನಯದ "ಶೌರ್ಯ" ಚಿತ್ರಕ್ಕೂ ಇವರೇ ಕೆಲಸ ಮಾಡ್ತಿದ್ದಾರೆ. ೭೨ ರ ಇಳಿವಯಸ್ಸಿನಲ್ಲಿ ಈಗಲೂ ಅದೇ ಉತ್ಸಾಹದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಲವು ಕನಸೂ ಕಾಣುತ್ತಿದ್ದಾರೆ. ಇವರ ಹಿರಿಯ ಕನಸ್ಸಿಗೊಂದು ಸಲಾಮ್..
- ರೇವನ್ ಪಿ.ಜೇವೂರ್