ಬ್ಯಾಸ್ಕೆಟ್ ಬಾಲೂ - ಮಹಾಭಾರತವೂ

ಬ್ಯಾಸ್ಕೆಟ್ ಬಾಲೂ - ಮಹಾಭಾರತವೂ

ಬರಹ

ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಯಾವುದೋ ಚಾನಲ್’ನಲ್ಲಿ ಮಹಾಭಾರತ ನೋಡಿದ್ದರ ಫಲವೋ ಏನೋ, ಇಂದು ಮುಂಜಾನೆ ಎದ್ದಾಗಿನಿಂದ ಬರೀ ಅದರ ಪಾತ್ರಗಳ ಸುತ್ತಲೇ ನನ್ನ ಮನ ಸುತ್ತುತ್ತಿದೆ. ಬೆಳಿಗ್ಗೆ, ಕಿಟಕಿಯಿಂದ ತೂರಿ ಬಂದ ಸೂರ್ಯನ ರಶ್ಮಿಗೆ ನಮಿಸಿ ಅಂದುಕೊಂಡೆ, ಯಾರನ್ನೂ ಸುಟ್ಟು ಭಸ್ಮ ಮಾಡುವಷ್ಟು ಶಕ್ತಿಯಿದ್ದೂ, ಕುಂತಿಯಲ್ಲಿ ಹುಟ್ಟಿದ ನಿನ್ನ ಮಗ ಕರ್ಣನಿಗೆ ಆಗುತ್ತಿದ್ದ ಅನ್ಯಾಯ ಕಂಡೂ ಸುಮ್ಮನೇಕಿದ್ದೆ ? ಪ್ರತಿ ಕ್ಷಣವೂ ಜಗತ್ತನ್ನು ಕಾಣುವ ನಿನಗೆ, ಈ ವಿಷಯ ಏಕೆ ಕಾಣಲಿಲ್ಲ ? ಅಥವಾ ಅದ್ಭುತ ಶಕ್ತಿಯ ಜೊತೆ ಅಷ್ಟೇ ತಾಳ್ಮೆಯೂ, ಕ್ಷಮಾ ಗುಣವೂ ಇದೆಯೋ ನಾನರಿಯೆ !
ಶನಿವಾರವಾದ್ದರಿಂದ ಸ್ನಾನ ಬಿಟ್ಟು ಮಿಕ್ಕ ನಿತ್ಯಕರ್ಮ ಮುಗಿಸಿ ಮಹಡಿ ಇಳಿದು ಅಡಿಗೆ ಮನೆಗೆ ಕಾಫಿ ಕುಡಿಯಲು ಬಂದೆ. ನನ್ನಾಕೆ ಯಾರೊಂದಿಗೋ ಫೋನಿನಲ್ಲಿ ಹೇಳುತ್ತಿದ್ದಳು ’ಚಳಿಗೆ ಮಜ್ಜಿಗೆ ಆಗಲಿಲ್ಲ ಅಂತ ಒವನ್’ನಲ್ಲಿಟ್ಟೆ. ಮಧ್ಯಾನ್ನದ ಹೊತ್ತಿಗೆ ಮಜ್ಜಿಗೆ ಆಗಿತ್ತು’.
ಗಾಂಧಾರಿಯು ತನ್ನ ಗರ್ಭ ಹೊತ್ತು ಒಂದು ವರ್ಷವಾದರೂ ಹಡೆಯದಿರುವುದನ್ನು ಕಂಡು ಎಲ್ಲರಿಗೂ ಅಲೋಚನೆಯಾಯಿತು. ಭೀಷ್ಮರು ವ್ಯಾಸರನ್ನು ಭೇಟಿಯಾದರು. ಅವರು ಮತ್ತೊಂದು ವರ್ಷ ಕಾಯಲು ತಿಳಿಸಿದರು. ಮತ್ತೊಂದು ವರ್ಷ ತುಂಬಲು, ದೊಡ್ಡ ಮಾಂಸದ ಮುದ್ದೆಯನ್ನು ಹೆತ್ತಳು ಗಾಂಧಾರಿ. ವ್ಯಾಸರು ಬಂದು, ಆ ಮುದ್ದೆಯನ್ನು ನೂರು ಭಾಗ ಮಾಡಿ ಬೆಣ್ಣೆಯ ಜಾರಿಯಲ್ಲಿಟ್ಟು, ಉಳಿದ ಸ್ವಲ್ಪ ಮಾಂಸದ ಮುದ್ದೆಯನ್ನು ನೂರೊಂದನೆಯ ಜಾರಿಯಲ್ಲಿಟ್ಟು ಭೀಷ್ಮರಿಗೆ ಒಪ್ಪಿಸಿ ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಹೇಳಿದರು. ಮತ್ತೆರಡು ವರ್ಷ ಕಳೆಯಲು ಮಾಂಸದ ಮುದ್ದೆಗಳು ಮಕ್ಕಳಾಗಿ ಕೌರವರು ಎನಿಸಿಕೊಂಡರು. ಮೊದಲ ನೂರು, ಗಂಡು ಮಕ್ಕಳಾದರೆ ಕೊನೆಯದು ಹೆಣ್ಣು ಮಗು, ದುಷ್ಯಲೆ.

ಕಾಫಿ ಕುಡಿದು ಮುಗಿಸುವ ಹೊತ್ತಿಗೆ, ಮಗನಿಗೆ ಬ್ಯಾಸ್ಕೆಟ್ ಬಾಲ್ ಪಂದ್ಯಕ್ಕೆ ಕರೆದೊಯ್ಯಬೇಕೆಂದು ನನ್ನ ಪತ್ನಿ ಹೇಳಿದಳು. ನಾನು ಸರಿ ಅಂತ ಸ್ನಾನ ಮಾಡಲು ಹೊರಟೆ.
ಶಾಪಗ್ರಸ್ತನಾದ ಪಾಂಡುಕುಮಾರ ತನ್ನ ಮಿಕ್ಕ ಜೀವನವನ್ನು ವನವಾಸದಲ್ಲಿ ಕಳೆಯಲು ನಿಶ್ಚಯಿಸಿದ. ಪ್ರಕೃತಿ ಸೌಂದರ್ಯವನ್ನು ಸವೆಯುತ್ತ ಓಡಾಡುತ್ತಿದ್ದ ಅವನು ಹೀಗೆ ಒಮ್ಮೆ ಅಕಸ್ಮಾತ್ ಆಗಿ, ಸ್ನಾನ ಮಾಡುತ್ತಿದ್ದ ತನ್ನ ಕಿರಿಯ ಪತ್ನಿ ಮಾದ್ರಿಯನ್ನು ಕಂಡ. ಮನಸ್ಸು ಚಂಚಲವಾಗಿ ಅವಳ ಬಳಿ ಸಾಗಿ ಬಿಗಿದಪ್ಪಿದ. ಮಾದ್ರಿಯು ವಿಪತ್ತು ಬಂದೊದಗಿದ್ದನ್ನು ಮನಗಂಡರೂ, ಕಾಲ ಮಿಂಚಿತ್ತು. ಋಷಿಯ ಶಾಪದಂತೆ ಮಾದ್ರಿಯೊಡನೆ ಸರಸದಿಂದಿರುವ ಸಮಯದಲ್ಲೇ ಅಸುನೀಗಿದ.
ಸಿದ್ದನಾಗಿ ಬರುವ ವೇಳೆಗೆ ಮಗನೂ ಬ್ಯಾಸ್ಕೆಟ್ ಬಾಲ್ ಜರ್ಸಿ ತೊಟ್ಟು ಸಿದ್ದನಾಗಿದ್ದ. ನನ್ನ ಕಂಡ ಕೂಡಲೇ, ನುಡಿದ ’ಇವತ್ತು ಗೇಮ್ ಇದೆ ಅಪ್ಪ. ನಮ್ಮ ಟೀಮ್ ಗೆಲ್ಲುತ್ತೋ ಇಲ್ಲವೋ ಗೊತ್ತಿಲ’ ಅಂತ.
ಕುರುಕ್ಷೇತ್ರ ಯುದ್ದದ ಸಮಯ. ತನ್ನ ಬಂಧು ಬಾಂಧವರನ್ನು ಕೈಯಾರೆ ಕೊಲ್ಲಬೇಕಲ್ಲ ಎಂದು ವ್ಯಥೆಪಡುವಾಗ ಕೃಷ್ಣನು ನುಡಿದ ಭಗವದ್ಗೀತೆಯ ಸಾರ ’ ನಿನ್ನ ಕೆಲಸ ನೀನು ಮಾಡು. ಮಿಕ್ಕಿದ್ದನ್ನು ನನಗೆ ಬಿಡು’.
ನನ್ನಾಕೆ ಅವನಿಗೆ ಚಿತ್ರಾನ ಕಲಿಸಿ ತಟ್ಟೆಗೆ ಹಾಕಿ ಕೊಟ್ಟಳು. ಅವನು ಬೇಗ ಬೇಗ ತಿಂದು ಮುಗಿಸಿ, ಹೊರಡುವ ತರಾತುರಿಯಲ್ಲಿ ಸರಿಯಾಗಿ ತಟ್ಟೆ ತೊಳೆಯದೆ ಇಟ್ಟ. ನನ್ನಾಕೆ ’ಏನು ತಟ್ಟೆ ತೊಳೆದಿದ್ದ್ಯಾ ನೋಡು ? ಮೂಲೆಯಲ್ಲಿ ಅನ್ನ ಹಾಗೇ ಇದೆ’ ಎನ್ನುತ್ತ ಮತ್ತೆ ತೊಳೆದಳು.
ಕುತಂತ್ರದಿಂದ ದುರ್ಯೋಧನನು ದುರ್ವಾಸ ಮಹರ್ಷಿಯನ್ನು ವನವಾಸಿಗಳಾಗಿದ್ದ ಪಾಂಡವರ ಬಳಿ ಕಳಿಸುತ್ತಾನೆ. ಅವರಾದರೋ ತಮ್ಮ ಶಿಷ್ಯ ವೃಂದವನ್ನೂ ಕರೆದುಕೊಂಡು ಮಟ ಮಟ ಮಧ್ಯಾನ್ನ ಪಾಂಡವರ ಪಾಳ್ಯಕ್ಕೆ ಹೋಗುತ್ತಾರೆ. ಪಾಂಡವರ ಊಟ ಆಗ ತಾನೇ ಮುಗಿದು ದ್ರೌಪದಿಯು ಪಾತ್ರೆಯನ್ನೂ ತೊಳೆದಿಟ್ಟಿರುತ್ತಾಳೆ. ಕೋಪಕ್ಕೆ ಹೆಸರಾದ ದೂರ್ವಾಸ ಮುನಿಗಳು ಅಲ್ಲಿಗೆ ಬಂದು, ತಮಗೂ ಹಾಗೂ ತಮ್ಮ ಶಿಷ್ಯರಿಗೂ ಬಹಳ ಹಸಿವಾಗಿದೆ ಎಂದೂ, ಊಟಕ್ಕೆ ಸಿದ್ದಗೊಳಿಸುವಂತೆ ಹೇಳಿ, ಶಿಷ್ಯರೊಡನೆ ನದಿಗೆ ಸ್ನಾನಕ್ಕೆ ಹೋಗುತ್ತಾರೆ. ಅಷ್ಟು ಮಂದಿಗೆ ಊಟ ಹಾಕಲು ತಮ್ಮಲ್ಲಿ ಏನೂ ಇಲ್ಲ, ಆದರೆ ಉಪಚಾರ ಮಾಡದಿದ್ದರೆ ಮುನಿಗಳು ಶಪಿಸುವುದು ಖಂಡಿತ ಎಂಬ ಪರಿಸ್ಥಿತಿ ಅರಿವಾಗಿ, ಪಾಂಡವರಿಗೆ ದಿಕ್ಕು ತೋಚದಂತಾಗುತ್ತದೆ. ದ್ರೌಪದಿಯು ಕೃಷ್ಣನನ್ನು ನೆನೆಯುತ್ತಾಳೆ. ಆಪದ್ಭಾಂಧವ ಕೃಷ್ಣನು ಅಲ್ಲಿಗೆ ಬಂದು ತೊಳೆದಿಟ್ಟಿರುವ ಅನ್ನದ ಪಾತ್ತ್ರೆಯನ್ನು ತಾರೆಂದು ಹೇಳಿ, ಮೂಲೆಯಲ್ಲಿ ಮೆತ್ತಿಕೊಂಡಿದ್ದ ಒಂದು ಅಗುಳನ್ನು ತಿನ್ನಲು, ದೂರ್ವಾಸರ ಹಾಗೂ ಶಿಷ್ಯ ವೃಂದದವರ ಹೊಟ್ಟೆ ಭರ್ತಿಯಾಗುತ್ತದೆ.
ಕಾರನ್ನೇರಿ ಹೊರಡಲು ಅಣಿಯಾಗುತ್ತಿದ್ದಂತೆ ಯಾವುದೋ ಫೋನ್ ಕಾಲ್ ಬಂತು. ಸ್ನೇಹಿತನು ಕಾರಿನ ಟೈರ್ ಪಂಕ್ಚರ್ ಆಗಿತ್ತು. ಟೈಮಿಗೆ ಸರಿಯಾಗಿ ಕೈ ಕೊಡ್ತು ಎಂದು ಬೈದುಕೊಳ್ಳುತ್ತ, ಅವನ ಮಗನನ್ನು ನಾನು ಪಂದ್ಯಕ್ಕೆ ಕರೆದೊಯ್ಯಲು ಸಾಧ್ಯವೇ ಎಂದು ಕೇಳಿಕೊಂಡು ಕರೆ ಮಾಡಿದ್ದ. ಆಗಲಿ ಎಂದು ಅವನ ಮನೆಗೆ ಹೊರಟೆವು.
ಶಾಪಗಳ ಸರಮಾಲೆಯನ್ನೇ ಹೊತ್ತಿದ್ದ ದುರಂತನಾಯಕ ಕರ್ಣ. ಕುರುಕ್ಷೇತ್ರ ಯುದ್ದ ಹದಿನೇಳನೆಯ ದಿನ, ಅರ್ಜುನನೊಡನೆ ನೆಡೆಯುತ್ತಿದ್ದ ಯುದ್ದದಲ್ಲಿ ಮೆಲುಗೈ ಸಾಧಿಸಿದ್ದ ಕರ್ಣ. ದುರದೃಷ್ಟವಶಾತ್, ಅದೇ ಸಮಯಕ್ಕೆ ಅವನ ರಥದ ಒಂದು ಚಕ್ರ ನೆಲದಲ್ಲಿ ಹೂತುಹೋಯಿತು. ಇದು ಬ್ರಾಹ್ಮಣನೊಬ್ಬನ ಶಾಪದಿಂದ ಉಂಟಾದ ವೈಪರೀತ್ಯ. ಚಕ್ರವನ್ನು ಮೇಲೆತ್ತಲು ಸಾರಥಿ ಶಲ್ಯ ಕೈಗೂಡಿಸಲಿಲ್ಲ ! ಅರ್ಜುನನಿಗೆ ಕಾಯಲು ತಿಳಿಸಿ ಹೂತಿದ್ದ ಚಕ್ರವನ್ನು ಒಬ್ಬನೇ ಮೇಲೆತ್ತ ತೊಡಗಿದ. ಅರ್ಜುನನು ಸಮ್ಮತಿಸಿದರೂ ಕೃಷ್ಣನು ಸುಮ್ಮನಿರಲಿಲ್ಲ. ಈಗ ಬಿಟ್ಟರೆ ಅರ್ಜುನನಿಗೆ ವಿಪತ್ತು ಎಂದೆಣಿಸಿ, ಅಭಿಮನ್ಯುವನ್ನು ಹಿಂದಿನಿಂದ ಆಕ್ರಮಣ ಮಾಡಿ ಹೀನವಾಗಿ ಕೊಂದದ್ದನ್ನು ನೆನಪಿಸಿ, ಶಸ್ತ್ರಹೀನನಾದ ಕರ್ಣನನ್ನು ಕೊಲ್ಲುವಂತೆ ಮಾಡಿದ.
ಸ್ನೇಹಿತನ ಮಗನನ್ನೂ ಕರೆದುಕೊಂಡು ಪಂದ್ಯಕ್ಕೆ ಹೊರಟೆ. ಇವರಿಬ್ಬರ ಸಂಭಾಷಣೆಯನ್ನು ಆಲಿಸುತ್ತ ಕಾರನ್ನು ಓಡಿಸುತ್ತಿದ್ದೆ. ನನ್ನ ಮಗನು ತನ್ನ ಕಳವಳವನ್ನು ಸ್ನೇಹಿತನ ಮುಂದೆಯೂ ತೋಡಿಕೊಂಡ. ಅವನು ಆಟದಲ್ಲಿ ಅಷ್ಟು ಚುರುಕಿಲ್ಲದಿದ್ದರೂ ಮಾತಿನಲ್ಲಿ ಮುಂದು. ಆ ಕಡೆ ಟೀಮಿನವರು ಯಾತಕ್ಕೂ ಸುಖವಿಲ್ಲ. ತನ್ನ ಆಟದ ಮುಂದೆ ಅವರೆಲ್ಲ ಶೂನ್ಯ ಎಂಬಂತೆ ಮಾತನಾಡಿದ.
ಪಾಂಡವರ ಅಜ್ಞ್ನಾತವಾಸವನ್ನು ಬಹಿರಂಗಪಡಿಸಲು, ವಿರಾಟ ಮಹಾರಾಜನ ಗೋವುಗಳನ್ನು ಕದ್ದೊಯ್ದು ಅವನ ರಾಜ್ಯವನ್ನೂ ಆಕ್ರಮಿಸಿದರು ಕೌರವರು. ಕೀಚಕನೂ ಬದುಕಿಲ್ಲದ ಆ ಸಮಯದಲ್ಲಿ, ಕೌರವರ ಪರಾಕ್ರಮದ ಮುಂದೆ ತನ್ನ ಆಟವೇನೂ ನೆಡೆಯುವುದಿಲ್ಲ ಎಂದು ಅರಿತಿದ್ದ ವಿರಾಟನಿಗೆ ಇದ್ದದ್ದೊಂದೇ ಮಾರ್ಗ, ಉತ್ತರ ಕುಮಾರ. ಮಹಾರಾಜನ ಅಪ್ಪಣೆಯಂತೆ ಬೃಹನ್ನಳೆಯ ಸಾರಥ್ಯದಲ್ಲಿ ಕೌರವರ ಮೇಲೆ ಯುದ್ದಕ್ಕೆ ಹೊರಟ ಮಾತುಗಾರ ಉತ್ತರಕುಮಾರ. ಲಲನೆಯರ ಜೊತೆ ಸದಾ ಚಕ್ಕಂದವಾಡುತ್ತ ಕಾಲಕಳೆಯುತ್ತಿದ್ದ ಅವನು, ತನ್ನ ಪೊಳ್ಳು ಮಾತುಗಳಿಂದ ಕೌರವರ ಪರಾಕ್ರಮದ ನಿಂದನೆಯನ್ನೇ ಮಾಡುತ್ತಿದ್ದ ಅವನು ರಣರಂಗದಲ್ಲಿ ಅತಿರಥ-ಮಹಾರಥರಾದ ಭೀಷಮ, ದ್ರೋಣ, ಕರ್ಣ, ದುರ್ಯೋಧನ ಇವರುಗಳನ್ನು ಕಂಡ ಕೂಡಲೇ ಧಾರಾಕಾರವಾಗಿ ಬೆವರು ಸುರಿಸಿ ಪ್ರಾಣಭೀತನಾಗಿ ಯುದ್ದಭೂಮಿಯಿಂದಲೇ ಓಡಿದ.
ಕಾರಿನಿಂದ ಇಳಿದು, ನಮ್ಮ ಸವಾರಿ ಬ್ಯಾಸ್ಕೆಟ್ ಬಾಲ್ ಕೋರ್ಟಿನ ಒಳಗೆ ನೆಡೆಯಿತು. ಆಕಡೆ ಟೀಮಿನಲ್ಲಿ ನನ್ನ ಮಗನ ಇನ್ನೊಬ್ಬ ಸ್ನೇಹಿತನೊಬ್ಬನಿದ್ದ. ಆಟ ಆರಂಭವಾಗುವ ತನಕ ಇಬ್ಬರೂ ಏನೋ ಚರ್ಚೆ ಮಾಡುತ್ತಿದ್ದರು.
ಸ್ನೇಹಿತನಾದರೇನು, ಬಂಧುವಾದರೇನು ಆಟದಲ್ಲಿ ಎಲ್ಲರೂ ಒಂದೇ ಅಲ್ಲವೇ? ರಣರಂಗಕ್ಕೆ ಬರುವವರೆಗೂ ಇದ್ದ ಆಸಕ್ತಿ ತನ್ನ ವೈರಿ ಪಂಗಡದಲ್ಲಿದ್ದವರನ್ನು ಕಂಡು ಉಡುಗಿಹೋಯಿತು. ತೊಡೆಯ ಮೇಲೆ ಕುಳ್ಳರಿಸಿಕೊಂಡು ಊಟ ಮಾಡಿಸಿದ ತಾತ ಭೀಷ್ಮ, ಪಾಠ ಹೇಳಿಕೊಟ್ಟ ಗುರು ದ್ರೋಣ, ಇವರೇ ಮೊದಲಾದವರನ್ನು ಕಂಡು ಶಸ್ತ್ರ ಚೆಲ್ಲಿ ಕುಳಿತ ವೀರ ಅರ್ಜುನ. ಅದು ಗೀತೋಪದೇಶಕ್ಕೆ ನಾಂದಿ !
ಆಟ ಆರಂಭವಾಗಿತ್ತು. ಮಕ್ಕಳ ಅಪ್ಪ ಅಮ್ಮಂದಿರು ಚಪ್ಪಾಳೆ ತಟ್ಟುತ್ತ ತಮ್ಮ ಮಕ್ಕಳನ್ನು ಹುರುದುಂಬಿಸುತ್ತಿದ್ದರು. ಮೊಮ್ಮಗನ ಆಟ ನೋಡಲು ಒಬ್ಬ ವೃದ್ದರು ಕೂಡ ಬಂದಿದ್ದರು. ಸರಿಯಾಗಿ ಕಾಣಿಸಿದಿದ್ದರೂ ತಮ್ಮ ಮಗನಿಂದ ವಿಷಯ ಕೇಳಿ ತಿಳಿದು ಕೊಳ್ಳುತ್ತಿದ್ದರು.
ಯುದ್ದದ ಆರಂಭದಿಂದ ಕೊನೆಯ ತನಕ, ನೆಡೆಯುತ್ತಿದ್ದ ವಿಷಯಗಳನ್ನು ತನ್ನ ದಿವ್ಯದೃಷ್ಟಿಯಿಂದ ಚಾಚೂ ತಪ್ಪದೆ ಅಂಧ ದೃತರಾಷ್ಟ್ರನಿಗೆ ಒಪ್ಪಿಸುತ್ತಿದ್ದ, ಸಂಜಯ.
ಮಗನ ಟೀಮು ಗೆದ್ದರೂ, ಅವನಿಗೆ ಬ್ಯಾಸ್ಕೆಟ್ ಹಾಕಲು ಅವಕಾಶವಾಗಲಿಲ್ಲ ಎಂದು ಖೇದವಾಗಿತ್ತು. ಚೆನಾಗಿಯೇ ಆಡಿದರೂ ಹಾಗೇಕಾಯಿತು ಎಂದು ವಿಚಾರಿಸಿದಾಗ ಅವನು ಹೇಳಿದ "ನಮ್ಮ ಟೀಮಿನ ಕೀ ಪ್ಲೇಯರ್ ಆಗ ವಿರಾಮದಲ್ಲಿದ್ದ. ನನ್ನ ಕೈಗೆ ಬಾಲು ಸಿಕ್ಕ ಕೂಡಲೆ, ಆ ಟೀಮಿನವರು ನನ್ನ ಸುತ್ತಲೂ ಅಡ್ಡಗಟ್ಟಿ ಬ್ಯಾಸ್ಕೆಟ್ ಕಡೆ ಬಾಲು ಹೋಗದಂತೆ ಮಾಡುತ್ತಿದ್ದರು. ಅವರನ್ನು ದಾಟಿ ಬ್ಯಾಸ್ಕೆಟ್ ಮಾಡಲು ಆಗಲಿಲ್ಲ" ಅಂದ.
ಅರ್ಜುನನ ಗೈರು ಹಾಜರಿಯಲ್ಲಿ ಕೌರವರು ಚಕ್ರವ್ಯೂಹವನ್ನು ರಚಿಸಿದ್ದರು. ಅದನ್ನು ಭೇಧಿಸಲು ಪಾಂಡವರ ಪಾಳ್ಯದಲ್ಲಿ ಅರ್ಜುನನ ಹೊರತು ಇನ್ಯಾರಿಗೂ ತಿಳಿದಿರಲಿಲ್ಲ. ವೀರ ಅಭಿಮನ್ಯುವಿಗೆ ಒಳ ಹೋಗುವುದು ಗೊತ್ತಿತ್ತು ಆದರೆ ಹೊರಬರಲು ತಿಳಿದಿರಲಿಲ್ಲ. ಆದರೂ ದೊಡ್ಡಪ್ಪನ ಮನ ಒಲಿಸಿ ರಣರಂಗಕ್ಕೆ ಹೋದ. ಚಕ್ರವ್ಯೂಹದ ಮಧ್ಯಕ್ಕೆ ಹೋದ ಮೇಲೆ ಕೌರವರು ಅವನನ್ನು ಸುತ್ತುಗಟ್ಟಿ, ವ್ಯೂಹವನ್ನು ಭೇಧಿಸದ ಹಾಗೆ ನೋಡಿಕೊಂಡರು. ಕೌರವರ ಕಡೆಯ ಅತಿರಥ ಮಹಾರಥರು ನೆಡೆಸಿದ ದೌರ್ಜನ್ಯದ ಯುದ್ದಕ್ಕೆ ಹದಿನಾರು ವರ್ಷದ ಬಾಲ ಅಭಿಮನ್ಯು ಬಲಿಯಾದ.
ಮಗನ ಸ್ನೇಹಿತನನನ್ನು ಅವನ ಮನೆಯಲ್ಲಿ ಡ್ರಾಪ್ ಮಾಡಿ ನಾವುಗಳು ಮನೆ ಕಡೆ ಹೊರಟೆವು. ಮಾರ್ಗದಲ್ಲಿ ನನ್ನ ಮಗನೇನೋ ತೋರಿಸುತ್ತ ಪ್ರಶ್ನೆ ಕೇಳಿದ. ನಾನೆಂದೆ ’ನಾನು ಡ್ರೈವ್ ಮಾಡ್ತಾ ಇದ್ದೀನಿ. ತಿರುಗಿ ನೋಡಕ್ಕೆ ಆಗಲ್ಲ. ಮನಗೆ ಹೋದ ಮೇಲೆ ತೋರಿಸು’. ಅದಕ್ಕೆ ಅವನೆಂದ "ಇಂಡಿಯಾದಲ್ಲಿ ಇದ್ದಂತೆ ಇಲ್ಲಿ ಕೂಡ ನಾವು ಒಬ್ಬ ಡ್ರೈವರ್’ನ ಇಟ್ಟುಕೋ ಬೇಕು".
ಕುರುಕ್ಷೇತ್ರ ಯುದ್ದದಲ್ಲಿ ಪಾಂಡವರ ಪರ ವಹಿಸಿದ ಶ್ರೀ ಕೃಷ್ಣ ತಾನು ಯುದ್ದ ಮಾಡುವುದಿಲ್ಲವೆಂದು ಅರ್ಜುನನ ಸಾರಥಿಯಾಗಿ ಮಾತ್ರ ಉಳಿದು ’ಪಾರ್ಥಸಾರಥಿ’ ಎಂದು ಹೆಸರು ಪಡೆದ. ಕೌರವರ ಕುತಂತ್ರದಿಂದಾಗಿ ನಕುಲ-ಸಹದೇವರ ಸೋದರಮಾವ ಶಲ್ಯ, ಕೌರವರ ಪರವಾಗಿ ಕರ್ಣನ ಸಾರಥಿಯಾಗಬೇಕಾಯಿತು. ಶಲ್ಯನು ’ಅಶ್ವಹೃದಯ’ ಎಂಬ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದನು. ವಿರಾಟ ಮಹಾರಾಜನ ಮೇಲೆ ದಂಡೆತ್ತಿ ಬಂದ ಕೌರವರ ವಿರುದ್ದ ಹೋರಾಡಲು ಹೊರಟ ಉತ್ತರಕುಮಾರನ ಸಾರಥ್ಯವನ್ನು, ಅರ್ಜುನ ನಿರ್ವಹಿಸಿದ್ದ. ಯುದ್ದ ಮಾಡುವ ವೀರನ ಪ್ರಾಣ ರಕ್ಷಣೆಯ ಜವಾಬ್ದಾರಿ ಸಾರಥಿಯ ಮೇಲೆ ಇರುತ್ತದೆ.
ಮನೆಗೆ ಬಂದು ಕೆಲವೊಂದು ವಾರಾಂತ್ಯ ಕೆಲಸಗಳನ್ನು ಮುಗಿಸುವ ಹೊತ್ತಿಗೆ ಮಧ್ಯಾನ್ನ ಆಯಿತು. ಊಟ ಮಾಡಿದ ಮೇಲೆ ಸ್ವಲ್ಪ ಹೊತ್ತು ಮಲಗೋಣ ಎಂದು ಹಾಸಿಗೆಯ ಮೇಲೆ ಅಡ್ಡಾದೆ.
ಶಿಖಂಡಿ ಎದುರಾದ್ದರಿಂದ ಭೀಷ್ಮ ಶಸ್ತ್ರತ್ಯಾಗ ಮಾಡಿದ. ಅರ್ಜುನನ ಬಾಣಗಳಿಂದ ಪೆಟ್ಟು ತಿಂದು ಕೆಳಗೆ ಬಿದ್ದ ತಾತನ ಶರೀರಕ್ಕೆ ಕೌರವರು ಸುಪ್ಪತಿಗೆಯನ್ನೇ ತರಲು ಹೊರಟರು. ಆದರೆ ಭೀಷ್ಮ ಅದಕ್ಕೆ ಒಪ್ಪದೆ ಅರ್ಜುನನ ಸಹಾಯದಿಂದ ಬಾಣಗಳ ಹಾಸಿಗೆ ತಯಾರಿಸಿಕೊಂಡ. ಶರಶಯ್ಯೆಯ ಮೇಲೆ ಮಲಗಿದ ನಂತರ ಸುಸ್ತಾಗಿದ್ದ ಭೀಷ್ಮನಿಗೆ ನೀರು ಬೇಕಾಯಿತು. ಅರ್ಜುನನು ಭೂಮಿಗೆ ಬಾಣ ಬಿಟ್ಟಾಗ, ಗಾಂಗಾ ದೇವಿಯೇ ಸ್ವತ: ಮೇಲೆ ಬಂದು ಭೀಷ್ಮನ ದಣಿವಾರಿಸಿದಳು. ಇಚ್ಚಾಮರಣಿಯಾದ ಭೀಷ್ಮ ಯುದ್ದ ಮುಗಿದು ಪಾಂಡವರು ಗೆದ್ದ ನಂತರ ನಿಶ್ಚಿಂತೆಯಿಂದ ಪ್ರಾಣ ತ್ಯಾಗ ಮಾಡಿದ.
ಇನ್ನೇನು ನಿದ್ದೆ ಹತ್ತಿತು ಎಂದೆನಿಸುತ್ತಿದ್ದಂತೆಯೇ ಫೋನ್ ಹೊಡೆದುಕೊಳ್ಳಲಾರಂಭಿಸಿತು. ನನಗೆ ಇಚ್ಚಾನಿದ್ರಿಯಾಗುವ ಯೋಗ ಇರಲಿಲ್ಲ ಎನ್ನಿಸುತ್ತದೆ !!