ಬ್ರಹ್ಮಕಮಲ - ಒಂದು ರಾತ್ರಿಯ ವಿಸ್ಮಯ

ಬ್ರಹ್ಮಕಮಲ - ಒಂದು ರಾತ್ರಿಯ ವಿಸ್ಮಯ

ನಿನ್ನೆ ರಾತ್ರಿ ಮಂಗಳೂರಿನ ಬಿಜೈಯ ನಮ್ಮ ಮನೆಯ ಕೈತೋಟದಲ್ಲಿ ಬ್ರಹ್ಮಕಮಲ ಅರಳಿತು - ಇದು ಒಂದು ರಾತ್ರಿಯ ವಿಸ್ಮಯ. ಯಾಕೆಂದರೆ ವರುಷಕ್ಕೊಮ್ಮೆ ಅರಳುವ ಅದ್ಭುತ ಹೂ ಬ್ರಹ್ಮಕಮಲ. ರಾತ್ರಿಯ ಗಾಢ ಕತ್ತಲಿನಲ್ಲಿ ಬೆಳಗುವ ಈ ಅಪ್ಪಟ ಬಿಳಿ ಬಣ್ಣದ, ನಕ್ಷತ್ರ ದಳಗಳ ಹೂ ಮನಮೋಹಕ. ರಾತ್ರಿ ಸುಮಾರು ೮ ಗಂಟೆಯ ನಂತರ ಹಂತಹಂತವಾಗಿ ೮ ಇಂಚು ವ್ಯಾಸದ ಹೂವಾಗಿ ಅರಳುವುದನ್ನು ನೋಡುವುದೇ ಸಂಭ್ರಮ.

ಸೃಷ್ಟಿಕರ್ತ ದೇವರಾದ ಬ್ರಹ್ಮನ ಕಮಲವೆಂದೇ ಇದು ಭಾರತೀಯರಿಗೆ ಪರಿಚಿತ. ಅರಳಿದ ಈ ಹೂವನ್ನು ನೋಡುವವರು ಅದೃಷ್ಟವಂತರು ಎಂಬ ನಂಬಿಕೆ. ಹಿಮಾಲಯದ ಕಣಿವೆಗಳಲ್ಲಿ ಹಲವೆಡೆಗಳಲ್ಲಿ ಬೆಳೆಯುವ ಹೂ ಇದು. ಅಲ್ಲಿನ ಪ್ರಸಿದ್ಧ ಕೇದಾರನಾಥ, ಬದರಿನಾಥ ಮತ್ತು ತುಂಗನಾಥ ದೇವಾಲಯಗಳಲ್ಲಿ ದೇವರ ಪೂಜೆಯಲ್ಲಿ ಇದರ ಅರ್ಪಣೆ.

ಬ್ರಹ್ಮಕಮಲದ ಸಸ್ಯಶಾಸ್ತ್ರೀಯ ಹೆಸರು ಸಾಸುರಿಯಾ ಒಬ್ವಾಲಟಾ. ಈ ಹೂ ಅರಳುವಾಗ ಗಾಢ ವಾಸನೆ ಹೊರಹೊಮ್ಮುತ್ತದೆ. ಈ ತೀವ್ರ ವಾಸನೆ ಕೆಲವರಿಗೆ ಇಷ್ಟವಾಗದು. ಇದರ ಗಿಡ ಕಳ್ಳಿ ಗಿಡದಂತಿದೆ ಮತ್ತು ಹೂ ಆರ್ಕಿಡ್ ಹೂವಿನಂತಿದೆ. ಆದ್ದರಿಂದ ಇದಕ್ಕೆ “ಆರ್ಕಿಡ್ ಕಳ್ಳಿ ಗಿಡ" ಎಂಬ ಹೆಸರೂ ಇದೆ. ಇದು “ದೇವಭೂಮಿ" ಉತ್ತರಖಂಡದ “ರಾಜ್ಯದ ಹೂ” ಎಂದು ಘೋಷಿತವಾಗಿದೆ. ಭಾರತೀಯ ಅಂಚೆ ಇಲಾಖೆ ಈ ಹೂವಿನ ಚಿತ್ರವಿರುವ ಅಂಚೆಚೀಟಿ ಬಿಡುಗಡೆಗೊಳಿಸಿದೆ.

ಬ್ರಹ್ಮಕಮಲದ ಔಷಧೀಯ ಉಪಯೋಗಗಳು ಹಲವು:
೧)ಪಿತ್ತಜನಕಾಂಗದ ಔಷಧಿ: ಇದು ರುಚಿಯಲ್ಲಿ ಕಹಿ. ಇದರ ಸೇವನೆಯಿಂದ ಹಸಿವು ಉಂಟಾಗುತ್ತದೆ. ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ಸಹಕಾರಿ. ಇದರ ಹೂವಿನಿಂದ ತಯಾರಿಸಿದ ಸೂಪ್ ಸೇವನೆಯಿಂದ ಪಿತ್ತಜನಕಾಂಗದ ಉರಿಯೂತ ಚಿಕಿತ್ಸೆಗೆ ಮತ್ತು ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸಲು ಸಹಾಯ.

೨)ಜ್ವರದ ಚಿಕಿತ್ಸೆಗೆ ಸಹಕಾರಿ: ಬ್ರಹ್ಮಕಮಲ ಆಂಟಿಪೈರೆಟಿಕ್ ಗುಣಗಳನ್ನು ಹೊಂದಿರುವ ಕಾರಣ ಇದು ಜ್ವರದ ಚಿಕಿತ್ಸೆಗೆ ಸಹಕಾರಿ. ದಿನಕ್ಕೆ ೨ ಬಾರಿ ಇದರ ಕಷಾಯ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಇದರ ಬೇರು, ಕಾಂಡ, ಎಲೆ ಅಥವಾ ಹೂವಿನಿಂದ ತಯಾರಿಸಿದ ಔಷಧಿಗಳ ಸೇವನೆ ಶೀತ ಮತ್ತು ಕೆಮ್ಮು ಚಿಕಿತ್ಸೆಗೆ ಪರಿಣಾಮಕಾರಿ.

೩)ಗಾಯ ಗುಣವಾಗಲು ಸಹಾಯ: ಬ್ರಹ್ಮಕಮಲದ ಗೆಡ್ಡೆಗಳು ನಂಜು ನಿರೋಧಕ ಗುಣಗಳನ್ನು ಹೊಂದಿವೆ. ಹಾಗಾಗಿ ಗಾಯಗಳು ಮತ್ತು ಸುಟ್ಟಗಾಯಗಳನ್ನು ವಾಸಿ ಮಾಡುತ್ತದೆ. ಹೂವಿನ ದಳಗಳನ್ನು ಗಾಯದ ಮೇಲಿಟ್ಟರೆ, ಅದು ಗಾಳಿಯಾಡದಂತೆ ತಡೆದು, ಗಾಯ ಗುಣವಾಗಲು ಸಹಾಯ.

೪)ನರ ಸಂಬಂಧಿ ಅನಾರೋಗ್ಯಕ್ಕೆ ಚಿಕಿತ್ಸೆ: ಇದರ ಹೂವಿನಲ್ಲಿರುವ ಅಕಾಸೆಟಿನ ಎಂಬ ರಾಸಾಯನಿಕ ಪ್ರಾಕೃತಿಕ ಆಂಟಿಕಾನ್ವಲ್ಸೆಂಟ್. ಆದ್ದರಿಂದ ನರಕೋಶಗಳ ತೀವ್ರ ಪ್ರಚೋದನೆಗಳನ್ನು ಶಮನಗೊಳಿಸುತ್ತದೆ. ರಕ್ತಪೂರೈಕೆಯನ್ನು ಸುಧಾರಿಸುವ ಮೂಲಕ ಕೈಕಾಲುಗಳ ಪಾರ್ಶ್ವವಾಯು ಚಿಕಿತ್ಸೆಗೂ ಇದರಿಂದ ಸಹಾಯ - ಟಿಬೇಟಿಯನ್ ಚಿಕಿತ್ಸಾ ಪದ್ಧತಿಯಲ್ಲಿ ಇದರ ಬಳಕೆ. ಇದರಲ್ಲಿರುವ ಆಲ್ಕಲಾಯ್ಡುಗಳು, ಗ್ಲೈಕೋಸೈಡುಗಳು, ಟೆರ್ಪನಾಯ್ಡುಗಳು, ಪ್ಲೇವನಾಯ್ಡುಗಳು ಮತ್ತು ಸಪೋನಿನ್‌ಗಳು ನರಮಂಡಲದ ಆರೋಗ್ಯ ರಕ್ಷಣೆಗೆ ಉಪಯುಕ್ತ.

೫)ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿಯಂತ್ರಣ ಗುಣಗಳು: ಬ್ರಹ್ಮಕಮಲವು ನಾಲ್ಕು ವಿಧದ ಬ್ಯಾಕ್ಟೀರಿಯಾ ಮತ್ತು ಮೂರು ವಿಧದ ಶಿಲೀಂಧ್ರಗಳ ನಿಯಂತ್ರಣಕ್ಕೆ ಸಹಕಾರಿ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ. (ಮೂತ್ರದ ಸೋಂಕಿಗೆ ಕಾರಣವಾಗ ಬಹುದಾದ ಎಸ್. ಆರಿಯಸ್ ಮತ್ತು ಇ. ಕೊಲಿ ಬ್ಯಾಕ್ಟೀರಿಯಾಗಳ ಸಹಿತ ಮತ್ತು ಜನನಾಂಗದ ಸೋಂಕಿಗೆ ಕಾರಣವಾಗ ಬಹುದಾದ ಸಿ. ಅಲ್ಬಿಕಾನ್ಸ್ ಶಿಲೀಂಧ್ರದ ಸಹಿತ).

೬)ಮುಟ್ಟಿನ ಸಮಸ್ಯೆಗಳ ಚಿಕಿತ್ಸೆ: ಇದಕ್ಕೂ ಬ್ರಹ್ಮಕಮಲ ಹೂವಿನ ಔಷಧಿ ಸೇವನೆ ಸಹಕಾರಿ. ಡಿಸ್ಮೆನೊರಿಯಾ, ಅನಿಯಮಿತ ಮುಟ್ಟು, ಅತಿಯಾದ ರಕ್ತಸ್ರಾವ - ಈ ಸಮಸ್ಯೆಗಳ ಚಿಕಿತ್ಸೆಗೆ ಸಹಾಯ.

ಬ್ರಹ್ಮಕಮಲ ಗಿಡದ ಔಷಧೀಯ ಗುಣಗಳಿಂದಾಗಿ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಕೆಲವರು ಇದರ ಗಿಡಗಳನ್ನು ಬೇಕಾಬಿಟ್ಟಿ ಕಿತ್ತು ಮಾರುತ್ತಿದ್ದಾರೆ. ಈ ಕಾರಣದಿಂದಾಗಿ, ಇದರ ಉಳಿವಿಗೆ ಅಪಾಯವಿದೆ. ಹಾಗಾಗಿ ಉತ್ತರಖಂಡ ಸರಕಾರ ಬ್ರಹ್ಮಕಮಲ ಗಿಡಗಳನ್ನು ಉದ್ಯಾನಗಳಲ್ಲಿ ಬೆಳೆಸಲು ಕ್ರಮ ಕೈಗೊಂಡಿದೆ.

ಯಾರದೇ ಮನೆಯಲ್ಲಿ ಈ ಮಳೆಗಾಲದಲ್ಲಿ (ಜುಲಾಯಿ - ಆಗಸ್ಟ್ ಅವಧಿಯಲ್ಲಿ) ಬ್ರಹ್ಮಕಮಲ ಅರಳಿದರೆ, ಇನ್ನೊಮ್ಮೆ ಈ “ರಾತ್ರಿ ರಾಣಿ" ಅರಳಲಿಕ್ಕಾಗಿ ಒಂದು ವರುಷ ಕಾಯಬೇಕು. (ಅರಳಿದ ನಂತರ ಅದರ ಬಾಳು ಕೇವಲ ನಾಲ್ಕೈದು ಗಂಟೆಗಳು; ತದನಂತರ ಹೂ ಬಾಡಿ ಹೋಗುತ್ತದೆ.) ಆದ್ದರಿಂದಲೇ ಬ್ರಹ್ಮಕಮಲ ಅರಳುವುದು ಒಂದು ಪ್ರಾಕೃತಿಕ ವಿಸ್ಮಯ.

ಫೋಟೋ ೧: ನಮ್ಮ ಕೈತೋಟದಲ್ಲಿ ನಿನ್ನೆ ರಾತ್ರಿ ಅರಳಿದ ಬ್ರಹ್ಮಕಮಲ
ಫೊಟೋ ೨: ಬ್ರಹ್ಮಕಮಲದ ಮೊಗ್ಗುಗಳು (ಫೋಟೋಗಳು: ಲೇಖಕರವು)

Comments

Submitted by Ashwin Rao K P Wed, 08/04/2021 - 07:57

ಬ್ರಹ್ಮ ಕಮಲ ನಿಜಕ್ಕೂ ವಿಸ್ಮಯಕಾರಿ ಹೂವು!

ಶ್ರೀಯುತ ಅಡ್ಡೂರು ಇವರ ಬ್ರಹ್ಮಕಮಲದ ಕುರಿತಾದ ಲೇಖನ ಓದಿದೆ. ಕೇವಲ ಒಂದು ರಾತ್ರಿ ಅದರಲ್ಲೂ ಕೆಲವೇ ಕೆಲವು ಗಂಟೆಗಳು ಅರಳಿರುವ ಈ ಹೂವು ನಿಜಕ್ಕೂ ಆಕರ್ಷಕ ಹಾಗೂ ನಿಗೂಢ. ನಮ್ಮ ನೆರೆಮನೆಯಲ್ಲೂ ಕಳೆದ ತಿಂಗಳು ಒಂದೇ ಸಲಕ್ಕೆ ೧೩ ಹೂವುಗಳು ಅರಳಿದ್ದು ಈಗ ನೆನಪಾಗುತ್ತಿದೆ. ದಿನಕ್ಕೊಂದರಂತೆ ಅರಳಿದ್ದರೂ ೧೩ ದಿನ ಸೌಂದರ್ಯವನ್ನು ಆಸ್ವಾದಿಸಬಹುದಿತ್ತಲ್ಲಾ ಎನ್ನುವುದು ನನ್ನ ತಾಯಿಯ ಅಳಲು. ಆದರೆ ಪ್ರಕೃತಿಯ ನಿಯಮ ನಾವು ಬದಲಾಯಿಸಲಾದೀತೇ?

ಲೇಖಕರು ಈ ಹೂವಿನ ಬಹು ಉಪಯೋಗಗಳನ್ನು ವಿವರವಾಗಿ ಬರೆದಿದ್ದಾರೆ. ಇವೆಲ್ಲಾ ನಮಗೆ ತಿಳಿಯದೇ ಇದ್ದ ಮಾಹಿತಿಗಳು. ಇದಕ್ಕಾಗಿ ಲೇಖಕರಿಗೆ ಕೃತಜ್ಞತೆಗಳು.