ಬ್ರಹ್ಮಾಂಡದ ಹೊಸ ಕಥೆ

ಬ್ರಹ್ಮಾಂಡದ ಹೊಸ ಕಥೆ

ಏನಿದು ಕಾಸ್ಮಾಸ್ ಫಾಗ್ (Cosmos Fog)? : ವಿಶ್ವದ ಸೃಷ್ಟಿಯ ‘ಬಿಗ್ ಬ್ಯಾಂಗ್' ನಿಂದ (ಬಿಗ್ ಬ್ಯಾಂಗ್ ಎಂದರೆ ಮಹಾಸ್ಫೋಟ) ಗ್ಯಾಲಕ್ಸಿಗಳು ಉಂಟಾಗಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗ ನಮ್ಮ ಗ್ಯಾಲಕ್ಷಿ ‘ಆಕಾಶ ಗಂಗೆ'ಯನ್ನೇ ತೆಗೆದುಕೊಳ್ಳಿ. ಅದರಲ್ಲೂ ನಮ್ಮ ಸೌರಮಂಡಲದ ವ್ಯಾಪ್ತಿಯಲ್ಲಿ ಗ್ರಹಗಳ ನಡುವೆ ಅಥವಾ ಗ್ಯಾಲಕ್ಸಿಯಲ್ಲಿ ನಕ್ಷತ್ರಗಳ ಮಧ್ಯೆ ‘ಶೂನ್ಯಾಕಾಶ' ಎಂದೇ ನಾವು ವಿವರಿಸುತ್ತಿರುತ್ತೇವೆ. ಅಂದರೆ ನಕ್ಷತ್ರಗಳ ಅಥವಾ ಗ್ರಹಗಳ ಮಧ್ಯೆ ವಸ್ತು ಮಾಧ್ಯಮವಿಲ್ಲ. ಅದು ಬರೀ ‘ಶೂನ್ಯ' ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಆದರೆ ಇತ್ತೀಚಿನ ಸಂಶೋಧನೆಗಳಿಂದ ಹೊಸ ವಿಚಾರವೊಂದು ತಿಳಿದುಬಂದಿದೆ.

ಹಾಗಾದರೆ ನಮ್ಮ ಗ್ಯಾಲಕ್ಸಿಯಲ್ಲಿ ಅಥವಾ ಸೌರಮಂಡಲದಲ್ಲಿ ಈ ಕಾಸ್ಮಾಸ್ ಫಾಗ್ ಇರಬೇಕಿತ್ತಲ್ಲವೇ? ಖಂಡಿತಾ ಇತ್ತು ! ಆದರೆ ದೊಡ್ದ ದೊಡ್ದ ನಕ್ಷತ್ರಗಳು ಹೊರಹೊಮ್ಮಿಸುವ ವಿಕಿರಣಗಳು ಅಂದರೆ ಅಲ್ಟ್ರಾವೈಲೇಟ್ ಕಿರಣಗಳು (ಅತಿ ನೇರಳೆ ಕಿರಣಗಳು) ಹಾಗೂ ಬೆಳಕಿನ ಕಿರಣಗಳು, ಈ ‘ಕಾಸ್ಮಾಸ್ ಫಾಗ್' ನ ಮೂಲಕ ಹಾದುಹೋದಾಗ ಪ್ರಕ್ರಿಯೆಗಳು ನಡೆದು ಇಡೀ ‘ಕಾಸ್ಮಾಸ್ ಫಾಗ್' ಮಾಯವಾಗಿ ಈಗಿರುವಂತೆ ‘ಶೂನ್ಯಾವಕಾಶ' ನಿರ್ಮಾಣಗೊಂಡಿದೆ ಎಂದು ತಿಳಿದು ಬಂದಿದೆ. ಅಂದರೆ ‘ಶೂನ್ಯಾವಕಾಶ' ನಿರ್ಮಾಣಗೊಂಡಿದೆ ಎಂದು ತಿಳಿದುಬಂದಿದೆ. ಅಂದರೆ ‘ಶೂನ್ಯಾವಕಾಶ' ಸಂಪೂರ್ಣ ಪಾರದರ್ಶಕ ಮಾಧ್ಯಮವಾಗಿ ಪರಿವರ್ತಿತಗೊಂಡಿದೆ. ಆದರೆ ಇನ್ನೂ ಕೆಲವು ಗ್ಯಾಲಕ್ಸಿಗಳ ಮಧ್ಯೆ ‘ಈ ಫಾಗ್' ಇರುವಿಕೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ನಕ್ಷತ್ರಗಳನ್ನು ನುಂಗಿ ಹಾಕುವ ‘ಬ್ಲ್ಯಾಕ್ ಹೋಲ್’ ಪತ್ತೆಯಾಗಿದೆ. ತುಂಬಾ ದೊಡ್ಡ ದೊಡ್ಡ ನಕ್ಷತ್ರಗಳ ಕೊನೆಯ ಹಂತವೇ ಬ್ಲ್ಯಾಕ್ ಹೋಲ್ ಅಥವಾ ಕಪ್ಪು ರಂಧ್ರ. ಇದಕ್ಕೆ ಕಪ್ಪು ಕುಳಿ ಮತ್ತು ಕೃಷ್ಣ ರಂಧ್ರ ಎಂಬ ಸುಂದರವಾದ ಹೆಸರುಗಳೂ ಇವೆ. ಈ ಹಂತದಲ್ಲಿ ಪ್ರತಿಯೊಂದು ನಕ್ಷತ್ರವೂ ತನ್ನಿಂದ ಹೊರಹೊಮ್ಮುವ ಬೆಳಕನ್ನೇ ನುಂಗಿ ಹಾಕಿಬಿಡಬಲ್ಲದು. ತನ್ನ ಬಳಿ ಬಂದ ಯಾರನ್ನೂ ಬಿಡದು! ಇನ್ನು ಅದರ ಬಳಿ ನಕ್ಷತ್ರ ಹೋದರೆ... ಗುಳುಂ ಅಂತೂ ಖಂಡಿತ. ಇತ್ತೀಚೆಗೆ ಖಭೌತ ವಿಜ್ಞಾನಿಗಳು ಗ್ಯಾಲಕ್ಸಿಯಲ್ಲಿ ಅಂತಹ ಒಂದು ‘ಬ್ಲ್ಯಾಕ್ ಹೋಲ್' ಅನ್ನು ಪತ್ತೆ ಹಚ್ಚಿದ್ದಾರೆ. ಇದರ ಇರುವಿಕೆಯನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಖಭೌತ ವಿಜ್ಞಾನಿಗಳು ಧೃಢ ಪಡಿಸಿದ್ದಾರೆ.

ಈ ‘ಬ್ಲ್ಯಾಕ್ ಹೋಲ್' ಅನ್ನು ಅವರು ಪತ್ತೆ ಹಚ್ಚಿದ್ದಾದರೂ ಹೇಗೆ? ಕಣ್ಣಿಗೆ ಕಾಣದ ಈ ಬ್ಲ್ಯಾಕ್ ಹೋಲ್ ಅನ್ನು ಪತ್ತೆ ಹಚ್ಚಿರುವುದೇ ಇಂದು ವಿಸ್ಮಯ ! ಸಾಮಾನ್ಯವಾಗಿ ವಿಜ್ಞಾನಿಗಳು ನಕ್ಷತ್ರ ವೀಕ್ಷಣೆಯಲ್ಲಿ ನಿರ್ದಿಷ್ಟ ನಕ್ಷತ್ರವನ್ನು ನಿರಂತರವಾಗಿ ಗಮನವಿಟ್ಟು ವೀಕ್ಷಿಸುತ್ತಿರುತ್ತಾರೆ. ಅಂತಹ ವೀಕ್ಷಣೆಯಿಂದಲೇ ಇಂದು ಆ ‘ಬ್ಲ್ಯಾಕ್ ಹೋಲ್’ ಪತ್ತೆಯಾಗಿರುವುದು. ನಿರ್ದಿಷ್ಟ ನಕ್ಷತ್ರದ ದ್ರವ್ಯರಾಶಿಯಲ್ಲಿ ಏನಾದರೂ ಸೆಳೆತದ ಪರಿಣಾಮವಿದೆಯಾ ಅಥವಾ ನಕ್ಷತ್ರದ ಆಕಾರದಲ್ಲಿ ಏನಾದರೂ ನಿರಂತರ ಏರುಪೇರುಗಳು ಕಾಣಿಸುತ್ತಿದೆಯಾ ಎಂದು ಅವರು ಗಮನಿಸಿರುತ್ತಾರೆ. ಇಂತಹ ತೊಳಲಾಟಗಳೇನಾದರೂ ಕಂಡುಬಂದಿರುವುದು ಖಚಿತಗೊಂಡಿದೆ. ಇದರಿಂದ ಸುತ್ತಮುತ್ತಲಿನ ನಕ್ಷತ್ರಗಳಿಗೂ ಪ್ರಾಣ ಸಂಕಟ ತಪ್ಪಿದ್ದಲ್ಲ. ಇತ್ತೀಚೆಗೆ ಸಂಶೋಧಿಸಿದ ಅಂತಹ ಒಂದು ಕಪ್ಪುಕುಳಿಯು ಸೂರ್ಯದ ದ್ರವ್ಯರಾಶಿಗಿಂತ ಸುಮಾರು ೫೦೦ ಪಟ್ಟು ಹೆಚ್ಚು  ದ್ರವ್ಯರಾಶಿಯನ್ನು ಹೊಂದಿದೆ ಎನ್ನಲಾಗಿದೆ. 

ಮಂಗಳ ಗ್ರಹ ನಮ್ಮ ಭೂಮಿಯ ಸ್ನೇಹಿತನಿದ್ದಂತೆ. ಅಲ್ಲಿ ಏನಾದರೂ ಜೀವ ಸಂಕುಲವಿದೆಯೇ ಎಂಬ ಹುಡುಕಾಟ ವಿಜ್ಞಾನಿಗಳದ್ದು. ಅಮೇರಿಕಾದ ನಾಸಾ ವಿಜ್ಞಾನಿಗಳು ಸೆಪ್ಟೆಂಬರ್ ೨೦೦೮ರಲ್ಲಿ ‘ರೋವರ್' ಅನ್ನು ಮಂಗಳ ಗ್ರಹಕ್ಕೆ ಹಾರಿ ಬಿಟ್ಟಿದ್ದರು. ಅದು ಬೆಟ್ಟಗುಡ್ಡಗಳಲ್ಲಿ ನಮ್ಮ ಚಾರಣಪ್ರಿಯರು ‘ಟ್ರೆಕ್ಕಿಂಗ್' ಮಾಡುವಂತೆ ಮಂಗಳನ ಮೇಲೆ ತನ್ನ ಟ್ರೆಕ್ಕಿಂಗ್ ನ್ನು ಪೂರೈಸಿದೆ. ಈ ‘ರೋವರ್' ಸಂಶೋಧನಾ ವಾಹನ ಎರಡು ದೊಡ್ಡ ಕುಳಿ (Craters) ಗಳನ್ನು ಪತ್ತೆ ಹಚ್ಚಿದೆ. ಅವುಗಳನ್ನು ‘ವಿಕ್ಟೋರಿಯಾ’ ಮತ್ತು ‘ಎಂಡೀವರ್' ಎಂದು ಹೆಸರಿಸಲಾಗಿದೆ. ಜತೆಗೆ ಇವೆರಡರ ಮಧ್ಯೆ ಅನೇಕ ಸಣ್ಣ ಸಣ್ಣ ಕುಳಿಗಳನ್ನೂ ಪತ್ತೆ ಹಚ್ಚಿದೆ. ಈ ರೋವರ್ ತನ್ನ ೨೧ ಕಿ ಮೀ ಗಳ ಪ್ರಯಾಣದಲ್ಲಿ (ನೆನಪಿಡಿ, ಮಂಗಳ ಗ್ರಹದ ಮೇಲೆ) ಸುಮಾರು ೩೦೯ ಚಿತ್ರಗಳನ್ನು ಭೂಮಿಗೆ ರವಾನಿಸಿದೆ. ರೋವರ್ ಟ್ರೆಕ್ಕಿಂಗ್ ನ ಮೂಲ ಉದ್ದೇಶವೆಂದರೆ ಮಂಗಳ ಗ್ರಹದಲ್ಲಿ ಜೈವಿಕ ಅಣುಗಳ ಪತ್ತೆ. ಆದರೆ ಅಲ್ಲಿ ಇನ್ನೂ ಯಾವುದೇ ಜೈವಿಕ ಅಣುಗಳ ಪತ್ತೆಯಾಗಿಲ್ಲ. ಅಂದರೆ ನಮ್ಮ ಭೂಮಿ ಗ್ರೇಟ್ !

-ಕೆ. ನಟರಾಜ್, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ