ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ!
ಬ್ರಾಹ್ಮೀಮುಹೂರ್ತದಲ್ಲೇ ಹಾಸಿಗೆ ಬಿಟ್ಟೇಳುವ ಯುವಜನತೆ!
ಟ್ವಿಟರ್ ಸಂದೇಶಗಳನ್ನು ಗಮನಿಸಿದವರಿಗೆ,ಒಂದು ವಿಷಯ ಅಚ್ಚರಿ ಹುಟ್ಟಿಸಿರಬಹುದು-ಈಗ ಮುಂಜಾನೆ ಬೇಗನೆ ಏಳುವ ಅಂತರ್ಜಾಲ ಬಳಕೆದಾರ ಯುವಜನರ ಸಂಖ್ಯೆ ಹೆಚ್ಚುತ್ತಿದೆ.ಮುಂಜಾನೆಯ ಪ್ರಶಾಂತ ಸಮಯದಲ್ಲಿ ಓದುವುದು ಅವರ ಉದ್ದೇಶವಾಗಿರಬಹುದು ಎನ್ನಲು ಹೆಚ್ಚು ಆಲೋಚಿಸಬೇಕಿಲ್ಲ.ಸದ್ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರೀಕ್ಷೆಗಳು ಮುಗಿದು,ರಜೆ ಸಿಕ್ಕಿದವರೂ,ಬೇಗನೆ ಏಳುವುದು ಮುಂದುವರಿದಿದೆ.ಇದಕ್ಕೆ ಕಾರಣವೇನು? ಉತ್ತರವನ್ನು ಟ್ವಿಟರ್ ಸಂದೇಶಗಳೇ ಕೊಡುತ್ತವೆ.ಚಲನಚಿತ್ರವೊಂದನ್ನು ಡೌನ್‌ಲೋಡ್ ಮಾಡುತ್ತಿರುವೆ,ಎಂದು ಒಂದು ಸಂದೇಶ ಬಿತ್ತರಿಸಿದರೆ,ಇನ್ನೊಬ್ಬನ ಸಂದೇಶ,ತನಗೆ ತಂತ್ರಾಂಶವೊಂದನ್ನು ಡೌನ್‌ಲೋಡ್ ಮಾಡಬೇಕಿತ್ತು,ತನ್ನ ತಿಂಗಳ ಬ್ಯಾಂಡ್‍ವಿಡ್ತ್ ಕೋಟಾ ಮುಗಿದಿದೆ ಎನ್ನುತ್ತದೆ.ಹಾಗಾಗಿ,ಬಿಎಸೆನೆಲ್‌ನ ಉಚಿತ ಡೌನ್‌ಲೋಡ್ ಸೌಲಭ್ಯವಿರುವ ಮುಂಜಾವಿನ 2-8 ಸಮಯದ ಸದುಪಯೋಗ ಪಡೆಯಲು ಇವರುಗಳು ಬೇಗನೆ ಏಳುತ್ತಾರೆ!ಎದ್ದ ಮೇಲೆ ಅಂತರ್ಜಾಲ ಜಾಲಾಟದ ಜತೆಗೆ ಓದಿನಂತಹ ಇತರ ಚಟುವಟಿಕೆಗಳಲ್ಲಿ ತೊಡಗದೆ ಇರಲಾರರು ಬಿಡಿ.
ಕಾಲೇಜುಗಳಿಗೆ ಹೋಗುವ ಹುಡುಗ ಹುಡುಗಿಯರು,ಮನೆಯಲ್ಲಿ ಹೆತ್ತವರೊಡನೆ ಹೆಚ್ಚು ಮಾತನಾಡದೆ,ಹಾಂ-ಹೂಂಗಳಲ್ಲೇ ಮಾತನ್ನು ಮುಗಿಸುವುದಿದೆ.ಅವರ ಚಟುವಟಿಕೆಗಳೇನು,ಅವರ ಗೆಳೆಯರು ಯಾರು,ಅವರಿಗೆ ಸಂತಸ ಅಥವ ಬೇಜಾರು ಹುಟ್ಟಿಸುವ ಸಂಗತಿಗಳೇನು ಇವೇ ಮುಂತಾದ ವಿಷಯಗಳನ್ನು ಅರಿಯಲು ಬಯಸುವ ಹಿರಿಯರು,ಫೇಸ್‌ಬುಕ್ ಅಥವ ಟ್ವಿಟರ್ ಅಂತಹ ಯುವಜನರ ಮೆಚ್ಚಿನ ಅಂತರ್ಜಾಲ ತಾಣಗಳಲ್ಲಿ ಅವರುಗಳನ್ನು ಗುಟ್ಟಾಗಿ ಹಿಂಬಾಲಿಸಿದರೆ,ಎಲ್ಲ ವಿಷಯಗಳು ಸ್ಪಷ್ಟವಾಗಿ ತಿಳಿದು ಬಂದೀತು.ಮನೆಯವರಲ್ಲಿ ಹಂಚಿಕೊಳ್ಳದ ವಿಷಯಗಳು, ಈ ತಾಣಗಳಲ್ಲಿ ಸರಾಗವಾಗಿ ಹೊರಬರುತ್ತವೆ.ಸ್ನೇಹಿತರಲ್ಲಿ ಹಂಚಿಕೊಳ್ಳುವಂತೆ ತಮ್ಮ ಅಂತರ್ಜಾಲ ಹಿಂಬಾಲಕರ ಜತೆ ಯುವಜನತೆ ಹೆಚ್ಚು ಹೆಚ್ಚು ಮುಕ್ತವಾಗಿ ಸಲ್ಲಾಪ ನಡೆಸುತ್ತಾರೆ!
--------------------------------------------------------------
ಟ್ವಿಟರ್ ಕುಟುಂಬ!
ಟ್ವಿಟರಿನಲ್ಲಿ ಕಾಣುವ ಅಪ್ಪ-ಮಗ-ಮಗಳ ಅಪರೂಪದ ಜೋಡಿಯೆಂದರೆ ಐಟಿ ಪರಿಣತ,ತಂತ್ರಜ್ಞಾನ ಬರಹಗಾರರಾದ ಡಾ.ಯು.ಬಿ.ಪವನಜರ ಕುಟುಂಬವೆನ್ನ ಬೇಕು.ಅವರ ಮಗ ನಿನಾದ ಮತ್ತು ಮಗಳು ಸುರಭಿಯೂ ಟ್ವಿಟರಿನಲ್ಲಿ ಸಕ್ರಿಯ ಖಾತೆಗಳನ್ನು ಹೊಂದಿದ್ದಾರೆ.http://twitter.com/pavanaja,http://twitter.com/ninaada ಹಾಗೂ http://twitter.com/surabhi18ಗಳಲ್ಲಿ ಇವರ ಖಾತೆಗಳನ್ನು ನೋಡಬಹುದು.ಮಗ ತನ್ನ ಸ್ಕೂಟರು ಕೆಡುತ್ತಿದೆ ಎಂದು ಅಪ್ಪನ ಗಮನ ಸೆಳೆಯಲು ಟ್ವಿಟರ್ ಬಳಸಿದರೆ,ಮಗಳು ತನ್ನ ಮೊಬೈಲ್ ಹಳೆಯದಾಯಿತು ಎಂದು ಟ್ವಿಟರ್ ಸಂದೇಶ ಮೂಲಕವೇ ಜಾಹೀರು ಪಡಿಸುವುದಿದೆ.ಪರೀಕ್ಷೆ ಬಂತು,ಟ್ವಿಟರ್ ಬಳಕೆ ಕಮ್ಮಿ ಮಾಡಿ ಎಂದು ಅಪ್ಪ ಮಗನಿಗೆ ಕಿವಿಮಾತು ಹೇಳುವುದೂ ಟ್ವಿಟರ್ ಮೂಲಕವೇ! ಅಂದಹಾಗೆ ಸುರಭಿಯವರ ಕನ್ನಡ ಬರಹಗಳ ಬ್ಲಾಗ್ http://surabhi18.blogspot.com/ನಲ್ಲಿವೆ.
------------------------------------------------
ದಿನಾಲೂ ಇಡ್ಲಿ-ಸಾಂಬಾರ್ ಯಾಕೆ ಎನ್ನುವ ವಿಪ್ರೋ
ಐಟಿ ದಿಗ್ಗಜ ವಿಪ್ರೋ ಟೆಕ್ನಾಲಜಿಯ ಮಿಶನ್10ಎಕ್ಸ್ ಎನ್ನುವ ಕಾರ್ಯಕ್ರಮವು ದೇಶದ ತಾಂತ್ರಿಕ ಕಾಲೇಜುಗಳ ಶಿಕ್ಷಕರಿಗೆ ತರಗತಿಗಳಲ್ಲಿ ಹೊಸತನ ತುಂಬುವುದು ಹೇಗೆಂದು ತರಬೇತಿ ನೀಡುವ ಕಾರ್ಯಕ್ರಮ.ಮೂರು ವರ್ಷದ ಹಿಂದೆ ಶಿಕ್ಷಕರ ದಿನ ಸೆಪ್ಟೆಂಬರ್ ಐದರಂದು ಆರಂಭವಾದ ಕಾರ್ಯಕ್ರಮ,ಶಿಕ್ಷಕರು ಬರೇ ಮಾತಿನ ಮೂಲಕ ತರಗತಿಗಳಲ್ಲಿ ಏಕತಾನತೆ ಹುಟ್ಟಿಸದೆ,ನಾವೀನ್ಯತೆ ತರಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ.ಈಗಾಗಲೇ ಸುಮಾರು ಒಂಭತ್ತು ಸಾವಿರ ಶಿಕ್ಷಕರ ತರಬೇತಿಯನ್ನು ಮುಗಿಸಿರುವ ಕಂಪೆನಿಯು,ಬರುವ ಶಿಕ್ಷಕರ ದಿನದೊಳಗೆ ಹತ್ತು ಸಾವಿರ ಜನರಿಗೆ ತರಬೇತಿ ನೀಡಿ ತಯಾರು ಮಾಡುವ ಪಣ ತೊಟ್ಟಿದೆ.ಅತ್ಯುತ್ತಮ ಇಡ್ಲಿ-ಸಾಂಬಾರ್ ಅನ್ನು ಯಾರಿಗಾದರೂ ದಿನಕ್ಕೆ ಮೂರು ಬಾರಿ ಬಡಿಸಿದರೆ,ಅದು ಕೆಲವೇ ದಿನದಲ್ಲಿ ಬೋರು ಹುಟ್ಟಿಸುವಂತೆ,ಬೋಧನೆಯಲ್ಲಿ ಏಕತಾನತೆ ಇದ್ದರೆ,ಅದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸದಿರಬಹುದು ಎಂಬಂತಹ ಉಪಮಾನಗಳ ಮೂಲಕ,ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿ,ಕಲಿಸುವ ಪ್ರಯತ್ನ ನಡೆಸಲು ಶಿಕ್ಷಕರನ್ನು ಪ್ರಚೋದಿಸುತ್ತಿದೆ.ವಿವಿಧ ವಿಷಯಗಳ ಬಗ್ಗೆ ಪ್ರಯೋಗಗಳನ್ನು ನಡೆಸಲು,ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ನೀಡುವ ಶೈಕ್ಷಣಿಕ ಕಲಿಕಾ ಕಿಟ್ ಒಂದರ ಮಾದರಿಯನ್ನೂ ಮಿಷನ್10ಎಕ್ಸ್ ಅಡಿ ಸಿದ್ಧ ಪಡಿಸಲಾಗಿದೆ.ಯೋಜನೆಯ ವಿವರಗಳಿಗೆ http://www.mission10x.com ನೋಡಿ.
----------------------------------------
ಕಾನೂನು,ನೀರು ಹಾಗೂ ಭೂಮಿ
http://sundararao.blogspot.com/ ಹೆಸರೇ ಹೇಳುವಂತೆ ಸುಂದರರಾಯರ ಬ್ಲಾಗ್. ರವೀಂದ್ರನಾಥ ಶ್ಯಾನುಭೋಗರ ಗ್ರಾಹಕ ಚಳುವಳಿಯಿಂದ ಪ್ರಭಾವಿತರಾದ ರಾಯರು,ವಿಶೇಷ ಆರ್ಥಿಕ ವಲಯದ ಕಂಪೆನಿಗಳು ಮಾಹಿತಿ ಹಕ್ಕಿನ ಹೊರಗಿವೆ ಎಂಬಂತಹ ವಿಚಾರಗಳನ್ನೊಪ್ಪದಿರಲು ಕಾರಣಗಳನ್ನಿಲ್ಲಿ ಚರ್ಚಿಸಿದ್ದಾರೆ.
-------------------------------------------------------------------
ಬಯೋಮಿಮಿಕ್ರಿ:ಪ್ರಕೃತಿಯ ಪ್ರತಿಕೃತಿ
ಹೊಸ ಉತ್ಪನ್ನಗಳನ್ನು ತಯಾರಿಸುವಾಗ,ಪ್ರಕೃತಿಯಲ್ಲಿ ಕಂಡು ಬರುವ ಸಸ್ಯ,ಮರ ಅಥವಾ ಜೀವಿಗಳಿಂದ ಪ್ರಭಾವಿತವಾದ ವಿನ್ಯಾಸವನ್ನು ಬಳಸಲು ಯತ್ನಿಸುವುದು ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ.ವಲ್ಕ್ರೋ ಎನ್ನುವ ಅಂಟು ಪಟ್ಟಿಯ ತಯಾರಕ,ಸಸ್ಯದ ಬೀಜದ ಮೇಲೆ ಕಂಡು ಬಂದ ಕುಣಿಕೆಗಳಂತಹ ರಚನೆಗಳಿಂದ ಪ್ರಭಾವಿತನಾಗಿದ್ದ.ಹೂಗಳ ರಫ್ತುದಾರ ಪೀಟರ್ ಹಾಫ್,ಸಸ್ಯಗಳ ಭಾಷ್ಪೀಕರಣದಿಂದ ಪ್ರಭಾವಿತನಾಗಿ,ಗ್ರೋಒಯಸಿಸ್ ಎನ್ನುವ ಪ್ಲಾಸ್ಟಿಕ್ ಪೆಟ್ಟಿಗೆ ತಯಾರಿಸಿದ.ಈ ಪೆಟ್ಟಿಗೆ ಗಾಳಿಯಿಂದ ನೀರಾವಿಯನ್ನು ಸಂಗ್ರಹಿಸಿ,ಗಿಡಗಳಿಗೆ ಹನಿ ನೀರಾವರಿ ಮಾಡಬಲ್ಲುದು.ಕಮಲದ ಎಲೆಯಿಂದ ಪ್ರಭಾವಿತನಾದ ಇನ್ನೊಬ್ಬ ಸಂಶೋಧಕ,ನೀರು ಹಾಗು ಧೂಳು ಪ್ರತಿರೋಧಕ ಪೈಂಟ್ ತಯಾರಿಸಿದ.ಸದಾ ಸೂರ್ಯನ ಕಡೆ ಮುಖ ಮಾಡಿ ಇರುವ ಸೌರಫಲಕಗಳ ತಯಾರಿಗೆ ಎಂಐಟಿಯ ಸಂಶೋಧಕರಿಗೆ ಸ್ಫೂರ್ತಿ ನೀಡಿದ್ದು,ಸೂರ್ಯಕಾಂತಿ ಹೂವಿನ ಸೂರ್ಯನ ಕಡೆ ಮುಖ ಮಾಡಿರುವ ಪ್ರವೃತ್ತಿ.ಇಂತಹ ಪ್ರಕೃತಿಯ ಪ್ರತಿಕೃತಿ ವಸ್ತುಗಳ ರಚನೆಯನ್ನು ಬಯೋಮಿಮಿಕ್ರಿ ಎಂದೇ ಕರೆಯಲಾಗುತ್ತಿದೆ.ಇಂತಹ ವಿನ್ಯಾಸಗಳ ಬಗ್ಗೆ ಹೆಚ್ಚು ತಿಳಿಯ ಬಯಸಿದರೆ (www.AskNature.org) ಅಂತರ್ಜಾಲ ತಾಣ ಸೂಕ್ತ ಆಯ್ಕೆ.
---------------------------------------------------
ಮೊಬೈಲ್ ಅಂತರ್ಜಾಲ ನಿಯಂತ್ರಣ ಬಲು ಕಠಿನ
ಚೀನಾದಲ್ಲಿ ಅಂತರ್ಜಾಲವನ್ನು ಸರಕಾರವು ಬಿಗಿ ನಿಯಂತ್ರಣಕ್ಕೊಳ ಪಡಿಸಿದೆ.ಆದರೆ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಮೂಲಕ ಅಂತರ್ಜಾಲವನ್ನು ಜಾಲಾಡುವವರನ್ನು ನಿಯಂತ್ರಿಸುವುದು,ಸರಕಾರಿ ಟೆಲಿಕಾಮ್ ಕಂಪೆನಿಗಳಿಗೂ ಕಷ್ಟವಾಗುತ್ತಿದೆ.ಅಲ್ಲಿನ ದೂರಸಂಪರ್ಕ ಸೇವೆಗಳು ಚೈನಾ ಟೆಲಿಕಾಂ,ಚೈನಾ ಮೊಬೈಲ್ ಮತ್ತು ಚೈನಾ ಯುನಿಕಾಮ್ ಕಂಪೆನಿಗಳ ಮೂಲಕವೇ ಒದಗಿಸಲಾಗುತ್ತಿದೆ.ಅವು ಸರಕಾರಿ ಕೃಪಾಪೋಷಿತ ಕಂಪೆನಿಗಳು.ಸೆನ್ಸಾರಿನ ಬಿಗಿ ನಿಯಮಗಳನ್ನು ಮೊಬೈಲ್ ಬಳಕೆದಾರರ ಮೇಲೆ ಹೇರಲು ಅವು ಹಿಂದೆ ಮುಂದೆ ನೋಡುವುದಿಲ್ಲ.ಆದರೆ ಇಪ್ಪತ್ತೈದು ಕೋಟಿಯಷ್ಟಿರುವ ಬಳಕೆದಾರರು,ಕಳುಹಿಸುವ ಎಸೆಮೆಸ್ ಸಂದೇಶಗಳಲ್ಲೋ,ವಿಡಿಯೋ ಅಥವಾ ಚಿತ್ರಗಳಲ್ಲೋ ಆಕ್ಷೇಪಾರ್ಹ ಸಂಗತಿಗಳಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಬೇಕಾದ ತಾಂತ್ರಿಕ ಪರಿಣತಿ ಕಂಪೆನಿಗಳಿಗಿನ್ನೂ ಸಿದ್ಧಿಸಿಲ್ಲ.ಹೀಗಾಗಿ ಸಾಮಾನ್ಯ ಅಂತರ್ಜಾಲದಲ್ಲಿ ಲಭ್ಯವಾಗದ ವಿಷಯಗಳು ಮೊಬೈಲ್ ಅಂತರ್ಜಾಲದಲ್ಲಿ ಸರಾಗವಾಗಿ ಹರಿದಾಡುತ್ತವೆ.ಅಂದ ಹಾಗೆ ಚೀನಾದಲ್ಲಿ ಅಂತರ್ಜಾಲ ಬಳಸುವವರು ಮೂವತ್ತೈದು ಕೋಟಿ ಜನರಾದರೆ,ಇನ್ನೂ ಅದರಿಂದ ದೂರ ಉಳಿದವರು ಎಪ್ಪತ್ತು ಕೋಟಿ ಜನರು.ಅಂತರ್ಜಾಲದಲ್ಲಿ ಜನತೆಯೇ ಒದಗಿಸಿದ ವಿಷಯಗಳು ಹೆಚ್ಚು ಬೆಳಕಿಗೆ ಬರುತ್ತಿರುವಾಗ,ಅಂತಹ ಸಾಮಗ್ರಿಗಳ ಮೇಲೆ ಕಣ್ಣಿಡುವುದು ಸುಲಭವಲ್ಲ.Tudou.com. ಅಂತಹ ತಾಣಗಳಿಗೆ ಜನರು ತಾವು ತೆಗೆದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.ಅವುಗಳನ್ನು ನಿಯಂತ್ರಿಸುವುದು ಹೇಗೆ?ಇನ್ನು ಬ್ಲಾಗುಗಳು,ಚಿತ್ರಗಳೂ ಕೂಡಾ ಅಂತರ್ಜಾಲಕ್ಕೆ ಕ್ಷಣ-ಕ್ಷಣದಲ್ಲೂ ಸೇರ್ಪಡೆಯಾಗುತ್ತಿರುತ್ತವೆ.ಅವುಗಳನ್ನು ಸೆನ್ಸಾರ್ ಮಾಡುವುದು ಯಾರು? ಆದರೂ ಚೀನೀ ಸರಕಾರ ತನಗೆ ಸಾಧ್ಯವಾದಷ್ಟು ಬಿಗಿ ನೀತಿ ಅನುಸರಿಸುತ್ತಿದೆ.ಟಿಯಾನಮೆನನ್ ವೃತ್ತದ ನರಮೇಧದ ವಾರ್ಷಿಕೋತ್ಸವದಂದು ಶೋಕಾಚರಣೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯು, ಹೊರ ಜಗತ್ತಿನ ಅರಿವಿಗೆ ಬರದಿರಬೇಕೆಂದು,ಸರಕಾರ ಜನರ ಸ್ಥಾನ ಪತ್ತೆಗೆ ಅವಕಾಶ ನೀಡುವ ಫೋರ್‌ಸ್ಕ್ವೇರ್ ಅಂತಹ ಸಾಮಾಜಿಕ ಜಾಲತಾಣವನ್ನು ನಿಷೇಧಿಸಿದಿತ್ತು.
-----------------------------------------------------------------
ರೊಬೋಟುಗಳಿಂದ ನಡೆಯುವ ಆಸ್ಪತ್ರೆಯತ್ತ
ಸ್ಕಾಟ್ಲೆಂಡಿನ ಫೋರ್ತ್ ವ್ಯಾಲಿ ರಾಯಲ್ ಆಸ್ಪತ್ರೆಯಲ್ಲಿ,ಊಟದ ಪೂರೈಕೆ,ಶಸ್ತ್ರಚಿಕಿತ್ಸೆಯ ಕೋಣೆಯ ನೆಲ ಒರೆಸಲು,ರೋಗಿಗಳು ಬಳಸಿದ ಬಟ್ಟೆಗಳನ್ನು ಒಗೆಯಲು,ಫಾರ್ಮಸಿಯಲ್ಲಿ ಔಷಧಿ ಮಾರಾಟ ಎಲ್ಲದಕ್ಕೂ ರೊಬೋಟುಗಳನ್ನು ಬಳಸಲು ತಯಾರಿ ನಡೆದಿದೆ.ಅವುಗಳ ನಿಯಂತ್ರಣಕ್ಕೆ ರೊಬೋಟುಗಳೊಳಗೆ ಮಿನಿ ಕಂಪ್ಯೂಟರುಗಳಿರುತ್ತವೆ.ಆಸ್ಪತ್ರೆಯ ಬಾಗಿಲುಗಳು ಸಂವೇದಕಗಳ ಮೂಲಕ ಸಂಕೇತಗಳನ್ನು ಪಡೆದು,ತೆರೆಯುತ್ತವೆ-ಮುಚ್ಚಿಕೊಳ್ಳುತ್ತವೆ.ರೊಬೋಟುಗಳು ಜನರ ಚಲನವಲನದಿಂದ ಪ್ರಭಾವಿತವಾಗದಿರುವಂತೆ ಅವುಗಳಿಗೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ.ಅವುಗಳು ಪ್ರತ್ಯೇಕ ಲಿಫ್ಟ್ ಮೂಲಕ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಚಲಿಸುತ್ತವೆ.ಮಲಿನ ಪದಾರ್ಥಗಳನ್ನು ವಿಲೇವಾರಿ ಮಾಡುವ ರೊಬೋಟುಗಳು ಶುದ್ಧ ವಸ್ತುಗಳನ್ನು ಸ್ಪರ್ಶಿಸದಂತೆ ಪ್ರತ್ಯೇಕತೆ ಉಳಿಸಿಕೊಳ್ಳುವುದರಿಂದ,ಸೋಂಕು ಹಬ್ಬದಂತೆ ಮಾಡುವುದು ಸುಲಭ.ಜನರೇ ಈ ಕೆಲಸ ಮಾಡಿದಾಗ ಹೀಗೆ ಮಾಡುವುದು ಕಠಿನ.
Udayavani ಉದಯವಾಣಿ ------------------------------------------------------------
*ಅಶೋಕ್‌ಕುಮಾರ್ ಎ