ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು, ಏಕೆ?

ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು, ಏಕೆ?

ನಿದ್ರೆ ಈ ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೆ ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಬಹುಷಃ ಮನುಷ್ಯನನ್ನು ಹೊರತು ಪಡಿಸಿ ಜಗತ್ತಿನ ಎಲ್ಲಾ ಜೀವಿಗಳು ತಮಗೆ ಎಷ್ಟು ಅಗತ್ಯವೋ ಅಷ್ಟೇ ನಿದ್ರೆ ಮಾಡಿ, ಉಳಿದ ಸಮಯವನ್ನು ಆಹಾರ ಹುಡುಕುವುದರಲ್ಲೋ, ಸಂಗಾತಿಯ ಜೊತೆಗೋ ಕಳೆಯುತ್ತವೆ. ಎಲ್ಲಾ ಜೀವಿಗಳು ಜೈವಿಕ ಸಮಯದಂತೆ ಕಾರ್ಯ ನಿರ್ವಹಿಸುತ್ತವೆ. ಸೂರ್ಯ ಉದಯದ ಸಮಯದಲ್ಲಿ ಎದ್ದು, ಸೂರ್ಯ ಅಸ್ತವಾಗುವ ಹೊತ್ತಿಗೆ ಸರಿಯಾಗಿಯೇ ತಮ್ಮ ಗೂಡು ಅಥವಾ ಗುಹೆ ತಲುಪುತ್ತದೆ. ಆದರೆ ಸೋಮಾರಿ ಮನುಷ್ಯ ಮಾತ್ರ ಸಮಯಕ್ಕೆ ಸರಿಯಾಗಿ ಮಲಗದೇ, ಬೆಳಿಗ್ಗೆ ಸರಿಯಾದ ಸಮಯಕ್ಕೆ ಏಳದೇ ಸೋಮಾರಿತನ ತೋರಿಸುತ್ತಾನೆ.

ಹಿಂದಿನ ಕಾಲದಲ್ಲಿ ಮನುಷ್ಯನ ಜೀವನ ಐಷಾರಾಮಿಯಾಗಿರಲಿಲ್ಲ. ಎದ್ದು ಕೆಲಸ ಮಾಡಿದರಷ್ಟೇ ಹೊಟ್ಟೆಗೆ ಆಹಾರ ಸಿಗುತ್ತಿತ್ತು. ಆಗೆಲ್ಲಾ ಮಾನವರ ಪ್ರಮುಖ ಉದ್ಯೋಗ ಕೃಷಿ, ಹೈನುಗಾರಿಗೆ ಆಗಿತ್ತು. ಚೆನ್ನಾಗಿ ದುಡಿದಾಗ, ಉತ್ತಮ ನಿದ್ರೆಯೂ ಬರುತ್ತಿತ್ತು. ಕಾಲಕ್ರಮೇಣ ಜೀವನ ಪದ್ಧತಿ ಬದಲಾಗುತ್ತಾ ಬಂತು. ನಾನಾ ನಮೂನೆಯ ಸಮಯ ಕೊಲ್ಲುವ ಯಂತ್ರಗಳು, ವ್ಯವಸ್ಥೆಗಳು ಆವಿಷ್ಕರಿಸಲ್ಪಟ್ಟವು. ಈಗ ದೂರದರ್ಶನದ ಎದುರು ಕೂತವ ರಾತ್ರಿ ಹನ್ನೆರಡು ಗಂಟೆಯಾದರೂ ಮಲಗುವ ಮನಸ್ಸು ಮಾಡುವುದಿಲ್ಲ. ರಾತ್ರಿ ತಡವಾಗಿ ಮಲಗಿದರೆ ಬೆಳಿಗ್ಗೆ ಏಳುವಾಗ ತಡ ಆಗಿಯೇ ಆಗುತ್ತದೆ. ಹೀಗೆ ಸಮಯದ ಸರಿಯಾದ ಉಪಯೋಗ ಮಾಡುವುದು ಈಗ ಕಡಿಮೆ ಆಗಿದೆ. ನಮ್ಮ ಹಿರಿಯರು ಸಣ್ಣವರಿರುವಾಗ ಮನೆಯಲ್ಲಿ ವಿದ್ಯುತ್, ದೂರದರ್ಶನ, ಮೊಬೈಲ್ ಇದು ಯಾವುದೂ ಇರುತ್ತಿರಲಿಲ್ಲ. ಈ ಕಾರಣದಿಂದ ಅವರು ಸೂರ್ಯಾಸ್ತವಾದ ಕೂಡಲೇ ಊಟ ಮುಗಿಸಿ, ಬೇಗನೇ ಮಲಗಿ ಬಿಡುತ್ತಿದ್ದರು. ಬೆಳಗ್ಗೆ ಬೇಗನೇ ಬ್ರಾಹ್ಮೀ ಮುಹೂರ್ತದಲ್ಲಿ ಏಳುತ್ತಿದ್ದರು. ಬಹಳಷ್ಟು ಮಂದಿಗೆ ಬ್ರಾಹ್ಮೀ ಮುಹೂರ್ತವೆಂದರೆ ಯಾವುದು ಎನ್ನುವುದು ಗೊತ್ತೇ ಇಲ್ಲ. ಹಾಗಾದರೆ ಬ್ರಾಹ್ಮೀ ಮುಹೂರ್ತ ಎಂದರೆ ಯಾವುದು? ನಾವು ಯಾಕೆ ಅದೇ ಹೊತ್ತಿಗೆ ಎದ್ದೇಳಬೇಕು?

ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು- ಇದು ಕೇವಲ ಆಯುರ್ವೇದದಲ್ಲಿ ಮಾತ್ರವಲ್ಲದೇ ಬಹಳಷ್ಟು ವೈದ್ಯರೂ, ಯೋಗ ಗುರುಗಳೂ ಹೇಳುವ ಮಾತು. ಬ್ರಾಹ್ಮೀ ಮುಹೂರ್ತ ಎಂದರೇನು? ಸೂರ್ಯೋದಕ್ಕೆ ಸರಿಯಾಗಿ ೯೬ ನಿಮಿಷಗಳಷ್ಟು ಹಿಂದಕ್ಕೆ ಹೋದಾಗ ಸಿಗುವ ಸಮಯವೇ ಬ್ರಾಹ್ಮೀ ಮುಹೂರ್ತ. ಅಲ್ಲಿಂದ ಸುಮಾರು ೪೮ ನಿಮಿಷಗಳ ಕಾಲ ಬ್ರಾಹ್ಮೀ ಮುಹೂರ್ತ ಇರುತ್ತದೆ. ವರ್ಷದಲ್ಲಿ ದಿನವೂ ಸೂರ್ಯೋದಯದ ಸಮಯ ಬದಲಾಗುವುದರಿಂದ ಬ್ರಾಹ್ಮೀ ಮುಹೂರ್ತದ ಸಮಯವೂ ಅಲ್ಪಸ್ವಲ್ಪ ಬದಲಾಗುತ್ತಾ ಇರುತ್ತದೆ. ಉದಾಹರಣೆಗೆ ಮುಂಜಾನೆ ೬.೦೦ ಗಂಟೆಗೆ ಸರಿಯಾಗಿ ಸೂರ್ಯೋದಯ ಆಗುವುದಾದರೆ ಅಂದು ೪.೨೪ಕ್ಕೆ ಸರಿಯಾಗಿ ಬ್ರಾಹ್ಮೀ ಮುಹೂರ್ತದ ಪ್ರಾರಂಭ. ೫.೧೨ಕ್ಕೆ ಸರಿಯಾಗಿ ಅಂತ್ಯವಾಗುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬ್ರಾಹ್ಮೀ ಮುಹೂರ್ತವು ಪ್ರಾರಂಭವಾಗುವಷ್ಟರಲ್ಲಿ ನಾವು ಹಾಸಿಗೆಯಿಂದ ಎದ್ದೇಳಬೇಕು. ಶೌಚಕರ್ಮಗಳನ್ನು ಮಾಡಬೇಕು. ಧ್ಯಾನ, ಯೋಗ, ಜಪ, ವ್ಯಾಯಾಮಗಳಿಗೆ ಪ್ರಾಶಸ್ತ್ಯವಾದ ಸಮಯ ಇದು. ವಿದ್ಯಾರ್ಥಿಗಳಿಗೆ ಈ ಸಮಯ ಓದಲು, ಅಧ್ಯಯನ ಮಾಡಲು ಬಹಳ ಉತ್ತಮ. ಈ ಸಮಯದಲ್ಲಿ ಮನಸ್ಸು ಪ್ರಸನ್ನವಾಗಿರುತ್ತದೆ. ವಾತಾವರಣವೂ ಬಹಳ ಶಾಂತವಾಗಿರುತ್ತದೆ. ಹಾಗಾಗಿ ಓದಿದ್ದು ನೇರವಾಗಿ ಮನಸ್ಸಿನೇ ಹೋಗುತ್ತದೆ ಮತ್ತು ಮರೆತುಹೋಗುವುದಿಲ್ಲ. ಬ್ರಾಹ್ಮೀ ಮುಹೂರ್ತದಲ್ಲಿ ಮಿದುಳಿನ ಕಾರ್ಯಕ್ಷಮತೆಯೂ ಅಧಿಕವಾಗಿರುತ್ತದೆ. ಈ ಕಾರಣದಿಂದಲೇ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಮನಸ್ಸಿಗೆ ಸಾಕಷ್ಟು ಮೇವನ್ನು ಕೊಡುವ ಕೆಲಸ ಮಾಡಬೇಕು. ಮನಸ್ಸನ್ನು ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎನ್ನುತ್ತಿವೆ ಆಯುರ್ವೇದ ಶಾಸ್ತ್ರ ಮತ್ತು ಯೋಗ ಗ್ರಂಥಗಳು ಹೇಳುತ್ತವೆ. ನಮ್ಮ ಮನೆಯಲ್ಲಿರುವ ಅಜ್ಜ ಅಜ್ಜಿಯರು ಹೇಳುವುದೂ ಇದನ್ನೇ, ಈಗಿನ ಆಧುನಿಕ ಸಂಶೋಧನೆಗಳನ್ನು ಮಾಡುವ ವಿಜ್ಞಾನಿಗಳು ಹೇಳುವುದೂ ಇದನ್ನೇ. ಈಗ ನಿಮಗೆಲ್ಲಾ ಗೊತ್ತಾಯಿತಲ್ವಾ ಬ್ರಾಹ್ಮೀ ಮುಹೂರ್ತ ಎಂದರೆ ಯಾವುದು ಎಂದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ