ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿ ಗಾಡಿ ಪ್ರಕರಣಗಳು

ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿ ಗಾಡಿ ಪ್ರಕರಣಗಳು

(ಬ್ರಿಟಿಷರ ಕಾಲದಲ್ಲಿ ಅವರಿಂದ ಆಗುತ್ತಿದ್ದ ದೌರ್ಜನ್ಯಗಳು ಅನ್ಯಾಯಗಳು ಒಂದೆರಡಲ್ಲ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಾದರೂ ಅಂತಹ ಪ್ರಕರಣಗಳ ಬಗ್ಗೆ ತಿಳಿದುಕೊಂಡು, ಬ್ರಿಟಿಷರು ಭಾರತದಿಂದ ಮಾಡಿದ ಲೂಟಿ, ಭಾರತೀಯರಿಗೆ ಮಾಡಿದ ಹಿಂಸೆ, ಕ್ರೌರ್ಯಗಳನ್ನು ನಾವು ನೆನಪಿಟ್ಟುಕೊಳ್ಳಬೇಕು - ಚರಿತ್ರೆಯಿಂದ ಪಾಠ ಕಲಿತು, ಚರಿತ್ರೆ ಮರುಕಳಿಸದಂತೆ ತಡೆಯಲಿಕ್ಕಾಗಿ. ಅಂತಹ ಒಂದು ಪ್ರಕರಣ ಇಲ್ಲಿದೆ.)

‘ಶಿರಸಿಯ ಬಿಡಕಿಬೈಲು ಬ್ರಿಟಿಷರ ಪಾಲಿಗೆ "ಬಿಟ್ಟಿಗಾಡಿಯ ಬೈಲು" ಆಗಿತ್ತು. ಪೇಟೆ ತಿರುಗಾಟ, ಕೃಷಿ ಉತ್ಪನ್ನಗಳ ಸಾಗಾಟಗಳಿಗಾಗಿ ಆ ಕಾಲದಲ್ಲಿ ಚಕ್ಕಡಿ ಗಾಡಿಗಳ ಬಳಕೆ. ಸಾಲು ಹಚ್ಚಿ ಶಿರಸಿಗೆ ಬಂದ ಗಾಡಿಗಳು ಕೆಲಸ ಮುಗಿಸಿ ಪುನಃ ವಾಪಸ್ಸು. ಆ ವೇಳೆಗೆ ಬ್ರಿಟಿಷ್ ಅಧಿಕಾರಿಗಳು, ಕಲೆಕ್ಟರು ಯಾರಾದರೂ ನಗರದಲ್ಲಿ ಎದುರಾದರೆ ಮುಗಿಯಿತು. ಅವರ ತಿರುಗಾಟಕ್ಕೆ, ಸಾಮಾನು - ಸರಂಜಾಮುಗಳ ಸಾಗಾಟಕ್ಕೆ ರೈತರ ಗಾಡಿಗಳ ಪುಕ್ಕಟೆ ಬಳಕೆ. … ಬಿಟ್ಟಿ ಗಾಡಿಯಲ್ಲಿ ತಿರುಗುವುದು ಸಲೀಸಾಗಿ ರೂಢಿಯಾಗಿತ್ತು. ಅದರಲ್ಲೂ ರೈತರೆಂದರೆ ಕೇಳಬೇಕೇ? ದೌರ್ಜನ್ಯದ ಹತ್ತು ಹಲವು ಅವತಾರಗಳು. ಇದು ರೈತರ ಪಾಲಿಗೆ ದೊಡ್ಡ ಪೀಡೆಯಾಗಿದ್ದರೂ ಪರಿಹಾರವಿರಲಿಲ್ಲ. ಉಸಿರೆತ್ತದೆ ಜನ ಸಹಿಸಿದ್ದರು.

ಶಿರಸಿಯ ಅಕದಾಸ ಗಣಪತಿ ಭಟ್ಟರು ಉತ್ತರ ಕರ್ನಾಟಕದ ಬಿಟ್ಟಿಗಾಡಿ ಸಮಸ್ಯೆಗೊಂದು ಶಾಶ್ವತ ಪರಿಹಾರ ತೋರಿಸಿದವರು. ಬಿಟ್ಟಿಗಾಡಿ ಬಳಕೆಯನ್ನು ರದ್ದು ಪಡಿಸಲು ನ್ಯಾಯಾಲಯ ಹೋರಾಟ ಮಾಡಿದವರು.

ಅದು ಸುಮಾರು ಕ್ರಿ.ಶ. 1922-23ರ ಕಾಲ. ಆ ವೇಳೆಗೆ ಕಾರವಾರದಿಂದ ಬ್ರಿಟಿಷ್ ಕಲೆಕ್ಟರ್ ಶಿರಸಿಗೆ ಬಂದಿದ್ದರು. ಸಾಮಾನ್ಯವಾಗಿ ಆ ಕಾಲದಲ್ಲಿ ಬಸ್ಸು, ಜೀಪುಗಳಂತಹ ವಾಹನ ಸೌಕರ್ಯವಿಲ್ಲ. ಕಲೆಕ್ಟರ್ ಮಾತ್ರ ಕಾರು ಬಳಸುವವರು. ಕಲೆಕ್ಟರ್ ಪ್ರವಾಸವೆಂದರೆ ಅವರ ಜೊತೆ ಸಹಾಯಕರು, ಸಿಬ್ಬಂದಿಗಳ ಸಾಲು. ಸಾಮಾನು ಸರಂಜಾವುಗಳ ಹೊರೆ. ಇವನ್ನು ಶಿರಸಿಯಿಂದ ಕಾರವಾರಕ್ಕೆ ಸಾಗಿಸಲು ರೈತರ ಎತ್ತಿನ ಗಾಡಿಗಳನ್ನು ಬಿಟ್ಟಿಯಾಗಿ ಬಳಸುವ ಕ್ರಮ. ಅವತ್ತು ಆದದ್ದು ಅಷ್ಟೇ. ಕಲೆಕ್ಟರ್-ರಿಗೆ ಕಾರವಾರಕ್ಕೆ ಹೋಗಲು ಕಾರು ಇತ್ತು. ಆದರೆ ಸಿಪಾಯಿಗಳಿಗೆ ಹೋಗಲು ಎತ್ತಿನ ಗಾಡಿ ಬೇಕಿತ್ತು. ಸಿಪಾಯಿಯೊಬ್ಬ ಶಿರಸಿಯ ಚೆನ್ನಪಟ್ಟಣದ ಸನಿಹ ಒಂದು ಗಾಡಿ ನಿಲ್ಲಿಸಿದ. ಆ ಗಾಡಿಯಲ್ಲಿ ಬಡ ರೈತನೊಬ್ಬ ಮನೆಯತ್ತ ಅವಸರದಿಂದ ಸಾಗಿದ್ದ. ಮನೆಮಂದಿಗೆ ಅನಾರೋಗ್ಯವಿದ್ದುದರಿಂದ ಆತ ಔಷಧಿಯೊಂದಿಗೆ ಹೊರಟಿದ್ದ. ಆ ವೇಳೆಗೆ ಸಿಪಾಯಿ ಗಾಡಿ ತಡೆದದ್ದರಿಂದ ಆತ ತನ್ನ ತೊಂದರೆ, ತಾಪತ್ರಯಗಳನ್ನು ಪರಿಪರಿಯಾಗಿ ತಿಳಿಸಿದ. ತಕ್ಷಣ ಮನೆಗೆ ಹೋಗಬೇಕಾದ ಅನಿವಾರ್ಯತೆಯನ್ನು ತಿಳಿಸಿದ. ಆದರೆ ಸಿಪಾಯಿ ರೈತನ ಮಾತು ಕೇಳದೆ ಸರ್ಕಾರಿ ಬಂಗಲೆಯತ್ತ ಬರುವಂತೆ ದಬಾಯಿಸಿದ. ಗಾಡಿ ಆಳುವಿನ ಕೈಯಿಂದ ಬಾರುಕೋಲು ಕಸಿದುಕೊಂಡು ಎತ್ತಿನ ಮುಖಕ್ಕೆ ಸಿಪಾಯಿ ಚೆನ್ನಾಗಿ ಬಾರಿಸಿದ. ಎತ್ತಿನ ಕಣ್ಣುಗುಡ್ದೆಗೆ ಪೆಟ್ಟು ಬಿದ್ದು ಧಾರಾಕಾರವಾಗಿ ರಕ್ತ ಸುರಿಯಲಾರಂಭಿಸಿತು.

ಆದರೂ ನಿರ್ದಯಿ ಸಿಪಾಯಿ ಗಾಡಿಯನ್ನು ಬಂಗ್ಲೆಗೆ ಹೊಡೆಯುವಂತೆ ಗದರಿಸುತ್ತಿದ್ದ. ಕಂಗಾಲಾದ ರೈತ ಗೋಳೋ ಎಂದು ಅಳತೊಡಗಿದ. ಆ ವೇಳೆಗೆ ಅಡಿಕೆ ವಕಾರಿಯಲ್ಲಿದ್ದ ಅಕದಾಸ ಭಟ್ಟರು ಅಳುವ ಧ್ವನಿ ಕೇಳಿ ಸ್ಥಳಕ್ಕೆ ಹೋದರು. ಯಮದೂತನಂತಿದ್ದ ಸಿಪಾಯಿಯನ್ನು ಹಿಂದೆ ದೂಡಿ ರೈತನಿಗೆ ಗಾಡಿ ಹೊಡೆದುಕೊಂಡು ಮನೆಗೆ ಹೋಗುವಂತೆ ಹೇಳಿದರು. ಇದು ಸಿಪಾಯಿಯನ್ನು ಕೆರಳಿಸಿತು. ಆತ ಘಟನೆಯನ್ನು ತಕ್ಷಣ ಬಂಗ್ಲೆಯಲ್ಲಿದ್ದ ಕಲೆಕ್ಟರ್ ಗಮನಕ್ಕೆ ತಂದ. ಕೂಡಲೇ ಕಲೆಕ್ಟರ್ ನಾಲ್ಕಾರು ರಕ್ಷಕರೊಂದಿಗೆ ಕಾರಿನಲ್ಲಿ ಸ್ಥಳಕ್ಕೆ ಬಂದರು.

ಅಕದಾಸರಿಗೆ ಗುಂಡಿಕ್ಕಲು ಕಲೆಕ್ಟರ್ ಪಿಸೂಲು ಎತ್ತುವಷ್ಟರಲ್ಲಿ ಅಕದಾಸರು ಅವರ ಕೈಸಂದನ್ನು ಗಟ್ಟಿಯಾಗಿ ಹಿಡಿದು ದೊಡ್ಡದಾಗಿ ಕೂಗಿದರು. ಹತ್ತಿರದಲ್ಲಿದ್ದ ಹೂಡ್ಲಮನೆ ನಾರಾಯಣ ಹೆಗಡೆ (ಅಡಿಕೆ ವ್ಯಾಪಾರಸ್ಥರು)ಯವರು ಅಲ್ಲಿಗೆ ಬಂದರು. ಹಾಗೆ ಅಕ್ಕಪಕ್ಕದವರೆಲ್ಲ ಸೇರಿದ್ದರಿಂದ ಕಲೆಕ್ಟರ್ ನಿಧಾನಕ್ಕೆ ಪಿಸ್ತೂಲು ಕೆಳಗಿಳಿಸಿ, ಮುಂಬೈಗೆ ಹೋದರು. ಈ ಪ್ರಕರಣದಿಂದ  ಅಕದಾಸರನ್ನು “ರಾಜದ್ರೋಹಿ"ಗಳೆಂದು ಕಲೆಕ್ಟರ್ ಖಟ್ಲೆ ಹಾಕಿದರು. ಅನಂತರ ಅವರು ಇಂಗ್ಲೆಂಡಿಗೆ ಮರಳಿದರು. ನಂತರ ಬೇರೊಬ್ಬ ಕಲೆಕ್ಟರ್-ರ ನೇಮಕವಾಯಿತು.

ನ್ಯಾಯಾಲಯದಲ್ಲಿ ಖಟ್ಲೆಯ ವಿಚಾರಣೆ ನಡೆದು ಅಕದಾಸರ ಮನೆತನವೆಲ್ಲ ರಾಜದ್ರೋಹಿಗಳೆಂದು ತೀರ್ಮಾನವಾಯಿತು. ಆಗ ತಾನೇ ಮುನ್ಸಿಫರೆಂದು ನೇಮಕರಾಗಿದ್ದ ಅಕದಾಸರ ತಮ್ಮ ಎಸ್.ಎನ್. ಅಕದಾಸರನ್ನು ಸಸ್ಪೆಂಡ್ ಮಾಡಲಾಯಿತು. ಮುಂದೆ ಈ “ಬಿಟ್ಟಿಗಾಡಿ ಪ್ರಕರಣ” ಹೈಕೋರ್ಟಿನ ಮೆಟ್ಟಲೇರಿ ಅಕದಾಸರದೇ ನ್ಯಾಯವೆಂದು ತೀರ್ಮಾನವಾಯಿತು. ಇಡೀ ಉತ್ತರ ಕರ್ನಾಟಕದಲ್ಲಿ ಬಿಟ್ಟಿಗಾಡಿ ರದ್ದಾಯಿತು. ಇದರಿಂದಾಗಿ ಸಂತೋಷ ಪಟ್ಟ ಬೈಲುಸೀಮೆಯ ಜನ ಅಕದಾಸರ ಬಗ್ಗೆ ಆ ಕಾಲದಲ್ಲಿ ಲಾವಣಿ ಕಟ್ಟಿ ಹಾಡಿದರಂತೆ.

-ಶಿವಾನಂದ ಕಳವೆ

ಆಕರ: ಶಿವಾನಂದ ಕಳವೆ ಅವರ “ಕಾಡುನೆಲದ ಕಾಲಮಾನ” ಪುಸ್ತಕ, ಪ್ರಕಾಶಕರು: ಮಿತ್ರ ಮಾಧ್ಯಮ, ಬೆಂಗಳೂರು, 2001