ಬ್ರಿಟೀಷ್ ವ್ಯಕ್ತಿಯ ಕನ್ನಡ ಪ್ರೇಮ
ಬ್ರಿಟೀಷರು ಭಾರತವನ್ನು ಆಳುತ್ತಿದ್ದ ಸಮಯದಲ್ಲಿ ೧೯೨೪-೨೫ರಲ್ಲಿ ಇಂಗ್ಲೆಂಡಿನ ವೆಂಬರ್ಲಿಯಲ್ಲಿ ಜಾಗತಿಕ ಉತ್ಪನ್ನ ಮೇಳ ಆಯೋಜನೆಯಾಗಿರುತ್ತದೆ. ಅಲ್ಲಿ ಭಾರತದ ಹಲವಾರು ಮಳಿಗೆಗಳು ಇರುತ್ತವೆ. ಅಲ್ಲಿ ಮೈಸೂರು ಸಂಸ್ಥಾನದ ಮಳಿಗೆಯೂ ಇರುತ್ತದೆ. ಅಲ್ಲಿಗೆ ಇಳಿ ವಯಸ್ಸಿನ ಬ್ರಿಟೀಷ್ ವ್ಯಕ್ತಿಯೊಬ್ಬ ಭೇಟಿ ನೀಡುತ್ತಾರೆ. ಮಳಿಗೆಗೆ ಬಂದ ಆ ಆಂಗ್ಲ ವ್ಯಕ್ತಿಯನ್ನು ಆಂಗ್ಲ ಭಾಷೆಯಲ್ಲೇ ಸ್ವಾಗತಿಸುತ್ತಾರೆ ಅಲ್ಲಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೋಸಲೆ ಗಿರಳೆಪುರ ಶಾಸ್ತ್ರಿಗಳು. ಶಾಸ್ತ್ರಿಗಳು ತಮ್ಮನ್ನು ಆಂಗ್ಲ ಭಾಷೆಯಲ್ಲಿ ಮಾತನಾಡಿಸುವುದನ್ನು ನೋಡಿ ಆ ಆಂಗ್ಲ ವ್ಯಕ್ತಿ
“ಅಯ್ಯಾ, ಕನ್ನಡದಲ್ಲಿ ಮಾತನಾಡೋಣವೇ?, ಇಂಪಾದ ಕನ್ನಡ ಕಿವಿಯ ಮೇಲೆ ಬಿದ್ದು ತುಂಬಾ ದಿನಗಳಾದವು ! ಕನ್ನಡ ಮಾತುಗಳನ್ನು ಕೇಳಲೆಂದೇ ನಾನು ಇಲ್ಲಿಯವರೆಗೂ ಬಂದಿದ್ದೇನೆ. ದಯವಿಟ್ಟು ಕನ್ನಡದಲ್ಲೇ ಮಾತನಾಡಿ.” ಎನ್ನುತ್ತಾರೆ.
ನಂತರ ಅಲ್ಲಿದ್ದ ಕನ್ನಡಿಗರ ಜೊತೆ ಹಲವಾರು ತಾಸುಗಳ ತನಕ ಶುದ್ಧ ಕನ್ನಡದಲ್ಲೇ ಮಾತನಾಡಿ ಅವರೆಲ್ಲರ ಮನಗೆದ್ದರು. ಅವರಿಗೆಲ್ಲಾ ಈ ಆಂಗ್ಲ ವ್ಯಕ್ತಿಯ ಬಗ್ಗೆ ಸಖೇದಾಶ್ಚರ್ಯ. ಇಷ್ಟೊಂದು ಸೊಗಸಾದ ಕನ್ನಡ ಮಾತನಾಡುವ ಈ ವ್ಯಕ್ತಿ ಯಾರು ಎಂಬ ಸಂದೇಹ ಅವರಿಗೆಲ್ಲಾ ಕಾಡತೊಡಗಿತು.
ಅವರು ಬೇರೆ ಯಾರೂ ಅಲ್ಲ ಸರ್ ಬೆಂಜಮಿನ್ ಲೂಯಿಸ್ ರೈಸ್ (Sir Benjamin Lewis Rice). ಇವರನ್ನು ಕನ್ನಡಿಗರು ಪ್ರೀತಿಯಿಂದ ‘ಬಿಳಿ ಕನ್ನಡಿಗ' ಎಂದೇ ಕರೆಯುತ್ತಿದ್ದರು. ಲೂಯಿಸ್ ರೈಸ್ (೧೮೩೭- ೧೯೨೭) ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಈ ಕಾರಣದಿಂದ ಅವರಿಗೆ ಕನ್ನಡ ಭಾಷೆಯ ಮೇಲಿನ ಪ್ರೇಮ ಬಾಲ್ಯದಲ್ಲೇ ಪ್ರಾರಂಭವಾಯಿತು. ಇವರು ಕರ್ನಾಟಕದ ಪುರಾತನ ಶಾಸನಗಳನ್ನು ಅಧ್ಯಯನ ಮಾಡಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ‘Mysore - A Gazetteer Compiled for Government” ಇದರ ಅನೇಕ ಅಧ್ಯಾಯಗಳು ಪ್ರಕಟವಾಗಿವೆ. ಬೆಂಗಳೂರಿನಲ್ಲಿ ಶಾಲೆಗಳು ಪ್ರಾರಂಭವಾದಾಗ ಕನ್ನಡ ಭಾಷೆಗೆ ನಿಗದಿತವಾದ ಪಠ್ಯ ಪುಸ್ತಕವೇ ಇರಲಿಲ್ಲ. ಆಗ ಲೂಯಿಸ್ ರೈಸ್ ಅವರು ಕನ್ನಡದ ಪಠ್ಯ ಪುಸ್ತಕವನ್ನು ರಚನೆ ಮಾಡಿ ಮೊದಲ ಕನ್ನಡ ಪಠ್ಯ ರಚನೆಕಾರ ಎಂಬ ಖ್ಯಾತಿಗೂ ಕಾರಣರಾಗಿದ್ದಾರೆ.
ಅಶೋಕನ ಶಾಸನ, ಚಂದ್ರಗುಪ್ತ ಮೌರ್ಯನ ಶಾಸನ ಇವೆಲ್ಲಾ ನಮ್ಮ ಪಠ್ಯದಲ್ಲಿ ಕಾಣಿಸಿಕೊಳ್ಳಲು ಲೂಯಿಸ್ ರೈಸ್ ಅವರೇ ಕಾರಣೀಭೂತರು. “ಎಲ್ಲಾದರೂ ಇರು ಎಂತಾದರೂ ಇರು" ಎಂದು ಕುವೆಂಪು ಅವರು ಬರೆಯುವ ಮೊದಲೇ ಅದರಂತೆ ಬದುಕಿ ತೋರಿಸಿದವರು ಲೂಯಿಸ್ ರೈಸ್. ಹೀಗಾಗಿ ಮೂಲತಃ ಬ್ರಿಟೀಷ್ ವ್ಯಕ್ತಿಯಾದರೂ ಕನ್ನಡದ ಮೇಲಿನ ಅವರ ಪ್ರೀತಿಯನ್ನು ನಾವು ಕನ್ನಡಿಗರು ಯಾವತ್ತೂ ಮರೆಯಬಾರದು. ಇವರ ನೆನಪಿಗಾಗಿ ಬೆಂಗಳೂರು ಮಹಾ ನಗರ ಪಾಲಿಕೆಯು ಸೈಂಟ್ ಥಾಮಸ್ ಟೌನ್ ಪ್ರದೇಶವನ್ನು ಬಿ ಎಲ್ ರೈಸ್ ನಗರ ಎಂದು ಘೋಷಣೆ ಮಾಡಿ ಅವರಿಗೆ ಗೌರವ ನೀಡಿದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ